ಭಾರತದ ಸಂವಿಧಾನದ ಸಂರಕ್ಷಕರ ಸ್ಥಾನದಲ್ಲಿರುವ ರಾಷ್ಟ್ರಪತಿ ಹಾಗೂ ರಾಜ್ಯಪಾಲರ ಸ್ಥಾನಮಾನಗಳು ರಾಜಕಾರಣದ ವಿನ್ಯಾಸ ಹಾಗೂ ವಿಸ್ತಾರಗಳನ್ನು ಮೀರಿದ್ದು; ಸಂವಿಧಾನದ ಕಟ್ಟುಕಟ್ಟೆಳೆಗಳ ಲೆಕ್ಕದಲ್ಲಿ ಖಚಿತ ಮಿತಿಗಳಿದ್ದರೂ ಲೋಕವ್ಯವಹಾರದಲ್ಲಿ ಮಿತಿಗಳನ್ನು ಮೀರಲು ಒಳಕಿಂಡಿಗಳು ಆರಂಭದಿಂದಲೇ ಬಳಕೆಯಾಗುತ್ತಿರುವುದು ಒಂದು ರೀತಿಯ ಸಂಪ್ರದಾಯ. ನಿಜ. ಸಂಪ್ರದಾಯಗಳು ಬೇರೆ ಕಟ್ಟುಕಟ್ಟಳೆಗಳು ಬೇರೆ. ಆದರೆ, ಸತತ ಆಚರಣೆಯ ಪರಿಣಾಮವಾಗಿ ಈ ಸಂಪ್ರದಾಯಗಳಿಗೆ ಸತ್ಸಂಪ್ರದಾಯ ಎಂಬ ನುಡಿಕಟ್ಟಿನ ತೋರಣ ಇರುವುದರಿಂದ ರಾಜ್ಯಪಾಲರ ವರ್ತನೆ ಒಂದರ್ಥದಲ್ಲಿ ಬಯಲು ದಾರಿ. ತಮಿಳುನಾಡಿನ ವಿಧಾನಸಭೆ ಅಂಗೀಕರಿಸಿದ್ದ ೧೨ ವಿಧೇಯಕಗಳನ್ನು ನೆನೆಗುದಿಗೆ ಬೀಳುವಂತೆ ಮಾಡಿದ ರಾಜ್ಯಪಾಲ ಆರ್.ಎನ್. ರವಿ ಅವರ ವರ್ತನೆ ದೇಶಕ್ಕೆ ಎಚ್ಚರಿಕೆಯ ಗಂಟೆಯಂತೆ ಕಂಡುಬರುತ್ತಿದ್ದರೂ ಇಂತಹ ಎಚ್ಚರಿಕೆಯ ಗಂಟೆಗಳು ಹಲವಾರು ಬಾರಿ ಬಾರಿಸಿದ್ದರೂ ದೇಶ ಜಾಣ ಕಿವುಡು ಪ್ರದರ್ಶಿಸಿದ ಪರಿಣಾಮವೇ ಈಗಿನ ದುಸ್ಥಿತಿ.
ಆರ್.ಎನ್. ರವಿ ಒಬ್ಬ ಐಪಿಎಸ್ ಅಧಿಕಾರಿಯಾಗಿದ್ದವರು. ಸಿಬಿಐ ಸೇರಿದಂತೆ ಹಲವು ತನಿಖಾ ಸಂಸ್ಥೆಗಳಲ್ಲಿ ಪರಿಣಾಮಕಾರಿಯಾಗಿಯೇ ಕಾರ್ಯ ನಿರ್ವಹಿಸಿದ್ದವರು ಎಂಬುದು ತಂತ್ರಜ್ಞಾನದ ಜಾಲದಲ್ಲಿ ಹರಿದಾಡುತ್ತಿದೆ. ದಣಿಗಳ ಇಷ್ಟಾರ್ಥ ಪೂರೈಕೆಗೆ ದುಡಿಯುವುದು ಒಂದು ರೀತಿಯ ಪರಿಣಾಮವಾದರೆ, ಕಾನೂನಿನ ಕಣ್ಣಿನಲ್ಲಿ ದುಡಿಯುವುದು ಇನ್ನೊಂದು ರೀತಿಯ ಪರಿಣಾಮ. ದೇಶ ಬಯಸುವುದು ಕಾನೂನಿನ ಪರಿಣಾಮ. ಆದರೆ, ಬಹುತೇಕ ಜಾರಿಯಲ್ಲಿರುವುದು ದಣಿಗಳ ಇಷ್ಟಾರ್ಥ ಪೂರೈಕೆಯ ಪರಿಣಾಮ. ರಾಜ್ಯಪಾಲರಾಗಿ ವಿವಾದಗಳನ್ನು ಮೈಮೇಲೆ ಎಳೆದುಕೊಂಡವರಲ್ಲಿ ಆರ್.ಎನ್. ರವಿ ಮೊದಲಿಗರೇನೂ ಅಲ್ಲ. ಕರ್ನಾಟಕದಲ್ಲಿಯೇ ೧೯೮೮ರಲ್ಲಿ ವೆಂಕಟಸುಬ್ಬಯ್ಯನವರು ರಾಜ್ಯಪಾಲರಾಗಿ ಶಾಸಕರ ಬಹುಮತ ಗುರುತಿಸುವಾಗ ಜಾಣ ಕುರುಡು ಪ್ರದರ್ಶಿಸಿ ಎಸ್.ಆರ್. ಬೊಮ್ಮಾಯಿ ಸರ್ಕಾರ ಪತನಕ್ಕೆ ಕಾರಣರಾದ ಸಂಗತಿ ಚರಿತ್ರೆಯಲ್ಲಿಯೇ ದಾಖಲಾಗಿದೆ. ಇಂತಹ ಜಾಣ ಕುರುಡನ್ನು ಬೇರೆ ರಾಜ್ಯಪಾಲರು ಪ್ರದರ್ಶಿಸಲು ನಿರ್ಬಂಧ ಹೇರಿ ಸರ್ಕಾರಿಯಾ ಆಯೋಗದ ಶಿಫಾರಸುಗಳು ಸೇರಿದಂತೆ ಪರಿಸ್ಥಿತಿಯನ್ನು ಅಮೂಲಾಗ್ರವಾಗಿ ಪರಿಶೀಲಿಸಿದ ಸುಪ್ರೀಂಕೋರ್ಟ್ ಶಾಸಕರ ತಲೆ ಎಣಿಕೆ ಆಗಬೇಕಾದದ್ದು ಶಾಸನಸಭೆಯಲ್ಲಿಯೇ ವಿನಃ ರಾಜಭವನದಲ್ಲಿ ಅಲ್ಲ ಎಂದು ಠರಾವು ಹೊರಡಿಸಿದ ಮೇಲೆ ತಕ್ಕ ಮಟ್ಟಿಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದರೂ ಚೆಲ್ಲಾಟಗಳು ನಿಂತಿಲ್ಲ. ಐಸಿಎಸ್ ಅಧಿಕಾರಿ ಧರ್ಮವೀರ ಅವರು ಪಶ್ಚಿಮ ಬಂಗಾಳದಲ್ಲಿ ರಾಜ್ಯಪಾಲರಾಗಿ ನಿಯೋಜನಗೊಂಡ ನಂತರ ಆಗಿನ ಅಜಯ್ ಕುಮಾರ್ ಮುಖರ್ಜಿ ನೇತೃತ್ವದ ಸರ್ಕಾರದ ಪದಚ್ಯುತಿಗೆ ಅನುಸರಿಸಿದ ಕ್ರಮಗಳು ಹಾಗೂ ಸದನದಲ್ಲಿ ಭುಗಿಲೆದ್ದ ಮಾರಾಮಾರಿ ಬೆಳವಣಿಗೆ ಹಾಗೂ ಶಾಸಕರ ಕಿತ್ತಾಟದ ನಂತರ ಆ ರಾಜ್ಯದ ರಾಜಕೀಯ ಹಣಬರಹವೇ ದಿಕ್ಕು ತಪ್ಪಿದ ಮೇಲೆ ಧರ್ಮವೀರ ಅವರನ್ನು ಆಗಿನ ವಿಶಾಲ ಮೈಸೂರು ರಾಜ್ಯದ ರಾಜ್ಯಪಾಲರನ್ನಾಗಿ ನೇಮಿಸಿದ್ದು ಹಳೆಯ ಕಥೆ.
ಪ್ರತ್ಯೇಕ ತೆಲಂಗಾಣ ಚಳವಳಿಯ ಮೂಲಕ ಆಂಧ್ರಪ್ರದೇಶದಲ್ಲಿ ಸುಂಟರಗಾಳಿಯ ವಾತಾವರಣವನ್ನು ಸೃಷ್ಟಿಸಿದ ಡಾ. ರ‍್ರಿ ಚೆನ್ನಾರೆಡ್ಡಿ ಅವರನ್ನು ಸಂತೃಪ್ತರನ್ನಾಗಿಸಲು ಮುಖ್ಯಮಂತ್ರಿ ಮಾಡಿದ್ದೂ ಆಯಿತು. ಆದರೂ ಸುಂಟರಗಾಳಿ ನಿಂತಿರಲಿಲ್ಲ. ಕಡೆಗೆ ನೆರೆಯ ತಮಿಳುನಾಡಿನ ರಾಜ್ಯಪಾಲರ ಸ್ಥಾನಕ್ಕೆ ನಿಯೋಜಿಸಿದ ಮೇಲೆ ದಿನನಿತ್ಯ ಮುಖ್ಯಮಂತ್ರಿ ಜಯಲಲಿತಾ ಅವರ ಜೊತೆ ಕಾಲುಕೆರೆದು ಜಗಳ ತೆಗೆಯುವ ಪ್ರವೃತ್ತಿ ನಾನಾ ರೀತಿಯ ಅಸಹನೀಯ ಬೆಳವಣಿಗೆಗೆ ಪ್ರೇರಣೆ ನೀಡಿತು. ಇನ್ನು ೧೯೮೩ರಲ್ಲಿ ಅತ್ಯಧಿಕ ಬಹುಮತದಿಂದ ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿದ್ದ ಎನ್.ಟಿ. ರಾಮರಾವ್ ಅವರು ಚಿಕಿತ್ಸೆಗಾಗಿ ಅಮೆರಿಕ ಪ್ರವಾಸ ಕೈಗೊಂಡ ಸಂದರ್ಭವನ್ನು ಬಳಸಿಕೊಂಡು ಅವರ ಅತ್ಯಂತ ನಂಬಿಕಸ್ತ ಮುಖಂಡ ನಾದೇಂಡ್ಲ ಭಾಸ್ಕರರಾವ್ ಮಾತಿಗೆ ಮರುಳಾಗಿ ರಾಜ್ಯಪಾಲ ರಾಮಲಾಲ್ ಸರ್ಕಾರವನ್ನು ಅಧಿಕಾರದಿಂದ ಉಚ್ಚಾಟಿಸಿದ ರೀತಿಯಂತೂ ಬೇಲಿಯೇ ಎದ್ದು ಹೊಲ ಮೇಯ್ದಂತಾಯ್ತು. ವಿವಾದಕ್ಕ ಬೆದರಿದ ಕೇಂದ್ರ ಸರ್ಕಾರ ರಾಮಲಾಲ್ ಅವರನ್ನು ಬದಲಾಯಿಸಿ ಕುಮುದ್ ಜೋಶಿ ಅವರನ್ನು ರಾಜ್ಯಪಾಲರಾಗಿ ನೇಮಿಸಿದರೂ ತೆಲುಗು ದೇಶಂ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವಣ ಬೀದಿ ಜಗಳ ನಿಲ್ಲಲೇ ಇಲ್ಲ. ಬಂದ ರಾಜ್ಯಪಾಲರೆಲ್ಲರೂ ಗೆದ್ದಿತ್ತೆನ ಬಾಲ ಹಿಡಿಯುವವರಂತೆ ಕೇಂದ್ರದ ಏಜೆಂಟರಾಗಿ ಕಾರ್ಯ ನಿರ್ವಹಿಸುವ ಧೋರಣೆ ಬೆಳೆಸಿಕೊಂಡದ್ದೆ ಇದಕ್ಕೆ ಕಾರಣ. ಈ ಚಾಳಿ ಇಷ್ಟಕ್ಕೇ ಮುಗಿಯುತ್ತಿಲ್ಲ. ಇಂದಿರಾಗಾಂಧಿಯವರ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಆಣತಿಗಳಿಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದ ರಾಜ್ಯಪಾಲರು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅದೇ ಚಾಳಿಯನ್ನು ಮುಂದುವರಿಸಿದ ಪರಿಣಾಮವಾಗಿ ಹಿರಿಯಕ್ಕನ ಚಾಳಿ ದೇಶಕ್ಕೆಲ್ಲ ಅಂಟಿಕೊಂಡಂತಾಗಿದೆ.
ತಮಿಳುನಾಡು ಪ್ರಕರಣದ ಪರಿಣಾಮವಾಗಿ ಸುಪ್ರೀಂಕೋರ್ಟ್ ರಾಜ್ಯಪಾಲರ ವರ್ತನೆಗೆ ಕೆಲ ಖಚಿತ ನಿರ್ಬಂಧಗಳನ್ನು ಹೇರಿದೆ. ಶಾಸನಸಭೆ ಅಂಗೀಕರಿಸುವ ವಿಧೇಯಕಗಳಿಗೆ ಸಹಿ ಹಾಕಲು ಖಚಿತ ಕಾಲಮಿತಿ ವಿಧಿಸಿರುವುದು ಮೇಲ್ನೋಟಕ್ಕೆ ಸರಿಯಾಗಿ ಕಾಣಬಹುದು. ಆದರೆ, ಆ ವಿಧೇಯಕಗಳಲ್ಲಿ ರಾಜ್ಯಾಂಗಕ್ಕೆ ಅಪಚಾರವೆಸಗುವ ಇಲ್ಲವೇ ರಾಜ್ಯದ ಅಧಿಕಾರವನ್ನು ಮೀರುವ ಸಂಗತಿಗಳಿದ್ದರೆ ಸಹಜವಾಗಿಯೇ ತಜ್ಞರ ಜೊತೆ ಪರಾಮರ್ಶಿಸಿ ಅಂತಿಮ ನಿರ್ಧಾರಕ್ಕೆ ಬರಬೇಕಾಗುತ್ತದೆ. ಇದರ ಜೊತೆಗೆ ಅನಿವಾರ್ಯವೆನಿಸಿದ ರಾಷ್ಟçಪತಿಗಳ ಮಾರ್ಗದರ್ಶನವನ್ನೂ ಕೋರಲೂ ಕೂಡಾ ಅವಕಾಶ ಇರುವುದು ಸೂಕ್ತ. ವಿಧೇಯಕಗಳನ್ನು ರಾಜ್ಯಪಾಲರ ಪರಾಮರ್ಶೆಗೆ ಒಪ್ಪಿಸುವುದು ಬೇರೆ. ಮಾರ್ಗದರ್ಶನ ಕೋರುವುದು ಬೇರೆ. ಏನೇ ಆದರೂ ಸುಪ್ರೀಂಕೋರ್ಟ್ ನಿರ್ದೇಶನವನ್ನು ಯಾರೂ ಮೀರುವಂತಿಲ್ಲ. ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುವ ಮನೋಧರ್ಮದ ರಾಜ್ಯಪಾಲರು ಇಂತಹ ನಿರ್ಬಂಧಗಳನ್ನು ಒಪ್ಪಿಕೊಳ್ಳುತ್ತಾರೆಯೇ ಎಂಬುದನ್ನು ಕಾದುನೋಡಬೇಕು. ಆದರೆ, ಇಂತಹ ಕಟುವಾದ ತೀರ್ಪು ಸುಪ್ರೀಂಕೋರ್ಟಿನಿಂದ ಬಂದ ನಂತರ ಬಹಳ ಮಂದಿ ಕಾನೂನು ತಜ್ಞರು ತಮಿಳುನಾಡಿನ ರಾಜ್ಯಪಾಲ ರವಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಘೋಷಿಸಿ ಸಾತ್ವಿಕ ಆಕ್ರೋಶವನ್ನು ವ್ಯಕ್ತಪಡಿಸುವರು ಎಂದು ಲೆಕ್ಕ ಹಾಕಿದ್ದರು. ಆದರೆ, ಸಂವಿಧಾನ ಹಾಗೆಯೇ ಇದ್ದರೂ ಸಂವಿಧಾನದ ಸಂರಕ್ಷಕರ ಧೋರಣೆ ಬದಲಾಗಿದೆ.
ಇಂತಹ ಬದಲಾಗಿರುವ ಕಾಲಘಟ್ಟದ ಪರಿಸ್ಥಿತಿಯನ್ನು ಬಳಸಿಕೊಂಡು ರಾಜ್ಯಪಾಲರು ನೇಮಕ ಪಾರದರ್ಶಕ ರೀತಿಯಲ್ಲಿ ಜನತಂತ್ರಾತ್ಮಕವಾಗಿ ನಡೆಯುವಂತಹ ಪದ್ಧತಿಯನ್ನು ರೂಪಿಸುವುದು ಅತ್ಯಗತ್ಯ. ರಾಷ್ಟ್ರಪತಿ ಚುನಾವಣೆಯ ಮೂಲಕ ಆಯ್ಕೆಯಾಗುವವರು. ಆದರೆ, ರಾಜ್ಯಪಾಲರು ನೇಮಕಾತಿ ಮೂಲಕ ನಿಯೋಜನೆಗೊಳ್ಳುವವರು. ನೇಮಕಾತಿ ಯಾವತ್ತಿಗೂ ಸರ್ಕಾರ ಇಲ್ಲವೇ ಯಾವುದೇ ಒಂದು ವ್ಯವಸ್ಥೆಗೆ ಸೀಮಿತವಾಗುವಂತೆ ನಡೆಯಬಾರದು. ಸಾರ್ವಜನಿಕವಾಗಿ ಸೇವಾ ದಕ್ಷತೆ, ವಿಶ್ವಾಸಾರ್ಹ ವ್ಯಕ್ತಿತ್ವಗಳನ್ನು ಖಚಿತ ನೆಲೆಯಲ್ಲಿ ಗುರುತಿಸಿ ಅಗತ್ಯ ಬಿದ್ದರೆ ಶೋಧಕ ಸಮಿತಿಯನ್ನು ರಚಿಸಿ ನಿರ್ಧಾರ ಕೈಗೊಳ್ಳುವುದು ಬಹುಶಃ ಈ ವಿವಾದಗಳಿಗೆ ಮಂಗಳ ಹಾಡಲು ಸಾಧ್ಯವಾಗುತ್ತದೆ. ಸರ್ಕಾರಿಯಾ ಆಯೋಗದ ಶಿಫಾರಸುಗಳು ಯಥಾವತ್ತಾಗಿ ಜಾರಿಗೆ ಬಂದಿದ್ದರೆ ಪರಿಸ್ಥಿತಿ ಬೇರೆಯೇ ಇರುತ್ತಿತ್ತು. ಆದರೆ, ಈಗಲೂ ಕಾಲ ಮಿಂಚಿಲ್ಲ. ಆಗ ರಾಜ್ಯಗಳಿಗೆ ರಾಜಕೀಯ ಸ್ವಾಯತ್ತತೆ ಅಗತ್ಯವಿತ್ತು. ಈಗ ಅಗತ್ಯವಿರುವುದು ತೆರಿಗೆ ವಿಧಿಸುವ ಸ್ವಾಯತ್ತತೆ ಅಗತ್ಯ. ಇದರ ಮಾನದಂಡಗಳನ್ನು ರೂಪಿಸಿ ಕಾರ್ಯರೂಪಕ್ಕೆ ತಂದರೆ ಬಲಿಷ್ಠ ಕೇಂದ್ರದ ಜೊತೆಗೆ ಬಲಿಷ್ಠ ರಾಜ್ಯಗಳೂ ಇರುವ ಸಾರ್ವಭೌಮತ್ವದ ಒಕ್ಕೂಟ ಸರ್ಕಾರ ನಿಜಾರ್ಥದಲ್ಲಿ ರಚನೆಗೆ ಮುಕ್ತ ಅವಕಾಶವಾಗುವುದು ಖಂಡಿತ.