ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ರಾಜಕೀಯ ಚಟುವಟಿಕೆಗಳು ದಿನದಿಂದ ದಿನಕ್ಕೆ ಚುರುಕುಗೊಂಡಿವೆ. ಈ ನಡುವೆ ಮುಸ್ಲಿಂ ಮುಖಂಡರು ವಿಜಯಪುರ ಜಿಲ್ಲೆಯ ಆಲಮಟ್ಟಿ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದಿಢೀರ್ ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದರು. ಸಿಎಂ ಸಿದ್ದರಾಮಯ್ಯ ಅವರು ಕಾರಿನಲ್ಲೇ ಕುಳಿತು ಮುಖಂಡರೊಂದಿಗೆ ಕೆಲ ಸಮಯ ಮಾತುಕತೆ ನಡೆಸಿದರೆಂದು ತಿಳಿದುಬಂದಿದೆ.
ಈ ಭೇಟಿಯಲ್ಲಿ ಬಾಗಲಕೋಟೆ ಕ್ಷೇತ್ರದ ಉಪಚುನಾವಣಾ ಪ್ರಚಾರಕ್ಕಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಕರೆಸಿಕೊಳ್ಳಬೇಕು ಎಂದು ಮುಸ್ಲಿಂ ಮುಖಂಡರು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿರುವ ಹಿನ್ನೆಲೆಯಲ್ಲಿ ಈ ಬೇಡಿಕೆ ರಾಜಕೀಯವಾಗಿ ಗಮನ ಸೆಳೆಯುತ್ತಿದೆ.
ಇದೀಗ ಜಮೀರ್ ಅಹ್ಮದ್ ಖಾನ್ ಕೇರಳದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಏಪ್ರಿಲ್ 5ರಂದು ಕರ್ನಾಟಕಕ್ಕೆ ವಾಪಸ್ ಆಗಲಿದ್ದು, ಮೊದಲು ದಾವಣಗೆರೆ ಕ್ಷೇತ್ರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಬಳಿಕ ಏಪ್ರಿಲ್ 6 ಮತ್ತು 7ರಂದು ಬಾಗಲಕೋಟೆ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇದರ ನಡುವೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಮುಖಂಡ ಸಾಧಿಕ್ ಪೈಲ್ವಾನ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಜಮೀರ್ ಅಹ್ಮದ್ ಖಾನ್ ಅಸಮಾಧಾನಗೊಂಡಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡಿತ್ತು. ಆದರೆ ಈ ಆರೋಪವನ್ನು ಅವರು ತಳ್ಳಿ ಹಾಕಿ, ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಂಪೂರ್ಣವಾಗಿ ಶ್ರಮಿಸುವುದಾಗಿ ಸ್ಪಷ್ಟಪಡಿಸಿದ್ದರು.
ಆದರೂ ಕೇರಳ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಕಾರಣ ಅವರು ಕರ್ನಾಟಕ ಉಪಚುನಾವಣೆಯ ಪ್ರಚಾರದಲ್ಲಿ ಕಾಣಿಸಿಕೊಳ್ಳದಿರುವುದು ಚರ್ಚೆಗೆ ಕಾರಣವಾಗಿದೆ. ಹೀಗಾಗಿ ಬಾಗಲಕೋಟೆ ಸೇರಿದಂತೆ ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಜಮೀರ್ ಅಹ್ಮದ್ ಖಾನ್ ಪ್ರಚಾರಕ್ಕೆ ಬರಬೇಕು ಎಂಬ ಬೇಡಿಕೆಯನ್ನು ಮುಸ್ಲಿಂ ಮುಖಂಡರು ಮುಂದಿಟ್ಟಿದ್ದಾರೆ.
ಒಟ್ಟಾರೆ, ಬಾಗಲಕೋಟೆ ಉಪಚುನಾವಣೆ ಕಣ ದಿನೇ ದಿನೇ ಕಾವೇರಿದ್ದು, ಮುಸ್ಲಿಂ ಮುಖಂಡರ ಈ ದಿಢೀರ್ ಭೇಟಿ ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.





















