ಬೆಂಗಳೂರು: ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಸರ್ಕಾರದಲ್ಲಿನ ‘ಕುರ್ಚಿ ಕಾದಾಟ’ ತಾರಕಕ್ಕೇರಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆಯ ಹಗ್ಗಜಗ್ಗಾಟ ಇದೀಗ ಮಠ-ಮಾನ್ಯಗಳ ಅಂಗಳ ತಲುಪಿದೆ.
ಈ ಬೆಳವಣಿಗೆಯಿಂದ ಬೇಸತ್ತಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ರಾಜಕಾರಣದಲ್ಲಿ ಧರ್ಮಪೀಠಗಳು ಹಸ್ತಕ್ಷೇಪ ಮಾಡಬಾರದು ಎಂದು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಮಠಾಧೀಶರಿಗೇಕೆ ರಾಜಕೀಯದ ಉಸಾಬರಿ?: ಶನಿವಾರ ನಡೆದ ಸಿಎಂ ಮತ್ತು ಡಿಸಿಎಂ ನಡುವಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಕೇವಲ ಉಪ್ಮಾ-ಕೇಸರಿಬಾತ್‌ಗೆ ಸೀಮಿತವಾಯಿತೇ ಹೊರತು, ಭಿನ್ನಮತ ಶಮನಕ್ಕಲ್ಲ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ, ಸ್ವಾಮೀಜಿಗಳ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, “ರಾಜಕಾರಣಿಗಳು ರಾಜಕಾರಣ ಮಾಡಲಿ, ಧರ್ಮಪೀಠಗಳು ಧರ್ಮದ ಕೆಲಸ ಮಾಡಲಿ. ಅದನ್ನು ಬಿಟ್ಟು ಸ್ವಾಮೀಜಿಗಳು ರಾಜಕೀಯ ನಾಯಕರ ಪರ ಬ್ಯಾಟಿಂಗ್ ಮಾಡುವುದು ಶೋಭೆಯಲ್ಲ,” ಎಂದು ಕಿವಿಮಾತು ಹೇಳಿದ್ದಾರೆ.
ಕಾಂಗ್ರೆಸ್‌ನ ಆಂತರಿಕ ಕಲಹದಲ್ಲಿ ಮಠಾಧೀಶರು ತಲೆಹಾಕುವುದು ಅನಗತ್ಯ ಮತ್ತು ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದಂತೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಧಿಕಾರ ಹೋದಾಗ ನಾನು ಮಠಕ್ಕೆ ಹೋಗಿರಲಿಲ್ಲ!: ತಮ್ಮ ರಾಜಕೀಯ ಜೀವನದ ಉದಾಹರಣೆ ನೀಡಿದ ಎಚ್‌ಡಿಕೆ, “ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೆ. ಅಧಿಕಾರ ಕಳೆದುಕೊಂಡಾಗ ಕುರ್ಚಿ ಉಳಿಸಿಕೊಡಿ ಎಂದು ಯಾವ ಮಠಾಧೀಶರ ಕಾಲಿಗೆ ಬೀಳಲು ಹೋಗಿರಲಿಲ್ಲ.
ರಾಜಕಾರಣಿಗಳ ಕೆಲಸವೇ ಬೇರೆ, ಸನ್ಯಾಸಿಗಳ ಧರ್ಮವೇ ಬೇರೆ. ಅಧಿಕಾರಕ್ಕಾಗಿ ಧಾರ್ಮಿಕ ಕ್ಷೇತ್ರಗಳನ್ನು ಗುರಾಣಿಯನ್ನಾಗಿ ಬಳಸಿಕೊಳ್ಳುವುದು ಅಕ್ಷಮ್ಯ,” ಎಂದು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡೆಯನ್ನು ಟೀಕಿಸಿದರು.
ಜಾತಿ ಸಂಘರ್ಷದ ಎಚ್ಚರಿಕೆ: ಇತ್ತೀಚೆಗೆ ಒಕ್ಕಲಿಗ ಸಮುದಾಯದ ಆದಿಚುಂಚನಗಿರಿ ಶ್ರೀಗಳು ಡಿ.ಕೆ. ಶಿವಕುಮಾರ್ ಪರವಾಗಿ ಮಾತನಾಡಿದ್ದರೆ, ಅತ್ತ ಕುರುಬ ಮತ್ತು ಶೋಷಿತ ಸಮುದಾಯದ ಪರವಾಗಿ ಕಾಗಿನೆಲೆ ಹಾಗೂ ನಿಡುಮಾಮಿಡಿ ಶ್ರೀಗಳು ಸಿದ್ದರಾಮಯ್ಯ ಪರ ನಿಂತಿದ್ದರು. ಬೆಳಗಾವಿಯ ವೀರಶೈವ ಶ್ರೀಗಳೂ ಈ ಕಚ್ಚಾಟದಲ್ಲಿ ದನಿಗೂಡಿಸಿದ್ದರು.
ಈ ಬೆಳವಣಿಗೆಯನ್ನು ಉಲ್ಲೇಖಿಸಿದ ಕುಮಾರಸ್ವಾಮಿ, “ಇದು ಕೇವಲ ಕಾಂಗ್ರೆಸ್ ಪಕ್ಷದ ಸಮಸ್ಯೆಯಲ್ಲ, ಇಡೀ ರಾಜ್ಯದ ನೆಮ್ಮದಿಯ ಪ್ರಶ್ನೆ. ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸವನ್ನು ಯಾರೂ ಮಾಡಬಾರದು. ಇದರಿಂದ ರಾಜ್ಯಕ್ಕೆ ದೊಡ್ಡ ನಷ್ಟವಾಗಲಿದೆ,” ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯದ ಜನತೆ 135ಕ್ಕೂ ಹೆಚ್ಚು ಸ್ಥಾನಗಳನ್ನು ನೀಡಿ ಸುಭದ್ರ ಸರ್ಕಾರ ರಚಿಸಲು ಕಾಂಗ್ರೆಸ್‌ಗೆ ಅವಕಾಶ ನೀಡಿದ್ದರು. ಆದರೆ, ಕಳೆದ ಎರಡೂವರೆ ವರ್ಷಗಳಲ್ಲಿ ಅಭಿವೃದ್ಧಿ ಮರೆತು ಕೇವಲ ಕುರ್ಚಿಗಾಗಿ ಕಚ್ಚಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ.
ಇವರಿಗೆ ಜನರ ಕಷ್ಟ-ಸುಖಗಳ ಅರಿವಿಲ್ಲ. ಇಂತಹ ಸರ್ಕಾರದ ಬಗ್ಗೆ ಮಾತನಾಡುವುದೇ ಸಮಯ ವ್ಯರ್ಥ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಒಟ್ಟಿನಲ್ಲಿ, ರಾಜಕೀಯದಲ್ಲಿ ಧರ್ಮಗುರುಗಳ ಹಸ್ತಕ್ಷೇಪಕ್ಕೆ ‘ಲಕ್ಷ್ಮಣ ರೇಖೆ’ ಇರಬೇಕು ಎಂಬುದನ್ನು ಕುಮಾರಸ್ವಾಮಿ ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ.






















Alright folks, gotta say ee11betcom is pretty slick! Been using it for a bit now and the interface is smooth. Give it a try, you might just like it! Check it out here: ee11betcom