Home ಕ್ರೀಡೆ ಬಾಬರ್‌ಗೆ ಸಾವಿರ ದಿನಗಳ ಶತಕದ ಬರ, ತಂಡದಿಂದಲೇ ಗೇಟ್‌ಪಾಸ್?

ಬಾಬರ್‌ಗೆ ಸಾವಿರ ದಿನಗಳ ಶತಕದ ಬರ, ತಂಡದಿಂದಲೇ ಗೇಟ್‌ಪಾಸ್?

0

ಒಂದು ಕಾಲದಲ್ಲಿ ತಮ್ಮ ಸ್ಥಿರ ಪ್ರದರ್ಶನದಿಂದ ‘ಕಿಂಗ್’ ಎಂದು ಕರೆಯಲ್ಪಡುತ್ತಿದ್ದ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಆಝಂ, ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ರನ್ ಗಳಿಸಲು ಪರದಾಡುತ್ತಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಶತಕ ಬಾರಿಸದೆ ಬರೋಬ್ಬರಿ 1030 ದಿನಗಳನ್ನು ಪೂರೈಸಿ ತಮ್ಮ ವೃತ್ತಿಜೀವನದ ಅತ್ಯಂತ ಕಠಿಣ ಹಂತವನ್ನು ಎದುರಿಸುತ್ತಿದ್ದಾರೆ. ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲೂ ವೈಫಲ್ಯ ಮುಂದುವರಿದಿದ್ದು, ತಂಡದಿಂದಲೇ ಹೊರಬೀಳುವ ಒತ್ತಡಕ್ಕೆ ಸಿಲುಕಿದ್ದಾರೆ.

ಬಾಬರ್ ಆಝಂ ಇತ್ತೀಚಿನ ಟೆಸ್ಟ್ ಪ್ರದರ್ಶನವು ಆಘಾತಕಾರಿಯಾಗಿದೆ. ಕಳೆದ 28 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್‌ನಿಂದ ಹರಿದು ಬಂದಿರುವುದು ಕೇವಲ 651 ರನ್‌ಗಳು. ಈ ಅವಧಿಯಲ್ಲಿ ಅವರು ಗಳಿಸಿರುವುದು ಕೇವಲ 3 ಅರ್ಧಶತಕಗಳನ್ನು ಮಾತ್ರ. ಕೇವಲ 24ರ ಸರಾಸರಿಯಲ್ಲಿ ಬ್ಯಾಟ್ ಬೀಸುತ್ತಿರುವ ಬಾಬರ್, ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟ ಪ್ರದರ್ಶಿಸುವಲ್ಲಿ ವಿಫಲರಾಗಿದ್ದಾರೆ. ರಾವಲ್ಪಿಂಡಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 16 ರನ್‌ಗಳಿಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದಾರೆ.

ಕೊನೆಯ ಶತಕ ಸಿಡಿದು ಮೂರು ವರ್ಷಗಳೇ ಉರುಳಿದವು: ಬಾಬರ್ ಕೊನೆಯ ಬಾರಿಗೆ ಟೆಸ್ಟ್ ಶತಕದ ಸಂಭ್ರಮ ಆಚರಿಸಿದ್ದು 2022ರ ಡಿಸೆಂಬರ್‌ನಲ್ಲಿ. ಕರಾಚಿಯಲ್ಲಿ ನ್ಯೂಝಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಅವರು 161 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿದ್ದರು. ಆದರೆ ಅಂದಿನಿಂದ ಇಂದಿನವರೆಗೂ ಅವರಿಗೆ ಮೂರಂಕಿ ಮೊತ್ತವನ್ನು ತಲುಪಲು ಸಾಧ್ಯವಾಗಿಲ್ಲ. ಈ ಸತತ ವೈಫಲ್ಯದಿಂದಾಗಿ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಹಾಗೂ ವಿಶ್ಲೇಷಕರಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಅವರನ್ನು ತಂಡದಿಂದ ಕೈಬಿಡಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್, ಬಾಬರ್‌ಗೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಸಿಕ್ಕಿರುವ ಕೊನೆಯ ಅವಕಾಶವಿರಬಹುದು. ಈ ಇನ್ನಿಂಗ್ಸ್‌ನಲ್ಲಿ ತಮ್ಮ ಸಾವಿರ ದಿನಗಳ ಶತಕದ ಬರವನ್ನು ನೀಗಿಸಿ, ಟೀಕಾಕಾರರ ಬಾಯಿ ಮುಚ್ಚಿಸುತ್ತಾರಾ? ಅಥವಾ ತಂಡದಿಂದ ಹೊರಬೀಳುವ ಒತ್ತಡಕ್ಕೆ ಸಿಲುಕುತ್ತಾರಾ? ಎಂಬುದನ್ನು ಕಾದುನೋಡಬೇಕಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version