KPSC: ಗೋಲ್‌ಮಾಲ್ ತಡೆಗೆ 5ನೇ ಗೊತ್ತಿಲ್ಲ ಆಪ್ಪನ್

0
51

ಕೆ.ವಿ.ಪರಮೇಶ್

KPSC. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೀಗ ಮಹತ್ವದ ಹೆಜ್ಜೆಯಿಟ್ಟಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ, ಇನ್ನು ಮುಂದೆ ತಾನು ನಡೆಸುವ ಎಲ್ಲಾ ನೇಮಕಾತಿ ಪರೀಕ್ಷೆಗಳ ಉತ್ತರ ಪತ್ರಿಕೆಗಳಲ್ಲಿ 5ನೇ ಆಯ್ಕೆಯನ್ನು ಕಡ್ಡಾಯಗೊಳಿಸಿದೆ.

ಈ ಹೊಸ ನಿಯಮ, ಖಾಲಿ ಬಿಟ್ಟ ಶೀಟ್‌ಗಳ ಮುಖೇನ ನಡೆಯುತ್ತಿದ್ದ ಅಕ್ರಮಗಳಿಗೆ ಸಂಪೂರ್ಣ ತಡೆ ಬೀಳಲಿದೆ. ಈ ಹೊಸ ಪ್ರಯೋಗವನ್ನು ಲೋಕಸೇವಾ ಆಯೋಗ ಅಳವಡಿಸಿಕೊಳ್ಳಲು ಮುಂದಾಗಿದೆ.

  • ಕೆಪಿಎಸ್ಸಿ ಲಿಖಿತ ಪ್ರಶ್ನೆ ಪತ್ರಿಕೆಗಳಲ್ಲಿ ನಾಲ್ಕು ಉತ್ತರಗಳಲ್ಲಿ ಒಂದನ್ನು ಆರಿಸಿಕೊಳ್ಳಬೇಕಿತ್ತು.
  • ಉತ್ತರ ಗೊತ್ತಿಲ್ಲದೆ ಇದ್ದಲ್ಲಿ ಯಾವುದನ್ನೂ ಆರಿಸದೆ, ಎಲ್ಲವನ್ನೂ ಖಾಲಿ ಬಿಡಬಹುದಿತ್ತು.
  • ಇದೇ ಅಕ್ರಮಗಳಿಗೆ ಕಾರಣ ಎನ್ನುವುದು ಗಮನಕ್ಕೆ ಬಂದಿದ್ದು, ಅದನ್ನ ತಡೆಗಟ್ಟಲು ಕ್ರಮ ಆಯೋಗ ಅಳವಡಿಸಿಕೊಳ್ಳಲು ಮುಂದಾಗಿದೆ.

ಹೊರ ರಾಜ್ಯಗಳಲ್ಲಿ ಸಕ್ಸೆಸ್: ಈಗಾಗಲೇ ತಮಿಳುನಾಡು ಹಾಗೂ ರಾಜಸ್ಥಾನ ಲೋಕಸೇವಾ ಆಯೋಗಗಳು ಸ್ಪರ್ಧಾತ್ಮಕ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ 5ನೇ ಆಯ್ಕೆ ನೀಡುವ ಮೂಲಕ ಅಕ್ರಮಗಳಿಗೆ ಕಡಿವಾಣ ಹಾಕಿವೆ. ಈ ಹಿಂದೆ, ಪಿಎಸ್‌ಐ ನೇಮಕಾತಿ ಪರೀಕ್ಷೆ ಸಹಿತ ಹಲವು ಪರೀಕ್ಷೆಗಳಲ್ಲಿ ಒಎಮ್‌ಆರ್ ಶೀಟ್‌ಗಳನ್ನು ತಿದ್ದಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಇದಕ್ಕೆ ಪರಿಹಾರವಾಗಿ, ತಮಿಳುನಾಡು ಮತ್ತು ರಾಜಸ್ಥಾನದ ಮಾದರಿಯಲ್ಲಿ ಅಭ್ಯರ್ಥಿಗಳು ಯಾವುದೇ ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದರೆ, ಐದನೇ ಆಯ್ಕೆಯನ್ನು ಕಡ್ಡಾಯವಾಗಿ ಗುರುತು ಮಾಡುವ ನಿಯಮವನ್ನು ಕೆಇಎ ಜಾರಿಗೆ ತಂದಿದೆ. ಇದನ್ನು ಗುರುತು ಮಾಡದೆ ಖಾಲಿ ಬಿಟ್ಟರೆ, ಪ್ರತಿ ಪ್ರಶ್ನೆಗೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಇದೀಗ ಕೆಇಎ ಮಾದರಿಯನ್ನು ಕರ್ನಾಟಕ ಲೋಕಸೇವಾ ಆಯೋಗ ಮತ್ತು ಇತರ ನೇಮಕಾತಿ ಸಂಸ್ಥೆಗಳೂ ಅಳವಡಿಸಿಕೊಳ್ಳಲು ಮುಂದಾಗಿವೆ.

ಏನಿದು ಆಯ್ಕೆ ಐದು?: ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ನೇಮಕಾತಿ ಪ್ರಾಧಿಕಾರಗಳು ಈವರೆಗೂ ಉತ್ತರಪತ್ರಿಕೆಯಲ್ಲಿ ಆಯ್ಕೆ ಎ, ಬಿ, ಸಿ, ಡಿ ಎಂದು ಉತ್ತರದ ನಾಲ್ಕು ಆಯ್ಕೆಗಳನ್ನು ನೀಡುತ್ತಿದ್ದವು. ಅಭ್ಯರ್ಥಿಗೆ ಉತ್ತರ ಗೊತ್ತಿಲ್ಲದಿದ್ದರೆ 4 ಆಯ್ಕೆಗಳನ್ನು ಖಾಲಿ ಬಿಡಬಹುದಾಗಿತ್ತು. ಆದರೆ ಖಾಲಿ ಬಿಟ್ಟರೆ ಅಕ್ರಮಗಳಿಗೆ ದಾರಿಯಾಗಬಹುದು ಎಂಬುದು ಲಕ್ಷಾಂತರ ಪರೀಕ್ಷಾರ್ಥಿಗಳ ಆತಂಕವಾಗಿತ್ತು. 2021ರಲ್ಲಿ ರಾಜ್ಯ ಪೊಲೀಸ್ ಇಲಾಖೆ ನಡೆಸಿದ್ದ ಸಬ್‌ಇನ್ಸ್‌ಪೆಕ್ಟರ್ ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳ ಉತ್ತರಪತ್ರಿಕೆ ತಿದ್ದಲಾಗಿದೆ ಎನ್ನುವ ಆರೋಪವಿತ್ತು. ಹಾಗಾಗಿ ಕೆಇಎ ಉತ್ತರ ಪತ್ರಿಕೆಯಲ್ಲಿ ಐದನೇ ಆಯ್ಕೆ ನೀಡಿದ್ದು ಕಡ್ಡಾಯವಾಗಿ ಭರ್ತಿ ಮಾಡುವಂತೆ ತಿಳಿಸಿದೆ.

ಏಕೆ ಈ ಹೊಸ ಪ್ರಯೋಗ: ಪರೀಕ್ಷೆಯಲ್ಲಿ ಪಾರದರ್ಶಕತೆ ಉದ್ದೇಶದಿಂದ ಕೆಇಎ ಉತ್ತರ ಪತ್ರಿಕೆಯಲ್ಲಿ 5ನೇ ಆಯ್ಕೆ ಕ್ರಮಕ್ಕೆ ಮುಂದಾಗಿದೆ. ಮಧ್ಯವರ್ತಿಗಳು ಕೆಲವು ವಿದ್ಯಾರ್ಥಿಗಳ ಬಳಿ ಉತ್ತರ ಪತ್ರಿಕೆ ಖಾಲಿ ಬಿಟ್ಟು ಬಂದರೆ ನಾವು ನಿಮ್ಮ ಪರವಾಗಿ ಉತ್ತರ ಬರೆಯಿಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಾಡುವುದಾಗಿ ಆಮಿಷ ಒಡ್ಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಹಾಗಾಗಿ ಕೆಇಎ ಮುಂದಿನ ದಿನಗಳಲ್ಲಿ ನಡೆಸಲು ಉದ್ದೇಶಿಸಿರುವ ಸಹಾಯಕ ಪ್ರಧ್ಯಾಪಕ ಹುದ್ದೆಗಳು, ಬಿಎಂಟಿಸಿ ನಿರ್ವಾಹಕ ಹುದ್ದೆಗಳು, ಗ್ರಾಮ ಲೆಕ್ಕಾಧಿಕಾರಿ ಹುದ್ದೆ, ವಿವಿಧ ನಿಗಮ ಮಂಡಳಿಗಳ ಗುಮಾಸ್ತರ ಹುದ್ದೆ ಸೇರಿದಂತೆ ಎಲ್ಲಾ ನೇಮಕಾತಿ ಪರೀಕ್ಷೆಗಳ ಉತ್ತರಪತ್ರಿಕೆಗಳಲ್ಲಿ ಐದನೇ ಆಯ್ಕೆಯನ್ನು ಕಡ್ಡಾಯವಾಗಿ ಅಳವಡಿಸಲಾಗುತ್ತಿದೆ.

“ಕೆಇಎ ಮೊದಲಿನಿಂದಲೂ ಪಾರದರ್ಶಕವಾಗಿ ವಿವಿಧ ಪರೀಕ್ಷೆಗಳನ್ನು ನಡೆಸಿಕೊಂಡು ಬರುತ್ತಿದೆ. ಡಾ.ಎಂ.ಆರ್. ಜಯರಾಮ್ ಸಮಿತಿ ಶಿಫಾರಸಿನಂತೆ ಪರೀಕ್ಷೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಉತ್ತರ ಪತ್ರಿಕೆಯಲ್ಲಿ ಐದನೇ ಆಯ್ಕೆಯನ್ನು ಪರಿಚಯಿಸಿದೆ. ಇದು ಖಂಡಿತವಾಗಿ ಸಕಾರಾತ್ಮಕ ಕ್ರಮ ಆಗಲಿದೆ ಎಂಬ ವಿಶ್ವಾಸವಿದೆ” ಎಂದು ಪ್ರಸನ್ನ ಹೆಚ್., ಕಾರ್ಯನಿರ್ವಾಹಕ ಅಧಿಕಾರಿ ಹೇಳಿದ್ದಾರೆ.

5ನೇ ಆಯ್ಕೆ ಬಳಸದಿದ್ದರೆ ಕತ್ತರಿ: ಉತ್ತರ ಪತ್ರಿಕೆಯಲ್ಲಿ 5 ಆಯ್ಕೆಗಳನ್ನು ನೀಡಲಾಗಿದೆ. ಉತ್ತರ ಗೊತ್ತಿಲ್ಲದಿದ್ದರೆ 5ನೇ ಆಯ್ಕೆಯನ್ನು ಗುರುತು ಮಾಡಬೇಕು. ಇದಕ್ಕೆಂದೇ ಹೆಚ್ಚುವರಿಯಾಗಿ 5 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಗುರುತು ಮಾಡದೆ ಖಾಲಿ ಬಿಟ್ಟರೆ ಸರಿಯುತ್ತರದಲ್ಲಿ 0.25 ಅಂಕಗಳಿಗೆ ಕತ್ತರಿ ಬೀಳಲಿದೆ ಎಂದು ಕೆಇಎ ಸ್ಪಷ್ಟಪಡಿಸಿದೆ.

Previous articleಮೈಸೂರು: ಚಾಮುಂಡಿ ಬೆಟ್ಟದ ಶಿವಾರ್ಚಕರ ನಿಧನ – ದೇವಿ ದರ್ಶನಕ್ಕೆ ತಾತ್ಕಾಲಿಕ ನಿರ್ಬಂಧ
Next articleವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಮತ್ತೊಂದು ಹೆಜ್ಜೆ: ಆಸ್ಟ್ರಿಯಾದಿಂದ ಅಗ್ನಿಶಾಮಕ ವಾಹನ ಆಗಮನ

LEAVE A REPLY

Please enter your comment!
Please enter your name here