ಕಬ್ಬಿನ ಕದನ: ಕೇಂದ್ರದ ಸಾಧನೆಗಳನ್ನು ಮುಂದಿಟ್ಟು ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಪ್ರಲ್ಹಾದ್ ಜೋಶಿ

0
22

ಕಬ್ಬಿನ ಕದನ: ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ವಾಕ್ಸಮರವೂ ಜೋರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಕೇಂದ್ರ ಸರ್ಕಾರದ ನಿಷ್ಕ್ರಿಯತೆಯ ಬಗ್ಗೆ ಆರೋಪಿಸಿದ ಬೆನ್ನಲ್ಲೇ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ದಾಖಲೆಗಳ ಸಮೇತ ತಿರುಗೇಟು ನೀಡಿದ್ದಾರೆ.

ಮೋದಿ ಸರ್ಕಾರದ ಅವಧಿಯಲ್ಲಿ ಕಬ್ಬು ಬೆಳೆಗಾರರ ಸಬಲೀಕರಣಕ್ಕಾಗಿ ಕೈಗೊಂಡ ಕ್ರಮಗಳನ್ನು ವಿವರಿಸಿ, ರಾಜ್ಯ ಸರ್ಕಾರದ ಜವಾಬ್ದಾರಿಯನ್ನು ನೆನಪಿಸಿದ್ದಾರೆ.  ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ಸಚಿವರಾದ ಪ್ರಲ್ಹಾದ್ ಜೋಶಿ, ಸಿದ್ದರಾಮಯ್ಯನವರಿಗೆ ಪತ್ರ ಬರೆಯುವ ಮೂಲಕ, ಕೇಂದ್ರವು ರೈತರ ಹಿತ ಕಾಪಾಡಲು ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದನ್ನು ಅಂಕಿ-ಅಂಶಗಳ ಸಮೇತ ವಿವರಿಸಿದ್ದಾರೆ.

ನಿರಂತರವಾಗಿ ಏರಿಕೆಯಾಗುತ್ತಿರುವ ಕಬ್ಬಿನ FRP: ಪ್ರಲ್ಹಾದ್ ಜೋಶಿ  ಪ್ರಕಾರ, ಮೋದಿ ಸರ್ಕಾರದ ಆಡಳಿತದಲ್ಲಿ ಕಬ್ಬಿಗೆ ನೀಡುವ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP) ಸತತವಾಗಿ ಏರಿಕೆಯಾಗಿದೆ. 2013-14ರಲ್ಲಿ ಪ್ರತಿ ಕ್ವಿಂಟಲ್‌ಗೆ ಕೇವಲ ರೂ.210 ಇದ್ದ FRP, 2025-26ರ ಸಕ್ಕರೆ ಹಂಗಾಮಿಗೆ ರೂ.355 ಕ್ಕೆ ಏರಿಸಲಾಗಿದೆ. ಇದು ರೈತರ ಉತ್ಪಾದನಾ ವೆಚ್ಚಕ್ಕಿಂತ ಶೇ. 105 ರಿಂದ 112 ರಷ್ಟು ಅಧಿಕ ಲಾಭವನ್ನು ಖಾತ್ರಿಪಡಿಸುತ್ತದೆ, ಇದರಿಂದ ರೈತರಿಗೆ ಸ್ಥಿರತೆ ಮತ್ತು ಲಾಭದಾಯಕತೆ ಎರಡೂ ಸಿಗುತ್ತದೆ ಎಂದು ಒತ್ತಿ ಹೇಳಿದ್ದಾರೆ.

ಎಥೆನಾಲ್ ಉತ್ಪಾದನೆಗೆ ಉತ್ತೇಜನ: ರೈತರಿಗೆ ಹೊಸ ಆದಾಯ: ದೇಶದಲ್ಲಿ ಹೆಚ್ಚುವರಿ ಸಕ್ಕರೆ ಉತ್ಪಾದನೆಯ ಸವಾಲನ್ನು ಸಮರ್ಥವಾಗಿ ನಿಭಾಯಿಸಲು, ಕೇಂದ್ರ ಸರ್ಕಾರವು ಹೆಚ್ಚುವರಿ ಕಬ್ಬನ್ನು ಎಥೆನಾಲ್ ತಯಾರಿಕೆಗೆ ಬಳಸಲು ಸಕ್ಕರೆ ಕಾರ್ಖಾನೆಗಳಿಗೆ ದೊಡ್ಡ ಮಟ್ಟದ ಪ್ರೋತ್ಸಾಹ ನೀಡಿದೆ. ಈ ಯೋಜನೆಯಿಂದಾಗಿ ಸಕ್ಕರೆ ಕಾರ್ಖಾನೆಗಳು ಆರ್ಥಿಕವಾಗಿ ಸದೃಢವಾಗಿದ್ದು, ರೈತರಿಗೆ ಸಕಾಲದಲ್ಲಿ ಹಣ ಪಾವತಿಸಲು ಸಾಧ್ಯವಾಗಿದೆ.

ಕರ್ನಾಟಕಕ್ಕೆ ವಿಶೇಷವಾಗಿ, ಎಥೆನಾಲ್ ಹಂಚಿಕೆಯನ್ನು 2022-23ರ 85 ಕೋಟಿ ಲೀಟರ್‌ನಿಂದ 2025-26ಕ್ಕೆ 133 ಕೋಟಿ ಲೀಟರ್‌ಗೆ ಹೆಚ್ಚಿಸಲಾಗಿದೆ. ಇದಕ್ಕಾಗಿ, “ಎಥೆನಾಲ್ ಬಡ್ಡಿ ಸಹಾಯಧನ ಯೋಜನೆ” ಅಡಿಯಲ್ಲಿ ರಾಜ್ಯಕ್ಕೆ ರೂ.435.42 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಜೋಶಿ ತಿಳಿಸಿದ್ದಾರೆ.

ಆರ್ಥಿಕ ನೆರವು ಮತ್ತು ರಫ್ತು ನೀತಿ: ಕೇಂದ್ರ ಸರ್ಕಾರದ ದೂರದೃಷ್ಟಿಯ ನೀತಿಗಳಿಂದ ಕಬ್ಬು ಬೆಳೆಗಾರರಿಗೆ ಸಾಕಷ್ಟು ಅನುಕೂಲವಾಗಿದೆ.

ಹಣಕಾಸು ನೆರವು: 2014-15 ರಿಂದ 2020-21ರ ಅವಧಿಯಲ್ಲಿ, ರೈತರ ಬಾಕಿ ಪಾವತಿಗಾಗಿ ಸಕ್ಕರೆ ಕಾರ್ಖಾನೆಗಳಿಗೆ ಕೇಂದ್ರ ಸರ್ಕಾರವು ರೂ.16,500 ಕೋಟಿ ರೂಪಾಯಿಗಳಷ್ಟು ಆರ್ಥಿಕ ನೆರವು ನೀಡಿದೆ.

ರಫ್ತು ಉತ್ತೇಜನ: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಕುಸಿದಿದ್ದಾಗ, ಕೇಂದ್ರವು 10 ಲಕ್ಷ ಮೆಟ್ರಿಕ್ ಟನ್ ಸಕ್ಕರೆಯನ್ನು ರಫ್ತು ಮಾಡಲು ಅನುಮತಿ ನೀಡಿತ್ತು. ಈ ಕ್ರಮದಿಂದಾಗಿ ಕರ್ನಾಟಕದಲ್ಲಿ ಎಕ್ಸ್-ಮಿಲ್ ಸಕ್ಕರೆ ಬೆಲೆಯು ಪ್ರತಿ ಕ್ವಿಂಟಲ್‌ಗೆ ರೂ.3,370 ರಿಂದ ರೂ.3,930 ಕ್ಕೆ ಏರಿಕೆಯಾಗಿ, ಕಾರ್ಖಾನೆಗಳಿಗೆ ಆರ್ಥಿಕ ಶಕ್ತಿ ಬಂದಿತು.

ಬಾಕಿ ಪಾವತಿಯಲ್ಲಿ ಗಣನೀಯ ಸುಧಾರಣೆ: ಕೇಂದ್ರದ ಈ ಸಮಗ್ರ ಕ್ರಮಗಳ ಫಲವಾಗಿ, ಕರ್ನಾಟಕ ಸೇರಿದಂತೆ ದೇಶದಾದ್ಯಂತ ಕಬ್ಬು ಬೆಳೆಗಾರರ ಬಾಕಿ ಪಾವತಿ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ. 2022-23 ಮತ್ತು 2023-24ನೇ ಸಾಲಿನಲ್ಲಿ ಯಾವುದೇ ಬಾಕಿ ಉಳಿದಿಲ್ಲ. 2024-25ರ ಹಂಗಾಮಿಗೆ ಸಂಬಂಧಿಸಿದಂತೆ, ಕೇವಲ ರೂ.50 ಲಕ್ಷ ಮಾತ್ರ ಬಾಕಿ ಇದೆ (ಸೆಪ್ಟೆಂಬರ್ 30, 2025ರ ವರೆಗೆ) ಎಂದು ಜೋಶಿ ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

1966ರ ಕಬ್ಬು (ನಿಯಂತ್ರಣ) ಆದೇಶದ ಅನ್ವಯ, ಸಕ್ಕರೆ ಕಾರ್ಖಾನೆಗಳು ಕಬ್ಬು ಖರೀದಿಸಿದ 14 ದಿನಗಳೊಳಗೆ ರೈತರಿಗೆ ಹಣ ಪಾವತಿಸಬೇಕು. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಂಪೂರ್ಣ ಅಧಿಕಾರ ಮತ್ತು ಜವಾಬ್ದಾರಿ ರಾಜ್ಯ ಸರ್ಕಾರಗಳದ್ದಾಗಿದೆ ಎಂದು ಪ್ರಲ್ಹಾದ್ ಜೋಶಿ ಮುಖ್ಯಮಂತ್ರಿಗಳಿಗೆ ನೆನಪಿಸಿದ್ದಾರೆ. ಕೇಂದ್ರದತ್ತ ಬೆರಳು ತೋರುವ ಬದಲು, ರಾಜ್ಯ ಸರ್ಕಾರವು ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಪರೋಕ್ಷವಾಗಿ ಹೇಳಿದ್ದಾರೆ.

Previous articleಕ್ರಾಂತಿ ಸುದ್ದಿಮೂಲ ಯಾರು?
Next articleಮೈಸೂರಿಗರೇ ಗಮನಿಸಿ: ನ. 8 ರಂದು 7 ಗಂಟೆಗಳ ಕಾಲ ಈ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ!

LEAVE A REPLY

Please enter your comment!
Please enter your name here