“ಕಾಯಕವೇ ಕೈಲಾಸ” ಎಂಬ ಬಸವಣ್ಣನವರ ವಾಣಿಯನ್ನು ನಿಜವಾಗಿಸುತ್ತಾ, ತಮ್ಮ ಕುಲಕಸುಬುಗಳನ್ನೇ ನಂಬಿ ಬದುಕು ಸಾಗಿಸುತ್ತಿರುವ ವೀರಶೈವ ಲಿಂಗಾಯತ ಸಮುದಾಯದ ಕಾಯಕಜೀವಿಗಳಿಗೆ ಆರ್ಥಿಕ ಶಕ್ತಿ ತುಂಬಲು ಕರ್ನಾಟಕ ಸರ್ಕಾರವು “ಕಾಯಕ ಕಿರಣ” ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದೆ.
ಸಾಂಪ್ರದಾಯಿಕ ವೃತ್ತಿಗಳಿಗೆ ಉತ್ತೇಜನ ನೀಡಿ, ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. ಅರ್ಹ ಫಲಾನುಭವಿಗಳಿಗೆ ಗರಿಷ್ಠ 1 ಲಕ್ಷ ರೂಪಾಯಿಗಳವರೆಗೆ ಆರ್ಥಿಕ ನೆರವು ದೊರೆಯಲಿದ್ದು, ಇದರಲ್ಲಿ ಶೇ.50ರಷ್ಟು ಸಹಾಯಧನವೂ ಸೇರಿದೆ.

ಏನಿದು ಕಾಯಕ ಕಿರಣ ಯೋಜನೆ?: ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಡಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ “ಕಾಯಕ ಕಿರಣ” ಯೋಜನೆಯು, ಸಮುದಾಯದ ಕುಶಲಕರ್ಮಿಗಳು ಮತ್ತು ಸಾಂಪ್ರದಾಯಿಕ ಕಸುಬುದಾರರಿಗೆ ಆರ್ಥಿಕ ಬೆಂಬಲ ನೀಡುವ ಒಂದು ಕಲ್ಯಾಣ ಕಾರ್ಯಕ್ರಮವಾಗಿದೆ.
ಈ ಯೋಜನೆಯಡಿ, ಹೊಸ ಉದ್ಯಮ ಆರಂಭಿಸಲು ಅಥವಾ ಅಸ್ತಿತ್ವದಲ್ಲಿರುವ ವೃತ್ತಿಯನ್ನು ವಿಸ್ತರಿಸಲು ಗರಿಷ್ಠ 1 ಲಕ್ಷ ರೂಪಾಯಿಗಳವರೆಗೆ ನೆರವು ನೀಡಲಾಗುತ್ತದೆ. ಇದರಲ್ಲಿ 50 ಸಾವಿರ ರೂಪಾಯಿಗಳವರೆಗೆ ಸಹಾಯಧನ (ಸಬ್ಸಿಡಿ) ಲಭ್ಯವಿದ್ದು, ಉಳಿದ ಮೊತ್ತವನ್ನು ವಾರ್ಷಿಕ ಕೇವಲ ಶೇ. 4ರಷ್ಟು ಕಡಿಮೆ ಬಡ್ಡಿ ದರದಲ್ಲಿ ಸಾಲವಾಗಿ ಒದಗಿಸಲಾಗುತ್ತದೆ.
ಯೋಜನೆಯ ಪ್ರಮುಖ ಉದ್ದೇಶಗಳು: ವೀರಶೈವ ಲಿಂಗಾಯತ ಸಮುದಾಯದ ಸಾಂಪ್ರದಾಯಿಕ ವೃತ್ತಿಗಳನ್ನು ಉಳಿಸಿ, ಬೆಳೆಸುವುದು ಮತ್ತು ಆರ್ಥಿಕವಾಗಿ ಹಿಂದುಳಿದ ವೃತ್ತಿಪರರಿಗೆ ಸ್ವಾವಲಂಬನೆಯ ಮಾರ್ಗ ತೋರಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ. ನಿಗಮವು ಗುರುತಿಸಿರುವ ಒಟ್ಟು 47 ವಿವಿಧ ಕುಲಕಸುಬುಗಳಿಗೆ ಈ ಯೋಜನೆಯ ಪ್ರಯೋಜನಗಳು ಲಭ್ಯವಿದೆ.
ಯಾವೆಲ್ಲಾ ವೃತ್ತಿಗಳಿಗೆ ಆರ್ಥಿಕ ಬೆಂಬಲ ಲಭ್ಯ?: ಕಾಯಕ ಕಿರಣ ಯೋಜನೆಯು ಸಮಾಜದ ಬೇರುಗಳಂತಿರುವ ಅನೇಕ ಸಾಂಪ್ರದಾಯಿಕ ವೃತ್ತಿಗಳನ್ನು ತನ್ನ ವ್ಯಾಪ್ತಿಗೆ ತೆಗೆದುಕೊಂಡಿದೆ. ಪ್ರಮುಖವಾಗಿ ಈ ಕೆಳಗಿನ ವೃತ್ತಿಗಳಲ್ಲಿ ತೊಡಗಿಸಿಕೊಂಡವರು ಇದರ ಪ್ರಯೋಜನ ಪಡೆಯಬಹುದು.
- ಬಡಗಿ ಮತ್ತು ಮರಗೆತ್ತನೆ
- ಕುಂಬಾರಿಕೆ ಮತ್ತು ಮಣ್ಣಿನ ಕಲಾಕೃತಿಗಳ ತಯಾರಿಕೆ
- ಕ್ಷೌರಿಕ ವೃತ್ತಿ (ಸೆಲೂನ್)
- ಚಿನ್ನ ಮತ್ತು ಬೆಳ್ಳಿ ಕೆಲಸ
- ಕಮ್ಮಾರಿಕೆ ಮತ್ತು ಕುಲುಮೆ ಕೆಲಸ
- ಟೈಲರಿಂಗ್ ಮತ್ತು ಬಟ್ಟೆ ಹೊಲಿಯುವಿಕೆ
- ಲಾಂಡ್ರಿ/ದೋಬಿ ಕೆಲಸ
- ಮೀನುಗಾರಿಕೆ
- ಹೂ ಕಟ್ಟುವಿಕೆ, ಹೈನುಗಾರಿಕೆ (ಗೌಳಿ ವೃತ್ತಿ)
- ಬಿದಿರು ಮತ್ತು ಬೆತ್ತದ ವಸ್ತುಗಳ ತಯಾರಿಕೆ
- ಚರ್ಮದ ಉತ್ಪನ್ನಗಳ ತಯಾರಿಕೆ
- ಅಡಿಕೆ ಹಾಳೆಯ ತಟ್ಟೆ ತಯಾರಿಕೆ
- ವೆಲ್ಡಿಂಗ್ ಮತ್ತು ಮೆಕ್ಯಾನಿಕಲ್ ರಿಪೇರಿ
ಈ ಪಟ್ಟಿಯಲ್ಲಿರುವ 47 ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಯಾರಿಗಾದರೂ ಈ ಯೋಜನೆಯ ಲಾಭ ಪಡೆಯಲು ಅವಕಾಶವಿದೆ.
ಅರ್ಹತಾ ಮಾನದಂಡಗಳು:
ಸಮುದಾಯ: ಅರ್ಜಿದಾರರು ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿರಬೇಕು ಮತ್ತು ಸಕ್ಷಮ ಪ್ರಾಧಿಕಾರದಿಂದ ಪಡೆದ ಜಾತಿ ಪ್ರಮಾಣಪತ್ರ ಹೊಂದಿರಬೇಕು.
ವಯೋಮಿತಿ: 18 ರಿಂದ 55 ವರ್ಷದೊಳಗಿನವರಾಗಿರಬೇಕು.
ವಾರ್ಷಿಕ ಆದಾಯ: ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದವರಿಗೆ 98 ಸಾವಿರ ರೂ. ಮತ್ತು ನಗರ ಪ್ರದೇಶದವರಿಗೆ 1,20 ಸಾವಿರ ರೂ.ಗಳ ಮಿತಿಯಲ್ಲಿರಬೇಕು.
ಹಿಂದಿನ ಸೌಲಭ್ಯ: ಕಳೆದ 3 ವರ್ಷಗಳಲ್ಲಿ ಸರ್ಕಾರದ ಯಾವುದೇ ಯೋಜನೆ ಅಡಿಯಲ್ಲಿ ಸಹಾಯಧನ ಅಥವಾ ಸಾಲ ಪಡೆದಿರಬಾರದು.
ಕುಟುಂಬಕ್ಕೆ ಒಬ್ಬರಿಗೆ ಮಾತ್ರ: ಒಂದು ಕುಟುಂಬದಲ್ಲಿ ಕೇವಲ ಒಬ್ಬ ಸದಸ್ಯರಿಗೆ ಮಾತ್ರ ಈ ಸೌಲಭ್ಯ ಲಭ್ಯ.
ಮಹಿಳೆಯರು ಮತ್ತು ವಿಶೇಷಚೇತನರಿಗೆ ಮೀಸಲಾತಿ: ಈ ಯೋಜನೆಯಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮತ್ತು ಅಂಗವಿಕಲರಿಗೆ ಶೇ. 5ರಷ್ಟು ಮೀಸಲಾತಿಯನ್ನು ನಿಗದಿಪಡಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೂ ಆದ್ಯತೆ ನೀಡಲಾಗಿದೆ.
ಸಾಲ ಮತ್ತು ಸಹಾಯಧನದ ಸಂಪೂರ್ಣ ವಿವರ: 50 ಸಾವಿರ ರೂ. ವರೆಗಿನ ಯೋಜನೆಗೆ: ಶೇ. 50ರಷ್ಟು (ಗರಿಷ್ಠ 25 ಸಾವಿರ ರೂ.) ಸಹಾಯಧನ ಮತ್ತು ಉಳಿದ ಮೊತ್ತಕ್ಕೆ ಶೇ. 4ರ ಬಡ್ಡಿದರದಲ್ಲಿ ಸಾಲ.
50ಸಾವಿರದ 1 ರಿಂದ 1 ಲಕ್ಷ ರೂ. ವರೆಗಿನ ಯೋಜನೆಗೆ: ಶೇ. 50ರಷ್ಟು (ಗರಿಷ್ಠ 50 ಸಾವಿರ ರೂ.) ಸಹಾಯಧನ ಮತ್ತು ಉಳಿದ ಮೊತ್ತಕ್ಕೆ ಶೇ. 4ರ ಬಡ್ಡಿದರದಲ್ಲಿ ಸಾಲ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ: ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಪೂರ್ಣವಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ತಮ್ಮ ಜಿಲ್ಲೆಯ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಕಚೇರಿಗೆ ಸಲ್ಲಿಸಬೇಕು. ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಬ್ಯಾಂಕ್ ಪಾಸ್‌ಬುಕ್ ಪ್ರತಿ, ಪಡಿತರ ಚೀಟಿ, ಮತ್ತು ಕೈಗೊಳ್ಳುವ ಉದ್ಯಮದ ಕುರಿತಾದ ಯೋಜನಾ ವರದಿಯನ್ನು ಲಗತ್ತಿಸುವುದು ಕಡ್ಡಾಯವಾಗಿದೆ.
ಆಯ್ಕೆ ಪ್ರಕ್ರಿಯೆ ಮತ್ತು ಸಾಲ ಮರುಪಾವತಿ: ಜಿಲ್ಲಾ ವ್ಯವಸ್ಥಾಪಕರ ನೇತೃತ್ವದಲ್ಲಿ ರಚಿಸಲಾದ ಆಯ್ಕೆ ಸಮಿತಿಯು ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುತ್ತದೆ. ಆಯ್ಕೆಯಾದ ನಂತರ, ಸಾಲ ಮತ್ತು ಸಹಾಯಧನದ ಮೊತ್ತವನ್ನು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಸಾಲ ಪಡೆದವರು 2 ತಿಂಗಳ ವಿರಾಮದ ಅವಧಿ ಸೇರಿದಂತೆ ಒಟ್ಟು 34 ಮಾಸಿಕ ಕಂತುಗಳಲ್ಲಿ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ. ನಿಗದಿತ ಸಮಯಕ್ಕೆ ಕಂತು ಪಾವತಿಸದಿದ್ದಲ್ಲಿ, ಶೇ. 2ರಷ್ಟು ಸುಸ್ತಿ ಬಡ್ಡಿಯನ್ನು ವಿಧಿಸಲಾಗುತ್ತದೆ.
ಉದ್ಯಮಶೀಲತೆಗೆ ತರಬೇತಿ: ಕೇವಲ ಆರ್ಥಿಕ ನೆರವು ನೀಡುವುದಷ್ಟೇ ಅಲ್ಲದೆ, ಆಯ್ಕೆಯಾದ ಫಲಾನುಭವಿಗಳಿಗೆ ತಮ್ಮ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಲು ಅನುಕೂಲವಾಗುವಂತೆ ನಿಗಮದ ವತಿಯಿಂದ ಉದ್ಯಮಶೀಲತಾ ತರಬೇತಿಯನ್ನೂ ನೀಡಲಾಗುತ್ತದೆ. ಇದು ಘಟಕದ ನಿರ್ವಹಣೆ, ಮಾರುಕಟ್ಟೆ ತಂತ್ರಗಳು, ಮತ್ತು ಸಾಲದ ಸದ್ಬಳಕೆಯ ಬಗ್ಗೆ ಅಮೂಲ್ಯವಾದ ಅರಿವು ಮೂಡಿಸುತ್ತದೆ.

























