ಸ್ನೇಹ, ಪ್ರೇಮದ ನಾಟಕವಾಡಿ ಮಹಿಳೆಯರನ್ನು ವಂಚಿಸಿದ ಆರೋಪಿ ಸೆರೆ

0
22

ಮಂಗಳೂರು: ಹಲವಾರು ಮಹಿಳೆಯರನ್ನು ತನ್ನ ಪ್ರೇಮದ ಬಲೆಗೆ ಬೀಳಿಸಿಕೊಂಡು, ಅವರ ಜೊತೆ ಆತ್ಮೀಯವಾಗಿದ್ದುಕೊಂಡು ಕೊನೆಗೆ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಕಂಕನಾಡಿ ಪೊಲೀಸರ ಬಂಧಿಸಿದ್ದಾರೆ.
ಉಡುಪಿ ಜಿಲ್ಲೆ ಕಾರ್ಕಳ ನಿವಾಸಿ ನಟೋರಿಯಸ್ ಕಳ್ಳ ರೋಹಿತ್ ಮಥಾಯಿಸ್ ಬಂಧಿತ ಆರೋಪಿ. ಆರೋಪಿ ರೋಹಿತ್ ಮಥಾಯಿಸ್ ಸಾಮಾಜಿಕ ಜಾಲತಾಣದ ಮೂಲಕ ಮಂಗಳೂರು-ಉಡುಪಿ ಭಾಗದ ಕ್ರೈಸ್ತ ಸಮುದಾಯಕ್ಕೆ ಸೇರಿದ ಅಂದವಾದ ಶ್ರೀಮಂತ ಮಹಿಳೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದನು. ಅವರ ಜೊತೆ ನಿತ್ಯ ಸಂಪರ್ಕದಲ್ಲಿ ಇರುತ್ತಿದ್ದನು. ಅವರೊಂದಿಗೆ ಚಾಟ್ ಮಾಡುತ್ತ ಮೋಡಿ ಮಾಡುತ್ತಿದ್ದನು. ಮೊದಲಿಗೆ ಅವರೊಂದಿಗೆ ಗಾಢವಾದ ಸ್ನೇಹ ಬೆಳಸುತ್ತಿದ್ದನು. ದಿನಗಳು ಕಳೆದಂತೆ ಮಹಿಳೆಯರನ್ನು ತನ್ನ ಪ್ರೀತಿಯ ನಾಟಕದ ಬಲೆಗೆ ಬೀಳಿಸಿಕೊಳ್ಳುತ್ತಿದ್ದನು. ಬಳಿಕ ಅವರ ಮನೆಯ ವಿಳಾಸ ಪಡೆದು, ಹೋಗಿ-ಬಂದು ಮಾಡುತ್ತಿದ್ದನು. ನಂತರ ಅವರ ಜೊತೆ ಖಾಸಗಿಯಾಗಿ ಸಂಪರ್ಕದಲ್ಲಿದ್ದು, ಕೊನೆಗೆ ಅವರ ಮನೆಯಲ್ಲಿನ ಚಿನ್ನ ದೋಚಿ ಪರಾರಿಯಾಗುತ್ತಿದ್ದನು.
ಆರೋಪಿ ರೋಹಿತ್ ಮಥಾಯಿಸ್ ಇತರರೊಂದಿಗೆ ಸೇರಿಕೊಂಡು ೨೦೧೯ರಲ್ಲಿ ನಿವೃತ್ತ ಪಿಡಿಓ ಭರತಲಕ್ಷ್ಮಿ ಹಣ ಮತ್ತು ಚಿನ್ನಾಭರಣ ದೋಚಿದ್ದನು. ಬಳಿಕ ಅವರನ್ನು ಬೆಳ್ಮಣ ಗ್ರಾಮದಲ್ಲಿನ ಮನೆಯಲ್ಲಿ ಕೊಲೆ ಮಾಡಿ, ಅವರ ಮೃತ ದೇಹವನ್ನು ಕಲ್ಯಾದ ಬಾವಿಯೊಂದರಲ್ಲಿ ಪ್ಲಾಸ್ಟಿಕ್‌ನಲ್ಲಿ ಸುತ್ತಿ ಎಸೆದು ಹೋಗಿದ್ದನು. ಈ ಪ್ರಕರಣದಲ್ಲಿ ಆರೋಪಿ ರೋಹಿತ್ ಮಥಾಯಿಸ್‌ನನ್ನು ಪೊಲೀಸರು ಬಂಧಿಸಿದ್ದರು. ರೋಹಿತ್ ಮಥಾಯಿಸ್ ಜೈಲುವಾಸ ಅನುಭವಿಸಿ, ನಂತರ ಪ್ರಕರಣದ ವಿಚಾರಣೆಗೆ ಸಿಗದೇ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದನು.
ಮತ್ತೆ ೨೦೨೧ರಲ್ಲಿ ಕಂಕನಾಡಿಯ ಮಹಿಳೆಯೋರ್ವರ ಮನೆಯಿಂದ ಕಳ್ಳತನ ಮಾಡಿ ಪರಾರಿಯಾಗಿದ್ದನು. ಮತ್ತೆ ಇದೇ ರೀತಿ ಕೃತ್ಯ ಎಸಗಲು ಮುಂದಾದಾಗ ಮಾಹಿತಿ ತಿಳಿದ ಕಂಕನಾಡಿ ನಗರ ಪೊಲೀಸರು ಆರೋಪಿ ರೋಹಿತ್ ಮಥಾಯಿಸ್‌ನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ರೋಹಿತ್ ಮಥಾಯಿಸ್ ಬಳಿಯಿಂದ ೭ ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಆರೋಪಿ ರೋಹಿತ್ ಮಥಾಯಿಸ್ ಸಾಮಾಜಿಕ ಜಾಲತಾಣದ ಮೂಲಕ ಇಸ್ರೇಲ್‌ನಲ್ಲಿ ವಾಸವಿದ್ದ ಮಹಿಳೆಯನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದನು. ಈತನ ಜೊತೆ ಲಿವಿಂಗ್ ಟು ಗೆದರ್‌ನಲ್ಲಿರಲು ಮಹಿಳೆ ಇಸ್ರೇಲ್ ಬಿಟ್ಟು ಮಂಗಳೂರಿಗೆ ಬಂದಿದ್ದಳು. ಆರೋಪಿ ರೋಹಿತ್ ಮಥಾಯಿಸ್ ಜೊತೆ ಲಿವಿಂಗ್ ಟು ಗೆದರ್ ಇರಲು ನಿರ್ಧರಿಸಿರುವ ಬಗ್ಗೆ ಮಹಿಳೆ ತನ್ನ ಸ್ನೇಹಿತನಿಗೆ ತಿಳಿಸಿದ್ದಳು. ಮಹಿಳೆಯ ಸ್ನೇಹಿತನಿಗೆ ಆರೋಪಿ ರೋಹಿತ್ ಮಥಾಯಿಸ್ ವಂಚಕ ಎಂದು ಮೊದಲೇ ಗೊತ್ತಿತ್ತು. ಬಳಿಕ, ಈ ವಿಚಾರವನ್ನು ಮಹಿಳೆಗೆ ತಿಳಿಸಿ, ನಂತರ ಪೊಲೀಸರ ಗಮನಕ್ಕೂ ತಂದಿದ್ದನು. ಈತನನ್ನು ಪೊಲೀಸ್ ಖೆಡ್ಡಾಕ್ಕೆ ಕೆಡವಲು ಪೊಲೀಸರೊಂದಿಗೆ ಸೇರಿ ಇಸ್ರೇಲ್ ಮಹಿಳೆ, ‘ನನ್ನ ಬಳಿ ಇರುವ ಚಿನ್ನವನ್ನು ನಿನಗೆ ಕೊಡುವೆ. ಅದನ್ನು ಅಡಮಾನವಿಟ್ಟು ಹಣ ಕೊಡಿಸು ಎಂದಿದ್ದಾಳೆ’ ಇದನ್ನು ನಂಬಿದ ಆರೋಪಿ ರೋಹಿತ್ ಮಥಾಯಿಸ್ ಮಹಿಳೆಯನ್ನು ಭೇಟಿ ಮಾಡಲು ಮಂಗಳೂರಿಗೆ ಬಂದಿದ್ದಾನೆ. ಆಗ ಪೊಲೀಸರು ಆರೋಪಿ ರೋಹಿತ್ ಮಥಾಯಿಸ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Previous articleಮಗುವಿಗೆ ಥೈರಾಯಿಡ್ ಎಂದು ತಪ್ಪು ವರದಿ: ಖಾಸಗಿ ಆಸ್ಪತ್ರೆ ವಿರುದ್ಧ ದೂರು
Next articleಮಹೇಶ್ ಶೆಟ್ಟಿ ತಿಮರೋಡಿ ವಿರುದ್ದ ಜೈನರ ಆಕ್ರೋಶ