ಯಾವ ಪುರುಷಾರ್ಥಕ್ಕಾಗಿ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಪಾದಯಾತ್ರೆ?

0
77

ಬೆಂಗಳೂರು: ಕಾಂಗ್ರೆಸ್ ಪಕ್ಷದ ಆಡಳಿತ ಇರುವ ಕರ್ನಾಟಕದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪಾದಯಾತ್ರೆ ನಡೆಸಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಆಗಸ್ಟ್ 4ರಂದು ಬೆಂಗಳೂರು ನಗರದಲ್ಲಿ ಈ ಪಾದಯಾತ್ರೆ ನಡೆಯಲಿದೆ. ಆದರೆ ಈ ಪಾದಯಾತ್ರೆಗೆ ಪ್ರತಿಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಕರ್ನಾಟಕದ ವಿರೋಧ ಪಕ್ಷದ ನಾಯಕ ಆರ್.ಅಶೋಕ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಕಾಂಗ್ರೆಸ್ ನಾಯಕರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. “ಯಾವ ಪುರುಷಾರ್ಥಕ್ಕಾಗಿ ಈ ಪಾದಯಾತ್ರೆ?” ಎಂದು ಪ್ರಶ್ನೆ ಮಾಡಿದ್ದಾರೆ.

ಆರ್.ಅಶೋಕ ಪೋಸ್ಟ್: ಆರ್.ಅಶೋಕ ತಮ್ಮ ಪೋಸ್ಟ್‌ನಲ್ಲಿ ‘ಕೈಲಾಗದವನು ಮೈಪರಚಿಕೊಂಡ ಎಂಬಂತೆ ಕೈಲಾಗದ ರಾಹುಲ್ ಗಾಂಧಿ ಚುನಾವಣಾ ಪ್ರಕ್ರಿಯೆ ಬಗ್ಗೆ ಕ್ಯಾತೆ ತೆಗೆಯುತ್ತಿದ್ದಾರೆ!’ ಎಂದು ಹೇಳಿದ್ದಾರೆ.

‘ಮೂರು ಲೋಕಸಭಾ ಚುನಾವಣೆಗಳಲ್ಲಿ ಮೂರಂಕಿ ದಾಟಲಾಗದೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಮುಳುಗಿಸಿ ಸೋತು ಸುಣ್ಣವಾಗಿರುವ ಬಾಲಕ ಬುದ್ಧಿ ರಾಹುಲ್ ಗಾಂಧಿ ಅವರು ಈಗ ಕರ್ನಾಟಕದಲ್ಲಿ ಚುನಾವಣಾ ಆಯೋಗದ ವಿರುದ್ಧ ಪಾದಯಾತ್ರೆ ಮಾಡುತ್ತಾರಂತೆ’ ಎಂದು ವ್ಯಂಗ್ಯವಾಡಿದ್ದಾರೆ.

‘ಮಿಸ್ಟರ್ ರಾಹುಲ್ ಗಾಂಧಿ ಅವರೇ ಯಾವ ಪುರುಷಾರ್ಥಕ್ಕಾಗಿ ಈ ಪಾದಯಾತ್ರೆ?. ಹರಿಯಾಣ, ಮಹಾರಾಷ್ಟ್ರ, ದೆಹಲಿ ನಂತರ ಈಗ ಬಿಹಾರದಲ್ಲೂ ಹೀನಾಯ ಸೋಲಿನ ಮುನ್ಸೂಚನೆ ಸಿಕ್ಕಿದೆಯೇ?’ ಎಂದು ಅಶೋಕ ಪ್ರಶ್ನಿಸಿದ್ದಾರೆ.

  • ಇಷ್ಟಕ್ಕೂ ನಿಮಗೆ ಕರ್ನಾಟಕ ಈಗ ನೆನಪಾಯಿತೇ?
  • ಕಳೆದ 24 ತಿಂಗಳಲ್ಲಿ 2,000ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾದಾಗ ಬರಲಿಲ್ಲ
  • ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಔಷಧಿ ಪೂರೈಕೆಯಿಂದ 500ಕ್ಕೂ ಹೆಚ್ಚು ಗರ್ಭಿಣಿ, ಬಾಣಂತಿ ಮಹಿಳೆಯರು, ನವಜಾತ ಶಿಶುಗಳು ಮರಣ ಹೊಂದಿದಾಗ ಬರಲಿಲ್ಲ
  • ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದಿಂದ 50ಕ್ಕೂ ಹೆಚ್ಚು ಬಡವರು ಆತ್ಮಹತ್ಯೆ ಮಾಡಿಕೊಂಡಾಗ ಬರಲಿಲ್ಲ
  • ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ಸರ್ಕಾರದ ಎಡವಟ್ಟಿನಿಂದ 11 ಜನ ಅಮಾಯಕ ಯುವಕರು ಸತ್ತಾಗ ಬರಲಿಲ್ಲ

ಈಗ ನಾಳೆ ಎದುರಾಗಲಿರುವ ಬಿಹಾರ ಚುನಾವಣಾ ಸೋಲಿಗೆ ಕುಂಟು ನೆಪ ಸೃಷ್ಟಿಸಿ ತಮ್ಮ ಅಸಾಮರ್ಥ್ಯಕ್ಕೆ, ವೈಫಲ್ಯಕ್ಕೆ anticipatory bail ತೆಗೆದುಕೊಳ್ಳೋಕೆ ಬರುತ್ತಿದ್ದೀರಲ್ಲ, ನಿಮ್ಮ ಕಾಂಗ್ರೆಸ್ ಪಕ್ಷದ ಲಜ್ಜೆಗೇಡಿತನಕ್ಕೆ ಕನ್ನಡಿಗರು ರೋಸಿ ಹೋಗಿದ್ದಾರೆ. ಅದ್ಯಾವ ಮುಖ ಇಟ್ಟುಕೊಂಡು ಕರ್ನಾಟಕಕ್ಕೆ ಬರುತ್ತಿದ್ದೀರೋ ನಾಕಾಣೆ! ಎಂದು ಅಶೋಕ ಟೀಕಿಸಿದ್ದಾರೆ.

ಬೆಂಗಳೂರಿನಲ್ಲಿ ರಾಹುಲ್ ಪಾದಯಾತ್ರೆ: ಲೋಕಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ರಾಹುಲ್ ಗಾಂಧಿ ಈಗಾಗಲೇ ಆರೋಪ ಮಾಡುತ್ತಿದ್ದಾರೆ. ಆದ್ದರಿಂದ ಆಗಸ್ಟ್ 4ರಂದು ಅವರು ಬೆಂಗಳೂರು ನಗರದ ಮಹದೇವಪುರದಿಂದ ರಾಜ್ಯ ಚುನಾವನಾ ಆಯೋಗದ ಕಚೇರಿ ತನಕ ಪಾದಯಾತ್ರೆಯನ್ನು ನಡೆಸಲಿದ್ದಾರೆ.

ಈ ಪಾದಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಥ್ ನೀಡಲಿದ್ದಾರೆ. ರಾಹುಲ್ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಕಾಂಗ್ರೆಸ್ ತಯಾರಿ ನಡೆಸುತ್ತಿದೆ.

ಬಿಹಾರದಲ್ಲಿ ಚುನಾವಣಾ ಆಯೋಗ ಕೈಗೊಂಡ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯನ್ನು ಕಾಂಗ್ರೆಸ್ ವಿರೋಧಿಸಿತ್ತು. ಇದರ ವಿರುದ್ಧ ಪಾಟ್ನಾದಲ್ಲಿ ಬೃಹತ್ ಹೋರಾಟವನ್ನು’ಇಂಡಿಯಾ’ ಮೈತ್ರಿಕೂಟದಿಂದ ಕೈಗೊಳ್ಳಲಾಗಿತ್ತು.

ರಾಹುಲ್ ಗಾಂಧಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದಲ್ಲಿಯೂ ಅಕ್ರಮ ನಡೆದಿದ್ದು ಮತಗಳನ್ನು ಕದಿಯಲಾಗಿದೆ ಎಂದು ಆರೋಪಿಸಿದ್ದರು. ಚುನಾವಣಾ ಆಯೋಗದ ಮೋಸದಾಟ ಬಯಲಾಗಿದೆ ಎಂದು ಹೇಳಿದ್ದರು. ಚುನಾವಣಾ ಆಯೋಗ ಈ ಆರೋಪವನ್ನು ತಿರಸ್ಕಾರ ಮಾಡಿದೆ.

ಬೆಂಗಳೂರು ಕೇಂದ್ರ ಕ್ಷೇತ್ರದ ಲೋಕಸಭೆ ಚುನಾವಣೆ ಫಲಿತಾಂಶವನ್ನು ಉಲ್ಲೇಖಿಸಿದ್ದ ರಾಹುಲ್ ಗಾಂಧಿ ಮೊದಲ ಸುತ್ತಿನಿಂದಲೂ ಕಾಂಗ್ರೆಸ್‌ನ ಮನ್ಸೂರ್ ಅಲಿ ಖಾನ್ ಮುನ್ನಡೆಯಲ್ಲಿದ್ದರು. ಬೆಂಬಲಿಗರು ಅವರು ಗೆದ್ದರು ಎಂದು ಸಂಭ್ರಮಿಸುತ್ತಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಗಾಂಧಿ ನಗರ ಮತ್ತು ಮಹದೇವಪುರದಲ್ಲಿ ಬಿಜೆಪಿ ಲೀಡ್ ಪಡೆದಿದೆ. ಆದ್ದರಿಂದ ಪಿ.ಸಿ.ಮೋಹನ್ ಗೆದ್ದರು. ಮತಗಳ್ಳತದಿಂದಲೇ ಇದು ನಡೆದಿದೆ ಎಂದು ದೂರಿದ್ದರು.

Previous articleರಷ್ಯಾದಲ್ಲಿ ಪ್ರಬಲ ಭೂಕಂಪ, ಕರಾವಳಿಗೆ ಅಪ್ಪಳಿಸಿದ ಸುನಾಮಿ
Next articleVande Bharat: ಬೆಂಗಳೂರು ನಗರಕ್ಕೆ ಬಂತು ವಂದೇ ಭಾರತ್ ರೈಲು ಯಾರ್ಡ್‌

LEAVE A REPLY

Please enter your comment!
Please enter your name here