ಕರ್ನಾಟಕ ರಾಜಕೀಯದಲ್ಲಿ ಸಂಚಲನ ಮೂಡಿಸುವ ಮಹತ್ವದ ಬೆಳವಣಿಗೆಯೊಂದು ನವೆಂಬರ್‌ನಲ್ಲಿ ನಡೆಯುವ ಸಾಧ್ಯತೆಯಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ದೊಡ್ಡಮಟ್ಟದ ಪುನರ್‌ರಚನೆಗೆ ಹೈಕಮಾಂಡ್ ಸಿದ್ಧತೆ ನಡೆಸಿದೆ.
ಸುಮಾರು 15 ಹಾಲಿ ಸಚಿವರಿಗೆ ಕೊಕ್ ನೀಡಿ, ಹೊಸ ಮುಖಗಳಿಗೆ ಹಾಗೂ ಹಿರಿಯ ಶಾಸಕರಿಗೆ ಅವಕಾಶ ಕಲ್ಪಿಸುವ ಚಿಂತನೆ ನಡೆದಿದೆ ಎನ್ನಲಾಗಿದೆ. 2028ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಅಸಮಾಧಾನಿತ ಶಾಸಕರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳುವ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಕಾಂಗ್ರೆಸ್‌ಗಿದೆ.
ಬಿಹಾರ ಚುನಾವಣೆ ಮುಗಿದ ನಂತರ, ನವೆಂಬರ್ ಎರಡನೇ ವಾರದಲ್ಲಿ ರಾಜ್ಯ ನಾಯಕರು ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಅಂತಿಮ ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಹಸಿರು ನಿಶಾನೆ ದೊರೆಯುತ್ತಿದ್ದಂತೆಯೇ ಸಂಪುಟ ಪುನರ್‌ರಚನೆಯ ಕಸರತ್ತು ಅಧಿಕೃತವಾಗಿ ಆರಂಭವಾಗಲಿದೆ.
ನವೆಂಬರ್ ಅಂತ್ಯದ ವೇಳೆಗೆ ಬಹುತೇಕ 15ಕ್ಕೂ ಹೆಚ್ಚು ಹಾಲಿ ಸಚಿವರು ತಮ್ಮ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಪಟ್ಟಿಯಲ್ಲಿ ಘಟಾನುಘಟಿ ನಾಯಕರ ಹೆಸರುಗಳೂ ಕೇಳಿಬರುತ್ತಿದ್ದು, ಅವರ ಪ್ರಭಾವ, ಹಿರಿತನ ಮತ್ತು ಅನುಭವದ ಹೊರತಾಗಿಯೂ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ಪಕ್ಷ ಸಂಘಟನೆಯಂತಹ ಮಹತ್ವದ ಜವಾಬ್ದಾರಿಗಳನ್ನು ವಹಿಸಿ ಅನುಭವವನ್ನು ಪಕ್ಷಕ್ಕಾಗಿ ಬಳಸಿಕೊಳ್ಳುವ ಯೋಜನೆ ಹೈಕಮಾಂಡ್‌ಗಿದೆ. ಕೆಲವು ಸಚಿವರ ಕಾರ್ಯವೈಖರಿ ಬಗ್ಗೆ ಸ್ವತಃ ಆಡಳಿತ ಪಕ್ಷದ ಶಾಸಕರೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕ್ಷೇತ್ರಗಳ ಕೆಲಸಗಳಿಗೆ ಸ್ಪಂದಿಸದಿರುವುದು, ಕಡತ ವಿಲೇವಾರಿ ವಿಳಂಬದಂತಹ ದೂರುಗಳು ವ್ಯಾಪಕವಾಗಿವೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕಮಾಂಡ್, ನವೆಂಬರ್ 21ಕ್ಕೆ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಲಿರುವ ಸಂದರ್ಭವನ್ನು ಬಳಸಿಕೊಂಡು ‘ಹೊಸಬರಿಗೆ ಅವಕಾಶ’ ಮತ್ತು ‘ಅಧಿಕಾರ ಹಂಚಿಕೆ’ ನೆಪದಲ್ಲಿ ಅಸಮರ್ಥ ಹಾಗೂ ಆರೋಪ ಎದುರಿಸುತ್ತಿರುವ ಸಚಿವರಿಗೆ ಸೌಜನ್ಯಯುತವಾಗಿ ಗೇಟ್‌ಪಾಸ್ ನೀಡುವ ತಂತ್ರ ರೂಪಿಸಿದೆ.
ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ನಿರೀಕ್ಷೆಯಿರುವ ಪ್ರಮುಖರ ಪಟ್ಟಿ ಇಲ್ಲಿದೆ:
- ಬಿ.ಕೆ.ಹರಿಪ್ರಸಾದ್
- ಆರ್.ವಿ.ದೇಶಪಾಂಡೆ
- ಸಲೀಂ ಅಹಮದ್
- ನಾಗೇಂದ್ರ
- ಬಸವರಾಜ ರಾಯರೆಡ್ಡಿ
- ಅಪ್ಪಾಜಿ ನಾಡಗೌಡ
- ಲಕ್ಷ್ಮಣ ಸವದಿ
- ರೂಪ ಶಶಿಧರ್
- ತರೀಕೆರೆ ಶ್ರೀನಿವಾಸ್
- ಲೇಔಟ್ ಕೃಷ್ಣಪ್ಪ
- ಟಿ.ಬಿ. ಜಯಚಂದ್ರ
- ರಿಜ್ವಾನ್ ಅರ್ಷದ್ /ಯು.ಟಿ.ಖಾದರ್
- ಕೆ.ಎನ್. ರಾಜಣ್ಣ/ರಘುಮೂರ್ತಿ
- ಶಿವಲಿಂಗೇಗೌಡ/ಎಚ್.ಸಿ. ಬಾಲಕೃಷ್ಣ
- ಪಿ.ಎಂ.ನರೇಂದ್ರ ಸ್ವಾಮಿ/ಶಿವಣ್ಣ