ಕ್ರಿಕೆಟ್ ಅಂಗಳದಲ್ಲಿ ಮತ್ತೊಂದು ದುರಂತ: ಫಿಲ್ ಹ್ಯೂಸ್ ಸಾವಿನ ಕಹಿ ನೆನಪು ಮರುಕಳಿಸಿತು

0
20

ಆಸ್ಟ್ರೇಲಿಯಾದ ಕ್ರಿಕೆಟ್ ಲೋಕದಲ್ಲಿ ಮತ್ತೊಮ್ಮೆ ಶೋಕದ ಛಾಯೆ ಆವರಿಸಿದೆ. ಸುಮಾರು ಒಂದು ದಶಕದ ಹಿಂದೆ ಫಿಲ್ ಹ್ಯೂಸ್ ಅಕಾಲಿಕ ಮರಣದಿಂದಾದ ಆಘಾತ ಮಾಸುವ ಮುನ್ನವೇ, ಅದೇ ರೀತಿಯ ದುರಂತವೊಂದು ಸಂಭವಿಸಿದೆ.

ಮೆಲ್ಬೋರ್ನ್‌ನ 17 ವರ್ಷದ ಯುವ ಪ್ರತಿಭೆ ಬೆನ್ ಆಸ್ಟಿನ್, ಅಭ್ಯಾಸದ ವೇಳೆ ಚೆಂಡು ಬಡಿದು ಸಾವನ್ನಪ್ಪಿದ್ದಾರೆ. ಈ ಘಟನೆಯು ಕ್ರಿಕೆಟ್ ಪ್ರೇಮಿಗಳನ್ನು ದಿಗ್ಭ್ರಮೆಗೊಳಿಸಿದ್ದು, ಆಟದ ಮೈದಾನದಲ್ಲಿನ ಸುರಕ್ಷತೆಯ ಬಗ್ಗೆ ಮತ್ತೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ.

ನೋವಿನ ಆಟವಾಗಿ ಬದಲಾದ ಅಭ್ಯಾಸ: ಮೆಲ್ಬೋರ್ನ್‌ನ ಪೂರ್ವ ಭಾಗದಲ್ಲಿರುವ ಫರ್ನ್‌ಟ್ರೀ ಗಲ್ಲಿ ಕ್ರಿಕೆಟ್ ಕ್ಲಬ್‌ನಲ್ಲಿ ಅಕ್ಟೋಬರ್ 28 ರಂದು ಮುಂದಿನ ಪಂದ್ಯಕ್ಕಾಗಿ ಬೆನ್ ಆಸ್ಟಿನ್ ಸಿದ್ಧತೆ ನಡೆಸುತ್ತಿದ್ದರು. ಬೌಲಿಂಗ್ ಯಂತ್ರದ ಮೂಲಕ ಬ್ಯಾಟಿಂಗ್ ಅಭ್ಯಾಸ ಮಾಡುವಾಗ ಹೆಲ್ಮೆಟ್ ಧರಿಸಿದ್ದರೂ, ವೇಗವಾಗಿ ಬಂದ ಚೆಂಡು ಕುತ್ತಿಗೆಯ ಭಾಗಕ್ಕೆ ಬಲವಾಗಿ ಅಪ್ಪಳಿಸಿದೆ.

ರಕ್ಷಣಾ ಕವಚವಿಲ್ಲದ ಸೂಕ್ಷ್ಮ ಜಾಗಕ್ಕೆ ಚೆಂಡು ತಗುಲಿದ್ದರಿಂದ ತಕ್ಷಣವೇ ಕುಸಿದುಬಿದ್ದರು. ತರಬೇತಿ ನಿರತ ಸಹ ಆಟಗಾರರ ಸಮ್ಮುಖದಲ್ಲೇ ಈ ದುರ್ಘಟನೆ ನಡೆದಿದೆ. ಅವರನ್ನು ಕೂಡಲೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ, ಎರಡು ದಿನಗಳ ಜೀವನ್ಮರಣ ಹೋರಾಟದ ನಂತರ, ಅಕ್ಟೋಬರ್ 30 ರಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ಫರ್ನ್‌ಟ್ರೀ ಗಲ್ಲಿ ಕ್ರಿಕೆಟ್ ಕ್ಲಬ್ ಈ ಸುದ್ದಿಯನ್ನು ಖಚಿತಪಡಿಸಿದ್ದು, “ಬೆನ್ ನಿಧನದಿಂದ ನಾವು ಸಂಪೂರ್ಣವಾಗಿ ಕುಸಿದುಹೋಗಿದ್ದೇವೆ. ಅವರ ಸಾವಿನ ನೋವು ನಮ್ಮ ಕ್ರಿಕೆಟ್ ಸಮುದಾಯದ ಪ್ರತಿಯೊಬ್ಬರಿಗೂ ತಟ್ಟಲಿದೆ” ಎಂದು ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಬೆನ್, ಆಸ್ಟ್ರೇಲಿಯಾದ 19 ವರ್ಷದೊಳಗಿನವರ ತಂಡದಲ್ಲಿ ಸ್ಥಾನ ಗಿಟ್ಟಿಸಿ, ಮುಂದೆ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಮಹದಾಸೆ ಹೊಂದಿದ್ದರು. ಅದಕ್ಕಾಗಿ ಕಠಿಣ ಪರಿಶ್ರಮವನ್ನೂ ಪಡುತ್ತಿದ್ದರು. ಆದರೆ, ವಿಧಿಯಾಟಕ್ಕೆ ಅವರ ಕನಸುಗಳು ಕಮರಿಹೋಗಿವೆ.

ಮರುಕಳಿಸಿದ ಫಿಲ್ ಹ್ಯೂಸ್ ದುರಂತ: ಈ ಘಟನೆಯು 2014ರ ನವೆಂಬರ್ 25ರ ಕರಾಳ ದಿನವನ್ನು ನೆನಪಿಸುತ್ತದೆ. ಅಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದ ಶೆಫೀಲ್ಡ್ ಶೀಲ್ಡ್ ದೇಶೀಯ ಪಂದ್ಯದ ವೇಳೆ, ಬೌಲರ್ ಶಾನ್ ಅಬಾಟ್ ಎಸೆದ ಬೌನ್ಸರ್, ಆಸ್ಟ್ರೇಲಿಯಾದ ಅಂತಾರಾಷ್ಟ್ರೀಯ ಆಟಗಾರ ಫಿಲ್ ಹ್ಯೂಸ್ ತಲೆಯ ಹಿಂಭಾಗಕ್ಕೆ ಬಡಿದಿತ್ತು.

ತೀವ್ರವಾಗಿ ಗಾಯಗೊಂಡ ಅವರು, ಎರಡು ದಿನಗಳ ನಂತರ ಆಸ್ಪತ್ರೆಯಲ್ಲಿ ನಿಧನರಾದರು. ಆಗ ಅವರಿಗೆ ಕೇವಲ 25 ವರ್ಷ ವಯಸ್ಸಾಗಿತ್ತು. ಈ ಘಟನೆಯ ನಂತರ, ಆಟಗಾರರ ಸುರಕ್ಷತೆಗಾಗಿ ಹೆಲ್ಮೆಟ್‌ಗಳಿಗೆ ಹೆಚ್ಚುವರಿಯಾಗಿ ಕುತ್ತಿಗೆಯ ಭಾಗವನ್ನು ರಕ್ಷಿಸುವ ‘ಸ್ಟೆಮ್ ಗಾರ್ಡ್’ ಬಳಕೆಯನ್ನು ಕಡ್ಡಾಯಗೊಳಿಸುವಂತಹ ಹಲವು ನಿಯಮಗಳನ್ನು ಜಾರಿಗೆ ತರಲಾಗಿತ್ತು.

ಬೆನ್ ಆಸ್ಟಿನ್ ಸಾವು, ಕ್ರಿಕೆಟ್ ಅಂಗಳದಲ್ಲಿ ಎಷ್ಟೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡರೂ, ಅನಿರೀಕ್ಷಿತ ಅಪಾಯಗಳು ಸಂಭವಿಸಬಹುದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಯುವ ಪ್ರತಿಭೆಯ ಅಕಾಲಿಕ ಅಗಲಿಕೆಯು ಕುಟುಂಬ, ಸ್ನೇಹಿತರು ಮತ್ತು ಕ್ರಿಕೆಟ್ ಜಗತ್ತಿಗೆ ತುಂಬಲಾರದ ನಷ್ಟವನ್ನುಂಟುಮಾಡಿದೆ.

Previous articleಹೃದಯಾಘಾತದಿಂದ ಚಾಲಕ ಸಾವು: ಪಿಕ್‌ಅಪ್ ವಾಹನ ಪಲ್ಟಿ
Next article2028ರ ಅಖಾಡಕ್ಕೂ ನಾನೇ ಸಾರಥಿ? ಸಿದ್ದು ಹೇಳಿಕೆಯಿಂದ ಕಾಂಗ್ರೆಸ್‌ನಲ್ಲಿ ಕಂಪನ: ಡಿಕೆ ಬ್ರದರ್ಸ್ ಹೇಳಿದ್ದೇನು?

LEAVE A REPLY

Please enter your comment!
Please enter your name here