ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ರಾಜ್ಯಾದ್ಯಂತ ಏಕಕಾಲದಲ್ಲಿ 500 ‘ನಂದಿನಿ ಮಳಿಗೆ’ ಉದ್ಘಾಟನೆ ಮಾಡಿದೆ. ಕಳೆದ 5 ದಶಕಗಳಿಂದ ‘ನಂದಿನಿ’ ಬ್ರಾಂಡ್‌ನಲ್ಲಿ ಪರಿಶುದ್ಧ ಹಾಗೂ ರುಚಿಕರ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಕರ್ನಾಟಕ ರಾಜ್ಯ ಸೇರಿದಂತೆ ಹೊರರಾಜ್ಯ ಮತ್ತು ಹೊರದೇಶಗಳಲ್ಲಿಯೂ ಸಹ ಮಾರಾಟ ಮಾಡಲಾಗುತ್ತಿದ್ದು ಗ್ರಾಹಕರ ವಿಶ್ವಾಸಾರ್ಹ ಹಾಲಿನ ಬ್ರಾಂಡ್ ಆಗಿದೆ.
ಕೆಎಂಎಫ್ ಸಂಸ್ಥೆಯು ಪ್ರಸ್ತುತ ರಾಜ್ಯದ ಹೈನುಗಾರ ರೈತರಿಂದ ಪ್ರತಿನಿತ್ಯ ಸರಾಸರಿ 1 ಕೋಟಿ ಲೀಟರ್ ಹಾಲು ಶೇಖರಣೆ ಮಾಡಿ ರಾಜ್ಯ ಮತ್ತು ಹೊರರಾಜ್ಯ ಮಾರುಕಟ್ಟೆ ಸೇರಿದಂತೆ 64 ಲಕ್ಷ ಲೀಟರ್ ಹಾಲು, ಮೊಸರು ಹಾಗೂ ಯುಹೆಚ್‌ಟಿ ಹಾಲು ಚಿಲ್ಲರೆ ರೂಪದಲ್ಲಿ ಪ್ರತಿನಿತ್ಯ ಮಾರಾಟ ಮಾಡುತ್ತಿದೆ.
ಹೆಚ್ಚುವರಿ ಹಾಲನ್ನು ಶಾಲಾ ಮಕ್ಕಳ ಕೀರಭಾಗ್ಯ ಯೋಜನೆ ಅಡಿಯಲ್ಲಿ ಹಾಲಿನ ಪುಡಿ ಮತ್ತು ಇತರೆ ಹಾಲಿನ ಉತ್ಪನ್ನಗಳಾದ ತುಪ್ಪ, ಬೆಣ್ಣೆ, ಪನೀರ್, ಚೀಸ್, ಸಿಹಿ ತಿನಿಸು, ತಯಾರಿಕೆಗೆ ಬಳಸಲಾಗುತ್ತಿದೆ. ನಂದಿನಿ ಉತ್ಪನ್ನಗಳನ್ನು ರಾಜ್ಯ ಮಾರುಕಟ್ಟೆ ಸೇರಿದಂತೆ ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಗೋವಾ, ದೆಹಲಿ, ಮಹಾರಾಷ್ಟ್ರ, ಉತ್ತರ ಪ್ರದೇಶ ಜೊತೆಗೆ ಜಮ್ಮು ಮತ್ತು ಕಾಶ್ಮೀರಗಳಲ್ಲಿಯೂ ಸಹ ಮಾರಾಟ ಮಾಡಲಾಗುತ್ತಿದೆ.
ನಂದಿನಿ ಬ್ರಾಂಡ್‌ನ ಎಲ್ಲಾ ಉತ್ಪನ್ನಗಳನ್ನು ರಾಜ್ಯಾದ್ಯಂತ ಈಗಾಗಲೇ ಇರುವ 2,598 ಸಂಖ್ಯೆ ನಂದಿನಿ ಮಳಿಗೆಗಳು ಹಾಗು 17000 ಹಾಲು ಮಾರಾಟಗಾರರ ಮೂಲಕ ಗ್ರಾಹಕರಿಗೆ ಸಕಾಲದಲ್ಲಿ ಕೈಗೆಟುಕುವ ಬೆಲೆಗಳಲ್ಲಿ ದೊರೆಯುವಂತೆ ವ್ಯವಸ್ಥಿತ ಮಾರುಕಟ್ಟೆಯನ್ನು ಕಲ್ಪಿಸಲಾಗಿದೆ. ಸೆಪ್ಟೆಂಬರ್ 17ರಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ ರಾಜ್ಯದಾದ್ಯಂತ 500 ಹೊಸ ನಂದಿನಿ ಮಳಿಗೆಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ, ಕಲಬುರಗಿ, ಬೀದರ್ ಮತ್ತು ಯಾದಗಿರಿ ಪ್ರದೇಶಗಳಲ್ಲಿ 68 ಸಂಖ್ಯೆ ಹೊಸ ನಂದಿನಿ ಮಳಿಗೆಗಳು ಆಂಭವಾಗಿವೆ. ಇಡೀ ರಾಜ್ಯಾದ್ಯಂತ ಒಟ್ಟಾರೆ 500 ನಂದಿನಿ ಮಳಿಗೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕಲಬುರಗಿ ನಗರ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ‘ನಂದಿನಿ ಮಳಿಗೆ’ಯನ್ನು ಸಾಂಕೇತಿವಾಗಿ ಉದ್ಘಾಟಿಸುವ ಮೂಲಕ ಏಕಕಾಲದಲ್ಲಿ ಎಲ್ಲಾ ಮಳಿಗೆಗಳಿಗೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಸೇರಿ ಹಲವರು ಪಾಲ್ಗೊಂಡಿದ್ದರು.
ಕೆಎಂಎಫ್ ಇತಿಹಾಸದಲ್ಲಿ ಇದು ಒಂದು ಪ್ರಮುಖ ಮೈಲುಗಲ್ಲಾಗಿದ್ದು, ‘ನಂದಿನಿ’ ಬ್ರಾಂಡ್ ಪ್ರಚಾರ ಜೊತೆಗೆ ಉತ್ಪನ್ನಗಳ ವಹಿವಾಟು ವಿಸ್ತರಣೆಗೆ ಅನುಕೂಲವಾಗಲಿದೆ ಎಂದು ಕೆಎಂಎಫ್ ಹೇಳಿದೆ.