ಜಾತಿಗಣತಿ: ಮಧ್ಯಂತರ ತಡೆ ನೀಡದ ಕೋರ್ಟ್, ಮಂಗಳವಾರದತ್ತ ಚಿತ್ತ

0
7

ಜಾತಿಗಣತಿ ಕರ್ನಾಟಕದಲ್ಲಿ ಸದ್ಯ ಭಾರೀ ಚರ್ಚೆಯಲ್ಲಿರುವ ವಿಚಾರ. ಕರ್ನಾಟಕ ಸರ್ಕಾರ ಸೆಪ್ಟೆಂಬರ್ 22ರಿಂದ ಜಾತಿಗಣತಿಯನ್ನು ನಡೆಸುತ್ತಿದೆ. ಇದನ್ನು ಪ್ರಶ್ನಿಸಿ ಹಲವು ಅರ್ಜಿಗಳು ಹೈಕೋರ್ಟ್‌ಗೆ ಸಲ್ಲಿಕೆಯಾಗಿವೆ. ಸೋಮವಾರ ಅರ್ಜಿ ವಿಚಾರಣೆ ನಡೆದರೂ ಮಧ್ಯಂತರ ತಡೆಯಾಜ್ಞೆ ನೀಡಲು ಕೋರ್ಟ್, ನಿರಾಕರಿಸಿದೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ರಾಜ್ಯ ಒಕ್ಕಲಿಗರ ಸಂಘ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು. ಲಿಖಿತ ವಾದಾಂಶ ಸಲ್ಲಿಕೆಗೆ ಸೂಚಿಸಿದ ಕೋರ್ಟ್, ವಿಚಾರಣೆಯನ್ನು ಸೆಪ್ಟೆಂಬರ್‌ 23ಕ್ಕೆ ಮೂಂದೂಡಿಕೆ ಮಾಡಿದೆ.

ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ಜಯಕುಮಾರ್ ಪಾಟೀಲ್ ಮತ್ತು ಅಶೋಕ್ ಹಾರನಹಳ್ಳಿ ಅರ್ಜಿದಾರರ ಪರ ವಾದ ಮಂಡಿಸಿದರು. ಸಮೀಕ್ಷೆಯು ಸಂವಿಧಾನದ 342ನೇ ವಿಧಿಗೆ ವಿರುದ್ಧವಾಗಿದೆ ಮತ್ತು ರಾಜ್ಯ ಸರ್ಕಾರಕ್ಕೆ ಗಣತಿ ನಡೆಸುವ ಅಧಿಕಾರವಿಲ್ಲ ಎಂದು ವಾದಿಸಿದರು. 2023ರಲ್ಲಿ ರಾಜ್ಯ ಸರ್ಕಾರವು ಈ ಹಿಂದಿನ ಸಮೀಕ್ಷೆಯ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದೆ ಹೊಸ ಸಮೀಕ್ಷೆ ನಡೆಸುತ್ತಿದೆ ಎಂದು ವಕೀಲ ನಾವದಗಿ ವಾದಿಸಿದರು.

ಅಲ್ಲದೆ, ನಾಗರಿಕರ ಆಧಾರ್ ಕಾರ್ಡ್‌ಗಳನ್ನು ಸಮೀಕ್ಷೆಗೆ ಲಿಂಕ್ ಮಾಡಲಾಗುತ್ತಿದೆ ಎಂಬ ವಿಷಯವನ್ನು ಅವರು ಪೀಠದ ಗಮನಕ್ಕೆ ತಂದರು. ಈ ಸಮೀಕ್ಷೆಯು ಗಣತಿಯಷ್ಟೇ ಹೊರತು ಬೇರೇನಲ್ಲ, ಮತ್ತು ಗಣತಿಯನ್ನು ನಡೆಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ” ಎಂದು ಹಿರಿಯ ವಕೀಲ ಜಯಕುಮಾರ್ ಪಾಟೀಲ್ ಪ್ರತಿಪಾದಿಸಿದರು.

ರಾಜ್ಯ ಒಕ್ಕಲಿಗರ ಸಂಘದ ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ಯಾವುದೇ ದತ್ತಾಂಶವಿಲ್ಲದೆ ಹೊಸ ಜಾತಿಗಳನ್ನು ಸೃಷ್ಟಿಸಲಾಗುತ್ತಿದೆ. ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳಿಗೆ ನಿರ್ದಿಷ್ಟ ಜಾತಿಗಳನ್ನು ಸೇರಿಸಲು ಅಥವಾ ತೆಗೆದುಹಾಕಲು ಅಧ್ಯಯನ ಮಾತ್ರ ನಡೆಸಬಹುದಾಗಿದೆ ಹೊರತು ಸಮೀಕ್ಷೆ ನಡೆಸಲು ಅಧಿಕಾರವಿಲ್ಲ ಎಂದು ವಾದಿಸಿದರು.

ಸರ್ಕಾರದ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ಅರ್ಜಿದಾರರು ಕೊನೆಯ ಕ್ಷಣದಲ್ಲಿ ನ್ಯಾಯಾಲಯಕ್ಕೆ ಬಂದಿದ್ದಾರೆ ಎಂದು ವಾದಿಸಿದರು. ಸರ್ಕಾರವು ಹಿಂದುಳಿದ ವರ್ಗಗಳ ಕಾಯಿದೆಯಡಿ ಸಮೀಕ್ಷೆ ನಡೆಸುತ್ತಿದೆಯೇ ಹೊರತು ಗಣತಿಯನ್ನಲ್ಲ ಎಂದು ಸ್ಪಷ್ಟಪಡಿಸಿದರು. 2014ರಲ್ಲಿ ಆರಂಭವಾದ ಹಿಂದಿನ ಸಮೀಕ್ಷೆಯ ದತ್ತಾಂಶವನ್ನು ನವೀಕರಿಸಲು ಪ್ರಸ್ತುತ ಸಮೀಕ್ಷೆ ನಡೆಸಲಾಗುತ್ತಿದೆ. ದಸರಾ ರಜೆ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಶಿಕ್ಷಕರನ್ನು ಬಳಸಿಕೊಂಡು ದತ್ತಾಂಶ ಸಂಗ್ರಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ವಾದಗಳನ್ನು ಆಲಿಸಿದ ನಂತರ, ನ್ಯಾಯಾಲಯವು ಎಲ್ಲಾ ಅರ್ಜಿದಾರರು ಮತ್ತು ಸರ್ಕಾರಿ ವಕೀಲರಿಗೆ ತಮ್ಮ ವಾದಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸುವಂತೆ ಸೂಚಿಸಿ, ವಿಚಾರಣೆಯನ್ನು ಮಂಗಳವಾರ ಮಧ್ಯಾಹ್ನ 2:30ಕ್ಕೆ ಮುಂದೂಡಿತು. ಸೋಮವಾರ ಸಮೀಕ್ಷೆಗೆ ಯಾವುದೇ ಮಧ್ಯಂತರ ತಡೆ ನೀಡುವುದಿಲ್ಲ ಎಂದು ಕೋರ್ಟ್‌ ಹೇಳಿತು.

Previous articleಹೆಚ್ಚೆಚ್ಚು GST ವಿಧಿಸಿ ಈಗ ಬೆನ್ನು ತಟ್ಟಿಕೊಳ್ತಾ ಇರೋದೂ ಮೋದಿ…
Next articleಕಲಬುರಗಿ: ಅಳಂದ ಕ್ಷೇತ್ರದಲ್ಲಿ ಮತದಾರರ ಹೆಸರು ಡಿಲೀಟ್, ತನಿಖೆಗೆ ಎಸ್‌ಐಟಿ ರಚನೆ

LEAVE A REPLY

Please enter your comment!
Please enter your name here