KSCA ಎಲೆಕ್ಷನ್ ಕಿಚ್ಚು: ‘ಕುಂಬ್ಳೆ-ಶ್ರೀನಾಥ್ ಮಾಡೋದು ಸರಿನಾ?’ – ಮೌನ ಮುರಿದ ಬ್ರಿಜೇಶ್ ಪಟೇಲ್!

0
18

ಬೆಂಗಳೂರು: ಸಿಲಿಕಾನ್ ಸಿಟಿಯ ಕ್ರಿಕೆಟ್ ಅಂಗಳದಲ್ಲಿ ಈಗ ಬ್ಯಾಟ್ ಮತ್ತು ಬಾಲ್ ಸದ್ದಿಗಿಂತ ಆಡಳಿತಾಧಿಕಾರಿಗಳ ಮಾತಿನ ಸಮರವೇ ಜೋರಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಚುನಾವಣೆ ರಣರಂಗವಾಗಿ ಮಾರ್ಪಟ್ಟಿದ್ದು, ದಿಗ್ಗಜ ಆಟಗಾರರ ನಡುವಿನ ವಾಕ್ಸಮರ ತಾರಕಕ್ಕೇರಿದೆ.

ಇಷ್ಟು ದಿನ ಎದುರಾಳಿ ಬಣದ ಟೀಕೆಗಳಿಗೆ ಮೌನವಾಗಿದ್ದ ಹಿರಿಯ ಆಡಳಿತಗಾರ ಬ್ರಿಜೇಶ್ ಪಟೇಲ್, ಇದೀಗ ತಮ್ಮ ‘ಟೀಂ ಬ್ರಿಜೇಶ್’ ಮೂಲಕ ಅಖಾಡಕ್ಕಿಳಿದು ಎದುರಾಳಿಗಳಿಗೆ ಖಡಕ್ ತಿರುಗೇಟು ನೀಡಿದ್ದಾರೆ.

‘ಹಿಂದಿನ ಸೀಟ್ ಸವಾರಿ’ಗೆ ಬ್ರಿಜೇಶ್ ಕೊಟ್ಟ ಸ್ಫೋಟಕ ಉತ್ತರ: ಕೆಲವು ದಿನಗಳ ಹಿಂದಷ್ಟೇ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ನೇತೃತ್ವದ ‘ಗೇಮ್ ಚೇಂಜರ್ಸ್’ ತಂಡವು ಬ್ರಿಜೇಶ್ ಪಟೇಲ್ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿತ್ತು. “ಬ್ರಿಜೇಶ್ ಪಟೇಲ್ ಮುಂದಾಳತ್ವ ವಹಿಸದೆ, ಹಿಂದಿನ ಸೀಟ್‌ನಲ್ಲಿ ಕುಳಿತು ಅಧಿಕಾರ ಚಲಾಯಿಸುತ್ತಿದ್ದಾರೆ. ಅವರ ಅಣತಿಯಂತೆಯೇ ಎಲ್ಲವೂ ನಡೆಯುತ್ತಿದೆ,” ಎಂದು ಟೀಕಿಸಿದ್ದರು.ʼ

ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಇದಕ್ಕೆ ನೇರವಾಗಿಯೇ ಉತ್ತರಿಸಿದ ಬ್ರಿಜೇಶ್ ಪಟೇಲ್, “ನನ್ನ ವಿರುದ್ಧ ಮಾತನಾಡುವವರು ಆತ್ಮಾವಲೋಕನ ಮಾಡಿಕೊಳ್ಳಲಿ. ನಾನು ನನ್ನ ತಂಡಕ್ಕೆ ಅನುಭವದ ಆಧಾರದ ಮೇಲೆ ಮಾರ್ಗದರ್ಶನ ನೀಡುತ್ತಿದ್ದೇನೆ, ಇದರಲ್ಲಿ ತಪ್ಪೇನಿದೆ? ಒಂದು ವೇಳೆ ನಾನು ಮಾರ್ಗದರ್ಶನ ನೀಡುವುದು.

‘ಹಿಂದಿನ ಸೀಟ್ ಸವಾರಿ’ ಎನ್ನುವುದಾದರೆ, ಎದುರಾಳಿ ಬಣದಲ್ಲಿ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಮಾಡುತ್ತಿರುವುದೇನು? ಅವರು ಕೂಡ ಸ್ಪರ್ಧೆ ಮಾಡುತ್ತಿಲ್ಲ, ಕೇವಲ ಬೆಂಬಲ ನೀಡುತ್ತಿದ್ದಾರೆ. ಹಾಗಾದರೆ ಅವರದ್ದು ಕೂಡ ತಪ್ಪು ತಾನೆ?” ಎಂದು ಮರುಪ್ರಶ್ನೆ ಹಾಕುವ ಮೂಲಕ ಎದುರಾಳಿ ಬಣವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಉತ್ತಮ ಕ್ರಿಕೆಟಿಗರೆಲ್ಲ ಉತ್ತಮ ಆಡಳಿತಗಾರರಾ: ತಮ್ಮ ಬಣದಲ್ಲಿ ಆಡಳಿತಾಧಿಕಾರಿಗಳಾಗಿ ಅನುಭವ ಇರುವವರೇ ಹೆಚ್ಚಿದ್ದಾರೆ ಎಂದು ಸಮರ್ಥಿಸಿಕೊಂಡ ಬ್ರಿಜೇಶ್, ” ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಿದ ಕ್ರಿಕೆಟಿಗರೆಲ್ಲರೂ ಆಡಳಿತದಲ್ಲಿಯೂ ಅದೇ ಯಶಸ್ಸು ಕಾಣುತ್ತಾರೆ ಎಂದು ಹೇಳಲಾಗದು. ಆಡಳಿತ ನಡೆಸಲು ಅನುಭವ ಮತ್ತು ಚಾಕಚಕ್ಯತೆ ಬೇಕು.

ನಮ್ಮ ತಂಡದ ಕೆ.ಎನ್. ಶಾಂತಕುಮಾರ್, ಇ.ಎಸ್. ಜಯರಾಂ, ಎಂ.ಎಸ್. ವಿನಯ್ ಮತ್ತು ಬಿ.ಕೆ. ರವಿ ಅವರಂತಹ ಸಮರ್ಥರು ರಾಜ್ಯ ಕ್ರಿಕೆಟ್ ಅನ್ನು ಸುರಕ್ಷಿತವಾಗಿ ಮುನ್ನಡೆಸಬಲ್ಲರು,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಿನ್ನಸ್ವಾಮಿಗೆ ಮತ್ತೆ ಗತವೈಭವ: ಇದು ಬ್ರಿಜೇಶ್ ಶಪಥ ಆರ್‌ಸಿಬಿ ಪಂದ್ಯದ ಸಂಭ್ರಮಾಚರಣೆ ವೇಳೆ ನಡೆದ ನೂಕುನುಗ್ಗಲು ಮತ್ತು ದುರಂತದ ಬಗ್ಗೆ ಬ್ರಿಜೇಶ್ ಪಟೇಲ್ ತೀವ್ರ ವಿಷಾದ ವ್ಯಕ್ತಪಡಿಸಿದರು. “ಅದು ಒಂದು ಕರಾಳ ಘಟನೆ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮತ್ತೆ ಕ್ರಿಕೆಟ್ ಪಂದ್ಯಗಳನ್ನು ತರುವುದು ನಮ್ಮ ಮೊದಲ ಆದ್ಯತೆ.

ನ್ಯಾ. ಕುನ್ಹಾ ವರದಿಯಲ್ಲಿ ಸೂಚಿಸಿರುವಂತೆ ಸ್ಟೇಡಿಯಂನ ಪ್ರವೇಶ ದ್ವಾರಗಳನ್ನು ವಿಸ್ತರಿಸಿ, ಸುರಕ್ಷತಾ ಕ್ರಮಗಳನ್ನು ಕೈಗೊಂಡು ಸರ್ಕಾರದ ಮನವೊಲಿಸುತ್ತೇವೆ. ಈ ಐತಿಹಾಸಿಕ ಮೈದಾನದಲ್ಲಿ ಮತ್ತೆ ಕರತಾಡನ ಮೊಳಗುವಂತೆ ಮಾಡುತ್ತೇವೆ,” ಎಂದು ಭರವಸೆ ನೀಡಿದರು.

ಆರ್ಥಿಕತೆಯೇ ನಮ್ಮ ಶಕ್ತಿ: ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಟೀಕೆಗೆ ಉತ್ತರಿಸಿದ ಕಾರ್ಯದರ್ಶಿ ಅಭ್ಯರ್ಥಿ ಇ.ಎಸ್. ಜಯರಾಂ, “ಅಂಕಿ-ಅಂಶಗಳೇ ನಮ್ಮ ಕೆಲಸಕ್ಕೆ ಸಾಕ್ಷಿ. ಮೂರು ವರ್ಷಗಳ ಹಿಂದೆ ಸಂಸ್ಥೆಯ ಉಳಿತಾಯ ಠೇವಣಿ (FD) 100 ಕೋಟಿ ರೂ. ಇತ್ತು. ಆದರೆ ನಮ್ಮ ಶಿಸ್ತುಬದ್ಧ ಆಡಳಿತದಿಂದ ಇಂದು ಅದು 400 ಕೋಟಿ ರೂ.ಗೆ ಏರಿಕೆಯಾಗಿದೆ.

ಮಹಾರಾಜ ಟ್ರೋಫಿ ಹಿಂದೆ ನಷ್ಟದಲ್ಲಿತ್ತು, ಈಗ ಲಾಭ ತರುತ್ತಿದೆ. ನಾವು ಹಣವನ್ನು ಸುಮ್ಮನೆ ಬ್ಯಾಂಕ್‌ನಲ್ಲಿ ಇಟ್ಟಿಲ್ಲ, ಜೊತೆಗೆ ರಾಜ್ಯಾದ್ಯಂತ ಕ್ರೀಡಾಂಗಣಗಳ ಅಭಿವೃದ್ಧಿಗೂ ಬಳಸಿದ್ದೇವೆ,” ಎಂದು ಲೆಕ್ಕಪತ್ರ ಮಂಡಿಸಿದರು.

‘ಟೀಂ ಬ್ರಿಜೇಶ್’ ಪ್ರಮುಖ ಭರವಸೆಗಳು (ಪ್ರಣಾಳಿಕೆ): ಚುನಾವಣಾ ಕಣದಲ್ಲಿ ಮತದಾರರನ್ನು ಸೆಳೆಯಲು ಬ್ರಿಜೇಶ್ ತಂಡ ಹತ್ತು ಹಲವು ಆಕರ್ಷಕ ಯೋಜನೆಗಳನ್ನು ಮುಂದಿಟ್ಟಿದೆ.

ಸ್ಮಾರ್ಟ್ ಸ್ಟೇಡಿಯಂ: ಚಿನ್ನಸ್ವಾಮಿ ಕ್ರೀಡಾಂಗಣವನ್ನು ದೇಶದ ಮೊದಲ ‘ಸ್ಮಾರ್ಟ್ ಸ್ಟೇಡಿಯಂ’ ಆಗಿ ಪರಿವರ್ತಿಸುವುದು.

ಸುರಕ್ಷತೆಗೆ ಆದ್ಯತೆ: ಕುನ್ಹಾ ವರದಿ ಅನ್ವಯ ಕ್ರೀಡಾಂಗಣದ ಗೇಟ್‌ಗಳ ನವೀಕರಣ ಮತ್ತು ಸರ್ಕಾರದ ಅನುಮತಿ ಪಡೆದು ಪಂದ್ಯಗಳ ಆಯೋಜನೆ.

ಜಿಲ್ಲಾ ಮಟ್ಟದ ಅಭಿವೃದ್ಧಿ: ಮೂರ್ನಾಡು ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತ ಕ್ರಿಕೆಟ್ ಮೈದಾನ ಮತ್ತು ಅಕಾಡೆಮಿಗಳ ಸ್ಥಾಪನೆ.

ಮಹಿಳಾ ಕ್ರಿಕೆಟ್: ಮಹಿಳೆಯರಿಗಾಗಿ ವಿಶೇಷ ‘ಮಹಾರಾಣಿ ಕ್ರಿಕೆಟ್ ಟೂರ್ನಿ’ ಆಯೋಜನೆ ಮತ್ತು ಹೆಚ್ಚಿನ ತಂಡಗಳ ಸೇರ್ಪಡೆ.

ಪಾರದರ್ಶಕತೆ: ಖರ್ಚು-ವೆಚ್ಚಗಳಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳುವುದು ಮತ್ತು ಆರ್ಥಿಕವಾಗಿ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸುವುದು.

ಒಟ್ಟಿನಲ್ಲಿ, ಬ್ರಿಜೇಶ್ ಪಟೇಲ್ ಅವರ ಈ ತಿರುಗೇಟು ಮತ್ತು ಅಭಿವೃದ್ಧಿಯ ಮಂತ್ರಗಳು ಮತದಾರರ ಮೇಲೆ ಯಾವ ರೀತಿ ಪರಿಣಾಮ ಬೀರಲಿವೆ ಎಂಬುದನ್ನು ಕಾದು ನೋಡಬೇಕಿದೆ. ನವೆಂಬರ್ 21, 2025ರಂದು ನಡೆದ ಈ ಪತ್ರಿಕಾಗೋಷ್ಠಿ ಚುನಾವಣೆಗೂ ಮುನ್ನ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.

Previous articleರೈಲಿನಲ್ಲಿ ಕೆಟಲ್ ಬಳಸಿ ಮ್ಯಾಗಿ ಮಾಡಿದ ಮಹಿಳೆ: ಇಲಾಖೆಯಿಂದ ಎಚ್ಚರಿಕೆ ಸಂದೇಶ
Next articleಮೀನುಗಾರಿಕಾ ವಿಶ್ವ ವಿದ್ಯಾಲಯ ಸ್ಥಾಪಿಸಲು ಸರ್ಕಾರ ಸಿದ್ಧ

LEAVE A REPLY

Please enter your comment!
Please enter your name here