Government Employee: ಹಳೆ ಪಿಂಚಣಿ ಯೋಜನೆ ಮರು ಜಾರಿ ಅಪ್‌ಡೇಟ್‌

0
106

ಬೆಂಗಳೂರು: ಹಳೆ ಪಿಂಚಣಿ ಯೋಜನೆ ಮರು ಜಾರಿ ಕರ್ನಾಟಕದ ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾಗಿದೆ. 7ನೇ ವೇತನ ಆಯೋಗದ ವರದಿ ಜಾರಿ ಬಳಿಕ ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಆದರೆ ಬೇಡಿಕೆ ಈಡೇರಿಲ್ಲ.

ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನ ನಡೆಯುತ್ತಿದೆ. ವಿಧಾನಸಭೆಯಲ್ಲಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಈ ಕುರಿತು ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಗೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ. ಶಾಸಕರು 2006ರ ನಂತರ ರಾಜ್ಯ ಸರ್ಕಾರಿ ಸೇವೆಗೆ ಸೇರಿದ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು? ಎಂದು ಪ್ರಶ್ನೆ ಮಾಡಿದ್ದರು.

ಸಿದ್ದರಾಮಯ್ಯ ಉತ್ತರ: ಸರ್ಕಾರದ ಉತ್ತರದಲ್ಲಿ ರಾಜ್ಯದಲ್ಲಿ ಜಾರಿಯಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸೂಕ್ತ ಬದಲಾವಣೆ/ ಮಾರ್ಪಾಡು ಮಾಡಲು ಸಮಗ್ರವಾಗಿ ಪರಿಶೀಲಿಸಲು ಈಗಾಗಲೇ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದಿನಾಂಕ: 11.12.2018ರ ಮತ್ತು ದಿನಾಂಕ: 01.03.2023ರ ಸರ್ಕಾರಿ ಆದೇಶಗಳನ್ವಯ ರಚಿಸಲಾಗಿರುವ ಸಮಿತಿಯನ್ನು ದಿನಾಂಕ 16:08:2024ರಲ್ಲಿ ಪುನರ್ ರಚಿಸಿ ಆದೇಶಿಸಲಾಗಿರುತ್ತದೆ ಎಂದು ತಿಳಿಸಿದೆ.

ಶಾಸಕರು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಸಮಿತಿ ರಚಿಸಿರುವುದು ತಿಳಿದುಬಂದಿದ್ದು ಸದರಿ ಸಮಿತಿಯು ಎಷ್ಟು ಬಾರಿ ಸಭೆ ನಡೆಸಿದೆ.(ಸಮಿತಿ ರಚಿಸಿರುವ ಆದೇಶ ಪ್ರತಿ ಹಾಗೂ ಸಮಿತಿ ನಡೆಸಿರುವ ಸಭೆಯ ದಿನಾಂಕಗಳು ಹಾಗೂ ನಡವಳಿಗಳನ್ನು ನೀಡುವುದು) ಎಂದು ಪ್ರಶ್ನೆ ಮಾಡಿದ್ದರು. ಸದರಿ ಸಮಿತಿಯು ಈಗಾಗಲೇ ಎರಡು ಸಭೆಗಳನ್ನು ನಡೆಸಿದೆ. ಸಮಿತಿ ರಚಿಸಿರುವ ಆದೇಶಗಳ ಪ್ರತಿ ಹಾಗೂ ಸಮಿತಿ ನಡೆಸಿರುವ ಸಭೆಯ ನಡವಳಿಗಳನ್ನು ನೀಡಲಾಗಿದೆ ಎಂದು ಸರ್ಕಾರ ಹೇಳಿದೆ.

ಸದರಿ ಸಮಿತಿಯು ಸರ್ಕಾರಕ್ಕೆ ಮಧ್ಯಂತರ ಅಥವ ಅಂತಿಮ ವರದಿ ಸಲ್ಲಿಸಿದೆಯೇ?. ವರದಿ ಸಲ್ಲಿಸಿದ್ದಲ್ಲಿ ಸದರಿ ವರದಿಯ ಮೇಲೆ ಸರ್ಕಾರ ಕೈಗೊಂಡ ಕ್ರಮಗಳೇನು (ವಿವರ ನೀಡುವುದು) ಎಂದು ಶಾಸಕರು ಪ್ರಶ್ನೆ ಮಾಡಿದ್ದರು.

ರಾಷ್ಟ್ರೀಯ ಪಿಂಚಣಿ ಯೋಜನೆಗೆ ಬದಲಾವಣೆ/ ಮಾರ್ಪಾಡು ಮಾಡಿರುವ ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಿಗೆ ಅಧಿಕಾರಿಗಳನ್ನೊಳಗೊಂಡ ತಂಡಗಳು ಅಧ್ಯಯನ ನಡೆಸಿ ವರದಿಗಳನ್ನು ಸಮಿತಿಗೆ ಸಲ್ಲಿಸಲಾಗಿದೆ. ಸಮಿತಿಯ ವರದಿಯನ್ನು ನಿರೀಕ್ಷಿಸಲಾಗಿದೆ.

2024ರ ಡಿಸೆಂಬರ್‌ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ನಡೆದಿತ್ತು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ನೇತೃತ್ವದಲ್ಲಿ ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗಿ ಎಲ್ಲಾ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಕುರಿತು ಮಾತನಾಡಿದ್ದು, “ಒಪಿಎಸ್ ಕುರಿತು ಪರಿಶೀಲನೆ ನಡೆಸುತ್ತಿರುವ ಸಮಿತಿಯ ವರದಿಯನ್ನು ಅಧ್ಯಯನ ಮಾಡಿದ ನಂತರ ರಾಜ್ಯ ಸರ್ಕಾರವು ಜಾರಿಗೆ ತರಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ” ಎಂದು ಹೇಳಿದ್ದಾರೆ.

ಸರ್ಕಾರಿ ನೌಕರರ ಸಮಾವೇಶದಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತುಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸಲಾಗುತ್ತದೆ ಎಂದು ಭರವಸೆ ಕೊಟ್ಟಿದ್ದಾರೆ.

Previous articleರಾಮನಗರ ಹೆಸರು ಬಲಾದರೂ ಸಾರಿಗೆ ಸಮಸ್ಯೆ ಬದಲಾಗಿಲ್ಲ!
Next articleನಮ್ಮ ಮೆಟ್ರೋ ಹಳದಿ ಮಾರ್ಗ: ಪ್ರಯಾಣಿಕರಿಗೆ ಸಿಹಿಸುದ್ದಿ

LEAVE A REPLY

Please enter your comment!
Please enter your name here