ಮೋದಿ ನಿರ್ಗಮನದ ಮಾತಿನ ಪ್ರದಕ್ಷಿಣೆ

ರಾಜಕಾರಣವೆಂಬುದು ಮಾಯೆಯಲ್ಲ; ಅದು ನಿಜದ ಲೋಕ. ಕಲ್ಪನಾವಿಲಾಸಕ್ಕೆ ನಂತರವೋ ಇಲ್ಲವೇ ಅನಂತರವೋ ಅಥವಾ ಅವಾಂತರ ಸೃಷ್ಟಿಯಾದ ಮೇಲೋ ಅವಕಾಶ. ಇಲ್ಲೇನಿದ್ದರೂ ಕೈಗೆಟಕುವ ಗೆಲುವಿನದೇ ರಾಜ್ಯಭಾರ. ಗೆಲ್ಲುವ ಪಕ್ಷ ಹಾಗೂ ಗೆಲ್ಲಿಸುವ ನಾಯಕನಿಗೆ ಪ್ರಶ್ನಾತೀತ ಮರ್ಯಾದೆ. ಇದಕ್ಕೂ ವೈಚಾರಿಕತೆಗೂ ಅರ್ಥಾತ್ ಸಂಬಂಧವಿಲ್ಲ. ಸಮಾಧಾನ ಪಟ್ಟುಕೊಳ್ಳುವವರು ಪ್ರಶ್ನಾತೀತರಿಗೆ ಒಗ್ಗದ ವೈಚಾರಿಕತೆ ಹಾಗೂ ಹೃದಯ ಶ್ರೀಮಂತಿಕೆಯನ್ನು ಲೇಪಿಸಿ ಕಣ್ತೆರೆದು ನೋಡಿಕೊಳ್ಳಬಹುದು. ಏಕೆಂದರೆ, ಗೆಲುವೇ ಇಲ್ಲಿನ ಗಲ್ಲಾಪೆಟ್ಟಿಗೆ. ಇಷ್ಟೆಲ್ಲಾ ಪ್ರವರಗಳನ್ನು ಪ್ರಸ್ತಾಪಿಸಬೇಕಾದ ಅನಿವಾರ್ಯತೆ ಎಂದರೆ ದೇಶದ ಸಾರ್ವಜನಿಕ ವಲಯದಲ್ಲಿ ಭುಗಿಲೆದ್ದಿರುವ ಪ್ರಧಾನಿ ನರೇಂದ್ರ ಮೋದಿಯವರ ನಿವೃತ್ತಿಯ ಸುತ್ತ ಪ್ರದಕ್ಷಿಣೆ ಹಾಕುತ್ತಿರುವ ತರಹೇವಾರಿ ಚರ್ಚಾಗೋಷ್ಠಿ. ನಾಗಪುರದ ಆರ್‌ಎಸ್‌ಎಸ್ ಕೇಂದ್ರೀಯ ಕಾರ್ಯಾಲಯಕ್ಕೆ ಯುಗಾದಿಯ ಹಬ್ಬದ ದಿನ ನರೇಂದ್ರ ಮೋದಿ ಅವರು ಭೇಟಿ ಕೊಡುತ್ತಿದ್ದಂತೆಯೇ ಭುಗಿಲೆದ್ದಿರುವ ಈ ವೃತ್ತಿ-ನಿವೃತ್ತಿಯ ಪ್ರಶ್ನಾಲೋಕದಲ್ಲಿ ಉತ್ತರಿಸುವ ಭೂಪರು ಹಲವಾರು. ಆದರೆ, ಉತ್ತರದಾಯಿತ್ವವಿಲ್ಲದ ಉತ್ತರ ಭೂಪರು ಏನನ್ನೇ ಹೇಳಿದರೂ ಅದು ಕೇವಲ ಶ್ರವಣ ಸುಖ ಮಾತ್ರ. ಆದರೆ, ವಾಸ್ತವಕ್ಕೂ ಈ ಸುಖಕ್ಕೂ ಅಜಗಜಾಂತರ.
ನರೇಂದ್ರ ಮೋದಿ ಅವರು ಸೆಪ್ಟೆಂಬರ್ ೧೭ರಂದು ನಿವೃತ್ತಿ ಘೋಷಿಸುವರು ಎಂಬ ಮಾತು ಘಂಟಾಘೋಷದಂತೆ ಮಾರ್ದನಿಗೊಳ್ಳಲು ಇರುವ ಕಾರಣ ಒಂದೇ. ಬಿಜೆಪಿಯಲ್ಲಿ ಸುಮಾರು ದಶಕದ ಹಿಂದೆ ರೂಪಿಸಿರುವ ನೀತಿ ಸಂಹಿತೆಯ ಪ್ರಕಾರ ೭೫ರ ವಯೋಮಾನದ ನಂತರದವರು ಸಕ್ರಿಯ ರಾಜಕಾರಣದಿಂದ ದೂರ ಉಳಿಯಬೇಕು. ಲಾಲ್ ಕೃಷ್ಣ ಆಡ್ವಾಣಿ, ಡಾ. ಮುರುಳಿ ಮನೋಹರ ಜೋಶಿ, ಸುಮಿತ್ರ ಮಹಾಜನ್, ಯಶವಂತ ಸಿನ್ಹಾ, ಬಿ.ಎಸ್. ಯಡಿಯೂರಪ್ಪ ಮೊದಲಾದವರೆಲ್ಲರೂ ಕೂಡಾ ಈಗ ಮಾರ್ಗದರ್ಶಕ ಮಂಡಳಿಯವರು. ಅಂದರೆ ಮಾರ್ಗದರ್ಶಕ ಮಂಡಳಿಯವರು ಮಾರ್ಗದರ್ಶನ ನೀಡಬಹುದಷ್ಟೆ. ಆದರೆ, ಅದು ಕಾರ್ಯರೂಪಕ್ಕೆ ಬರಲೇಬೇಕೆಂಬ ಕರಾರೇನೂ ಇಲ್ಲ. ಈ ಪೈಕಿ ಕರ್ನಾಟಕದ ಯಡಿಯೂರಪ್ಪ ಅವರಿಗೆ ಮಾತ್ರ ಕೊಂಚ ವಿನಾಯ್ತಿ. ಪಕ್ಷದ ಉನ್ನತಾಧಿಕಾರದ ರಾಷ್ಟ್ರೀಯ ಸಂಸದೀಯ ಮಂಡಳಿಯ ಸದಸ್ಯರು. ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ನಿರ್ಣಾಯಕ ವಿಚಾರಗಳ ಬಗ್ಗೆ ಚರ್ಚೆ ನಡೆದು ತೀರ್ಮಾನವಾಗುವುದು ಈ ಸಂಸದೀಯ ಮಂಡಳಿಯಲ್ಲೇ. ನರೇಂದ್ರ ಮೋದಿ ಅವರಿಗೆ ಸಂಬಂಧಿಸಿದ ವಿಚಾರ ಪ್ರಸ್ತಾಪಕ್ಕೆ ಬರಲು ಕಾರಣ ಶಿವಸೇನೆ ಉದ್ದವ್ ಠಾಕ್ರೆ ಬಣದ ಸಂಜಯ್ ರಾವುತ್ ಬಿಟ್ಟಿರುವ ಛೂಬಾಣ. ಇದರ ಪ್ರಕಾರ, ಆರ್‌ಎಸ್‌ಎಸ್ ಕಚೇರಿಗೆ ಮೋದಿ ಭೇಟಿ ನೀಡಲು ಇರುವ ಮುಖ್ಯ ಕಾರಣ ಸೆಪ್ಟೆಂಬರ್ ೧೭ರಂದು ನಿವೃತ್ತಿ ಘೋಷಣೆ ಮಾಡುವ ಬಗ್ಗೆ. ಮೋದಿಯವರು ಸಂಘದ ನಿಷ್ಠಾವಂತ ಕಾರ್ಯಕರ್ತರು. ೨೦೦೨ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗುವವರೆಗೆ ಈಶಾನ್ಯ ರಾಜ್ಯಗಳಿಂದ ಹಿಡಿದು ದೇಶದ ಉದ್ದಗಲಗಳಲ್ಲಿ ಸಂಘದ ಕಾರ್ಯಕರ್ತರಾಗಿ ನಂತರ ಪಕ್ಷ ಹಾಗೂ ಸಂಘದ ನಡುವಣ ಕೊಂಡಿಯಂತೆ ಕಾರ್ಯ ನಿರ್ವಹಿಸಿ ಸಂಘಟನೆಯ ಕೌಶಲ್ಯವನ್ನು ಮೆರೆದವರು. ಅಂತಿಮ ಹಂತದಲ್ಲಿ ತಮ್ಮ ಋಣ ಸಂದಾಯದ ನಿರ್ಧಾರವನ್ನು ತಿಳಿಸುವ ಸಲುವಾಗಿಯೇ ಆರ್‌ಎಸ್‌ಎಸ್ ಕಚೇರಿಗೆ ಹೋಗಿದ್ದರು ಎಂಬ ರಾವುತ್ ವಿವರಣೆ ನಾನಾ ರೀತಿಯ ಚರ್ಚೆಗೆ ಗ್ರಾಸವಾಗಿ ಭಾರತದ ರಾಜಕಾರಣದ ಭೂಪಟ ಮಾರ್ಪಾಟಾಗುವ ಸಾಧ್ಯತೆಗಳ ಬಗ್ಗೆ ಕೆಲವರು ಮನಸ್ಸಿನಲ್ಲಿಯೇ ಮಂಡಿಗೆ ತಿನ್ನಲು ಮುಂದಾಗಿದ್ದಾರೇನೋ.
ಅಂದ ಹಾಗೆ, ಈ ವಿಷಯದ ಬಗ್ಗೆ ಮೋದಿಯವರು ಎಲ್ಲಿಯೂ ಸುತಾರಾಂ ಮಾತನಾಡಿಲ್ಲ. ಪತ್ರಿಕಾಗೋಷ್ಠಿಗಳಿಗೂ ಮೋದಿಯವರಿಗೂ ಅಜಗಜಾಂತರ. ಹೀಗಾಗಿ ಪ್ರಶ್ನೆ ಕೇಳುವವರಿಲ್ಲ. ಇನ್ನು ಪ್ರಶ್ನೆ ಕೇಳಿಸಿಕೊಂಡ ಮಹಾರಾಷ್ಟ್ರದ ಮುಖ್ಯಮಂತ್ರಿ ಫಡ್ನವಿಸ್ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಅವರ ಮಾತುಗಳಲ್ಲಿ ವಾಸ್ತವತೆಗಿಂತಲೂ ಹೆಚ್ಚಾಗಿ ಜಾಣತನ ಕೂಡಿದೆ. ಯೋಗಿಯವರು ಹೇಳುವ ಪ್ರಕಾರ ನಾವೆಲ್ಲಾ ಪಕ್ಷದ ಕಾರ್ಯಕರ್ತರು. ಕೊಟ್ಟ ಕೆಲಸವನ್ನು ಮಾಡುವುದು ನಮ್ಮ ಕರ್ತವ್ಯ. ನಾನೀಗ ಮುಖ್ಯಮಂತ್ರಿ. ರಾಜಕಾರಣವೆಂಬುದು ವೃತ್ತಿಯಲ್ಲ. ಅದೊಂದು ಸೇವೆ' ಎಂಬ ಮಾತಿನಲ್ಲಿ ಪಕ್ಷ ಕೈಗೊಳ್ಳುವ ತೀರ್ಮಾನವೇ ಅಂತಿಮ ಎಂಬ ಧ್ವನಿ ಕಾಣಿಸುತ್ತದೆ. ಆದರೆ, ಫಡ್ನವಿಸ್ ಮಾತುಗಳಲ್ಲಿ ರಾವುತ್ ಅವರ ನಿಂದಾಸ್ತುತಿಯೇ ಹೆಚ್ಚು. ಉಳಿದಂತೆಅದೆಲ್ಲಾ ಅಂತೆ ಕಂತೆ ಅಷ್ಟೆ. ಮೋದಿಯವರು ಈ ಅವಧಿಗಷ್ಟೆ ಅಲ್ಲ ಮುಂದಿನ ಅವಧಿಗೂ ಪ್ರಧಾನಿಯಾಗಿರುತ್ತಾರೆ’ ಎಂದು ಷರಾ ಬರೆದು ಸುಮ್ಮನಾಗುತ್ತಾರೆ. ಎನ್‌ಡಿಎ ಮೈತ್ರಿ ಕೂಟದ ಗುರುತ್ವಾಕರ್ಷಣ ಶಕ್ತಿಯ ಪ್ರಮುಖ ಮುಖಂಡರಾದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ದೃಷ್ಟಿಯಲ್ಲಿ ಕಲ್ಪನಾವಿಲಾಸದಲ್ಲಿ ಮುಳುಗಿರುವವರಿಗೆ ಏನನ್ನು ಹೇಳಿದರೂ ಸಮಾಧಾನವಾಗುವುದಿಲ್ಲ. ಹೇಳದಿದ್ದರೆ ಇನ್ನಷ್ಟು ಹೊಸ ಕಟ್ಟುಕಥೆಗಳು ಸೃಷ್ಟಿಯಾಗುತ್ತವೆ. ಬಿಜೆಪಿಯಲ್ಲಾಗಲೀ ಅಥವಾ ಎನ್‌ಡಿಎ ಒಕ್ಕೂಟದಲ್ಲಾಗಲೀ ಈ ಬಗ್ಗೆ ಎಂದೂ ಎಲ್ಲಿಯೂ ಪ್ರಸ್ತಾಪವಾಗಿಲ್ಲ. ೭೫ ವರ್ಷಕ್ಕೆ ನಿವೃತ್ತಿಯಾಗುವ ಪ್ರಸ್ತಾಪ ಭಾರತದ ಸಂವಿಧಾನದಲ್ಲಿ ಇಲ್ಲ. ಬಿಜೆಪಿಯಲ್ಲಿರುವುದು ನೀತಿ ಸೂತ್ರವಾಗಿ ಅಷ್ಟೆ. ಇದನ್ನೇ ಹಿಂಜಿ ಕಥೆ ಕಟ್ಟುವುದು ಬೇಡ. ಮೋದಿ ನಮ್ಮ ಸವಾಂಗೀಣ ಅಭಿವೃದ್ಧಿಯ ದೇಶದ ನಾಯಕ' ಎಂದು ಕಡ್ಡಿ ತುಂಡು ಮಾಡಿದಂತೆ ಹೇಳುತ್ತಾರೆ. ಈ ವಿವರಣೆಗಳು ಎಷ್ಟೇ ಇದ್ದರೂ ವಿವಾದ ಮಾತ್ರ ನಿಂತಿಲ್ಲ. ಅದಕ್ಕಿರುವ ಕಾರಣ ಒಂದೇ. ಭಾರತದ ರಾಜಕಾರಣದಲ್ಲಿ ಮತದಾರರನ್ನು ಸೂಜಿಗಲ್ಲಿನಂತೆ ಸೆಳೆಯುವ ಸಾರ್ಮರ್ಥ್ಯವಿರುವ ಅಗ್ರಮಾನ್ಯ ನಾಯಕರೆಂದರೆ ನರೇಂದ್ರ ಮೋದಿ. ಹಾಗೊಮ್ಮೆ ಅವರು ಸ್ಥಾನದಿಂದ ನಿರ್ಗಮಿಸಿದರೆ ರಾಜಕಾರಣದ ಭೂಪಟ ವ್ಯತ್ಯಾಸವಾಗುವುದು ಖಂಡಿತ. ನಿಜ. ಯಾರೊಬ್ಬರೂ ಶಾಶ್ವತವಾಗಿ ನಾಯಕರಾಗಲು ಅಸಾಧ್ಯ. ಆದರೆ, ಚಲಾವಣೆಯಲ್ಲಿರುವಾಗ ನಾಯಕತ್ವದಿಂದ ನಿರ್ಗಮಿಸುವುದು ಇನ್ನೂ ಅಸಾಧ್ಯ. ಭಾರತದ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ಅವರು ನಿವೃತ್ತಿಯಾಗುವುದಿಲ್ಲ ಎಂಬ ಮಾತುಗಳು ಸಮಾಜವಾದಿ ಮುಖಂಡರ ಬಾಯಲ್ಲಿ ೧೯೫೦-೬೦ರ ದಶಕದಲ್ಲಿ ಪಿಸುಮಾತಿನಿಂದ ಬಿಸಿ ಮಾತಿನ ಚರ್ಚೆಗೆ ಗ್ರಾಸವಾಗಿದ್ದವು. ಆಗ ಕನ್ನಡದ ಕವಿ ಗೋಪಾಲ ಕೃಷ್ಣ ಅಡಿಗರುಇಲ್ಲ ಇಲ್ಲ ನೆಹರೂ ನಿವೃತ್ತರಾಗುವುದಿಲ್ಲ. ಭರತವಾಕ್ಯಕ್ಕೂ ಬೆದರನೀತ ಧೀರೋದ್ಧಾತ ನಾಯಕ ತೆರೆದಿದ್ದರೂ ರಂಗ ಬಿಡದ ಚಿರ ಯುವಕ. ಈತನಿಂದಲೇ ರಂಗಭೂಮಿ ಭರ್ತಿ. ಇಲ್ಲವಾದರೆ ಕಂಪನಿ ದಿವಾಳಿ’ ಎಂಬ ಅರ್ಥಗರ್ಭಿತ ಕವನವನ್ನ ಬರೆದು ಆಗಿನ ರಾಜಕಾರಣದಲ್ಲಿ ಉನ್ನತ ಮಟ್ಟದ ಸಂವಾದಕ್ಕೆ ಗ್ರಾಸ ಒದಗಿಸಿದ್ದರು.
ನಾಯಕತ್ವದ ಸೃಷ್ಟಿ ಜನರ ವಿವೇಕ ಹಾಗೂ ವಿವೇಚನೆಗೆ ಬಿಟ್ಟದ್ದು. ಆಯಾ ಕಾಲಧರ್ಮದ ಜೊತೆಗೆ ಗುಣಧರ್ಮವನ್ನು ಗುರುತಿಸುತ್ತಲೇ ನೆಲಧರ್ಮದ ಸೆಳೆತಕ್ಕೆ ಕಟ್ಟುಬಿದ್ದು ಸೃಷ್ಟಿಯಾಗುವ ನಾಯಕತ್ವ ವಹಿಸುವವರು ತಮ್ಮ ಲೋಕಾನುಭವ ಹಾಗೂ ಜ್ಞಾನದ ಜೊತೆಗೆ ಕಲ್ಯಾಣ ಗುಣಗಳ ಕೂಡಿ ಕಳೆದು ಜನರ ವಿಶ್ವಾಸಾರ್ಹತೆಯನ್ನು ಹಂತ ಹಂತವಾಗಿ ಸಂಪಾದಿಸಿಕೊಂಡು ಪ್ರಶ್ನಾತೀತ ಹಂತ ತಲುಪುವುದು ನಿಜವಾದ ಅರ್ಥದಲ್ಲಿ ಏಳು ಸಮುದ್ರಗಳ ದಾಟಿ ದಿಗ್ವಿಜಯ ಸಾಧಿಸಿದಷ್ಟೇ ಮಹತ್ವದ್ದು. ಬದಲಾದ ಜನಧರ್ಮದಲ್ಲಿ ಪಕ್ಷಗಳ ನೆಲೆಗಟ್ಟೆ ಕರಗಿ, ನಾಯಕರೇ ಸೊರಗಿ, ಅಧಿಕಾರದ ಮಂತ್ರದಂಡ ಹಿಡಿದವರೇ ಸವಾಂತರ್ಯಾಮಿಯಾಗಿ ಬೆಳಗಿ ಬೆಳಕಿದ್ದರೂ ಕತ್ತಲಿನ ಅನುಭವ ಕರಗದಂತೆ ನೋಡಿಕೊಳ್ಳುವ ಎಚ್ಚರವಂತಿಕೆ ಜಾಗೃತವಾಗಿರುವ ಕಾಲಘಟ್ಟದಲ್ಲಿ ರಾಜಕಾರಣದ ವೃತ್ತಿ ಹಾಗೂ ನಿವೃತ್ತಿಗಳ ಶಬ್ದ ಅರ್ಥಹೀನವಾಗಲು ಪ್ರವೃತ್ತಿ ಎಂಬ ಹೊಸ ಧ್ವಜವೇ ಕಾರಣ.