Government Employee: ಸರ್ಕಾರಿ ಅಧಿಕಾರಿಗಳ ವಿದೇಶ ಅಧ್ಯಯನ ಪ್ರವಾಸ ರದ್ದು!

0
80

Government Employee. ಮಹತ್ವದ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಿ ಅಧಿಕಾರಿಗಳ ವಿದೇಶ ಅಧ್ಯಯನ ಪ್ರವಾಸಕ್ಕೆ ತಡೆ ನೀಡಿದ್ದಾರೆ. ತತ್‌ಕ್ಷಣದಿಂದ ಜಾರಿಗೆ ಬರುವಂತೆ 2025ರ ಅಂತ್ಯದ ತನಕ ಯಾವುದೇ ಅಧಿಕಾರಿಗಳು ವಿದೇಶ ಅಧ್ಯಯನ ಪ್ರವಾಸ ಹೋಗುವಂತಿಲ್ಲ.

ಹಲವು ಸರ್ಕಾರಿ ಅಧಿಕಾರಿಗಳು ವಿದೇಶ ಅಧ್ಯಯನ ಪ್ರವಾಸ ಮಾಡಿ ಬಂದು ವರದಿ ನೀಡಲು ವಿಫಲರಾಗಿದ್ದಾರೆ. ಆದ್ದರಿಮದ ತತ್‌ಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಸರ್ಕಾರಿ ಅಧಿಕಾರಿಗಳ ವಿದೇಶ ಅಧ್ಯಯನ ಪ್ರವಾಸದ ಮೇಲೆ ನಿರ್ಬಂಧ ಹೇರಲಾಗಿದೆ. ಈ ಆದೇಶ 2025ರ ಅಂತ್ಯದ ತನಕ ಜಾರಿಯಲ್ಲಿರುತ್ತದೆ ಎಂದು ಆದೇಶ ಹೇಳಿದೆ.

ಸೆಪ್ಟೆಂಬರ್ 23ರಂದು ಈ ಕುರಿತು ಸುತ್ತೋಲೆ ಹೊರಡಿಸಲಾಗಿದೆ. ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಸಿದ್ಧಪಡಿಸಿದ್ದ ಸುತ್ತೋಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ಅನುಮೋದನೆ ನೀಡಿದ್ದಾರೆ.

ಈ ಸುತ್ತೋಲೆಯಲ್ಲಿ ಆಗಸ್ಟ್ 2024 ರಿಂದ ಜುಲೈ 2025ರ ತನಕ ಹಲವು ಅಧಿಕಾರಿಗಳು ವಿದೇಶಕ್ಕೆ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ. ಆದರೆ ಅವರು ವಾಪಸ್ ಆದ ಒಂದು ವಾರದಲ್ಲಿಯೇ ಅಧ್ಯಯನ ವರದಿ, ಶಿಫಾರಸುಗಳನ್ನು ಸಲ್ಲಿಕೆ ಮಾಡಬೇಕು ಎಂದು ಸೂಚನೆ ನೀಡಲಾಗಿತ್ತು. ಆದರೆ ಸಲ್ಲಿಕೆ ಮಾಡಿಲ್ಲ ಎಂದು ತಿಳಿಸಲಾಗಿದೆ.

ಅಲ್ಲದೇ ಈ ಸುತ್ತೋಲೆಯಲ್ಲಿ ಎಲ್ಲಾ ಇಲಾಖೆಗಳ ವ್ಯಾಪ್ತಿಗೆ ಒಳಪಡುವ ಸರ್ಕಾರಿ ನೌಕರರು ಆಗಸ್ಟ್ 2024 ರಿಂದ ಜುಲೈ 2025ರ ತನಕ ವಿದೇಶಕ್ಕೆ ಅಧ್ಯಯನ ಪ್ರವಾಸ ಕೈಗೊಂಡಿದ್ದರೆ, ಅವರು ತಕ್ಷಣ ವರದಿ, ಅಧ್ಯಯನ ವರದಿ ಮತ್ತು ಶಿಫಾರಸು ಸಲ್ಲಿಕೆ ಮಾಡಬೇಕು ಎಂದು ಸೂಚಿಸಲಾಗಿದೆ.

ಯಾವುದೇ ಸರ್ಕಾರಿ ಅಧಿಕಾರಿ ಮುಂದಿನ ವಿದೇಶ ಅಧ್ಯಯನ ಪ್ರವಾಸ ಕೈಗೊಳ್ಳುವ ಮೊದಲು ಈ ಹಿಂದಿನ ಪ್ರವಾಸದ ವರದಿ, ಶಿಫಾರಸುಗಳನ್ನು ಕಡ್ಡಾಯವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಸಲ್ಲಿಸಬೇಕು. ಇಲ್ಲವಾದಲ್ಲಿ ಮುಂದಿನ ಪ್ರವಾಸಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ಮಹಾಂತೇಶ್ ಸಹಿ ಮಾಡಿರುವ ಸುತ್ತೋಲೆ, ಮುಂದಿನ ಆದೇಶ ತನಕ ಯಾವುದೇ ಅಧಿಕಾರಿಗಳ ವಿದೇಶ ಅಧ್ಯಯನ ಪ್ರವಾಸ ಇಲ್ಲ ಎಂದು ತಿಳಿಸಿದೆ.

ಸುತ್ತೋಲೆಯ ವಿವರ: ಈ ಸುತ್ತೋಲೆ ವಿದೇಶ ಪ್ರವಾಸಗಳನ್ನು ನಿರ್ಭಂಧಿಸುವ ಕುರಿತು ಎಂಬ ವಿಷಯವನ್ನು ಒಳಗೊಂಡಿದ್ದು, ಮಾನ್ಯ ಮುಖ್ಯ ಮಂತ್ರಿಯವರಿಂದ ಅನುಮೋದಿತ ಎಂದು ಹೇಳಿದ್ದು, ಟಿ. ಮಹಂತೇಶ್, ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-1) ಸಹಿ ಒಳಗೊಂಡಿದೆ.

2024ನೇ ಸಾಲಿನ ಆಗಸ್ಟ್ ತಿಂಗಳಿನಿಂದ 2025ರ ಜುಲೈ ತಿಂಗಳವರಗೆ ರಾಜ್ಯ ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಅಧಿಕೃತ ವಿದೇಶ ಪ್ರವಾಸ ಕೈಗೊಂಡು ಅಧ್ಯಯನ ನಡೆಸಿ, ಕಲಿಕೆ ಹಾಗು ಶಿಫಾರಸ್ಸುಗಳೊಂದಿಗೆ ಸರ್ಕಾರಕ್ಕೆ ಅಧ್ಯಯನ ವರದಿಯನ್ನು ಒಂದು ವಾರದೊಳಗಾಗಿ ಸಲ್ಲಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಂದ ಸೂಚಿತವಾಗಿರುತ್ತದೆ.

ಆದರೆ, ಹಲವು ಅಧಿಕಾರಿಗಳು ಕೈಗೊಂಡಿರುವ ಅಧಿಕೃತ ವಿದೇಶ ಪ್ರವಾಸದ ವರದಿಗಳನ್ನು ಸಲ್ಲಿಸದಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಮುಂಬರುವ ದಿನಗಳಲ್ಲಿ ಅಧಿಕೃತ ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ಪ್ರಸ್ತಾವನೆಯನ್ನು ಸಲ್ಲಿಸುವ ಮುನ್ನ ಕಡ್ಡಾಯವಾಗಿ ಈ ಹಿಂದೆ ಕೈಗೊಂಡಿರುವ ಪ್ರವಾಸಗಳ ಕಲಿಕೆ ಹಾಗೂ ಅನುಷ್ಠಾನ ವರದಿ ನೀಡಿದ್ದಲ್ಲಿ ಮಾತ್ರ ಹಾಲಿ ಪ್ರವಾಸದ ಪ್ರಸ್ತಾವನೆಗೆ ಅನುಮತಿ ನೀಡುವ ಕುರಿತು ಪರಿಶೀಲಿಸಲಾಗುವುದೆಂದು ಈ ಮೂಲಕ ಸೂಚಿಸಲಾಗಿದೆ.

ಮುಂದುವರೆದು, ಈ ವರ್ಷ 2025ನೇ ಸಾಲಿನ ಅಂತ್ಯದವರೆಗೂ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಧಿಕೃತ ವಿದೇಶ ಪ್ರವಾಸಗಳನ್ನು ನಿರ್ಭಂಧಿಸಲಾಗಿದೆ ಎಂದು ಹೇಳಿದೆ.

Previous articleAsia Cup 2025: ಬುಧವಾರವೇ ಫೈನಲ್‌ಗೇರುವುದೇ ಭಾರತ?, ಬಾಂಗ್ಲಾ ವಿರುದ್ಧ ಗೆಲುವು ಅಗತ್ಯ
Next articleದಾವಣಗೆರೆ: ಮಕ್ಕಳ ಸುಪರ್ದಿಗಾಗಿ ಪತ್ನಿಗೆ 20 ಬಾರಿ ಚಾಕು ಇರಿದ ಪತಿ!

LEAVE A REPLY

Please enter your comment!
Please enter your name here