ಬೆಂಗಳೂರು: ಹಾಸನ ಕ್ಷೇತ್ರದ ಮಾಜಿ ಸಂಸದ, ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣಗೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬಕ್ಕೆ ಕೋರ್ಟ್ ತೀರ್ಪು ಭಾರೀ ಆಘಾತ ಉಂಟು ಮಾಡಿದೆ.
2024ರ ಮೇ 30ರಂದು ಪ್ರಜ್ವಲ್ ರೇವಣ್ಣರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದರು. ಮೈಸೂರಿನ ಕೆ.ಆರ್.ನಗರದ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶಿಸಿದೆ.
ಮನೆ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ 10 ಲಕ್ಷ ರೂ. ದಂಡ ಮತ್ತು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪ್ರಜ್ವಲ್ ವಿರುದ್ಧ ಇನ್ನೂ ಮೂರು ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ತೀರ್ಪು ಹೊರಬರಬೇಕಿದೆ.
ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಪ್ರಜ್ವಲ್ ರೇವಣ್ಣ ಶನಿವಾರ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಹಾಜರಾಗಿದ್ದರು. ಅಪರಾಧಿಯ ಮುಂದೆಯೇ ಶಿಕ್ಷೆ ಪ್ರಮಾಣ ಪ್ರಕಟಿಸಿದ ನ್ಯಾಯಾಧೀಶರು. ಅಪರಾಧಿಗೆ ತೀರ್ಪಿನ ಪ್ರತಿಯನ್ನು ಉಚಿತವಾಗಿ ನೀಡಿ ಎಂದು ಆದೇಶಿಸಿದರು.
ಪ್ರಜ್ವಲ್ ರೇವಣ್ಣ ಮುಂದಿರುವ ಕಾನೂನು ಆಯ್ಕೆಗಳು: ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಜಾಮೀನು ನೀಡುವಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ತನಕ ಹೋಗಿದ್ದಾರೆ. ಆದರೆ ಎಲ್ಲಾ ಕೋರ್ಟ್‌ಗಳಲ್ಲಿಯೂ ಅರ್ಜಿ ವಜಾಗೊಂಡಿದೆ.
ಮನೆ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ತೀರ್ಪು ನೀಡುವಾಗ ಕೋರ್ಟ್ ಈ ತೀರ್ಪನ್ನು, ಶಿಕ್ಷೆಯ ಪ್ರಮಾಣವನ್ನು ರದ್ದುಪಡಿಸುವ ಕುರಿತು ಮೇಲ್ಮನವಿ ಸಲ್ಲಿಕೆ ಮಾಡಲು ಅವಕಾಶವನ್ನು ನೀಡಿದೆ.
ಆಗಸ್ಟ್ 2ರ ಶನಿವಾರದಿಂದಲೇ ಶಿಕ್ಷೆ ಪ್ರಾರಂಭವಾಗಲಿದೆ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. 10 ಲಕ್ಷ ರೂ. ದಂಡದ ಪೈಕಿ 7 ಲಕ್ಷ ರೂ.ಗಳನ್ನು ಸಂತ್ರಸ್ತ ಮಹಿಳೆಗೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದೆ. ಜೀವಾವಧಿ ಶಿಕ್ಷೆ ಆಗಿರುವ ಹಿನ್ನಲೆಯಲ್ಲಿ ಜೆಡಿಎಸ್ ಯುವ ನಾಯಕನ ರಾಜಕೀಯ ಭವಿಷ್ಯ ಮುಗಿಯಿತೇ? ಎಂಬ ಪ್ರಶ್ನೆ ಎದ್ದಿದೆ.
ಕಾನೂನು ಆಯ್ಕೆ 1: ಪ್ರಜ್ವಲ್ ರೇವಣ್ಣ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶವನ್ನು ಪ್ರಶ್ನೆ ಮಾಡಿ, ಶಿಕ್ಷೆಯನ್ನು ರದ್ದುಗೊಳಿಸಿ/ ಕಡಿಮೆ ಮಾಡಿ ಎಂದು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಆದರೆ ತಕ್ಷಣ ಜಾಮೀನು ಸಿಗುವುದಿಲ್ಲ.
ಹೈಕೋರ್ಟ್ ಅರ್ಜಿ ವಿಚಾರಣೆ ನಡೆಸಿ ಶಿಕ್ಷೆಯನ್ನು ಅಮಾನತ್ತಿನಲ್ಲಿಡಬೇಕು ಅಥವ ರದ್ದುಗೊಳಿಸಬೇಕು. ಒಂದು ವೇಳೆ ವಿಶೇಷ ಕೋರ್ಟ್ ಆದೇಶವನ್ನು ಎತ್ತಿ ಹಿಡಿದರೆ ರಾಜ್ಯ ಮಟ್ಟದಲ್ಲಿ ಪ್ರಜ್ವಲ್ ಕಾನೂನು ಹೋರಾಟ ಅಂತ್ಯವಾಗಲಿದೆ.
ಕಾನೂನು ಆಯ್ಕೆ 02: ಅತ್ಯಾಚಾರ ಪ್ರಕರಣದ ಅಪರಾಧಿ ಪ್ರಜ್ವಲ್ ರೇವಣ್ಣ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನೆ ಮಾಡಿ ಸುಪ್ರೀಂಕೋರ್ಟ್ ಮೊರೆ ಹೋಗಬಹುದು. ಆಗಲೂ ತಕ್ಷಣಕ್ಕೆ ಜಾಮೀನು ಸಿಗುವುದಿಲ್ಲ. ವಿವರವಾದ ವಿಚಾರಣೆ ನಡೆದು, ಕೋರ್ಟ್ ತೀರ್ಪು ನೀಡಬೇಕು. ಒಂದು ವೇಳೆ ಸುಪ್ರೀಂಕೋರ್ಟ್ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದರೆ ಪ್ರಜ್ವಲ್ ಕಾನೂನು ಹೋರಾಟ ಅಂತ್ಯ, ಜೈಲುವಾಸ ಖಾಯಂ.
ಕಾನೂನು ಆಯ್ಕೆ03: ಪ್ರಜ್ವಲ್ ರೇವಣ್ಣ ಜಾಮೀನು ನೀಡುವಂತೆ ಕೋರ್ಟ್ ಮೊರೆ ಹೋಗಬಹುದು. ಆದರೆ ಒಂದು ಪ್ರಕರಣದಲ್ಲಿ ಜಾಮೀನು ಸಿಕ್ಕರೆ ಸಾಲದು ಅವರ ವಿರುದ್ಧ ಇನ್ನೂ ಮೂರು ಪ್ರಕರಣದ ವಿಚಾರಣೆ ಬಾಕಿ ಇದೆ. ಆದ್ದರಿಂದ ಸದ್ಯಕ್ಕೆ ಪ್ರಜ್ವಲ್ ರೇವಣ್ಣ ಜಾಮೀನು ಪಡೆಯುವುದು ಸಾಧ್ಯವಿಲ್ಲ.
ಶನಿವಾರ ಕೋರ್ಟ್ ತೀರ್ಪು ನೀಡುವಾಗ ಮಾಜಿ ಸಚಿವ ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ ಬೆಂಗಳೂರಿನ ಬಸವನಗುಡಿ ಮನೆಯಲ್ಲಿದ್ದರು. ಕೆಲವು ವರ್ಷ ಶಿಕ್ಷೆಯಾಗಬಹುದು ಎಂದು ಅಂದಾಜಿಸಿದ್ದರು. ಆದರೆ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಪ್ರಜ್ವಲ್ ರೇವಣ್ಣ ಕುಟುಂಬ ಕಾನೂನು ಹೋರಾಟ ಮುಂದುವರೆಸುವುದು ಖಚಿತವಾಗಿದೆ. ತೀರ್ಪಿನ ಪ್ರತಿ ಸಿಕ್ಕ ಬಳಿಕ ವಕೀಲರ ಜೊತೆ ಚರ್ಚಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಿದ್ದಾರೆ. ಆದರೆ ಯಾವಾಗ? ಎಂಬುದು ತಿಳಿದಿಲ್ಲ.