ಕುರ್ಚಿ ಕದನ ಕ್ಲೈಮ್ಯಾಕ್ಸ್: ಸಿದ್ದು ಇಳೀತಾರಾ? ಡಿಕೆಶಿ ಏರ್ತಾರಾ?

0
5

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಹೊತ್ತಿಕೊಂಡಿರುವ ನಾಯಕತ್ವ ಬದಲಾವಣೆಯ ಕಿಚ್ಚು ಇದೀಗ ಅಂತಿಮ ಹಂತ ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆಯ ಶೀತಲ ಸಮರ, ಇದೀಗ ನಿರ್ಣಾಯಕ ‘ಕ್ಲೈಮ್ಯಾಕ್ಸ್’ ಹಂತಕ್ಕೆ ಬಂದು ನಿಂತಿದ್ದು, ಹೈಕಮಾಂಡ್ ಅಂಗಳದಲ್ಲಿ ಚೆಂಡು ಉರುಳಾಡುತ್ತಿದೆ.

ದೆಹಲಿಯಲ್ಲಿ ಬಿಗ್ ಮೀಟಿಂಗ್: ವಿದೇಶ ಪ್ರವಾಸ ಮುಗಿಸಿ ಸೋನಿಯಾ ಗಾಂಧಿ ಇಂದು ರಾತ್ರಿ ದೆಹಲಿಗೆ ಮರಳಲಿದ್ದಾರೆ. ಅವರು ಬರುತ್ತಿದ್ದಂತೆಯೇ ಭಾನುವಾರ ಸಂಜೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಕೆ.ಸಿ. ವೇಣುಗೋಪಾಲ್ ನೇತೃತ್ವದಲ್ಲಿ ಮಹತ್ವದ ರಹಸ್ಯ ಸಭೆ ನಡೆಯಲಿದೆ.

ರಾಜ್ಯದಲ್ಲಿ ಉಂಟಾಗಿರುವ ಗೊಂದಲ, ಆಡಳಿತ ಯಂತ್ರದ ಮೇಲೆ ಬೀರುತ್ತಿರುವ ಪರಿಣಾಮ ಮತ್ತು ಎರಡೂವರೆ ವರ್ಷದ ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ಈ ಸಭೆಯಲ್ಲಿ ತೀರ್ಮಾನವಾಗುವ ಸಾಧ್ಯತೆಯಿದೆ. ಸಭೆಯ ನಂತರ ಇಬ್ಬರೂ ನಾಯಕರನ್ನು ದೆಹಲಿಗೆ ಕರೆಸಿಕೊಂಡು ಅಂತಿಮ ಸಂದೇಶ ರವಾನಿಸಲು ಹೈಕಮಾಂಡ್ ಸಜ್ಜಾಗಿದೆ.

ಬೆಳಗಾವಿ ಅಧಿವೇಶನವೇ ಡೆಡ್‌ಲೈನ್?: ಡಿಸೆಂಬರ್ 8ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಅಷ್ಟರೊಳಗೆ ಮನೆಯ ಜಗಳವನ್ನು ಬಗೆಹರಿಸದಿದ್ದರೆ, ಸದನದಲ್ಲಿ ವಿಪಕ್ಷಗಳ ಬಾಯಿಗೆ ಆಹಾರವಾಗುವುದು ಖಚಿತ ಎಂಬ ಆತಂಕ ಕಾಂಗ್ರೆಸ್ ವರಿಷ್ಠರಿಗಿದೆ.

ಹೀಗಾಗಿ ಅಧಿವೇಶನಕ್ಕೂ ಮುನ್ನವೇ ಸಿಎಂ ಬದಲಾವಣೆ ಅಥವಾ ಅಧಿಕಾರ ಹಂಚಿಕೆಯ ಸ್ಪಷ್ಟ ಚಿತ್ರಣ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ.ಸದ್ಯ ಸಿಎಂ ಮತ್ತು ಡಿಸಿಎಂ ಬಣಗಳೆರಡೂ ದೆಹಲಿಯತ್ತ ಮುಖ ಮಾಡಿದ್ದು, ಸಿದ್ದರಾಮಯ್ಯನವರ ‘ಪದತ್ಯಾಗ’ ಆಗಲಿದೆಯೇ ಅಥವಾ ಡಿಕೆಶಿಯವರ ‘ಪಟ್ಟಾಭಿಷೇಕ’ ನಡೆಯಲಿದೆಯೇ ಎಂಬ ಕುತೂಹಲ ಕಾರ್ಯಕರ್ತರಲ್ಲಿ ಮನೆಮಾಡಿದೆ.

Previous articleಬಿಲೈವ್ ಇಝಿಯ ಇವಿ ಬಾಡಿಗೆಯ ಫ್ರಾಂಚೈಸಿ ಜನಪ್ರಿಯ: ಬೆಂಗಳೂರಿನಲ್ಲಿ 5,000 ಇವಿ ವಾಹನಗಳ ದುಪ್ಪಟ್ಟುಗೊಳಿಸಲು ಸಜ್ಜು
Next articleUGC ಆದೇಶ: ನಿಗದಿತ ವೇಳೆಗೆ ಪರೀಕ್ಷೆ – ಪ್ರಮಾಣಪತ್ರ ಕಡ್ಡಾಯ!

LEAVE A REPLY

Please enter your comment!
Please enter your name here