ಬೆಂಗಳೂರು: ಸದನದಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಭಾರೀ ಸಂಚಲನ ಮೂಡಿಸಿದ್ದರು. ಈ ನಡೆ ರಾಜ್ಯ ಮತ್ತು ರಾಷ್ಟ್ರ ರಾಜಕೀಯದಲ್ಲಿ ಸುದ್ದಿ ಮಾಡಿತ್ತು. ಈಗ ಅವರು ಕ್ಷಮೆಯಾಚನೆ ಮಾಡಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಡಿ.ಕೆ.ಶಿವಕುಮಾರ್, “ನಾನು ಏನೂ ತಪ್ಪು ಮಾಡಿಲ್ಲ. ಆರ್‌ಎಸ್‌ಎಸ್ ಗೀತೆ ಹಾಡಿದ್ದಕ್ಕೆ ನನ್ನ ಕಾಂಗ್ರೆಸ್ ಕಾರ್ಯಕರ್ತರಿಗೆ, ನಾಯಕರಿಗೆ, ಇಂಡಿಯಾ ಮೈತ್ರಿಕೂಟದ ನಾಯಕರಲ್ಲಿ ಕ್ಷಮೆ ಕೇಳುತ್ತೇನೆ” ಎಂದರು.
ಡಿ.ಕೆ.ಶಿವಕುಮಾರ್, “ನಾನು ಯಾರಿಗೂ ಹೆದರಿಲ್ಲ ಮತ್ತು ಹೆದರಿ ಕ್ಷಮೆ ಕೇಳುತ್ತಿಲ್ಲ. ಪಾಸಿಂಗ್ ರೆಫರೆನ್ಸ್ ಮೂಲಕ ಹಾಡು ಹೇಳಿದ್ದೇನೆ. ಪಕ್ಷದ ನನ್ನ ನಿಷ್ಠೆ ಬಗ್ಗೆ ಯಾರು ಪ್ರಶ್ನೆ ಮಾಡುವುದು ಬೇಡ. ಅದನ್ನು ಪ್ರಶ್ನೆ ಮಾಡಿದರೆ ಅವರು ಮೂರ್ಖರು” ಎಂದು ತಿಳಿಸಿದರು.
“ನಾನು ಹುಟ್ಟು ಕಾಂಗ್ರೆಸಿಗ ಮತ್ತು ಸಾಯೋದು ಕಾಂಗ್ರೆಸ್‌ನಲ್ಲೇ. ನನ್ನ ಧರ್ಮ ನಾನು ಬಿಡಲು ತಯಾರು ಇಲ್ಲ. ನಾನು ಈ ಧರ್ಮದಲ್ಲಿ ಹುಟ್ಟಿದ್ದೇನೆ. ಆದರೆ ಎಲ್ಲಾ ಧರ್ಮಗಳ ಮೇಲೆ ನಂಬಿಕೆ ಇದೆ” ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
“ರಾಹುಲ್ ಗಾಂಧಿ ಏನೂ ಕೇಳಿಲ್ಲ. ಯಾರೂ ಏನೂ ಮಾತನಾಡಿಲ್ಲ. ಈ ವಿಚಾರಕ್ಕೆ ಇಲ್ಲಿಗೆ ತೆರೆ ಎಳೆಯೋಣ. ಇದನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವವರು ಮಾಡಲಿ” ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
“ನಾನು ಹುಟ್ಟು ಕಾಂಗ್ರೆಸಿಗ ಮತ್ತು ಸಾಯೋದು ಕಾಂಗ್ರೆಸ್‌ನಲ್ಲೇ. ನನ್ನ ಧರ್ಮ ನಾನು ಬಿಡಲು ತಯಾರು ಇಲ್ಲ. ನಾನು ಈ ಧರ್ಮದಲ್ಲಿ ಹುಟ್ಟಿದ್ದೇನೆ. ಆದರೆ ಎಲ್ಲಾ ಧರ್ಮಗಳ ಮೇಲೆ ನಂಬಿಕೆ ಇದೆ” ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
“ಬೆಳಗ್ಗೆ ಎದ್ದಾಗ ಅಜ್ಜಯ್ಯನನ್ನು ನೋಡ್ತಿನಿ. ಫಾದರ್, ಮೌಲ್ವಿಗಳನ್ನು ಭೇಟಿ ಮಾಡುತ್ತೇನೆ. ಇಲ್ಲಿಗೆ ಬರುವ ಮುನ್ನ ಮಂಜುನಾಥನ ಬೊಟ್ಟು ಇಟ್ಟುಕೊಂಡಿದ್ದೇನೆ. ನಾನು ಜಾತ್ಯಾತೀತ ವ್ಯಕ್ತಿ” ಎಂದರು.
ಆರ್‌ಎಸ್‌ಎಸ್ ಗೀತೆ ಹಾಡಿದ ವಿಚಾರದಲ್ಲಿ ಪಕ್ಷದಲ್ಲಿ ವಿರೋಧ ಮಾಡಿದ ಕುರಿತು ಮಾತನಾಡಿದ ಅವರು, “ಅವರು ನನ್ನ ಹಿತೈಷಿಗಳು, ಅವರ ಸಲಹೆ ಪಡೆಯೋಣ. ಹರಿಪ್ರಸಾದ್ ಸಲಹೆ ಪಡೆಯುತ್ತೇನೆ” ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಡಿಕೆಶಿ ಪೋಸ್ಟ್: ತಮ್ಮ ಹೇಳಿಕೆ ಕುರಿತು ಡಿ.ಕೆ.ಶಿವಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಸಹ ಹಾಕಿದ್ದಾರೆ. ‘ನಾನು ಹುಟ್ಟು ಕಾಂಗ್ರೆಸ್ಸಿಗ, ನಾನು ಕಾಂಗ್ರೆಸ್ಸಿಗನಾಗಿಯೇ ಸಾಯುತ್ತೇನೆ!’ ಎಂದು ಹೇಳಿದ್ದಾರೆ.

ಬಿ.ಕೆ.ಹರಿಪ್ರಸಾದ್ ಹೇಳಿಕೆ: ಡಿ.ಕೆ.ಶಿವಕುಮಾರ್ ಆರ್‌ಎಸ್‌ಎಸ್ ಗೀತೆ ಹಾಡಿದ್ದಕ್ಕೆ ಮಾಜಿ ಸಚಿವ ಕೆ.ಎನ್.ರಾಜಣ್ಣ, ಪಕ್ಷದ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಮುಂತಾದವರು ತೀವ್ರ ಆಕ್ಷೇಪವನ್ನು ಎತ್ತಿದ್ದರು. ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದರು.
ಬಿ.ಕೆ.ಹರಿಪ್ರಸಾದ್ ಮಾತನಾಡಿ, “ಡಿಸಿಎಂ ಡಿಕೆ ಶಿವಕುಮಾರ್ ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದ್ದನ್ನು ಬಿಜೆಪಿಯವರು ಸಮರ್ಥಿಸಿಕೊಳ್ಳುತ್ತಾರೆ. ಹಾಗೆಂದು, ಅವರು ಉಪ ಮುಖ್ಯಮಂತ್ರಿಗಳಾಗಿ ಅದನ್ನು ಹಾಡಿದ್ದರೆ ತಕರಾರಿಲ್ಲ. ಆದರೆ, ಕೆಪಿಸಿಸಿ ಅಧ್ಯಕ್ಷರಾಗಿ ಹಾಡಿದ್ದಕ್ಕೆ ಕ್ಷಮೆ ಕೇಳಬೇಕು” ಎಂದು ಹೇಳಿದ್ದರು.
“ಆರ್‌ಎಸ್‌ಎಸ್ ಅನ್ನು ಈ ದೇಶದಲ್ಲಿ ಮೂರು ಬಾರಿ ಈಗಾಗಲೇ ನಿಷೇಧ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಡೆಪ್ಯುಟಿ ಮುಖ್ಯಮಂತ್ರಿಗಳಾಗಿ ಸಂಘದ ಪ್ರಾರ್ಥನೆ ಮಾಡಿದ್ದರೆ ನಮ್ಮದೇನು ಅಭ್ಯಂತರವಿಲ್ಲ. ಯಾಕೆಂದರೆ ಸರ್ಕಾರ ಎಂಬುದು ಒಂದು ಪಕ್ಷದ್ದಲ್ಲ, ಇಡೀ ಏಳು ಕೋಟಿ ಕರ್ನಾಟಕ ಜನತೆಯ ಸರ್ಕಾರ” ಎಂದು ತಿಳಿಸಿದ್ದರು.
“ಕಾಂಗ್ರೆಸ್ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಇರುವಾಗ ಈ ರೀತಿ ಹೇಳುವ ಹಾಗಿಲ್ಲ. ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಹೇಳಿದ್ದರೆ ಅವರು ಕ್ಷಮೆ ಕೇಳಬೇಕಾಗುತ್ತದೆ. ಯಾಕೆಂದರೆ, ಮಹಾತ್ಮ ಗಾಂಧಿಯವರನ್ನು ಕೊಂದಂತ ಸಂಘಟನೆ ಅದು. ಆ ಸಂಘಟನೆಯ ಪ್ರಾರ್ಥನೆ ಮಾಡುವುದು ಸರಿಯಲ್ಲ” ಎಂದು ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದ್ದರು.