H.Y. Meti: ರಾಜ್ಯದ ಹಿರಿಯ ರಾಜಕಾರಣಿ, ಬಾಗಲಕೋಟೆ ಶಾಸಕ ಹಾಗೂ ಮಾಜಿ ಸಚಿವ ಎಚ್.ವೈ. ಮೇಟಿ (79) ಅವರು ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅವರ ನಿಧನದಿಂದ ರಾಜ್ಯ ರಾಜಕೀಯದಲ್ಲಿ ಒಂದು ತಲೆಮಾರಿನ ಅನುಭವಿ ನಾಯಕನ ಕೊಂಡಿ ಕಳಚಿದಂತಾಗಿದೆ.
ಮೇಟಿ ರಾಜಕೀಯ ಹಾದಿ: 1946ರ ಅಕ್ಟೋಬರ್ 9ರಂದು ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರದಲ್ಲಿ ಜನಿಸಿದ ಹನುಮಂತಪ್ಪ ಯಲ್ಲಪ್ಪ ಮೇಟಿ ಅವರು, ತಮ್ಮ ರಾಜಕೀಯ ಜೀವನವನ್ನು ಸ್ಥಳೀಯ ಮಟ್ಟದಿಂದಲೇ ಆರಂಭಿಸಿದರು. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸಿ, ಜನರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.
1989ರಲ್ಲಿ ಗುಳೇದಗುಡ್ಡ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಮೇಟಿ, ನಂತರ ಹಿಂತಿರುಗಿ ನೋಡಿದ್ದೇ ಇಲ್ಲ. 1994ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಎರಡನೇ ಬಾರಿಗೆ ಗೆಲುವು ಸಾಧಿಸಿದರು ಮತ್ತು ದೇವೇಗೌಡರ ಸಂಪುಟದಲ್ಲಿ ಅರಣ್ಯ ಸಚಿವರಾಗಿ ಕಾರ್ಯನಿರ್ವಹಿಸಿದರು. 1996ರಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿಯೂ ಆಯ್ಕೆಯಾಗಿದ್ದರು.
ಕಾಂಗ್ರೆಸ್ ಸೇರ್ಪಡೆ ಮತ್ತು ಸಚಿವ ಸ್ಥಾನ: 2008ರಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಮೇಟಿ ಅವರು, 2013ರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಗೆಲುವು ಸಾಧಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಅಬಕಾರಿ ಸಚಿವರಾಗಿ ಮಹತ್ವದ ಜವಾಬ್ದಾರಿಯನ್ನು ನಿಭಾಯಿಸಿದ್ದರು.
ಆರೋಗ್ಯದ ವಿಚಾರಣೆ ಮತ್ತು ಗಣ್ಯರ ಸಂತಾಪ: ಮೇಟಿ ಅವರು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖುದ್ದು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಅವರ ನಿಧನಕ್ಕೆ ಕಾಂಗ್ರೆಸ್ ನಾಯಕರು ಸೇರಿದಂತೆ ರಾಜ್ಯದ ಗಣ್ಯರು ಕಂಬನಿ ಮಿಡಿದಿದ್ದಾರೆ. ಎಚ್.ವೈ. ಮೇಟಿ ಸರಳ ವ್ಯಕ್ತಿತ್ವ, ನೇರ ನುಡಿ ಮತ್ತು ಅಭಿವೃದ್ಧಿ ಪರ ಚಿಂತನೆಗಳಿಂದಾಗಿ ಅವರು ಬಾಗಲಕೋಟೆ ಭಾಗದಲ್ಲಿ ಅಪಾರ ಜನಮನ್ನಣೆ ಗಳಿಸಿದ್ದರು. ಅವರ ಅಗಲಿಕೆಯು ರಾಜ್ಯ ರಾಜಕೀಯಕ್ಕೆ ಮತ್ತು ವಿಶೇಷವಾಗಿ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ.
                
























