ಆಸ್ತಿ ಮಾಲೀಕರಿಗೆ ಪ್ರಮುಖವಾದ ಮಾಹಿತಿಯೊಂದಿದೆ. ಕರ್ನಾಟಕ ಸರ್ಕಾರ ಆಗಸ್ಟ್ 31ರಿಂದಲೇ ಜಾರಿಗೆ ಬರುವಂತೆ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಏರಿಕೆ ಮಾಡಲಿದೆ. ಆದ್ದರಿಂದ ಆಸ್ತಿ ನೋಂದಣಿ ಶುಲ್ಕ ಏರಿಕೆಯಾಗಲಿದೆ.
ಕರ್ನಾಟಕದ ಜನರು ಈಗಾಗಲೇ ಹಾಲು, ನೀರು, ವಿದ್ಯುತ್, ನಮ್ಮ ಮೆಟ್ರೋ, ಬಸ್ ಪ್ರಯಾಣ ದರ ಏರಿಕೆಯ ಬಿಸಿ ಎದುರಿಸಿದ್ದಾರೆ. ಈಗ ಭಾನುವಾರದಿಂದ ಹೊಸ ಬೆಲೆ ಏರಿಕೆ ತಟ್ಟಲಿದೆ. ರಾಜ್ಯ ಸರ್ಕಾರ ಆಸ್ತಿ ನೋಂದಣಿ ಶುಲ್ಕವನ್ನು ಶೇ.1ರಿಂದ ಶೇ.2ಕ್ಕೆ ಹೆಚ್ಚಳ ಮಾಡಿದೆ. ಇದರಿಂದಾಗಿ ನೋಂದಣಿ ಮತ್ತು ಮುದ್ರಾಂಕ ಶುಲ್ಕಗಳು ಈಗ ಶೇ.7.6ಕ್ಕೆ ಏರಿಕೆಯಾಗಿದೆ.
ಆಗಸ್ಟ್ 31ರಿಂದಲೇ ಜಾರಿಗೆ ಬರುವಂತೆ ಆಸ್ತಿಗಳ ನೋಂದಣಿ ಶುಲ್ಕವನ್ನು ಏರಿಕೆ ಮಾಡಲಾಗಿದೆ. ಈ ಕುರಿತು ಕಂದಾಯ ಇಲಾಖೆ ಆದೇಶವನ್ನು ಹೊರಡಿಸಿದೆ. ನೋಂದಣಿ ಶುಲ್ಕ ಶೇ.1 ರಿಂದ ಶೇ.2ಕ್ಕೆ ಹೆಚ್ಚಳ ಆಗಲಿದೆ ಎಂದು ತಿಳಿಸಿದೆ.
ಸ್ಥಿರಾಸ್ತಿ ಶುದ್ಧ ಕ್ರಯ ಪತ್ರ, ಸ್ವಾಧೀನ ಭೋಗ್ಯ ಪತ್ರ, ಕ್ರಯ ಉದ್ದೇಶದ ಜಿಪಿಎ ಸೇರಿ ವಿವಿಧ ಆಸ್ತಿ ಖರೀದಿ ನೋಂದಣಿಗೆ ಈ ಶುಲ್ಕ ಅನ್ವಯವಾಗಲಿದೆ. ಇಷ್ಟು ದಿನ ಜನರು ನಿವೇಶನ, ಭೂಮಿ, ಫ್ಲ್ಯಾಟ್, ಮನೆಯಂತಹ ಸ್ಥಿರಾಸ್ತಿಗೆ 1% ಇದ್ದ ನೋಂದಣಿ ಶುಲ್ಕ, ಇದರ ಜತೆಗೆ ಶೇ 5.6ರ ಮುದ್ರಾಂಕ ಶುಲ್ಕ ಭರಿಸಬೇಕಿತ್ತು. ಈಗ ಅದು ಹೆಚ್ಚಾಗಿದೆ.
ಈಗಾಗಲೇ ನೋಂದಣಿಗೆ ಅರ್ಜಿ ಸಲ್ಲಿಸಿ ಅಪಾಯಿಂಟ್‌ಮೆಂಟ್ ಪಡೆದಿರುವವರೂ ಸಹ ಈಗ ಹೊಸದರದ ಅನ್ವಯ ಶುಲ್ಕವನ್ನು ಪಾವತಿಸಬೇಕು ಎಂದು ಕಂದಾಯ ಇಲಾಖೆ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಇಷ್ಟು ದಿನ ಒಟ್ಟು ನೋಂದಣಿ ಶುಲ್ಕ ಹಾಗೂ ಶೇ.5.6 ರಷ್ಟು ಮುದ್ರಾಂಕ ಶುಲ್ಕ ಸೇರಿ ಒಟ್ಟು ಶೇ.6.6ರಷ್ಟು ಶುಲ್ಕವನ್ನು ಭರಿಸಬೇಕಾಗಿತ್ತು. ಆದರೆ ಇದೀಗ ನೋಂದಣಿ ಶುಲ್ಕ ಶೇ 2ರಷ್ಟಾಗಿರುವುದರಿಂದ ಆಸ್ತಿಯ ಮಾರುಕಟ್ಟೆ ಬೆಲೆಯ ಶೇ.7.6ರಷ್ಟನ್ನು ನೋಂದಣಿ ಮತ್ತು ಮುದ್ರಾಂಕ ಶುಲ್ಕಕ್ಕೆ ಭರಿಸಬೇಕಾಗಿದೆ.
ಆರ್. ಅಶೋಕ ಟೀಕೆ: ಆಸ್ತಿ ನೋಂದಣಿ ಶುಲ್ಕ ಹೆಚ್ಚಳವನ್ನು ವಿರೋಧ ಪಕ್ಷದ ನಾಯಕ ಆರ್.ಅಶೋಕ ಟೀಕಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವರು ಪೋಸ್ಟ್ ಹಾಕಿದ್ದಾರೆ. ‘ಆಡು ಮುಟ್ಟದ ಸೊಪ್ಪಿಲ್ಲ – @INCKarnataka ಸರ್ಕಾರ ಜನರ ಜೇಬಿಗೆ ಕನ್ನ ಹಾಕದ ದಿನವಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.
ಆರ್. ಅಶೋಕ, ‘ನೀರು, ಹಾಲು, ಪೆಟ್ರೋಲ್, ಡಿಸೇಲ್, ಕರೆಂಟು, ಬಸ್ಸು, ಮೆಟ್ರೋ, ಆಸ್ತಿ ತೆರಿಗೆ, ಜನನ ಮರಣ ಪ್ರಮಾಣ ಪತ್ರದ ಶುಲ್ಕ ಸೇರಿ ಎಲ್ಲಾ ವಸ್ತು/ಸೇವೆಗಳ ಬೆಲೆಯನ್ನು ಈಗಾಗಲೇ ಮನಬಂದಂತೆ ಏರಿಸಿರುವ @INCKarnataka ಸರ್ಕಾರದ ವಕ್ರ ದೃಷ್ಟಿ ಈಗ ಆಸ್ತಿ ನೋಂದಣಿ ಶುಲ್ಕದ ಮೇಲೆ ಬಿದ್ದಿದೆ’ ಎಂದು ಹೇಳಿದ್ದಾರೆ.
‘ಆಸ್ತಿ ನೋಂದಣಿ ಶುಲ್ಕವನ್ನು ಏಕಾಏಕಿ ಶೇ.100 ರಷ್ಟು ಏರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ತನ್ನ ಜನವಿರೋಧಿ ನೀತಿಯನ್ನು ನಿರ್ಲಜ್ಜವಾಗಿ ಪ್ರದರ್ಶಿಸಿದೆ. ಸಿಎಂ @siddaramaiah ನವರೇ, ಬೆಲೆಯೇರಿಕೆಯೇ ನಿಮ್ಮ ಅಸಲಿ ಗ್ಯಾರೆಂಟಿ ಆಗಿದೆಯಾ? ಜೀವನವೆಲ್ಲ ಕಷ್ಟಪಟ್ಟು ಸಾಲ ಸೋಲ ಮಾಡಿ ಕುಟುಂಬಕ್ಕೆ ಒಂದು ಸ್ವಂತ ಗೂಡು ಮಾಡಿಕೊಳ್ಳಲು ಚಿಕ್ಕ ನಿವೇಶವವನ್ನೋ, ಫ್ಲಾಟ್ ಅನ್ನೋ ಖರೀದಿ ಮಾಡಲು ಹೊರಟರೆ ಅದಕ್ಕೆ 7.6% ನೋಂದಣಿ ಮತ್ತು ಮುದ್ರಾಂಕ ಶುಲ್ಕ ಭರಿಸಬೇಕು ಅಂದರೆ ಬಡವರು, ಮಧ್ಯಮ ವರ್ಗದ ಜನ ಸ್ವಂತ ಸೂರು ಮಾಡಿಕೊಳ್ಳುವಾದರೂ ಹೇಗೆ?. ಈ ಜನವಿರೋಧಿ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಕನ್ನಡಿಗರಿಗೆ ನೆಮ್ಮದಿ ಇಲ್ಲ, ಕರ್ನಾಟಕ್ಕೆ ಉಳಿಗಾಲವಿಲ್ಲ’ ಎಂದು ತಿಳಿಸಿದ್ದಾರೆ.