ಬೆಂಗಳೂರು: ಕರ್ನಾಟಕದ ಸಾರಿಗೆ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಆಗಸ್ಟ್ 5ರಿಂದ ಬಸ್ ಸಂಚಾರ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ. ಸೋಮವಾರ ನಡೆದ ಸಂಧಾನ ಸಭೆ ವಿಫಲವಾಗಿದ್ದು, ಮಂಗಳವಾರದಿಂದ ಸರ್ಕಾರಿ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ವೇತನ ಪರಿಷ್ಕರಣೆ ಮಾಡಬೇಕು, ಹಿಂಬಾಕಿ ನೀಡಬೇಕು ಎಂದು ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾಸಮಿತಿ ಪಟ್ಟು ಹಿಡಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜೊತೆ ಸಮಿತಿ ನಡೆಸಿದ ಸಂಧಾನ ಸಭೆ ವಿಫಲವಾಗಿದೆ.
ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 2023ರಲ್ಲಿ ವೇತನ ಹೆಚ್ಚಳ ಮಾಡಲಾಗಿದೆ. ಈಗ ಪುನಃ ವೇತನ ಪರಿಷ್ಕರಣೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸರ್ಕಾರ ಕೂಡಲೇ 38 ತಿಂಗಳ ಅರಿಯರ್ಸ್ ಕೊಡಬೇಕು ಎಂಬ ಬೇಡಿಕೆಗೆ ಸಿದ್ದರಾಮಯ್ಯ ಸಾಧ್ಯವಿಲ್ಲ ಎಂದು ಹೇಳಿದರು.
ಆದ್ದರಿಂದ ಸಭೆಯಲ್ಲಿಯೇ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸದಸ್ಯರು ಮಂಗಳವಾರದಿಂದ ಮುಷ್ಕರ ನಡೆಸುತ್ತೇವೆ ಎಂದು ಹೇಳಿಕೆ ನೀಡಿದರು. ಸಭೆಯಿಂದ ಹೊರ ನಡೆದರು. ಆದ್ದರಿಂದ ಸಭೆ ವಿಫಲವಾಗಿದೆ. ಆದರೆ ಮಂಗಳವಾರ ಮುಷ್ಕರ ಮಾಡದಂತೆ ಕರ್ನಾಟಕ ಹೈಕೋರ್ಟ್ ಸಾರಿಗೆ ನೌಕರರಿಗೆ ಸೂಚನೆ ನೀಡಿದೆ.
ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಮಂಗಳವಾರದಿಂದ ನಾವು ಮುಷ್ಕರ ನಡೆಸುತ್ತೇವೆ. ಯಾವುದೇ ಸರ್ಕಾರಿ ಬಸ್‌ಗಳು ಸಹ ರಸ್ತೆಗೆ ಇಳಿಯುವುದಿಲ್ಲ ಎಂದು ಸಭೆಯ ಬಳಿಕ ಘೋಷಣೆ ಮಾಡಿದರು.
ಮಂಗಳವಾರ ಬೆಳಗ್ಗೆ 6 ಗಂಟೆಯಿಂದಲೇ ಮುಷ್ಕರ ನಡೆಯಲಿದೆ ಎಂದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಹೇಳಿದೆ. ಮುಷ್ಕರನ್ನು ಒಂದು ವಾರಗಳ ಕಾಲ ಮುಂದೂಡಲು ಸೂಚನೆ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿಯ ವಿಚಾರಣೆ ನಡೆಯುತ್ತಿದೆ.
ಈ ಕ್ಷಣದ ಅಪ್‌ಡೇಟ್: ಆಗಸ್ಟ್ 5ರ ಮಂಗಳವಾರ ಸಾರಿಗೆ ಮುಷ್ಕರ ನಡೆಸಬಾರದು ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಅಲ್ಲದೇ ಮುಷ್ಕರದ ಕುರಿತು ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿಕೆ ಮಾಡಿದೆ.
ಕರ್ನಾಟಕ ಸರ್ಕಾರ 2027ರ ತನಕ ವೇತನ ಪರಿಷ್ಕರಣೆ ಮಾಡುವುದಿಲ್ಲ. ಹಿಂಬಾಕಿಯನ್ನು ನೀಡುವುದಿಲ್ಲ ಎಂದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಬೇಡಿಕೆಗೆ ಸೆಡ್ಡು ಹೊಡೆದಿದೆ. ಆದ್ದರಿಂದ ಸರ್ಕಾರ ಮತ್ತ ಸಮಿತಿ ನಡುವೆ ಜಟಾಪಟಿ ಮುಂದುವರೆದಿದೆ.
ಕಾರ್ಮಿಕ ಸಂಘಗಳ ಕಾಯ್ದೆ, ಕೈಗಾರಿಕಾ ವಿವಾದ ಕಾಯ್ದೆಗಳು ನಿಗಮಕ್ಕೆ ಅನ್ವಯವಾಗುತ್ತದೆ. ಆದ್ದರಿಂದ 1996ರಲ್ಲಿ ನಡೆದ ಒಪ್ಪಂದದ ಪ್ರಕಾರ ನಾಲ್ಕು ವರ್ಷಕ್ಕೆ ಒಮ್ಮೆ ವೇತನ ಪರಿಷ್ಕರಣೆ ಮಾಡಬೇಕಿದೆ. 2020ರಿಂದ ಅನ್ವಯವಾಗುವಂತೆ 2023ರಲ್ಲಿ ವೇತನ ಪರಿಷ್ಕರಣೆ ಮಾಡಲಾಗಿದೆ ಎಂದು ಕ್ರಿಯಾ ಸಮಿತಿ ಹೇಳಿದೆ.
38 ತಿಂಗಳ ಹಿಂಬಾಕಿಯನ್ನು ಸರ್ಕಾರ ನೀಡಿಲ್ಲ. ಆದ್ದರಿಂದ ಈಗ ವೇತನ ಪರಿಷ್ಕರಣೆ ಮತ್ತು ಹಿಂಬಾಕಿಗಾಗಿ ಬೇಡಿಕೆ ಇಟ್ಟು ಆಗಸ್ಟ್ 5ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಕ್ರಿಯಾ ಸಮಿತಿ ತೀರ್ಮಾನಿಸಿತ್ತು.
ಅನಂತ ಸುಬ್ಬರಾವ್ ಮಾತನಾಡಿ, “ದುಡಿಯುವ ಕಾರ್ಮಿಕರಿಗೆ ಹಿಂಬಾಕಿ 1,800 ಕೋಟಿ ರೂ. ನೀಡಲು ಇವರ ಬಳಿ ದುಡ್ಡಿಲ್ಲ. ಸರ್ಕಾರದ ಯಾವ ಭರವಸೆಗಳಿಗೂ ನಾವು ಒಪ್ಪುವುದಿಲ್ಲ. ಒಪ್ಪಂದ ಮಾಡಿಕೊಳ್ಳಿ, ಇಲ್ಲವೇ ಮುಷ್ಕರ ಎದುರಿಸಿ” ಎಂದು ಹೇಳಿದ್ದಾರೆ.
ಆದರೆ ಸರ್ಕಾರ ಕೋವಿಡ್ ಪರಿಸ್ಥಿತಿ ಕಾರಣ 2020ರಲ್ಲಿ ವೇತನ ಪರಿಷ್ಕರಣೆ ನಡೆಯಲಿಲ್ಲ. ಮೂರು ವರ್ಷ ತಡವಾದ ಕಾರಣಕ್ಕೆ ಆರ್ಥಿಕ ನಿಯಮಾವಳಿ ಪ್ರಕಾರ 2023ರಲ್ಲಿ ಶೇ 15ರಷ್ಟು ವೇತನ ಏರಿಕೆ ಮಾಡಲಾಗಿದೆ.
ಸರ್ಕಾರಿ ನೌಕರರಿಗೆ ಈ ಮಟ್ಟದ ವೇತನ ಏರಿಕೆ ಕೊಟ್ಟಿಲ್ಲ. ಈ ಹಿಂದೆ ಮಾಡಿಕೊಂಡ ಒಪ್ಪಂದದ ಪ್ರಕಾರ 2027ರ ತನಕ ವೇತನ ಪರಿಷ್ಕರಣೆ ಸಾಧ್ಯವಿಲ್ಲ ಎಂದು ಸರ್ಕಾರ ತನ್ನ ನಿಲುವಿಗೆ ಅಂಟಿಕೊಂಡಿದೆ.