ಅಂಚೆ ಕಚೇರಿಯಲ್ಲೂ ಇನ್ನು ಮುಂದೆ ಯುಪಿಐ ಪೇಮೆಂಟ್

0
88

ನವದೆಹಲಿ: ಭಾರತೀಯ ಅಂಚೆ ಸೇವೆಗಳನ್ನು ಬಳಕೆ ಮಾಡುವ ಜನರಿಗೆ ಮಹತ್ವದ ಅಪ್‌ಡೇಟ್ ಒಂದಿದೆ. ಅಂಚೆ ಇಲಾಖೆಗಳಲ್ಲಿ ಇನ್ನು ಮುಂದೆ ಡಿಜಿಟಲ್ ಪೇಮೆಂಟ್ ಸೌಲಭ್ಯಗಳು ಸಿಗಲಿದೆ. ಇದಕ್ಕಾಗಿಯೇ ಹೊಸ ವ್ಯವಸ್ಥೆಯನ್ನು ಎಲ್ಲಾ ಅಂಚೆ ಕಚೇರಿಗಳಲ್ಲಿ ಅಳವಡಿಕೆ ಮಾಡಿಕೊಳ್ಳಲು ಟೆಂಡರ್ ಕರೆಯಲಾಗಿದೆ.

ರಿಜಿಸ್ಟರ್ ಪೋಸ್ಟ್ ಅನ್ನು ಸ್ಪೀಡ್ ಪೋಸ್ಟ್‌ನೊಂದಿಗೆ ವಿಲೀನಗೊಳಿಸುವ ಘೋಷಣೆಯನ್ನು ಅಂಚೆ ಇಲಾಖೆ ಮಾಡಿತ್ತು. ಈಗ ಅಂಚೆ ಕಚೇರಿಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಇದಕ್ಕಾಗಿ ಸೋಮವಾರ ಕೆಲವು ಅಂಚೆ ಕಚೇರಿಗಳಲ್ಲಿ ಹೊಸ ಸಾಫ್ಟ್‌ವೇರ್ ಅಳವಡಿಕೆ ಮಾಡಿ ಪ್ರಯೋಗ ಆರಂಭಿಸಲಾಗಿದೆ.

ಇದಕ್ಕಾಗಿಯೇ ವಿವಿಧ ನಗರದ 400 ಪೋಸ್ಟ್ ಆಫೀಸ್‌ಗಳಲ್ಲಿ ಶನಿವಾರ ನಿರ್ವಹಣಾ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುವ ಕಾರ್ಯವನ್ನು ಮಾಡಲಾಗಿದೆ. ದೇಶಾದ್ಯಂತ ಇರುವ ಕಚೇರಿಗಳಲ್ಲಿ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.

ಸುಮಾರು ಅಂಚೆ ಕಚೇರಿಗಳನ್ನು ಈಗಾಗಲೇ ಹೊಸ ವ್ಯವಸ್ಥೆಗೆ ಪರಿವರ್ತಿಸಲಾಗಿದೆ. ಆದ್ದರಿಂದ ಇನ್ನು ಮುಂದೆ ಪೋಸ್ಟ್ ಆಫೀಸ್‌ಗೆ ಹೋಗುವವರು ನಗದು ಹಣ ತೆಗೆದುಕೊಂಡು ಹೋಗುವ ಅಗತ್ಯವಿಲ್ಲ. ಸೈಬರ್ ದಾಳಿ, ಮಾಹಿತಿ ಕಳ್ಳತನವನ್ನು ತಡೆಯುವ ಮಾದರಿಯಲ್ಲಿ ಉತ್ತಮ ಮಾದರಿ ಭದ್ರತಾ ವ್ಯವಸ್ಥೆ ಹೊಂದಿರುವ ಹೊಸ ಸಾಫ್ಟ್‌ವೇರ್ ಇದಾಗಿದೆ.

ಎಪಿಟಿ ಎಂಬ ವ್ಯವಸ್ಥೆಯನ್ನು ಅಂಚೆ ಇಲಾಖೆ ಇದಕ್ಕಾಗಿ ಪರಿಚಯಿಸುತ್ತಿದೆ. ಗ್ರಾಹಕ ಸ್ನೇಹಿಯಾಗಿ, ತ್ವರಿತವಾಗಿ ಸೇವೆ ನೀಡುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಭವಿಷ್ಯದ ಹಣಕಾಸು ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ಮಾಡಲಾಗುತ್ತಿದೆ. ಈ ಸಾಫ್ಟ್‌ವೇರ್ ಕೇವಲ ಯುಪಿಐ ಪೇಮೆಂಟ್‌ಗೆ ಸೀಮಿತವಾಗಿಲ್ಲ.

ರಿಯಲ್ ಟ್ರೈಂ ಟ್ರಾಕಿಂಗ್ ವ್ಯವಸ್ಥೆ, ಎಲೆಕ್ಟ್ರಾನಿಕ್ ಪ್ರೂಫ್ ಡೆಲಿವರಿ, ಒಟಿಪಿ ಆಧಾರಿತ ನಿರ್ವಹಣಾ ವ್ಯವಸ್ಥೆಯನ್ನು ಹೊಸ ಎಪಿಟಿ ನಿರ್ವಹಣೆ ಮಾಡಲಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಇನ್ನಷ್ಟು ಹೊಸ ಕಾರ್ಯ ವಿಧಾನ ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೇಂದ್ರ ಸಂಪರ್ಕ ಖಾತೆ ರಾಜ್ಯ ಸಚಿವ ಚಂದ್ರಶೇಖರ್ ಪೆಮ್ಮಸಾನಿ ಕಳೆದ ವಾರದ ಅಂಚೆ ಇಲಾಖೆಯಲ್ಲಿ ನಡೆಯುತ್ತಿರುವ ನಿರ್ವಹಣಾ ವ್ಯವಸ್ಥೆಯ ಅಭಿವೃದ್ಧಿಯನ್ನು ಪರಿಶೀಲನೆ ನಡೆಸಿದರು. ಅಂಚೆ ಇಲಾಖೆಯ ಡಿಜಿಟಲ್ ರೂಪಾಂತರದತ್ತ ಮಹತ್ವದ ಹೆಜ್ಜೆಯಾಗಿ ಸೋಮವಾರ ಈರೋಡ್ ವಿಭಾಗದ ಎಲ್ಲಾ ಅಂಚೆ ಕಚೇರಿಗಳಲ್ಲಿ ನವೀಕರಿಸಿದ ಸುಧಾರಿತ ಅಂಚೆ ತಂತ್ರಜ್ಞಾನ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗಿದೆ.

ಈರೋಡ್ ವಿಭಾಗದ ಅಂಚೆ ಕಚೇರಿಗಳ ಹಿರಿಯ ಅಧೀಕ್ಷಕ ಕೆ. ಗೋಪಾಲನ್, ಈ ಮುಂದಿನ ಪೀಳಿಗೆಯ ವ್ಯವಸ್ಥೆಯು ಇಲಾಖೆಯ ಡಿಜಿಟಲ್ ಉಪಕ್ರಮದ ಅಡಿಯಲ್ಲಿ ಕಾರ್ಯಾಚರಣೆಯ ದಕ್ಷತೆ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.

ಶನಿವಾರ ಈರೋಡ್ ವಿಭಾಗದ ಅಂಚೆ ಕಚೇರಿಗಳಲ್ಲಿ ಯಾವುದೇ ಸಾರ್ವಜನಿಕ ವಹಿವಾಟು ನಡೆಸಿಲ್ಲ. ಹೊಸ ಸಾಫ್ಟ್‌ವೇರ್ ಸುಗಮವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಹಲವಾರು ಬಾರಿ ಪರಿಶೀಲನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ವರ್ಷದ ಜನವರಿಯಲ್ಲಿಯೇ ಅಂಚೆ ಕಚೇರಿಗಳಲ್ಲಿ ಆಗಸ್ಟ್‌ನಿಂದ ಡಿಜಿಟಲ್‌ ಪಾವತಿ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಅಂಚೆ ಕಚೇರಿಯನ್ನು ಯುಪಿಐ ವ್ಯವಸ್ಥೆಗೆ ಜೋಡಣೆ ಮಾಡದ ಕಾರಣ ಡಿಜಿಟಲ್ ಪಾವತಿ ಸಾಧ್ಯವಾಗುತ್ತಿಲ್ಲ. ಆದರೆ ಹೊಸ ವ್ಯವಸ್ಥೆ ಬಳಿಕ ಕ್ಯು ಆರ್ ಕೋಡ್ ಬಳಕೆ ಮಾಡಿಕೊಂಡು ಪೇಮೆಂಟ್ ಮಾಡಬಹುದಾಗಿದೆ ಎಂದು ಇಲಾಖೆ ಹೇಳಿತ್ತು.

ಕರ್ನಾಟಕ ವೃತ್ತದಲ್ಲಿ ಈ ಮಾದರಿ ಪ್ರಯೋಗವನ್ನು ಮೈಸೂರು ಮತ್ತು ಬಾಗಲಕೋಟೆ ಪ್ರಧಾನ ಕಚೇರಿ ಮತ್ತು ಅದರ ಅಧೀನ ಕಚೇರಿಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು. ಆಗಸ್ಟ್‌ ಅಂತ್ಯದ ವೇಳೆಗೆ ಕರ್ನಾಟಕದ ಹಲವು ಕಚೇರಿಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.

Previous articleIndia-England 5th Test:‌‌ ಭಾರತಕ್ಕೆ ರೋಚಕ ಗೆಲುವು, ಸರಣಿ ಡ್ರಾನಲ್ಲಿ ಅಂತ್ಯ
Next articleಧರ್ಮಸ್ಥಳದ ಅವಹೇಳನ: ಪ್ರತಿಭಟನೆಗೆ ಸಿದ್ಧವಾದ ಜೈನ ಸಮಾಜ

LEAVE A REPLY

Please enter your comment!
Please enter your name here