ಶಿವಕುಮಾರ್ ಮೆಣಸಿನಕಾಯಿ
ಓಬಳಾಪುರಂ ಮೈನಿಂಗ್ ಕಂಪನಿ (ಓಎಂಸಿ). ಕರ್ನಾಟಕ ಹಾಗೂ ಆಂಧ್ರಪ್ರದೇಶದ ಗಡಿ ಭಾಗದಲ್ಲಿ ಸಂಡೂರು ವಲಯದಲ್ಲಿ ಅಕಮ ಗಣಿಗಾರಿಕೆ ನಡೆಸಿದ ಓಬಳಾಪುರಂ ಮೈನಿಂಗ್ ಕಂಪನಿಯ 884 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳಲು ಅಕ್ರಮ ಗಣಿಗಾರಿಕೆಯ ತನಿಖೆಯನ್ನು ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್‌ಐಟಿ) ಈಗ ಮುಂದಾಗಿದೆ.
ಕರ್ನಾಟಕ ಆಕ್ರಮ ಗಣಿಗಾರಿಕೆ ಮತ್ತು ಅಪರಾಧದ ಉತ್ಪತ್ತಿಗಳಿಂದ ಸ್ವತ್ತನ್ನು ವಶಪಡಿಸಿಕೊಳ್ಳಲು ಮತ್ತು ಜಪ್ತಿಗಾಗಿ ವಸೂಲಾತಿ ಆಯುಕ್ತರ ನೇಮಕಾತಿ ಕಾಯ್ದೆಗೆ ರಾಜ್ಯಪಾಲರು ಹಾಕಿದ್ದು, ಅಂಕಿತ ಹಾಕಿದ್ದು, ರಾಜ್ಯ ಸರಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಎಸ್‌ಐಟಿ ಬಹುದೊಡ್ಡ ಕಾರ್ಯಾಚರಣೆಗೆ ಸಿದ್ಧತೆ ಆರಂಭಿಸಿರುವುದು ಕುತೂಹಲ ಕೆರಳಿಸಿದೆ.
ಓಎಂಸಿ ನಿರ್ದೇಶಕರೂ ಆದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ಮೂವರ ವಿರುದ್ಧದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಈಗಾಗಲೇ ಹೈದರಾಬಾದ್ ನ್ಯಾಂಪಲ್ಲಿ ಸಿಬಿಐ ವಿಶೇಷ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿದ್ದು, ಆಂಧ್ರಪ್ರದೇಶ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆದರೆ ಈ ಪ್ರಕರಣದಲ್ಲಿ 20 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಅಕ್ರಮ ಗಣಿಗಾರಿಕೆ ಮೂಲಕ ಸಾಗಾಟ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಕಂಪನಿಯ ನಿರ್ದೇಶಕರ ಆಸ್ತಿ ಜಪ್ತಿಗೆ ಎಸ್ಐಟಿ ಪ್ರಕ್ರಿಯೆ ಆರಂಭಿಸಿದೆ.
ಈ ಸಂಬಂಧ ಎಸ್‌ಐಟಿಯು ಬೆಂಗಳೂರು ಕೇಂದ್ರ ಕಚೇರಿಯ ಪೊಲೀಸ್ ಅಧೀಕ್ಷಕ ಎಚ್.ನಾಗಭೂಷಣ್ ಎದುರು ಸೋಮವಾರ ಬಳ್ಳಾರಿಯ ಗಣಿ ಉದ್ಯಮಿ ಟಪಾಲ್ ಗಣೇಶ್ ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿದ 1,246 ಪುಟಗಳ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದಾರೆ. ಸೆಪ್ಟೆಂಬರ್ 6ರಂದು ಎಸ್‌ಐಟಿ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಟಪಾಲ್ ಗಣೇಶ್ ದಾಖಲೆಗಳನ್ನು ಸಲ್ಲಿಸಿ, ಹೇಳಿಕೆ ನೀಡಿದ್ದಾರೆ. ಈ ಬೆಳವಣಿಗೆಯು ಎಸ್‌ಐಟಿ ಜಪ್ತಿ ಪ್ರಕ್ರಿಯೆ ಆರಂಭಿಸಲು ಪೂರಕವಾಗಲಿದೆ.
ಓಬಳಾಪುರಂ ಮೈನಿಂಗ್ ಕಂಪನಿ 2008ರಲ್ಲಿ ಕರ್ನಾಟಕ-ಆಂಧ್ರ ಗಡಿಯನ್ನು ಧ್ವಂಸಗೊಳಿಸಿ, ಸಂಡೂರು ಕ್ಲಸ್ಟರ್‌ನಲ್ಲಿರುವ ಎಂಬಿಟಿ ಹಿಂದ್ ಟ್ರೇಡರ್ಸ್, ಎಸ್.ರತ್ನಯ್ಯ ಲೀಸ್ ಮತ್ತು ಟಪಾಲ್ ನಾರಾಯಣರೆಡ್ಡಿ ಲೀಸ್‌ಗಳ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿ 20 ಲಕ್ಷ ಮೆಟ್ರಿಕ್ ಟನ್ ಅದಿರು ಅಗೆದು ರಫ್ತು ಮಾಡಿತ್ತು. ಇದರ ಅಂದಿನ ಮೊತ್ತ 884 ಕೋಟಿ ರೂ. ಮೌಲ್ಯ ಹೊಂದಿದೆ.
ಈ ಪ್ರಕರಣದಲ್ಲಿ ಕಂಪನಿ ನಿರ್ದೇಶಕರ ಆಸ್ತಿಗಳನ್ನು ಮೈನ್ಸ್ ಅಂಡ್ ಮಿನೆರಲ್ಸ್ ರೆಗುಲೇಷನ್ಸ್ ಆ್ಯಕ್ಟ್ (ಎಂಎಂಆರ್‌ಡಿ) ಕಾಯದೆ ಅಡಿ ಜಪ್ತಿ ಮಾಡಬೇಕು ಎಂದು ಉದ್ಯಮಿ ಟಪಾಲ್ ಗಣೇಶ್ ರಾಜ್ಯ ಸರಕಾರದ ಮುಖ ಕಾರ್ಯದರ್ಶಿಗಳಿಗೆ ಆಗಸ್ಟ್ 18ರಂದು ಪತ್ರ ಬರೆದಿದ್ದರು.
ಮುಖ್ಯ ಕಾರ್ಯದರ್ಶಿಗಳ ಕಚೇರಿ ಈ ಪತ್ರವನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗೆ ಕ್ರಮಕ್ಕಾಗಿ ರವಾನಿಸಿದ್ದರು. ಕೈಗಾರಿಕೆ ಇಲಾಖೆ ಆಗಸ್ಟ್ 30ರಂದು ಎಸ್‌ಐಟಿಗೆ ಪತ್ರ ಕಳಿಸಿದ ಬಳಿಕ ಎಸ್‌ಐಟಿ ತನಿಖಾಧಿಕಾರಿಗಳು ಟಪಾಲ್ ಗಣೇಶ್‌ಗೆ ನೋಟಿಸ್ ನೀಡಿದ್ದರು.
ಈ ಮಧ್ಯೆ ರಾಜ್ಯ ಸರಕಾರ ಆಕ್ರಮ ಗಣಿಗಾರಿಕೆಯಿಂದ ಗಳಿಸಿದ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳಲು ರಿಕವರಿ ಕಮಿಷನರ್ ನೇಮಕಕ್ಕೆ ಮುಂದಾಗಿದೆ. ಎಸ್‌ಐಟಿ ಹೊಸ ಕಾಯ್ದೆಯ ಮೂಲಕವೇ ಓಎಂಸಿ ಕಂಪನಿಯ ನಿರ್ದೇಶಕರ 884 ಕೋಟಿ ರೂ.ಗಳ ರಾಜ್ಯ, ಹಾಗೂ ಹೊರರಾಜ್ಯದಲ್ಲಿರುವ ಅಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮಕೈಗೊಳ್ಳಲಿದೆ ಎಂದು ಸರಕಾರದ ಉನ್ನತ ಮೂಲಗಳು ತಿಳಿಸಿವೆ.
ಓಎಂಸಿಯಲ್ಲಿ ಯಾರಿದ್ದಾರೆ?: ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಓಎಂಸಿ ಕಂಪನಿಯ ನಿರ್ದೇಶಕರಾಗಿದ್ದಾರೆ. ಬಿ.ವಿ.ಶ್ರೀನಿವಾಸ್ ರೆಡ್ಡಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಇವರಿಬ್ಬರಲ್ಲದೇ ಈ ಕಂಪನಿ ವಿರುದ್ಧದ ಪ್ರಕರಣದಲ್ಲಿ ಆಂಧ್ರ ಪ್ರದೇಶದ ಮೈನಿಂಗ್ ಡೈರಕ್ಟರ್ ವಿ.ಡಿ.ರಾಜಗೋಪಾಲ್ ಹಾಗೂ ಉಪ ನಿರ್ದೇಶಕ ಕೆ.ಮೆಫಾಜ್ ಅಲಿಖಾನ್ ಕೂಡ ಶಿಕ್ಷೆಗೆ ಒಳಗಾಗಿದ್ದಾರೆ. ನ್ಯಾಂನಲ್ಲಿ ಸಿಬಿಐ ವಿಶೇಷ ಕೋರ್ಟ್ ಆದೇಶಕ್ಕೆ ಸದ್ಯ ಆಂದ್ರ ಹೈಕೋರ್ಟ್ ತಡೆ ನೀಡಿದೆ. ಆದರೆ ತಡೆಯಾಜ್ಞೆಗೂ, ಆಸ್ತಿಜಪ್ತಿಗೂ ಸಂಬಂಧ ಇಲ್ಲ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಈ ಕುರಿತು ಗಣಿ ಉದ್ಯಮ ಟಪಾಲ್ ಗಣೇಶ್ ಮಾತನಾಡಿ, “ಸರಿಸುಮಾರು ಒಂದೂವರೆ ದಶಕಗಳಿಂದ ಕರ್ನಾಟಕದ ಗಡಿ ಧ್ವಂಸಗೊಳಿಸಿದ ಓಎಂಸಿ ವಿರುದ್ಧ ಹೋರಾಟ ನಡೆಯುತ್ತಿದೆ. ರಾಜ್ಯದ ಗಣಿ ಸಂಪತ್ತನ್ನು ಅಕ್ರಮವಾಗಿ ಲೂಟಿ ಮಾಡಿರುವ ಕಂಪನಿಯ ಆಸ್ತಿ ಜಪ್ತಿ ಮಾಡಿಕೊಳ್ಳಬೇಕು ಎಂಬುದು ರಾಜ್ಯ ಸರಕಾರಕ್ಕೆ ನನ್ನ ಒತ್ತಾಯವಾಗಿದೆ. ಎಸ್‌ಐಟಿ ಎದುರು ಸೂಕ್ತ ದಾಖಲೆ ಒದಗಿಸಿದ್ದೇನೆ” ಎಂದು ಹೇಳಿದ್ದಾರೆ.