ಬೆಳಕಿನ ಹಬ್ಬಕ್ಕೆ ಬಂದ ಪರಿಸರಸ್ನೇಹಿ ಹಣತೆಗಳು

0
65
ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಾಪ್ತಾಹಿಕ ಸೌರಭದಲ್ಲಿ ಪ್ರಕಟವಾದ ಲೇಖನ.

ಮಣ್ಣಿನಿಂದ ಮಾಡಿದ ಹಣತೆಗಳನ್ನು ನಾವು ನೋಡಿದ್ದೇವೆ. ಆದರೆ ಹಸುವಿನ ಸಗಣಿಯಿಂದ ತಯಾರಾದ ಪರಿಸರಸ್ನೇಹಿ ಹಣತೆಗಳನ್ನು ನೋಡಿದವರು ಬಹಳ ಕಡಿಮೆ. ಇತ್ತೀಚೆಗೆ ಸಾಂಪ್ರದಾಯಿಕ ಹಣತೆಗಳ ಬದಲಾಗಿ ಈ ಹಣತೆಗಳು ಜನಪ್ರಿಯ ಗೊಳ್ಳುತ್ತಿವೆ. ದೀಪಾವಳಿಯ ವೇಳೆಗೆ ಇವುಗಳ ಬೇಡಿಕೆಯೂ ಹೆಚ್ಚಾಗಿದೆ.

ಎಂ. ಆರ್. ಮಂಜುನಾಥ್

ದೀಪಾವಳಿ ಬಂತೆಂದರೆ ಎಲ್ಲಿಲ್ಲದ ಸಂಭ್ರಮ. ಅದರಲ್ಲೂ ಹೆಣ್ಣುಮಕ್ಕಳಂತೂ ಹೊಸ ಬಟ್ಟೆಗಳನ್ನು ತೊಟ್ಟು ಕುಟುಂಬದವರ ಜೊತೆಗೂಡಿ ಮನೆಗಳ ಮುಂದೆ ಹಣತೆಗಳನ್ನು ಹಚ್ಚಿ ಬೆಳಕಿನ ಹಬ್ಬಕ್ಕೆ ಕಳೆ ತರುತ್ತಾರೆ. ಕಾಮಧೇನು ಎಂದೇ ಕರೆಯಲ್ಪಡುವ ಗೋಮಾತೆಯಿಂದ ಮನುಷ್ಯನಿಗೆ ಹಲವು ರೀತಿಯ ಉಪಯೋಗಗಳಾಗಿವೆ. ಹಾಗೆಯೇ ಹಸುವಿನ ಸಗಣಿಯಿಂದ ಹಣತೆಗಳನ್ನು ಕೂಡ ತಯಾರಿಸಬಹುದು.

ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿಸುಬ್ರಹ್ಮಣ್ಯ ಕ್ಷೇತ್ರದ ಬಳಿ ಇರುವ ರಾಷ್ಟ್ರೋತ್ಥಾನ ಗೋಶಾಲೆ ಇಂತಹದೊಂದು ಪ್ರಯೋಗಕ್ಕೆ ಕೈಹಾಕಿದೆ. ಇಲ್ಲಿ ದೀಪಾವಳಿ ಹಬ್ಬಕ್ಕೆಂದು ಗೋಮಯದ ಹಣತೆಗಳು ತಯಾರಾಗುತ್ತಿದೆ. ಈ ಹಣತೆಗಳು ಬೆಂಗಳೂರು, ತುಮಕೂರು, ಮೈಸೂರು, ಆಂಧ್ರ, ಕಂಚಿ ಇತ್ಯಾದಿಗಳಿಗಷ್ಟೇ ಅಲ್ಲದೆ ಹೊರರಾಜ್ಯ ಹೊರದೇಶಕ್ಕೂ ರಫ್ತಾಗುತ್ತಿವೆ.

ಸಗಣಿಯಿಂದ ಹಣತೆ ತಯಾರಿಸುವ ಗುಡಿಕೈಗಾರಿಕೆಯಿಂದ ರೈತರು ಸ್ವಾವಲಂಬಿಗಳಾಗಬಹುದು. ಸದ್ಯ ಮೂರು ಕೋಟಿ ಹಣತೆಗಳಿಗೆ ಬೇಡಿಕೆ ಇದೆ. ರಾಷ್ಟ್ರೋತ್ಥಾನ ಗೋಶಾಲೆಗೆ 50 ಲಕ್ಷ ಹಣತೆಗಳ ಬೇಡಿಕೆ ಬಂದಿದೆ ಎನ್ನುತ್ತಾರೆ ರಾಷ್ಟ್ರೋತ್ಥಾನ ಗೋಶಾಲಾ ಮುಖ್ಯಸ್ಥ ರಾಮಚಂದ್ರ.

ಪಂಚಗವ್ಯದ ಹಣತೆಗಳು: ಹಸುಗಳು ಹೊರಗೆ ಗರಿಕೆಹುಲ್ಲು ಮೇಯುವುದರಿಂದ ಅವುಗಳ ಸಗಣಿ ಗಟ್ಟಿಯಾಗಿರುತ್ತದೆ. ಸಗಣಿಯನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಜರಡಿ ಹಿಡಿದು ನುಣ್ಣಗೆ ಬಂದ ಪೌಡರ್ ಹಣತೆ ತಯಾರಿಕೆಗೆ ಸೂಕ್ತವಾಗಿರುತ್ತದೆ. ಇದಕ್ಕೆ ಹಾಲು, ಮೊಸರು, ತುಪ್ಪ, ಗೋಮೂತ್ರಗಳನ್ನು ಬಳಸಿ ಚೆನ್ನಾಗಿ ಕಲಸಿ ನಾದುತ್ತಾರೆ.

ಇದರಿಂದ ಹಣತೆ ಬಿರುಕು ಬಿಡುವುದಿಲ್ಲ, ಹಾಗೂ ಅದಕ್ಕೆ ಹಾಕಿದ ಎಣ್ಣೆ ಸೋರುವುದಿಲ್ಲ. ಚೆನ್ನಾಗಿ ಹದ ಮಾಡಿಕೊಂಡ ಸಗಣಿಯ ಮಿಶ್ರಣವನ್ನು ಅಚ್ಚುಗಳಲ್ಲಿ ಹಾಕಿ ಬೇಕಾದ ರೀತಿಯಲ್ಲಿ ವಿನ್ಯಾಸಗೊಳಿಸಿ 2-3 ದಿನಗಳ ತನಕ ನೆರಳಿನಲ್ಲಿ ಒಣಗಿಸುತ್ತಾರೆ. ನಂತರ ಇವುಗಳಿಗೆ ನಾನಾ ವಿದಧ ರಂಗುರಂಗಿನ ಬಣ್ಣಗಳನ್ನು ತುಂಬಲಾಗುತ್ತದೆ.

ಮಹಿಳೆಯರಿಗೆ ಉದ್ಯೋಗಾವಕಾಶ: ಈ ಪರಿಸರಸ್ನೇಹಿ ಹಣತೆಗಳನ್ನು ಬಳಸಿದ ನಂತರ ಬಂದ ಬೂದಿಯನ್ನು ಗಿಡಗಳಿಗೆ ಗೊಬ್ಬರವಾಗಿ ಬಳಸಬಹುದು. ಮನೆಯಲ್ಲಿಯೇ ಕುಳಿತು ಸಗಣಿಯ ಹಣತೆ ತಯಾರಿಸುವುದರಿಂದ ಮಹಿಳೆಯರಿಗೆ ಉದ್ಯೋಗಾವಕಾಶ ದೊರೆಯುತ್ತದೆ. ಆರ್ಥಿಕವಾಗಿ ಲಾಭ ಗಳಿಸಬಹುದು. ಪ್ರತಿಯೊಬ್ಬರೂ ತಮ್ಮತಮ್ಮ ಮನೆಗಳಲ್ಲಿ ಪರಿಸರಸ್ನೇಹಿ ಹಣತೆ ಬೆಳಗಿಸುವುದರಿಂದ ಪರಿಸರ ಉಂಟಾಗಬಹುದಾದ ಹಾನಿಯನ್ನು ತಪ್ಪಿಸ ಬಹುದಾಗಿದೆ.

Previous articleವಿಶ್ವ ದಾಖಲೆಗೆ ಸಜ್ಜಾದ ಅಯೋಧ್ಯೆಯ ದಿವ್ಯ ದೀಪಾವಳಿ
Next articleಬಾಲಿವುಡ್‌ಗೆ ಸಮಾನ ಸ್ಪರ್ಧಿಯಾಗಿರುವ ಚಂದನವನಕ್ಕೆ DK ಅಭಯ

LEAVE A REPLY

Please enter your comment!
Please enter your name here