ಸೈಬರ್‌ ಅಪರಾಧ ಹೆಚ್ಚಳ: 3.5 ಸಾವಿರ ಕೋಟಿ ರೂ.ಗೂ ಅಧಿಕ ವಂಚನೆ!

0
50

ಬೆಂಗಳೂರು: ಸೈಬರ್ ಅಪರಾಧಗಳ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. 2023ರಿಂದ ಮೂರು ವರ್ಷಗಳ ಅವಧಿಯಲ್ಲಿ 53,345 ಪ್ರಕರಣಗಳು ದಾಖಲಾಗಿದ್ದು, ವಂಚನೆಯಾಗಿರುವ ಮೊತ್ತ ಮೂರುವರೆ ಸಾವಿರ ಕೋಟಿ ರೂ.ಗೂ ಅಧಿಕ.

ಈ ಆತಂಕ ಕಾರಿ ವಿಷಯವನ್ನು ಪ್ರಕಟಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ ಸೈಬರ್ ಅಪರಾಧಗಳು ಗೃಹ ಇಲಾಖೆಗೂ ಒಂದು ಸವಾಲಾಗಿ ಪರಿಗಣಿಸಿವೆ ಎಂದರು. ಕಲಾಪದಲ್ಲಿ ಸದಸ್ಯ ಎಸ್.ರವಿ ಪಶ್ನೆಗೆ ಉತ್ತರಿಸಿ, 2022 ರಲ್ಲಿ 6007 ಪ್ರಕರಣ, 2024 ರಲ್ಲಿ 2858 ಪ್ರಕರಣ ಹಾಗೂ ಪ್ರಸಕ್ತ ವರ್ಷದಲ್ಲಿ 300 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ಪ್ರಸಕ್ತ ವರ್ಷ ಸರಿಸುಮಾರು 172 ಕೋಟಿ ರೂ. ಹಣವನ್ನು ರಿಕವರಿ ಮಾಡಲಾಗಿದೆ ಎಂದರು.

ಸೈಬರ್ ಅಪರಾಧ ಎನ್ನವುದು ಗೃಹ ಇಲಾಖೆಗೆ ಅಷ್ಟೇ ಅಲ್ಲ ಇಡೀ ಜಗತ್ತಿಗೆ ಸವಾಲಾಗಿದೆ, ಯಾರು ಎಲ್ಲಿ ಕುಳಿತು ಆಪರೇಟ್ ಮಾಡುತ್ತಾರೋ ಎಂಬುದು ತಿಳಿಯದಾಗಿದೆ, ನಮ್ಮ ಆಕೌಂಟ್‌ನಲ್ಲಿರುವ ಹಣ ಸೇಫ್ ಆಗಿ ಉಳಿದಿದೆಯೋ ಇಲ್ಲದಂತಹ ಪರಿಸ್ಥಿತಿ ಸೃಜನೆಯಾಗಿದೆ ಎಂಬ ಆತಂಕವನ್ನು ಸ್ವತ: ಗೃಹ ಸಚಿವರೇ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ಪರಿಣಿತರ ನೇಮಕಕ್ಕೆ ಚಿಂತನೆ: ಈ ಸೈಬರ್ ಅಪರಾಧಗಳನ್ನು ಪತ್ತೆ ಹಚ್ಚಲು ವೃತ್ತಿಪರ ನಿಪುಣರೇ ಅಗತ್ಯ, ಪದವೀಧರ ಪಿಎಸ್‌ಐ-ಸಿಪಿಐಗಳಿಂದ ಈ ಪ್ರಕರಣಗಳನ್ನು ಪತ್ತೆ ಹಚ್ಚುವುದು ಕಷ್ಟ ಸಾಧ್ಯ. ಹೀಗಾಗಿ ಬಿ.ಇ.-ಎಂಟೆಕ್ ಪರಿಣಿತರಾಗಿರುವವರನ್ನೇ ವಿಶೇಷ ನೇಮಕಾತಿ ಮಾಡಿ ಈ ಪ್ರಕರಣಗಳ ತನಿಖೆ ನಡೆಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಚಿಂತನೆ ನಡೆಸಲಿದೆ ಎಂದು ಇದೇ ಸಂದರ್ಭದಲ್ಲಿ ಡಾ.ಜಿ.ಪರಮೇಶ್ವರ ಪ್ರಕಟಿಸಿದರು.

ಸೈಬರ್ ಅಪರಾಧಕ್ಕಿಂತ ಮಾದಕ ದ್ರವ್ಯ ಪ್ರಕರಣಗಳು ಆಘಾತಕಾರಿಯಾಗಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿ 14485 ಪ್ರಕರಣಗಳು ದಾಖಲಾಗಿವೆ, ಈ ಮಾದಕ ದ್ರವ್ಯ ಜಾಲವನ್ನು ಮಟ್ಟ ಹಾಕಲು ಸರ್ಕಾರ ಸರ್ವವಿಧದಲ್ಲಿಯೂ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಆಗ ಬಿಜೆಪಿ ಸದಸ್ಯ ಎನ್. ರವಿಕುಮಾರ ಕೋರಿಯ‌ರ್ ಮೂಲಕವೂ ಮಾದಕ ವಸ್ತುಗಳು ಪೂರೈಕೆಯಾಗುತ್ತಿವೆ. ಇದು ಗಂಭೀರ ಸ್ವರೂಪ, ಇಡೀ ಮನೆತನವನ್ನೇ ನಾಶ ಮಾಡುವ ಪಿಡುಗಾಗಿದೆ ಎಂದರು.

ಕಾಲ್ತುಳಿತ, ಸರ್ಕಾರ ತಪ್ಪಿಲ್ಲ: ಆರ್‌ಸಿಬಿ ವಿಜಯೋತ್ಸವ ವೇಳೆ ದುರಂತ ಸಂಭವಿಸಿದ ನಂತರ ಸರ್ಕಾರ ತೆಗೆದುಕೊಂಡ
ಕ್ರಮಗಳು ಅತ್ಯಂತ ಸಮರ್ಪಕವಾಗಿವೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ನಡೆಸಿದ್ದು ತಪ್ಪಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಗುರುವಾರ ವಿಧಾನಸಭೆಯಲ್ಲಿ ಸಮರ್ಥನೆ ಮಾಡಿಕೊಂಡರು.

ಆರ್‌ಸಿಬಿ ವಿಜಯೋತ್ಸವ ವೇಳೆ (ಜುಲೈ 4ರಂದು) ಸಂಭವಿಸಿದ ಕಾಲ್ತುಳಿತ ಮತ್ತು 11 ಜನರ ಸಾವಿನ ಬಗ್ಗೆ ಪ್ರತಿಪಕ್ಷ ಬಿಜೆಪಿ ನಡೆಸಿದ ವಿಶೇಷ ಚರ್ಚೆಗೆ ಉತ್ತರಿಸಿದ ಅವರು, ಪ್ರಬಲ ಜನಸಂದಣಿ ನಿಯಂತ್ರಣ ಕಾನೂನು ರೂಪಿಸುತ್ತಿರುವುದು ಮುಂದೆಂದೂ ಇಂತಹ ದುರ್ಘಟನೆಗಳು ಮರುಕಳಿಸಬಾರದು ಎಂಬ ಕಾರಣಕ್ಕೇ ಎಂದರು.

ವಿಷಯ ಕೋರ್ಟ್‌ನಲ್ಲಿರುವುದರಿಂದ ಈ ಬಗ್ಗೆ ಹೆಚ್ಚಿನ ವಿವರಗಳು ನೀಡಲಾಗದು. ಆದರೆ ಇಂತಹ ಕಾರ್ಯಕ್ರಮಗಳ ಆಯೋಜಕರಿಗಾಗಿ ಕಾನೂನಿನ ಜೊತೆಗೆ, ಎಸ್‌ಓಪಿಗಳನ್ನು (ಆಯೋಜನೆಯ ಮಾರ್ಗಸೂಚಿಗಳು) ರೂಪಿಸಲಾಗುತ್ತಿದೆ. ಈ ಮಾರ್ಗಸೂಚಿಯ ಕರಡು ಅಂತಿಮ ಹಂತದಲ್ಲಿದೆ. ಅಲ್ಲದೇ ಇನ್ನು ಮುಂದೆ ಕ್ರಿಕೆಟ್ ಸೇರಿದಂತೆ ಎಲ್ಲ ಕ್ರೀಡಾ ಸಂಸ್ಥೆಗಳೂ ಸರ್ಕಾರಕ್ಕೆ ಲೆಕ್ಕಪತ್ರಗಳನ್ನು ಕೊಡಬೇಕು ಎಂಬುದೂ ಸೇರಿದಂತೆ ಕೆಲವಾರು ನಿಯಂತ್ರಣ ನಿಬಂಧನೆಗಳನ್ನು ಹಾಕಲಾಗುವುದು ಎಂದು ಪರಮೇಶ್ವರ ತಿಳಿಸಿದರು.

ಹೈಕೋರ್ಟ್‌ ತೀರ್ಪಿನ ನಂತರ ಇನ್ನಷ್ಟು ನಿರ್ಣಾಯಕ ಕ್ರಮಗಳು ಆಗಲಿವೆ. ಈ ಹಿಂದೆ ಐಪಿಎಲ್‌ನಲ್ಲಿ ಗುಜರಾತ್ ತಂಡ ಗೆದ್ದಾಗ ಅಲ್ಲಿನ ಸರ್ಕಾರ ಕೂಡ ಸನ್ಮಾನಿಸಿತ್ತು. ಪ್ರಧಾನಿ ಮೋದಿ ಅವರೂ ಭಾಗವಹಿಸಿದ್ದರು. ಇದೇ ರೀತಿ ಕೋಲ್ಕತ್ತಾ ಹಾಗೂ ಚೆನ್ನೈ ತಂಡಗಳು ಗೆದ್ದಾಗ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ ಸನ್ಮಾನ ಸಮಾರಂಭ ನಡೆದಿದ್ದವು ಎಂದರು.

Previous articleGovernment Employee: ಸರ್ಕಾರಿ ನೌಕರರು ಹಬ್ಬದ ಮುಂಗಡ ಪಡೆಯಲು ಅರ್ಜಿ ಸಲ್ಲಿಕೆ ಹೇಗೆ?
Next articleಮುತ್ತತ್ತಿ ಜಾತ್ರೆಗೆ ಅಪಾರ ಭಕ್ತರು, ತೆಂಗಿನಕಾಯಿ ಹಿಡಿಯುವ ಸ್ಪರ್ಧೆ ಆಕರ್ಷಣೆ

LEAVE A REPLY

Please enter your comment!
Please enter your name here