ಬೆಂಗಳೂರು: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮಲೆನಾಡು ಕರಾವಳಿ ಭಾಗದಲ್ಲಿ ಮಳೆ, ಗಾಳಿಯ ಅಬ್ಬರ ಜೋರಾಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೇ ಅಂತ್ಯದಲ್ಲಿ ಆರಂಭವಾದ ಮಳೆ ಆಗಸ್ಟ್ 15 ಕಳೆದರೂ ಅಬ್ಬರಿಸುತ್ತಲೇ ಇದೆ. ಮಳೆ ಕಡಿಮೆಯಾಗಬಹುದು ಎಂಬ ಜನರ ನಿರೀಕ್ಷೆ ಹುಸಿಯಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(ಕೆಎಸ್‌ಎನ್‌ಎಂಡಿಸಿ) ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕರ್ನಾಟಕದ ಹವಾಮಾನದ ಕುರಿತು ಮಾಹಿತಿಯನ್ನು ನೀಡಿದೆ. ಈಗಾಗಲೇ ಕರ್ನಾಟಕದಲ್ಲಿ ಎಲ್ಲಾ ಡ್ಯಾಂಗಳು ಭರ್ತಿಯಾಗಿವೆ. ಇನ್ನೂ ಮಳೆ ಮುಂದುವರೆದರೆ ಕೃಷಿಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಭಾನುವಾರ ರಾಜ್ಯದಾದ್ಯಂತ ಚದುರಿದಂತೆ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಎಚ್ಚರಿಕೆ ವಹಿಸಿ ಎಂದು ಹೇಳಿದೆ. ಬೆಂಗಳೂರು ನಗರದಲ್ಲಿಯೂ ಜೋರಾದ ಗಾಳಿ, ಮೋಡ ಕವಿದ ವಾತಾವರಣ ಇರಲಿದ್ದು, ಆಗಾಗ ತುಂತುರು ಮಳೆಯಾಗಲಿದೆ.
ಮುಂದಿನ 7 ದಿನದ ಮಳೆ: ಕೆಎಸ್‌ಎನ್‌ಎಂಡಿಸಿ ಪ್ರಕಾರ ಮುಂದಿನ 7 ದಿನಗಳ ಮಳೆ ಮುನ್ಸೂಚನೆ ಹೀಗಿದೆ. ರಾಜ್ಯದಾದ್ಯಂತ ಜೋರಾದ ಗಾಳಿಯೊಂದಿಗೆ ಚದುರಿದಂತೆ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರೀ ಮಳೆ.
ಭಾನುವಾರದಿಂದ ಆಗಸ್ಟ್ 20ರ ತನಕ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅತಿ ಭಾರೀ ಹಾಗೂ ಆಗಸ್ಟ್ 19ರಂದು ಅತ್ಯಅಧಿಕ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ಕೊಡಲಾಗಿದೆ. ಕೆಎಸ್‌ಎನ್‌ಎಂಡಿಸಿ ಪ್ರಕಾರ ಆಗಸ್ಟ್ 17, 18 ಮತ್ತು 19ರಂದು ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆ. ಆಗಸ್ಟ್ 18ರಂದು ಭಾರೀ ಮಳೆ ಸಾಧ್ಯತೆ ಇದೆ.
ಹಾಸನ ಜಿಲ್ಲೆಯಲ್ಲಿ ಮಳೆ ಅಬ್ಬರಿಸುತ್ತಿದೆ. ಬೆಂಗಳೂರು-ಮಂಗಳೂರು ಸಂಪರ್ಕಿಸುವ ರೈಲು, ರಸ್ತೆ ಮಾರ್ಗದಲ್ಲಿ ಮಳೆಯ ಕಾರಣ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಶನಿವಾರ ರಾತ್ರಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್‌ನಲ್ಲಿ ಕಾರಿನ ಮೇಲೆ ಕುಸಿದು ಕಾರು ಜಖಂಗೊಂಡಿದೆ. ರಸ್ತೆಗೆ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಸಕಲೇಶಪುರ ತಾಲೂಕಿನಲ್ಲಿ ಭಾರೀ ಮಳೆಗೆ ರೈಲ್ವೆ ಹಳಿ ಮೇಲೆ ಹಲವು ಕಡೆಗಳಲ್ಲಿ ಗುಡ್ಡ ಕುಸಿದು ಬಿದ್ದಿದೆ. ಮಣ್ಣು, ಗಿಡ ಕುಸಿತದಿಂದಾಗಿ ರೈಲು, ಗೂಡ್ಸ್ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಯಡಕುಮಾರಿ ಬಳಿ ಘಟನೆ ನಡೆದಿದ್ದು ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗ ತಾತ್ಕಾಲಿಕವಾಗಿ ಬಂದ್ ಆಗಿದೆ. 7 ಕಿ.ಮೀ. ವ್ಯಾಪ್ತಿಯಲ್ಲಿ 15 ಕಡೆಗಳಲ್ಲಿ ಭೂಕುಸಿತವಾಗಿದ್ದು, ಹಳಿಗಳ ಮೇಲೆ ಮಳೆಯ ನೀರು ನಿಂತಿದೆ. ಆದ್ದರಿಂದ ಎಲ್ಲಾ ರೈಲುಗಳ ಸಂಚಾರ ಬಂದ್ ಮಾಡಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಆಗಸ್ಟ್ 20ರ ತನಕ ಕರ್ನಾಟಕದ ಉತ್ತರ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಹಾಗೂ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಮತ್ತು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಆಗಸ್ಟ್ 17ರಂದು ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್. ಆಗಸ್ಟ್ 18ರಂದು ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್. ದಕ್ಷಿಣ ಕನ್ನಡ, ಹಾಸನ, ಮೈಸೂರು, ಕೊಡಗು, ಬಾಗಲಕೋಟೆ, ಧಾರವಾಡ, ಗದಗ ಜಿಲ್ಲೆಗೆ ಆರೆಂಜ್ ಅಲರ್ಟ್.
ಬೆಂಗಳೂರು ನಗರದಲ್ಲಿ ಭಾರೀ ಗಾಳಿಯೊಂದಿಗೆ ಮೋಡ ಕವಿದ ವಾತಾವರಣವಿದೆ. ಆಗಸ್ಟ್ 19ರ ತನಕ ನಗರದಲ್ಲಿ ಗಾಳಿ ಮುಂದುವರೆಯಲಿದ್ದು, ಆಗಾಗ ತುಂತುರು ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.