ಗೃಹಲಕ್ಷ್ಮಿ: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ಯ ಹಣ ಅನೇಕ ಮಹಿಳೆಯರ ಖಾತೆಗೆ ಇನ್ನೂ ಜಮೆಯಾಗದಿರುವ ಬಗ್ಗೆ ವ್ಯಾಪಕ ಗೊಂದಲ ಮತ್ತು ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಇದರ ಹಿಂದಿನ ಅಸಲಿ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಯಲಾಗಿದೆ.
ಖಜಾನೆಯಿಂದ ಹಣ ಬಿಡುಗಡೆಯಾದರೂ ಫಲಾನುಭವಿಗಳನ್ನು ತಲುಪದಿರಲು ಸರ್ಕಾರದ ತಪ್ಪಲ್ಲ, ಬದಲಾಗಿ ದಾಖಲಾತಿಗಳಲ್ಲಿನ ದೋಷಗಳೇ ಪ್ರಮುಖ ಕಾರಣ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸಭೆಯಲ್ಲಿ ಚರ್ಚೆಯಾಗಿದ್ದೇನು?: ಮೈಸೂರಿನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, “ಜಿಲ್ಲೆಯಲ್ಲಿ ಅರ್ಹರಾದ ಎಲ್ಲಾ ಫಲಾನುಭವಿಗಳಿಗೆ ಶೇ. 100 ರಷ್ಟು ಹಣ ಪಾವತಿ ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.
ತಕ್ಷಣವೇ ಮಧ್ಯಪ್ರವೇಶಿಸಿದ ಶಾಸಕ ಯತೀಂದ್ರ ಸಿದ್ದರಾಮಯ್ಯ, “ನಾವು ಕ್ಷೇತ್ರಕ್ಕೆ ಹೋದಾಗ ಅನೇಕ ಮಹಿಳೆಯರು ತಮಗೆ ಹಣ ಬಂದಿಲ್ಲವೆಂದು ದೂರುತ್ತಾರೆ, ಇದಕ್ಕೆ ಕಾರಣವೇನು?” ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಅಧಿಕಾರಿಗಳು, “ಸರ್ಕಾರದಿಂದ ಹಣ ಪಾವತಿಯಲ್ಲಿ ಯಾವುದೇ ವಿಳಂಬವಾಗಿಲ್ಲ. ಆದರೆ, ಅನೇಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ, ಕೆಲವರ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಮತ್ತು ಇನ್ನು ಕೆಲವರು ಅರ್ಜಿಯಲ್ಲಿ ನೀಡಿದ ದಾಖಲಾತಿಗಳು ಸರಿಯಾಗಿಲ್ಲ. ಇಂತಹ ತಾಂತ್ರಿಕ ಕಾರಣಗಳಿಂದಾಗಿ ಹಣವು ಖಾತೆಗೆ ಜಮೆಯಾಗುತ್ತಿಲ್ಲ. ಯಾರೆಲ್ಲರ ದಾಖಲೆಗಳು ಸರಿಯಾಗಿವೆಯೋ ಅವರೆಲ್ಲರಿಗೂ ಹಣ ತಲುಪಿದೆ” ಎಂದು ಸಭೆಗೆ ಸ್ಪಷ್ಟನೆ ನೀಡಿದರು.
ಹಾಡಿ ನಿವಾಸಿಗಳ ಗೋಳು, ಅಧಿಕಾರಿಗಳಿಗೆ ಸಿಎಂ ಕ್ಲಾಸ್!: ಸಭೆಯು ಕೇವಲ ಗೃಹಲಕ್ಷ್ಮಿ ಯೋಜನೆಗೆ ಸೀಮಿತವಾಗಿರಲಿಲ್ಲ. ಶಾಸಕ ಅನಿಲ್ ಚಿಕ್ಕಮಾದು ಅವರು ಎಚ್.ಡಿ. ಕೋಟೆ ವ್ಯಾಪ್ತಿಯಲ್ಲಿರುವ ಹಾಡಿ ನಿವಾಸಿಗಳ ಸಮಸ್ಯೆಗಳ ಸರಮಾಲೆಯನ್ನೇ ಮುಖ್ಯಮಂತ್ರಿಗಳ ಮುಂದಿಟ್ಟರು.
“16 ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರೂ, ಬೆಳಕು ಮಾತ್ರ ಬರುತ್ತಿಲ್ಲ. ಕುಡಿಯುವ ನೀರು, ಹಕ್ಕುಪತ್ರ, ಅಂಗನವಾಡಿ, ಆಹಾರ ವಿತರಣೆಯಲ್ಲಿಯೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಅರಣ್ಯ ಉತ್ಪನ್ನಗಳನ್ನು ಮಾರಾಟ ಮಾಡಲು ಹೋದರೆ ಅರಣ್ಯಾಧಿಕಾರಿಗಳು ದರ್ಪ ತೋರುತ್ತಾರೆ,” ಎಂದು ಆರೋಪಿಸಿದರು.
ಇದರಿಂದ ತೀವ್ರ ಅಸಮಾಧಾನಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಣ್ಯ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. “ಹಾಡಿ ನಿವಾಸಿಗಳ ಜೊತೆ ಮಾನವೀಯತೆಯಿಂದ ವರ್ತಿಸಿ. ಕಣ್ಣಿಗೆ ಪಟ್ಟಿ ಕಟ್ಟಿಕೊಂಡವರಂತೆ ಕೆಲಸ ಮಾಡಬೇಡಿ. ಅವರ ವಿಚಾರದಲ್ಲಿ ಸ್ವಲ್ಪ ಉದಾರವಾಗಿ ನಡೆದುಕೊಳ್ಳಿ, ಇಂತಹ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ,” ಎಂದು ಖಡಕ್ ಎಚ್ಚರಿಕೆ ನೀಡಿದರು.
ಇದಲ್ಲದೆ, ಹಾಸ್ಟೆಲ್‌ಗಳಲ್ಲಿನ ಆಹಾರದ ಗುಣಮಟ್ಟ, ಸ್ವಚ್ಛತೆ ಮತ್ತು ಮೂಲಸೌಕರ್ಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಪ್ರತಿ ಹಾಸ್ಟೆಲ್‌ಗೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಿ, ವ್ಯವಸ್ಥೆಯನ್ನು ಸುಧಾರಿಸುವಂತೆ ಮತ್ತು ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಸಿಎಂ ಸೂಚಿಸಿದರು.
