ನವದೆಹಲಿ: ಭಾರತದಲ್ಲಿ ಪಾರದರ್ಶಕ ಆಡಳಿತ ಇದೆ ಎಂದು ಸರ್ಕಾರಗಳು ಹೇಳುತ್ತವೆ. ಆದರೆ ಭ್ರಷ್ಟಾಚಾರ ಅದಕ್ಕಿಂತಲೂ ಹೆಚ್ಚಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಿಂದ ದೆಹಲಿ ತನಕ ಎಲ್ಲಾ ಇಲಾಖೆಗಳಲ್ಲಿಯೂ ವಿವಿಧ ರೀತಿಯಲ್ಲಿ ಭ್ರಷ್ಟಾಚಾರ ಇದೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಬೇಕಿದೆ.
ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಭ್ರಷ್ಟಾಚಾರ ನಿಗ್ರಹ ದಳ, ಲೋಕಾಯುಕ್ತ, ಸಿಐಡಿ, ಜಾರಿ ನಿರ್ದೇಶನಾಲಯ, ಸಿಬಿಐ ಮುಂತಾದ ಸಂಸ್ಥೆಗಳಿವೆ. ಜನರು ದೂರು ಕೊಟ್ಟಾಗ ತನಿಖೆ ನಡೆದು ಶಿಕ್ಷೆಯೂ ಆಗುತ್ತದೆ. ಆದರೆ ಭ್ರಷ್ಟಾಚಾರ ಮಾತ್ರ ಕಡಿಮೆ ಆಗುವುದಿಲ್ಲ.
ಭಾರತದ ಟಾಪ್ 10 ಭ್ರಷ್ಟ ಇಲಾಖೆಗಳ ಪಟ್ಟಿ ಈಗ ಬಿಡುಗಡೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪಟ್ಟಿ ಸದ್ದು ಮಾಡುತ್ತಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಅಪರಾಧ ತನಿಖಾ ಬ್ಯೂರೋ (ಎನ್‌ಸಿಐಬಿ) 2025ರ ವರದಿ ಈ ಇಲಾಖೆಗಳನ್ನು ಪಟ್ಟಿ ಮಾಡಿದೆ.
ಲಂಚ ತೆಗೆದುಕೊಳ್ಳುವುದು, ಗುತ್ತಿಗೆ ಪಡೆಯಲು ಕಿಕ್ ಬ್ಯಾಕ್ ನೀಡುವುದು, ನಕಲಿ ದಾಖಲೆಗಳ ಸೃಷ್ಟಿ ಸೇರಿದಂತೆ ವಿವಿಧ ಮಾದರಿಯಲ್ಲಿ ಭ್ರಷ್ಟಾಚಾರವಿದೆ ಎಂದು ವರದಿ ಹೇಳಿದೆ. ವರದಿಯಲ್ಲಿರುವ ಇಲಾಖೆಗಳು ಯಾವುವು? ನೋಡಿ…
ಟಾಪ್-1; ಪೊಲೀಸ್ ಇಲಾಖೆ. ವರದಿಯ ಪ್ರಕಾರ ಪೊಲೀಸ್ ಇಲಾಖೆ ದೇಶದ ನಂಬರ್ 1 ಭ್ರಷ್ಟ ಇಲಾಖೆ. ಇಲ್ಲಿ ಎಲ್ಲರೂ ಭ್ರಷ್ಟರು ಎಂದಲ್ಲ. ಆದರೆ ಇಲಾಖೆಯಲ್ಲಿ ಭ್ರಷ್ಟಾಚಾರ ಇದೆ. ಎಫ್‌ಐಆರ್ ದಾಖಲಿಸಲು ಲಂಚ ಪಡೆಯುವುದು, ರಸ್ತೆ ಬದಿ ವ್ಯಾಪಾರಿಗಳಿಂದ ಸುಲಿಗೆ, ಆಸ್ತಿ ವಿವಾದಲ್ಲಿ ಹಣ ಪಡೆದು ಸಹಾಯ ಮಾಡುವುದು ಹೀಗೆ ವಿವಿಧ ಮಾದರಿಯಲ್ಲಿ ಭ್ರಷ್ಟಾಚಾರ ಇದೆ ಎಂದು ವರದಿಯಲ್ಲಿ ವಿವರಣೆ ನೀಡಲಾಗಿದೆ.
ಟಾಪ್-2: ಕಂದಾಯ ಇಲಾಖೆ. ಆಸ್ತಿಗಳ ನೋಂದಣಿ, ವರ್ಗಾವಣೆ ಸೇರಿದಂತೆ ವಿವಿಧ ಕಾರಣಕ್ಕೆ ಕಂದಾಯ ಇಲಾಖೆ ಸದಾ ಸುದ್ದಿಯಲ್ಲಿ ಇರುತ್ತದೆ. ಇದು ದೇಶದ 2ನೇ ಭ್ರಷ್ಟ ಇಲಾಖೆ. ಭೂಮಿ ನೋಂದಣಿ ಮಾಡಿಸಲು ಲಂಚ, ದಾಖಲೆಗಳ ಬದಲಾವಣೆ ಮಾಡಲು ಲಂಚ ಸೇರಿದಂತೆ ವಿವಿಧ ಮಾದರಿಯಲ್ಲಿ ಇಲಾಖೆಯಲ್ಲಿ ಭ್ರಷ್ಟಾಚಾರ ಇದೆ ಎಂದು ವರದಿ ಹೇಳಿದೆ.
ಟಾಪ್-3: ನಗರ ಸ್ಥಳೀಯ ಸಂಸ್ಥೆಗಳು. ದೇಶದಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವ್ಯಾಪಕ ಭ್ರಷ್ಟಾಚಾರವಿದೆ. ಇದು ವಿವಿಧ ಮಾದರಿಯಲ್ಲಿದೆ. ಆದ್ದರಿಂದ ಈ ಇಲಾಖೆ 3ನೇ ಸ್ಥಾನದಲ್ಲಿದೆ. ಅಕ್ರಮ ಕಟ್ಟಡವನ್ನು ನಿಯಮ ಮೀರಿ ಸಕ್ರಮ ಮಾಡುವುದು, ನಕ್ಷೆಯನ್ನು ಕಾನೂನು ಉಲ್ಲಂಘಿಸಿ ಅನುಮತಿಸುವುದು, ಉಲ್ಲಂಘನೆ ಪ್ರಕರಣಗಳನ್ನು ನಿರ್ಲಕ್ಷ್ಯ ಮಾಡುವುದು ಸೇರಿ ಹಲವು ಮಾದರಿಯಲ್ಲಿ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಭ್ರಷ್ಟತೆ ತುಂಬಿದೆ ಎಂಬುದು ವರದಿಯ ಸಾರಾಂಶ.
ಟಾಪ್-4: ಗ್ರಾಮ ಪಂಚಾಯಿತಿ/ ಬ್ಲಾಕ್ ಆಫೀಸರ್. ಸರ್ಕಾರದ ಭ್ರಷ್ಟಾಚಾರ ಕೇವಲ ನಗರಗಳಿಗೆ ಸೀಮಿತವಾಗಿಲ್ಲ. ಗ್ರಾಮ ಪಂಚಾಯಿತಿ/ ಬ್ಲಾಕ್ ಮಟ್ಟದಲ್ಲಿಯೂ ಇದೆ. ಆದ್ದರಿಂದ ಇದು 4ನೇ ಸ್ಥಾನದಲ್ಲಿದೆ. ಈ ಮಟ್ಟದಲ್ಲಿ ಸಮಾಜ ಕಲ್ಯಾಣ ಯೋಜನೆ ಫಲಾನುಭವಿ ಗುರುತಿಸುವುದು, ಮನೆಗಳ ಹಂಚಿಕೆ ಸೇರಿದಂತೆ ವಿವಿಧ ಕಾರಣಕ್ಕೆ ಭ್ರಷ್ಟಾಚಾರ ನಡೆಯುತ್ತದೆ ಎಂದು ವರದಿ ತಿಳಿಸಿದೆ.
ಟಾಪ್-5: ಇಂಧನ ಇಲಾಖೆ. ಇಂಧನ ಇಲಾಖೆ ಭಾರತದ ಭ್ರಷ್ಟ ಇಲಾಖೆಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಮೀಟರ್ ರೀಡಿಂಗ್ ಹೆಚ್ಚು, ಕಡಿಮೆ ಮಾಡುವುದು. ನಕಲಿ ಬಿಲ್‌ಗಳ ಸೃಷ್ಟಿ, ರಿಪೇರಿಗಳನ್ನು ಹಣಕ್ಕಾಗಿ ಪೀಡಿಸಿ ತಡ ಮಾಡುವುದು, ಹೊಸ ಯೋಜನೆ ಅನುಮೋದನೆ ಮಾಡಲು ಹಣ ಪಡೆಯುವುದು ಸೇರಿದಂತೆ ವಿವಿಧ ಮಾದರಿಯಲ್ಲಿ ಇಲಾಖೆಯಲ್ಲಿ ಭ್ರಷ್ಟಾಚಾರವಿದೆ.
ಟಾಪ್-6: ಆರ್‌ಟಿಒ/ ಸಾರಿಗೆ ಇಲಾಖೆ. ಸಾರಿಗೆ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಜನರಿಗೆ ತಿಳಿದಿದೆ. ಈ ಇಲಾಖೆ 6ನೇ ಸ್ಥಾನದಲ್ಲಿದೆ. ಲೈಸೆನ್ಸ್ ನೀಡಲು ಹಣ ಪಡೆಯುವುದು, ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ, ನೋಂದಣಿ, ನಂಬರ್ ಪ್ಲೇಟ್ ಹಂಚಿಕೆ, ವಾಹನಕ್ಕೆ ನಕಲಿ ಫಿಟ್ ನೆಟ್ ಸರ್ಟಿಫಿಕೇಟ್ ನೀಡುವುದು ಇಲಾಖೆಯಲ್ಲಿನ ಭ್ರಷ್ಟಾಚಾರದ ಮಾದರಿಯಾಗಿದೆ.
ಟಾಪ್-7: ಸರ್ಕಾರಿ ಆಸ್ಪತ್ರೆಗಳು. ಜನರಿಗೆ ಆರೋಗ್ಯ ಸೇವೆ ನೀಡುವ ಸರ್ಕಾರಿ ಆಸ್ಪತ್ರೆಗಳು ಭ್ರಷ್ಟ ಇಲಾಖೆಗಳ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಆಸ್ಪತ್ರೆಗಳಿಗೆ ಔಷಧಿ ಪೂರೈಕೆ ಟೆಂಡರ್, ವೈದ್ಯರ ನಕಲಿ ಹಾಜರಾತಿ, ದಾಖಲು ಮಾಡಿಕೊಳ್ಳಲು ಹಣ ಕೇಳುವುದು, ಆಪರೇಷನ್ ಮಾಡಲು ಹಣಕ್ಕೆ ಬೇಡಿಕೆ ಸೇರಿದಂತೆ ವಿವಿಧ ಮಾದರಿಯ ಭ್ರಷ್ಟಾಚಾರ ಆಸ್ಪತ್ರೆಗಳಲ್ಲಿ ಅಡಗಿದೆ ಎಂದು ವರದಿ ಹೇಳಿದೆ.
ಟಾಪ್-8: ಶಿಕ್ಷಣ ಇಲಾಖೆ. ದೇಶದ ಮುಂದಿನ ಭವಿಷ್ಯ ರೂಪಿಸುವ ಶಿಕ್ಷಣ ಇಲಾಖೆಯಲ್ಲಿಯೂ ಭ್ರಷ್ಟಾಚಾರವಿದೆ. ಇಲಾಖೆ 8ನೇ ಸ್ಥಾನದಲ್ಲಿದೆ ಎಂದು ಎನ್‌ಸಿಐಬಿ 2025ರ ವರದಿ ಹೇಳಿದೆ. ಶಿಕ್ಷಕರ ನೇಮಕಾತಿಯಲ್ಲಿ ಹಗರಣ ಮಾಡುವುದು, ನಕಲಿ ಸಿಬ್ಬಂದಿಗಳನ್ನು ತೋರಿಸುವುದು ಈ ಇಲಾಖೆಯಲ್ಲಿ ನಡೆಯುತ್ತದೆ ಎನ್ನುತ್ತದೆ ವರದಿ.
ಟಾಪ್-9: ನಗರಾಭಿವೃದ್ಧಿ ಇಲಾಖೆ. ದೇಶದ ವಿವಿಧ ನಗರಗಳು ಅಭಿವೃದ್ಧಿ ಆಗುತ್ತಿದ್ದಂತೆಯೇ ಭ್ರಷ್ಟಾಚಾರವೂ ಹೆಚ್ಚಾಗಿದೆ. ಆದ್ದರಿಂದ ಇಲಾಖೆ 9ನೇ ಸ್ಥಾನದಲ್ಲಿದೆ. ಟೆಂಡರ್ ಪಡೆಯಲು ಲಂಚ, ಕಾಮಗಾರಿಗೆ ಲಂಚ, ಬಿಲ್ ನೀಡಲು ಲಂಚ ಸೇರಿದಂತೆ ವಿವಿಧ ಮಾದರಿಯಲ್ಲಿ ಈ ಇಲಾಖೆಯಲ್ಲಿ ಭ್ರಷ್ಟಾಚಾರ ಇದೆ ಎಂದು ವರದಿ ತಿಳಿಸಿದೆ.
ಟಾಪ್-10: ಆದಾಯ ತೆರಿಗೆ & ಜಿಎಸ್‌ಟಿ. ದೇಶದ ಹಲವು ಕಡೆ ಐಟಿ ದಾಳಿ ನಡೆದು ಅಷ್ಟು ಹಣ ಸಿಕ್ಕಿತ್ತು ಎಂದು ಸುದ್ದಿ ಬರುತ್ತದೆ. ಆದರೆ ಈ ಇಲಾಖೆ ಸಹ ಭ್ರಷ್ಟ ಇಲಾಖೆಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ದಾಳಿಯನ್ನು ತಡೆಯಲು, ನೋಟಿಸ್ ನೀಡದಿರಲು ಲಂಚ ಪಡೆಯುವುದು. ನಕಲಿ ಹೂಡಿಕೆಗಳನ್ನು ತೋರಿಸುವುದು ಸೇರಿದಂತೆ ವಿವಿಧ ಮಾದರಿಯಲ್ಲಿ ಇಲಾಖೆ ಭ್ರಷ್ಟವಾಗಿದೆ.