ಬೆಂಗಳೂರು: ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಮಳೆ ಅಬ್ಬರಿಸುತ್ತಿದೆ. ಪ್ರವಾಸಿ ತಾಣಗಳಿಗೆ ಜನರು ಭೇಟಿ ನೀಡುತ್ತಿದ್ದಾರೆ. ರಾಜ್ಯದಲ್ಲಿ ಮಳೆಗಾಲದ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲು, ಪ್ರವಾಸೋದ್ಯಮ ಇಲಾಖೆ ಮತ್ತು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮ (ಕೆಎಸ್‌ಟಿಡಿಸಿ) ಜಲಪಾತ ಪವಾಸ ಪ್ಯಾಕೇಜ್‌ಗಳನ್ನು ನೀಡಲು ಮುಂದಾಗಿದೆ.
ಸರ್ಕಾರದಿಂದಲೇ ಪ್ರವಾಸಿ ಟೂರ್ ಪ್ಯಾಕೇಜ್ ರಾಜ್ಯದ ಪ್ರವಾಸೋದ್ಯಮ ಇಲಾಖೆಯ ವಿನೂತನ ಪ್ರಯೋಗವಾಗಿದೆ. ಮುಂಗಾರು ಮಳೆ ಅಬ್ಬರಕ್ಕೆ ಈಗಾಗಲೇ ಹಳ್ಳ, ನದಿಗಳು ತುಂಬಿ ಹರಿಯುತ್ತಿದ್ದು, ಜಲಪಾತಗಳು ಮೈ ದುಂಬಿವೆ. ಆದ್ದರಿಂದ ಅವುಗಳ ಸೌಂದರ್ಯ ಸವಿಯಲು ನೂರಾರು ಜನರು ಪ್ರವಾಸ ಕೈಗೊಳ್ಳುತ್ತಿದ್ದಾರೆ.
ರಾಜ್ಯದ ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಈಗಾಗಲೇ ಈ ಪ್ರವಾಸಿ ಪ್ಯಾಕೇಜ್‌ಗಾಗಿ ತಾಣಗಳನ್ನು ಗುರುತಿಸಲಾಗಿದೆ. ಪ್ರವಾಸಿಗರು ಈ ತಾಣಗಳನ್ನು ಕೆಎಸ್‌ಟಿಡಿಸಿಯು ಈಗಾಗಲೇ ಅಸ್ತಿತ್ವದಲ್ಲಿರುವ ಪ್ಯಾಕೇಜ್ ಗಳಿಗೆ ಸಂಯೋಜಿಸಲು ಅಥವಾ ಕಾರ್ಯಯೋಜನೆ ಮೂಲಕ ಜಲಪಾತಗಳ ಪ್ರಯಾಣ ಯೋಜನೆಗಳನ್ನು ಆಯ್ಕೆ ಮಾಡು ಮಾಡಬಹುದಾಗಿರುತ್ತದೆ.
ಹಲವು ಪ್ಯಾಕೇಜ್ ಟೂರ್‌ಗಳು: ಈಗಾಗಲೇ ಕೆಎಸ್‌ಟಿಡಿಸಿ ಜನಪ್ರಿಯ ಪ್ರವಾಸಿ ತಾಣಗಳಿಗೆ ಪ್ರವಾಸಗಳನ್ನು ಆಯೋಜನೆ ಮಾಡುತ್ತದೆ. ಇದರಲ್ಲಿ ಕೃಷ್ಣಗಿರಿ ಅಣೆಕಟ್ಟು, ಹೊಗೇನಕಲ್, ಶಿವನಸಮುದ್ರ, ತಲಕಾಡು ಮತ್ತು ಸಿಗಂದೂರು, ಜೋಗ ಜಲಪಾತ ಪ್ರವಾಸಗಳು ಸೇರಿವೆ. ಜೋಗ ಜಲಪಾತ ಮತ್ತು ಗೋಕಾಕ್ ಜಲಪಾತಗಳು ಈಗಾಗಲೇ ಪ್ರಸಿದ್ಧಿಯಾಗಿದ್ದು, ಜನರು ಪ್ರವಾಸ ಕೈಗೊಳ್ಳುತ್ತಿದ್ದಾರೆ.
ರಾಜ್ಯದ ಇನ್ನಷ್ಟು ಜಲಪಾತಗಳನ್ನು ಅವರುಗಳ ಜೊತೆ ಸೇರಿಸಿ ನಿಗಮ ಪ್ರವಾಸಿ ಪ್ಯಾಕೇಜ್ ರೂಪಿಸುತ್ತಿದೆ. ಜಲಪಾತಗಳು ಮತ್ತು ಅವುಗಳ ಸುತ್ತಲೂ ಒಂದು ಪ್ರಯಾಣದ ನಕ್ಷೆ ರಚಿಸಲು ಮುಂದಾಗಿದ್ದೇವೆ ಎಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಮತ್ತು ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಕೆ.ವಿ.ರಾಜೇಂದ್ರ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರಿನಲ್ಲಿ ಸೇತುವೆ ಉದ್ಘಾಟನೆ ಬಳಿಕ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಭಾನುವಾರ ಪ್ರವಾಸಿ ವಾಹನಗಳಿಂದ ಸಿಗಂದೂರಿನಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಲಿಂಗನಮಕ್ಕಿ ಡ್ಯಾಂ ಗೇಟು ತೆರೆದು ನದಿಗೆ ನೀರು ಹರಿಸಿದರೆ ಜೋಗ ಜಲಪಾತದ ಸೌಂದರ್ಯ ಸಹ ಇಮ್ಮಡಿಯಾಗಲಿದ್ದು, ಆಗ ಇನ್ನಷ್ಟು ಪ್ರವಾಸಿಗರು ಸಾಗರಕ್ಕೆ ಭೇಟಿ ನೀಡುತ್ತಾರೆ.
ಜೋಗ ಜಲಪಾತಕ್ಕೆ ಈಗಾಗಲೇ ಹಲವಾರು ಟೂರ್ ಪ್ಯಾಕೇಜ್‌ಗಳು ಘೋಷಣೆಯಾಗಿವೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು ಮೂಲಕ ಜೋಗಕ್ಕೆ ಪ್ರವಾಸಿ ಪ್ಯಾಕೇಜ್‌ಗಳನ್ನು ಭಾನುವಾರ ಮತ್ತು ಸರ್ಕಾರಿ ರಜೆ ದಿನದಂದು ಪರಿಚಯಿಸಿದೆ.
ಬೆಂಗಳೂರು-ಶಿವಮೊಗ್ಗ, ಮೈಸೂರು-ಶಿವಮೊಗ್ಗ ನಡುವೆ ನೇರ ರೈಲು ಸೌಲಭ್ಯವಿದ್ದು, ಸಿಗಂದೂರು, ಜೋಗ ಜಲಪಾತ ನೋಡಲು ನೂರಾರು ಜನರು ಸಂಚಾರ ನಡೆಸಲು ಸಹಾಯಕವಾಗಿದೆ. ಸಿಗಂದೂರು ದೇವಾಲಯಕ್ಕೆ ಈಗ ಸಂಚಾರ ನಡೆಸುವ ಕೆಎಸ್ಆರ್‌ಟಿಸಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.
ಖಾಸಗಿ ಟೂರ್ ಪ್ಯಾಕೇಜ್‌ಗಳು ಈಗಾಗಲೇ ಲಭ್ಯವಿದೆ. ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಸೇರಿ ವಿವಿಧ ಜಿಲ್ಲೆಗಳಿಗೆ ಪ್ರವಾಸ ಆಯೋಜನೆ ಮಾಡಲಾಗುತ್ತದೆ. ಆದರೆ ದರಗಳು ಹೆಚ್ಚಿರುತ್ತದೆ. ಕಡಿಮೆ ದರದಲ್ಲಿ ಸರ್ಕಾರಿ ಟೂರ್ ಪ್ಯಾಕೇಜ್ ಪ್ರಾರಂಭಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಇದಕ್ಕೆ ಯಾವಾಗ ಚಾಲನೆ ಸಿಗಲಿದೆ? ಎಂಬುದು ಮಾತ್ರ ಇನ್ನೂ ಅಂತಿಮಗೊಂಡಿಲ್ಲ.
ಜಲಪಾತ, ಖ್ಯಾತ ಪ್ರವಾಸಿ ತಾಣಕ್ಕೆ ಭೇಟಿ ನೀಡಿ ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಸಹ ವೀಕ್ಷಣೆ ಮಾಡಿಕೊಂಡು ಬರಬಹುದಾಗಿದೆ. ಈ ಪ್ರವಾಸಿ ಪ್ಯಾಕೇಜ್‌ಗೆ ಜನರ ಪ್ರತಿಕ್ರಿಯೆ ನೋಡಿಕೊಂಡು ಇನ್ನಷ್ಟು ಪ್ರವಾಸಿ ಪ್ಯಾಕೇಜ್‌ಗಳನ್ನು ಆಯೋಜನೆ ಮಾಡಬಹುದು.