ವಾರಕ್ಕೆ ನಾಲ್ಕು ದಿನ ಕೆಲಸ, ಮೂರು ದಿನ ಮಜಾ.. ಇದು ಕೇವಲ ವಿದೇಶಿ ಕಂಪನಿಗಳ ಕಥೆಯಲ್ಲ. ಶೀಘ್ರದಲ್ಲೇ ಭಾರತದಲ್ಲೂ ಇಂತಹದೊಂದು ಕ್ರಾಂತಿಕಾರಿ ಬದಲಾವಣೆ ಜಾರಿಗೆ ಬರುವ ಸಾಧ್ಯತೆಯಿದೆ.
ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ‘ಹೊಸ ಕಾರ್ಮಿಕ ಸಂಹಿತೆ’ ಉದ್ಯೋಗಿಗಳಿಗೆ ಕೆಲಸದ ಅವಧಿಯಲ್ಲಿ ಭರ್ಜರಿ ಫ್ಲೆಕ್ಸಿಬಿಲಿಟಿ ನೀಡಲು ಸಜ್ಜಾಗಿದೆ.
ಏನಿದು 4 ದಿನದ ಕೆಲಸದ ಲೆಕ್ಕಾಚಾರ?: ಹೊಸ ನಿಯಮದ ಪ್ರಕಾರ, ವಾರದಲ್ಲಿ ಒಬ್ಬ ಉದ್ಯೋಗಿ ಗರಿಷ್ಠ 48 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ಮಿತಿ ಹೇರಲಾಗಿದೆ. ಈ 48 ಗಂಟೆಗಳನ್ನು ಹೇಗೆ ವಿಂಗಡಿಸಿಕೊಳ್ಳಬೇಕು ಎಂಬುದು ಕಂಪನಿ ಮತ್ತು ಉದ್ಯೋಗಿಯ ಹೊಂದಾಣಿಕೆಗೆ ಬಿಟ್ಟ ವಿಚಾರ.
ಒಂದು ವೇಳೆ ನೀವು ದಿನಕ್ಕೆ 12 ಗಂಟೆ ಕೆಲಸ ಮಾಡಲು ಸಿದ್ಧರಿದ್ದರೆ, ವಾರಕ್ಕೆ 4 ದಿನ ಕೆಲಸ ಮಾಡಿದರೆ ಸಾಕು (12×4=48). ಆಗ ನಿಮಗೆ ಸತತ 3 ದಿನಗಳ ವೀಕ್ ಆಫ್ (ರಜೆ) ಸಿಗಲಿದೆ.
ದಿನಕ್ಕೆ 10 ಗಂಟೆ ಕೆಲಸ ಮಾಡಿದರೆ, ವಾರದಲ್ಲಿ 5 ದಿನ ಕೆಲಸವಿರುತ್ತದೆ, ಆಗ 2 ದಿನ ರಜೆ ಸಿಗಬಹುದು.
ಹಳೇ ಪದ್ಧತಿಯಂತೆ ದಿನಕ್ಕೆ 8 ಗಂಟೆ ಕೆಲಸವಾದರೆ, ವಾರದಲ್ಲಿ 6 ದಿನ ದುಡಿಯಬೇಕಾಗುತ್ತದೆ. ಆಗ ಸಿಗುವುದು ಒಂದೇ ದಿನ ರಜೆ.
ಓವರ್ ಟೈಮ್‌ಗೆ ಡಬಲ್ ಸಂಬಳ!: ಹೊಸ ಕಾಯ್ದೆಯ ಮತ್ತೊಂದು ಆಕರ್ಷಕ ಸಂಗತಿಯೆಂದರೆ ‘ಓವರ್ ಟೈಮ್’ ನಿಯಮ. ವಾರಕ್ಕೆ ನಿಗದಿಪಡಿಸಿದ 48 ಗಂಟೆಗಿಂತ ಒಂದು ನಿಮಿಷ ಹೆಚ್ಚು ಕೆಲಸ ಮಾಡಿಸಿಕೊಂಡರೂ, ಕಂಪನಿಗಳು ಉದ್ಯೋಗಿಗೆ ಎರಡು ಪಟ್ಟು ವೇತನವನ್ನು ನೀಡಲೇಬೇಕು ಎಂದು ಕಾಯ್ದೆ ಕಟ್ಟುನಿಟ್ಟಾಗಿ ಹೇಳುತ್ತದೆ.
ಕೈಗೆ ಸಿಗುವ ಸಂಬಳ ಕಡಿಮೆಯಾಗುತ್ತಾ?: ಈ ಹೊಸ ಲೇಬರ್ ಕೋಡ್ ಜಾರಿಯಾದರೆ ಕೇವಲ ರಜೆ ಮಾತ್ರವಲ್ಲ, ಸಂಬಳದ ರಚನೆಯಲ್ಲೂ ಬದಲಾವಣೆಯಾಗಲಿದೆ. ನಿಯಮದ ಪ್ರಕಾರ, ನೌಕರನ ಮೂಲ ವೇತನವು ಒಟ್ಟು ವೇತನದ (CTC) 50% ರಷ್ಟಿರಬೇಕು. ಇದರಿಂದ ನಿಮ್ಮ ಭವಿಷ್ಯ ನಿಧಿ (PF) ಮತ್ತು ಗ್ರಾಚ್ಯುಟಿ ಕಡಿತದ ಮೊತ್ತ ಹೆಚ್ಚಾಗಲಿದೆ.
ಪಿಎಫ್ ಹೆಚ್ಚು ಕಡಿತವಾಗುವುದರಿಂದ ನಿಮ್ಮ ಕೈಗೆ ಸಿಗುವ ತಿಂಗಳ ಸಂಬಳ ಸ್ವಲ್ಪ ಕಡಿಮೆಯಾಗಬಹುದು. ಆದರೆ, ನಿವೃತ್ತಿ ಜೀವನಕ್ಕೆ ದೊಡ್ಡ ಮೊತ್ತದ ಹಣ ಉಳಿತಾಯವಾಗುತ್ತದೆ ಎಂಬುದು ಇದರ ಧನಾತ್ಮಕ ಅಂಶ. ಅಲ್ಲದೆ, ಗಳಿಕೆ ರಜೆಗಳ ಮಿತಿಯನ್ನು 240 ರಿಂದ 300ಕ್ಕೆ ಏರಿಸುವ ಪ್ರಸ್ತಾಪವೂ ಇದರಲ್ಲಿದೆ.





















