ಕಾಲ್ತುಳಿತ ಪ್ರಕರಣ: ಮಹತ್ವದ ಮಸೂದೆ ಮಂಡಿಸಿದ ಸರಕಾರ

0
60

ಬೆಂಗಳೂರು: ಆರ್‌ಸಿಬಿ ವಿಜಯೋತ್ಸವ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ 11 ಜನರು ಬಲಿಯಾದ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರ ಇನ್ನು ಮುಂದೆ ಕಾನೂನು ಬಾಹಿರವಾಗಿ ಗುಂಪುಗೂಡಿ ಅಥವಾ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ಸಂಭವಿಸಬಹುದಾದ ಅಪರಾಧಗಳಿಗೆ 3ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 1 ಕೋಟಿ ರೂ. ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ಇರುವ ನೂತನ ಕಾಯ್ದೆ ಜಾರಿಗೆ ಸರಕಾರ ಮುಂದಾಗಿದೆ.

ವಿಧಾನಸಭೆಯಲ್ಲಿ ಬುಧವಾರ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕರ್ನಾಟಕ ಜನಸಂದಣಿ ನಿಯಂತ್ರಣ, ಕಾರ್ಯಕ್ರಮಗಳು ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿಯ ನಿರ್ವಹಣೆ ವಿಧೇಯಕವನ್ನು ಮಂಡಿಸಿದರು. ಈ ವಿಧೇಯಕಕ್ಕೆ ಒಪ್ಪಿಗೆ ದೊರೆತಲ್ಲಿ ಇನ್ನು ಮುಂದೆ ಕಾಲ್ತುಳಿತದಂತಹ ದುರಂತಗಳನ್ನು ತಪ್ಪಿಸಲು ಕೆಲವು ಕಠಿಣ ನಿಯಮಗಳು ಜಾರಿಗೆ ಬರಲಿವೆ.

ಹೊಸ ನಿಯಮಗಳೇನು?: ಕಾರ್ಯಕ್ರಮ ಆಯೋಜನೆ, ಅನುಮತಿ ನೀಡುವಿಕೆ, ಮಾಹಿತಿ ಸಂಗ್ರಹಣೆ ಮತ್ತಿತರ ಕಾನೂನುಬದ್ಧ ಕ್ರಮಗಳನ್ನು ಕೈಗೊಳ್ಳಲು ಪ್ರಾಧಿಕಾರಿಯನ್ನು ಗುರುತಿಸಲಾಗಿದ್ದು, ನಿರ್ದಿಷ್ಟ ಸಮಾರಂಭ, ಕಾರ್ಯಕ್ರಮ ಅಥವಾ ಗುಂಪುಗೂಡುವಿಕೆ ಸಂಬಂಧ ಯಾವುದೇ ವ್ಯಕ್ತಿ ಅಥವಾ ಸಂಘಟನೆ, ಅಥವಾ ಕಂಪನಿಯು ಸಂಬಂಧಪಟ್ಟ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಮತ್ತು ಅದಕ್ಕಿಂತ ಮೇಲಿನ ದರ್ಜೆಯ ಪೊಲೀಸ್ ಅಧಿಕಾರಿಗಳು ಪ್ರಾಧಿಕಾರಿಯಾಗಿರುತ್ತಾರೆ. ಈ ಪ್ರಾಧಿಕಾರಿಯಿಂದ ಸೂಕ್ತ ಮತ್ತು 10 ದಿನ ಮುಂಚಿತವಾಗಿ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಅರ್ಜಿ ಪಡೆದ 4 ದಿನಗಳಲ್ಲಿ ಅನುಮತಿ ನೀಡುವ ಬಗ್ಗೆ ಪ್ರಾಧಿಕಾರ ನಿರ್ಣಯ ತೆಗೆದುಕೊಳ್ಳಬೇಕು.

7 ಸಾವಿರ ಜನಕ್ಕಿಂತ ಕಡಿಮೆ ಸಂಖ್ಯೆ ಸೇರುವುದಿದ್ದರೆ ಆಯಾ ಠಾಣಾಧಿಕಾರಿ ಅನುಮತಿ ನೀಡಬಹುದು. 7 ಸಾವಿರದಿಂದ 50 ಸಾವಿರ ಜನ ಸೇರುವುದಿದ್ದರೆ ಡಿವೈಎಸ್‌ಪಿ ಮಟ್ಟದ ಅಧಿಕಾರಿ ಪ್ರಾಧಿಕಾರಿ ಆಗಿರುತ್ತಾರೆ. 50 ಸಾವಿರ ಮೀರಿದ ಕಾರ್ಯಕ್ರಮಕ್ಕೆ ಪೊಲೀಸ್ ಆಯುಕ್ತ ಅಥವಾ ಜಿಲ್ಲಾ ಪೊಲೀಸ್ ವರಿಷ್ಠ ಪ್ರಾಧಿಕಾರಿ ಆಗಿರುತ್ತಾರೆ. ಅನುಮತಿ ಪಡೆದ ವ್ಯಕ್ತಿ ಅಥವಾ ಸಂಸ್ಥೆ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿ-ಪಾಸ್ತಿಗೆ ಹಾನಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊಂದಿರುತ್ತಾರೆ. ಪ್ರಾಧಿಕಾರವು ಸುರಕ್ಷಾ ಕ್ರಮಗಳು, ಅಗ್ನಿಶಾಮಕ, ತುರ್ತು ಸೇವೆಗಳು, ಆರೋಗ್ಯ ಇಲಾಖೆ, ಲೋಕೋಪಯೋಗಿ ಇಲಾಖೆಯಿಂದ ಪಡೆಯುವ ಅನುಮತಿ ಪತ್ರಗಳ ಪರಿಶೀಲನಾ ಅಧಿಕಾರವೂ ಹಾಗೂ ಪಡೆದಿರುವ ಬಗ್ಗೆ ಖಚಿತಪಡಿಸಿಕೊಳ್ಳುವ ಅಧಿಕಾರವೂ ಇರುತ್ತದೆ.

ಅನುಮತಿ ಪಡೆಯುವ ವೇಳೆ 1 ಕೋಟಿ ರೂ. ಮೊತ್ತದ ನಷ್ಟಭರ್ತಿ ಬಾಂಡ್ ಬರೆದುಕೊಡುವುದು ಕಡ್ಡಾಯ. ತುರ್ತು ಪರಿಸ್ಥಿತಿಯಲ್ಲಿ ಪ್ರಾಧಿಕಾರ ಕಾರ್ಯಕ್ರಮಕ್ಕೆ ನೀಡಿದ ಅನುಮತಿ ವಾಪಸ್ ಪಡೆಯುವ ಅಧಿಕಾರವೂ ಇರುತ್ತದೆ. ಆದಾಗ್ಯೂ ಕಾರ್ಯಕ್ರಮ ನಡೆಯುವಾಗ ಅಪಘಾತ ಅಥವಾ ದುರಂತ ಸಂಭವಿಸಿದರೆ ಆಯೋಜಕರಿಗೆ 1 ಕೋಟಿ ರೂ. ದಂಡ, 3 ವರ್ಷ ಜೈಲು ಅಥವಾ 7 ವರ್ಷದವರೆಗೆ ವಿಸ್ತರಿಸಬಹುದಾದ ಜೈಲುಶಿಕ್ಷೆ ಕೂಡ ಅನ್ವಯ ಆಗುತ್ತದೆ. ಕಾರ್ಯಕ್ರಮದ ವೇಳೆ ಸುಳ್ಳು ವದಂತಿ, ಹೇಳಿಕೆಗಳು, ಕೃತ್ಯಗಳನ್ನು ಸೃಷ್ಟಿಸುವ ಮೂಲಕ ಹಿಂಸಾಚಾರ, ಬೆದರಿಕೆ ಮತ್ತಿತರ ಕೃತ್ಯಗಳಿಗೆ 3 ವರ್ಷದವರೆಗೆ ಜೈಲು ವಿಧಿಸಬಹುದು ಎಂದು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.

Previous article14,000 ಪೋಕ್ಸೋ ಕೇಸಲ್ಲಿ ಶಿಕ್ಷೆಯಾಗಿದ್ದು ಬರೀ 400!
Next articleICC Rankings: ಐಸಿಸಿ ರ‍್ಯಾಂಕಿಂಗ್‌ನಲ್ಲಿ ರೋಹಿತ್‌-ಕೊಹ್ಲಿ ನಾಪತ್ತೆ!

LEAVE A REPLY

Please enter your comment!
Please enter your name here