ಮಾಗಡಿ: ಪಟ್ಟಣದ ನಾಲ್ಕು ವರ್ಷದ ಪುಟ್ಟ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಯನ್ನು ಕೂಡಲೇ ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿ ಸಾವಿರಾರು ಮುಸ್ಲಿಂ ಬಾಂಧವರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಮೂರು ದಿನ ಹಿಂದೆ ಕಾಣೆಯಾಗಿದ್ದ ಮಾಗಡಿ ಪಟ್ಟಣದ ಬಾಲಕಿ ಕೊಲೆಯಾದ ಸ್ಥಿತಿಯಲ್ಲಿ ಸೋಮವಾರ ರಾತ್ರಿ ಪತ್ತೆ ಆಗಿದ್ದು, ಈಕೆಯ ಸಂಬಂಧಿ ಬೆಂಗಳೂರಿನ ಕೆಂಗೇರಿಯ ನಿವಾಸಿ ಇರ್ಫಾನ್ ಖಾನ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಆರೋಪಿಯು ಬಾಲಕಿಗೆ ಚಾಕೋಲೆಟ್ ಆಸೆ ತೋರಿಸಿ ಬೈಕ್ ಮೂಲಕ ಬೆಂಗಳೂರಿಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ತಿಪ್ಪಗೊಂಡನಹಳ್ಳಿ ಹತ್ತಿರ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಉಸಿರುಗಟ್ಟಿಸಿ ಕೊಲೆ ಮಾಡಿ ಶವವನ್ನು ರಸ್ತೆ ಪಕ್ಕದ ಪೊದೆಯಲ್ಲಿ ಎಸೆದು ಬೆಂಗಳೂರಿಗೆ ತೆರಳಿದ್ದ.
ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಇರ್ಫಾನ್ ಖಾನ್ ಬಾಲಕಿಯನ್ನು ಕರೆದೊಯ್ದ ದೃಶ್ಯ ಲಭ್ಯವಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿ ತನಿಖೆ ನಡೆಸಿದ್ದ ಪೊಲೀಸರು ಸೋಮವಾರ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಆರೋಪಿ ಇರ್ಫಾನ್ ಖಾನ್ನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಈ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಾವಿರಾರು ಮುಸ್ಲಿಂ ಬಾಂಧವರು ಮಂಗಳವಾರ ಬೆಳಗ್ಗೆ ಹಳೆ ಮಸೀದಿಯಿಂದ ಕಲ್ಯಾಗೇಟ್ ವೃತ್ತದ ಮೂಲಕ ತಾಲೂಕು
ಕಚೇರಿ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ಆರೋಪಿಯನ್ನು ನಮಗೆ ಒಪ್ಪಿಸಬೇಕು ಇಲ್ಲವಾದರೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು ನಂತರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಡಿವೈ ಎಸ್ಪಿ ಪ್ರವೀಣ್ ಅವರಿಗೆ ಮನವಿ ಪತ್ರ ಸಲ್ಲಿಸಿ ಕೂಡಲೇ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವ ಕೆಲಸ ಆಗಬೇಕೆಂದು ಒತ್ತಾಯಿಸಿದರು.