ಮೈಸೂರು ದಸರಾ 2025: ಬಾನು ಮುಷ್ತಾಕ್ ಉದ್ಘಾಟನೆ, ಪ್ರತಾಪ್ ಸಿಂಹ ಅರ್ಜಿ ವಜಾ

0
59

ಮೈಸೂರು ದಸರಾ 2025 ಅನ್ನು ಬೂಕರ್ ಪ್ರಶಸ್ತಿ ಪುರಸ್ಕೃತ ಹಿರಿಯ ಲೇಖಕಿ ಬಾನು ಮುಷ್ತಾಕ್ ಉದ್ಘಾಟಿಸುವುದನ್ನು ಪ್ರಶ್ನಿಸಿ ಸಲ್ಲಿಕೆ ಮಾಡಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಸೆಪ್ಟೆಂಬರ್ 22ರಿಂದ 2ನೇ ಅಕ್ಟೋಬರ್ 2025ರ ತನಕ ಈ ಬಾರಿಯ ದಸರಾ ಮಹೋತ್ಸವ ನಡೆಯಲಿದೆ.

ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಇತರ ಮೂವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರಿದ್ದ ಪೀಠ ವಜಾಗೊಳಿಸಿದೆ. ಸರ್ಕಾರದ ತೀರ್ಮಾನದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದೆ.

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ನೀಡಿರುವ ಆಹ್ವಾನ ವಾಪಸ್ ಪಡೆಯಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಪ್ರತಾಪ್ ಸಿಂಹ, ಬೆಂಗಳೂರಿನ ಉದ್ಯಮಿ ಟಿ.ಗಿರೀಶ್ ಕುಮಾರ್, ಅಭಿನವ ಭಾರತ ಪಾರ್ಟಿ ರಾಷ್ಟ್ರೀಯ ಉಪಾಧ್ಯಕ್ಷೆ ಆರ್. ಸೌಮ್ಯ ಸಲ್ಲಿಸಿದ್ದ ಮೂರು ಪ್ರತ್ಯೇಕ ಅರ್ಜಿಗಳನ್ನು ಕೋರ್ಟ್ ವಜಾಗೊಳಿಸಿದೆ.

ಅರ್ಜಿ ವಿಚಾರಣೆ ವೇಳೆ ಪ್ರತಾಪ್ ಸಿಂಹ ಪರ ವಕೀಲರು, ಬಾನು ಮುಷ್ತಾಕ್ ಹಿಂದೂ ಸಂಪ್ರದಾಯ ವಿರೋಧಿ ಮತ್ತು ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ. ದಸರಾ ಉದ್ಘಾಟನೆ ಮಾಡುವವರು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡುವುದು ಶಿಷ್ಟಾಚಾರ ಎಂದು ವಾದ ಮಂಡಿಸಿದರು.

ಬಾನು ಮುಷ್ತಾಕ್‌ಗೆ ಅರಿಶಿಣ-ಕುಂಕುಮದ ಮೇಲೆ ನಂಬಿಕೆ ಇಲ್ಲ. ದಸರಾ ಹಿಂದೂ ಹಬ್ಬ ಜಾತ್ಯಾತೀತ ಹಬ್ಬವಲ್ಲ. ಬಾನು ಮುಷ್ತಾಕ್ ದೇವಾಲಯಕ್ಕೆ ಭೇಟಿ ನೀಡುವ ಶಿಷ್ಟಾಚಾರ ಪಾಲನೆ ಮಾಡಿಲ್ಲ ಎಂದು ವಾದ ಮಂಡಿಸಿದರು. ಆಹ್ವಾನವನ್ನು ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದ್ದರು.

ಸರ್ಕಾರದ ಪರವಾಗಿ ವಾದ ಮಂಡನೆ ಮಾಡಿದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಇದಕ್ಕೆ ತೀವ್ರ ಆಕ್ಷೇಪವನನ್ನು ವ್ಯಕ್ತಪಡಿಸಿದರು. ಇದು ರಾಜ್ಯದ ಹಬ್ಬ, ಸರ್ಕಾರದ ತೀರ್ಮಾನ ಸಂವಿಧಾನದ 15ನೇ ವಿಧಿಗೆ ಪೂರಕವಾಗಿದೆ ಎಂದು ವಾದಿಸಿದರು.

ಪ್ರತಾಪ್ ಸಿಂಹ ಸಂಸದರಾಗಿದ್ದ ಅವಧಿಯಲ್ಲಿಯೇ ಸಾಹಿತಿ ಕೆ.ಎಸ್.ನಿಸಾರ್ ಅಹ್ಮದ್ ಆಹ್ವಾನಿಸಿ ದಸರಾ ಉದ್ಘಾಟನೆ ಮಾಡಿಸಲಾಗಿತ್ತು. ಆಗ ಪ್ರತಾಪ್ ಸಿಂಹ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ.

ಬಾನು ಮುಷ್ತಾಕ್ ಬೂಕರ್ ಪ್ರಶಸ್ತಿ ಪುರಸ್ಕೃತರು. ಆದ್ದರಿಂದ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಲಾಗಿದೆ. ಆದ್ದರಿಂದ ಪ್ರತಾಪ್ ಸಿಂಹ ಅರ್ಜಿಯನ್ನು ವಜಾ ಮಾಡಿ, ಅವರಿಗೆ ದಂಡ ವಿಧಿಸಬೇಕು ಎಂದು ಮನವಿ ಮಾಡಿದರು.

ವಾದ ಆಲಿಸಿದ ನ್ಯಾಯಪೀಠ ಅರ್ಜಿದಾರರು ಕಾರ್ಯಕ್ರಮದಲ್ಲಿ ಅನ್ಯಧರ್ಮದ ವ್ಯಕ್ತಿ ಭಾಗಿಯಾಗುವುದರಿಂದ ಅರ್ಜಿದಾರರ ಯಾವುದೇ ಕಾನೂನಾತ್ಮಕ ಅಥವ ಸಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿದಂತೆ ಆಗುತ್ತದೆ ಮತ್ತು ಇದು ಸಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಸಾಬೀತು ಮಾಡಲು ವಿಫಲರಾಗಿದ್ದಾರೆ ಎಂದು ಹೇಳಿತು. ಅರ್ಜಿ ವಜಾಗೊಳಿಸಿತು.

ಸಿದ್ದರಾಮಯ್ಯ ಹೇಳಿಕೆ: ದಸರಾ ಉದ್ಘಾಟನೆ ವಿವಾದದ ಕುರಿತು ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಅವಕಾಶ ಕೊಡಬಾರದು ಎಂದು ಪ್ರತಾಪ್ ಸಿಂಹ ಅವರು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರೆ. ನ್ಯಾಯಾಲಯದಲ್ಲಿ ವಿಷಯ ಇತ್ಯರ್ಥವಾಗಲಿ’ ಎಂದು ಹೇಳಿದ್ದರು.

‘ದಸರಾ ಒಂದು ಧರ್ಮಕ್ಕೆ ಸೇರಿದ ಕಾರ್ಯಕ್ರಮವಲ್ಲ. ಸಾಂಸ್ಕೃತಿಕವಾಗಿ ಎಲ್ಲ ಧರ್ಮದ ಜನರು ಇದರಲ್ಲಿ ಭಾಗವಹಿಸುತ್ತಾರೆ. ದಸರಾ ನಾಡಹಬ್ಬವಾಗಿದ್ದು, ಒಂದು ಧರ್ಮದವರು ಮಾತ್ರ ಭಾಗವಹಿಸಬೇಕು ಎಂದೇನೂ ಇಲ್ಲ. ಸಾರ್ವತ್ರಿಕ ಹಬ್ಬದಲ್ಲಿ ಎಲ್ಲ ಜಾತಿ ಮತ್ತು ಧರ್ಮದವರು ಭಾಗವಹಿಸಬಹುದು. ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಸಮಾಜದ ಶಾಂತಿಭಂಗ ಮಾಡುವ ಕೆಲಸ ಮಾಡಿದರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ’ ಎಂದು ತಿಳಿಸಿದ್ದರು.

Previous articleರಾಯಚೂರು: ವಿಷ ಸೇವಿಸಿ ಮೂವರು ಯುವತಿಯರ ಆತ್ಮಹತ್ಯೆ ಯತ್ನ; ಒಬ್ಬಳು ಸಾವು
Next articleಪ್ರಚೋದನಕಾರಿ ಹೇಳಿಕೆ ನೀಡುವುದು ಬಿಜೆಪಿಗರ ಚಾಳಿ

LEAVE A REPLY

Please enter your comment!
Please enter your name here