Asia Cup 2025 ಮುಗಿದು ತಿಂಗಳೇ ಕಳೆದಿದೆ, ಆದರೆ ವಿಜೇತ ಭಾರತದ ಕೈಗೆ ಇನ್ನೂ ಟ್ರೋಫಿ ಸೇರಿಲ್ಲ. ಈ ವಿಚಿತ್ರ ನಾಟಕದ ಸೂತ್ರಧಾರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಮೊಂಡುತನ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ವಿಷಯವನ್ನು ಐಸಿಸಿ ಅಂಗಳಕ್ಕೆ ಕೊಂಡೊಯ್ಯಲು ನಿರ್ಧರಿಸುತ್ತಿದ್ದಂತೆ, ಮೊಹ್ಸಿನ್ ನಖ್ವಿ ಸಭೆಯಿಂದಲೇ ದೂರ ಉಳಿಯುವ ಸಾಧ್ಯತೆ ದಟ್ಟವಾಗಿದೆ.
ಟ್ರೋಫಿ ವಿವಾದದ ಹಿನ್ನೆಲೆ: ಏಷ್ಯಾಕಪ್ ಗೆದ್ದ ನಂತರ, ನಿಯಮದ ಪ್ರಕಾರ ಟ್ರೋಫಿಯನ್ನು ವಿಜೇತ ತಂಡದ ದೇಶಕ್ಕೆ ಕಳುಹಿಸಬೇಕು. ಈ ಕುರಿತು ಬಿಸಿಸಿಐ, ಎಸಿಸಿ ಅಧ್ಯಕ್ಷರೂ ಆಗಿರುವ ನಖ್ವಿಗೆ ಪತ್ರ ಬರೆದು ಟ್ರೋಫಿಯನ್ನು ಮುಂಬೈಗೆ ಕಳುಹಿಸುವಂತೆ ವಿನಂತಿಸಿತ್ತು.
ಆದರೆ, ನಖ್ವಿ ಮಾತ್ರ “ಟ್ರೋಫಿ ಬೇಕಿದ್ದರೆ, ಬಿಸಿಸಿಐ ಪ್ರತಿನಿಧಿಗಳು ಮತ್ತು ಆಟಗಾರರು ದುಬೈಗೆ ಬಂದು ತೆಗೆದುಕೊಂಡು ಹೋಗಲಿ” ಎಂಬ ಉಡಾಫೆಯ ಮತ್ತು ಕ್ರೀಡಾಸ್ಪೂರ್ತಿಗೆ ವಿರುದ್ಧವಾದ ನಿಲುವನ್ನು ತಳೆದಿದ್ದಾರೆ. ಈ ನಡೆ ಬಿಸಿಸಿಐಯನ್ನು ಕೆಂಡಾಮಂಡಲವಾಗಿಸಿದೆ.
ಐಸಿಸಿ ಅಂಗಳಕ್ಕೆ ದೂರು: ನಖ್ವಿಯವರ ಈ ಮಕ್ಕಳಾಟದಿಂದ ಬೇಸತ್ತಿರುವ ಬಿಸಿಸಿಐ, ಇದನ್ನು ಸುಲಭವಾಗಿ ಬಿಡುವಂತೆ ಕಾಣುತ್ತಿಲ್ಲ. ನವೆಂಬರ್ 4 ರಿಂದ ದುಬೈನಲ್ಲಿ ನಡೆಯಲಿರುವ ನಾಲ್ಕು ದಿನಗಳ ಐಸಿಸಿ ಕಾರ್ಯನಿರ್ವಾಹಕ ಮಂಡಳಿಯ ಮಹತ್ವದ ಸಭೆಯಲ್ಲಿ, ಮೊಹ್ಸಿನ್ ನಖ್ವಿ ವಿರುದ್ಧ ಅಧಿಕೃತವಾಗಿ ದೂರು ನೀಡಲು ಸಿದ್ಧತೆ ನಡೆಸಿದೆ. ಇದು ಕೇವಲ ಒಂದು ಟ್ರೋಫಿಯ ವಿಷಯವಾಗಿರದೆ, ಇದು ಕ್ರೀಡಾಸ್ಪೂರ್ತಿಯ ಘನತೆಯ ಪ್ರಶ್ನೆಯಾಗಿದೆ ಎಂದು ಬಿಸಿಸಿಐ ಭಾವಿಸಿದೆ.
ಸಭೆಯಿಂದ ನಖ್ವಿ ಎಸ್ಕೇಪ್?: ಒಂದೆಡೆ ಬಿಸಿಸಿಐ ದೂರು ನೀಡಲು ಸಜ್ಜಾಗುತ್ತಿದ್ದರೆ, ಮತ್ತೊಂದೆಡೆ ಆರೋಪ ಹೊತ್ತಿರುವ ಮೊಹ್ಸಿನ್ ನಖ್ವಿ ಅವರೇ ಐಸಿಸಿ ಸಭೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎಂಬ ವರದಿಗಳು ಬಂದಿವೆ. “ದೇಶೀಯ ರಾಜಕೀಯ ಕಾರಣಗಳಿಂದ” ಸಭೆಗೆ ಗೈರಾಗಲಿದ್ದಾರೆ ಎಂದು ಪಿಸಿಬಿ ಮೂಲಗಳು ತಿಳಿಸಿವೆ.
ನಖ್ವಿ ಬದಲಿಗೆ ಪಿಸಿಬಿ ಸಿಇಒ ಸುಮೈರ್ ಸೈಯದ್ ಪಾಕಿಸ್ತಾನವನ್ನು ಪ್ರತಿನಿಧಿಸಲಿದ್ದಾರೆ. ಆದರೆ, ಬಿಸಿಸಿಐನ ತೀಕ್ಷ್ಣ ನಿಲುವನ್ನು ಎದುರಿಸಲು ಹೆದರಿ, ಅವರು ಈ ಸಭೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಬಲವಾಗಿ ಕೇಳಿಬರುತ್ತಿವೆ.
ಬಿಸಿಸಿಐ ನೀಡಿದ ಅಂತಿಮ ಗಡುವು: ಈ ಬಗ್ಗೆ ಮಾತನಾಡಿದ ಬಿಸಿಸಿಐ ಪದಾಧಿಕಾರಿ ದೇವಜಿತ್ ಸೈಕಿಯಾ, “ನಾವು ಈಗಾಗಲೇ ಎಸಿಸಿ ಅಧ್ಯಕ್ಷರಿಗೆ ಪತ್ರ ಬರೆದು ಹತ್ತು ದಿನಗಳಾಗಿವೆ. ನವೆಂಬರ್ 3ರೊಳಗೆ ಟ್ರೋಫಿ ನಮಗೆ ಸಿಗದಿದ್ದರೆ, ಮರುದಿನವೇ ದುಬೈನಲ್ಲಿರುವ ಐಸಿಸಿ ಪ್ರಧಾನ ಕಚೇರಿಯಲ್ಲಿ ಅಧಿಕೃತವಾಗಿ ದೂರು ದಾಖಲಿಸುತ್ತೇವೆ. ಐಸಿಸಿ ನಮಗೆ ನ್ಯಾಯ ಒದಗಿಸುತ್ತದೆ ಎಂಬ ಸಂಪೂರ್ಣ ವಿಶ್ವಾಸವಿದೆ,” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮೊಹ್ಸಿನ್ ನಖ್ವಿಯವರ ಈ ನಡೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಜಾಗತಿಕ ಮಟ್ಟದಲ್ಲಿ ಮುಖಭಂಗ ಉಂಟುಮಾಡಿದೆ. ಇದೀಗ ಇಡೀ ಕ್ರಿಕೆಟ್ ಜಗತ್ತು, ಈ ಅಭೂತಪೂರ್ವ ‘ಟ್ರೋಫಿ ಕಳ್ಳತನ’ ವಿವಾದವನ್ನು ಐಸಿಸಿ ಹೇಗೆ ಬಗೆಹರಿಸುತ್ತದೆ ಎಂದು ಕುತೂಹಲದಿಂದ ಎದುರು ನೋಡುತ್ತಿದೆ.


























