ಚೆಸ್ ದಂತಕಥೆಗಳ ಮರು ಸಮರ: ಆನಂದ್ vs ಕ್ಯಾಸ್ಪರೋವ್

0
35

ಚೆಸ್ ಲೋಕದ ಇಬ್ಬರು ಮಹಾನ್ ದಿಗ್ಗಜರಾದ ಭಾರತದ ವಿಶ್ವನಾಥನ್ ಆನಂದ್ ಮತ್ತು ರಷ್ಯಾದ ಗ್ಯಾರಿ ಕ್ಯಾಸ್ಪರೋವ್, ಮೂರು ದಶಕಗಳ ಸುದೀರ್ಘ ಅಂತರದ ನಂತರ ಮತ್ತೆ ಮುಖಾಮುಖಿಯಾಗಲು ಸಜ್ಜಾಗಿದ್ದಾರೆ. ಈ ಸುದ್ದಿ ಚೆಸ್ ಅಭಿಮಾನಿಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಅಮೆರಿಕದ ಸೇಂಟ್ ಲೂಯಿಸ್ ಚೆಸ್ ಕ್ಲಬ್‌ನಲ್ಲಿ ನಡೆಯಲಿರುವ ‘ಕ್ಲಚ್ ಚೆಸ್ ದಿ ಲೆಜೆಂಡ್ಸ್’ ಟೂರ್ನಿಯು ಈ ಐತಿಹಾಸಿಕ ಹಣಾಹಣಿಗೆ ವೇದಿಕೆ ಒದಗಿಸಲಿದೆ.

ಈ ರೋಚಕ ಪಂದ್ಯಾವಳಿಯಲ್ಲಿ ಒಟ್ಟು 12 ಆಟಗಳು ನಡೆಯಲಿವೆ. ಕೇವಲ ಗೆಲುವು ಮಾತ್ರವಲ್ಲದೆ, ಈ ಟೂರ್ನಿಯ ಬಹುಮಾನದ ಮೊತ್ತ ಕೂಡ ಎಲ್ಲರ ಗಮನ ಸೆಳೆದಿದೆ. ವಿಜೇತರಿಗೆ 70,000 ಅಮೆರಿಕನ್ ಡಾಲರ್‌ಗಳು (ಸುಮಾರು 62 ಲಕ್ಷ ರೂಪಾಯಿ) ದೊರೆಯಲಿದ್ದು, ಇದರ ಜೊತೆಗೆ 24,000 ಅಮೆರಿಕನ್ ಡಾಲರ್‌ಗಳ (ಸುಮಾರು 21 ಲಕ್ಷ ರೂಪಾಯಿ) ಬೋನಸ್ ಸಹ ಸಿಗಲಿದೆ.

ರನ್ನರ್-ಅಪ್ ಆದವರಿಗೂ 50,000 ಅಮೆರಿಕನ್ ಡಾಲರ್‌ಗಳು (ಸುಮಾರು 52 ಲಕ್ಷ ರೂಪಾಯಿ) ಲಭ್ಯವಾಗಲಿದೆ. ಒಂದು ವೇಳೆ ಪಂದ್ಯ ಡ್ರಾ ಆದರೆ, ಇಬ್ಬರೂ ಆಟಗಾರರು 60,000 ಅಮೆರಿಕನ್ ಡಾಲರ್‌ಗಳನ್ನು (ಸುಮಾರು 53 ಲಕ್ಷ ರೂಪಾಯಿ) ಸಮಾನವಾಗಿ ಹಂಚಿಕೊಳ್ಳುತ್ತಾರೆ. ಒಟ್ಟಾರೆ, ಈ ಟೂರ್ನಿ 144,000 ಅಮೆರಿಕನ್ ಡಾಲರ್‌ಗಳ (ಸುಮಾರು 1.27 ಕೋಟಿ ರೂಪಾಯಿ) ಬಹುಮಾನದ ಮೊತ್ತವನ್ನು ಹೊಂದಿದೆ.

ಮೂರು ದಿನಗಳ ಕಾಲ ನಡೆಯುವ ಈ ಪಂದ್ಯಾವಳಿಯಲ್ಲಿ ರ‍್ಯಾಪಿಡ್ ಮತ್ತು ಬ್ಲಿಟ್ಜ್ ಮಾದರಿಯ ಆಟಗಳು ಇರಲಿವೆ. ವಿಶೇಷವಾಗಿ, ‘ಚೆಸ್ 960’ ಅಥವಾ ‘ಫಿಶರ್ ರಾಂಡಮ್’ ನಿಯಮವನ್ನು ಬಳಸಲಾಗುತ್ತದೆ. ಇದು ಆಟಗಾರರ ಸೃಜನಶೀಲ ಚಿಂತನೆ ಮತ್ತು ತಕ್ಷಣದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಕ್ಕೆ ಸವಾಲು ಒಡ್ಡುತ್ತದೆ. ಪ್ರತಿದಿನ ನಾಲ್ಕು ಪಂದ್ಯಗಳು ನಡೆಯಲಿದ್ದು, ಮೊದಲ ದಿನದ ಗೆಲುವಿಗೆ 4 ಅಂಕಗಳು, ಎರಡನೇ ದಿನ 8 ಅಂಕಗಳು ಮತ್ತು ಅಂತಿಮ ದಿನ 12 ಅಂಕಗಳು ಲಭ್ಯವಾಗಲಿವೆ. ಈ ಅಂಕಗಳ ಆಧಾರದ ಮೇಲೆ ವಿಜೇತರನ್ನು ನಿರ್ಧರಿಸಲಾಗುತ್ತದೆ.

1995ರಲ್ಲಿ ನ್ಯೂಯಾರ್ಕ್‌ನ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ಈ ಇಬ್ಬರು ದಂತಕಥೆಗಳ ನಡುವೆ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಕ್ಯಾಸ್ಪರೋವ್ ಜಯಗಳಿಸಿದ್ದರು. ಪ್ರಸ್ತುತ, ಗ್ಯಾರಿ ಕ್ಯಾಸ್ಪರೋವ್ ಸ್ಪರ್ಧಾತ್ಮಕ ಚೆಸ್‌ನಿಂದ ನಿವೃತ್ತರಾಗಿದ್ದರೂ, ಸಾಂದರ್ಭಿಕವಾಗಿ ಪ್ರದರ್ಶನ ಪಂದ್ಯಗಳಲ್ಲಿ ಭಾಗವಹಿಸುತ್ತಾರೆ.

ವಿಶ್ವನಾಥನ್ ಆನಂದ್ ಕೂಡ ಉನ್ನತ ಮಟ್ಟದ ಟೂರ್ನಿಗಳಲ್ಲಿ ಆಯ್ದುಕೊಂಡು ಆಡುತ್ತಿದ್ದಾರೆ ಮತ್ತು ‘ವೆಸ್ಟ್‌ಬ್ರಿಡ್ಜ್ ಆನಂದ್ ಚೆಸ್ ಅಕಾಡೆಮಿ’ ಮೂಲಕ ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಡಿ. ಗುಕೇಶ್ ಅವರಂತಹ ವಿಶ್ವ ಚಾಂಪಿಯನ್‌ಗಳನ್ನು ಈ ಅಕಾಡೆಮಿ ಈಗಾಗಲೇ ರೂಪಿಸಿದೆ.

Previous articleನೊಬೆಲ್ 2025: ರಸಾಯನಶಾಸ್ತ್ರದ ಮೂವರು ವಿಜ್ಞಾನಿಗಳಿಗೆ ಪ್ರಶಸ್ತಿ
Next article‘ನೀರಿದ್ದರೆ ನಾಳೆ’ ಅಭಿಯಾನಕ್ಕೆ ರಾಯಭಾರಿಯಾಗಿ ನಟ ವಸಿಷ್ಠ ಸಿಂಹ

LEAVE A REPLY

Please enter your comment!
Please enter your name here