ಬಾಬು ಜಗಜೀವನ ರಾಮ್‌ ವಸತಿ ಯೋಜನೆ: 2.50 ಲಕ್ಷ ರೂ. ಪಡೆಯಲು ಇಲ್ಲಿದೆ ಸುಲಭ ಮಾರ್ಗ!

0
10

ಬಡವರಿಗೆ ಸ್ವಂತ ಮನೆಯ ಕನಸು ಕಾಣುವುದು ಸುಲಭವಲ್ಲ. ಅದರಲ್ಲೂ ಚರ್ಮಕಾರರಂತಹ ಕುಶಲಕರ್ಮಿಗಳಿಗೆ ತಮ್ಮ ಕಲಾ ವೃತ್ತಿಯನ್ನು ಮುಂದುವರಿಸಲು ವಾಸಿಸಲು ಮತ್ತು ಕೆಲಸ ಮಾಡಲು ಪ್ರತ್ಯೇಕ ಸ್ಥಳ (ಶೆಡ್‌) ಅತ್ಯಗತ್ಯ. ಇಂತಹವರಿಗೆ ನೆರವಾಗಲು ಕರ್ನಾಟಕ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ.

“ಡಾ. ಬಾಬು ಜಗಜೀವನ ರಾಮ್‌ ವಸತಿ ಸಹಿತ ಕಾರ್ಯಾಗಾರ ನಿರ್ಮಾಣ ಯೋಜನೆ” ಮೂಲಕ ಅರ್ಹ ಫಲಾನುಭವಿಗಳಿಗೆ 2.50 ಲಕ್ಷ ರೂಪಾಯಿ ಆರ್ಥಿಕ ನೆರವನ್ನು ನೀಡುತ್ತಿದೆ. ಈ ಯೋಜನೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ  ಮೂಲಕ ಅನುಷ್ಠಾನಗೊಳ್ಳುತ್ತದೆ.

ಏನಿದು ಯೋಜನೆ: ಈ ಯೋಜನೆಯು ಪರಿಶಿಷ್ಟ ಜಾತಿಯ ಚರ್ಮಕಾರ ಕುಶಲಕರ್ಮಿಗಳು ತಮ್ಮ ನಿವೇಶನ ಅಥವಾ ಹಳೆಯ ಮನೆಯಲ್ಲಿ ವಾಸಿಸಲು ಮತ್ತು ತಮ್ಮ ಕೌಟುಂಬಿಕ ವೃತ್ತಿ ನಡೆಸಲು ಅನುಕೂಲವಾಗುವಂತೆ ವಸತಿ ಸಹಿತ ಕಾರ್ಯಾಗಾರ ಶೆಡ್‌ಗಳನ್ನು ನಿರ್ಮಿಸಲು ಆರ್ಥಿಕ ಬೆಂಬಲ ನೀಡುತ್ತದೆ.

ಆರ್ಥಿಕ ನೆರವು: ಪ್ರತಿ ಘಟಕಕ್ಕೆ ಒಟ್ಟು 2ಲಕ್ಷ 50 ಸಾವಿರ ರೂ. ಇದರಲ್ಲಿ ಸರ್ಕಾರದ ಸಹಾಯಧನ 2ಲಕ್ಷ 20 ಸಾವಿರ ಆಗಿದ್ದು, ಫಲಾನುಭವಿ ಕೇವಲ 30 ಸಾವಿರ ವಂತಿಕೆ ನೀಡಬೇಕಾಗುತ್ತದೆ. ಇದು ಕುಶಲಕರ್ಮಿಗಳಿಗೆ ದೊಡ್ಡ ಮೊತ್ತದ ಹೊರೆಯನ್ನು ಕಡಿಮೆ ಮಾಡುತ್ತದೆ.

ಮೂಲಸೌಕರ್ಯ ಅಭಿವೃದ್ಧಿ: ಲಿಡ್ಕರ್ ಕಾಲೋನಿಗಳು ಮತ್ತು ಚರ್ಮಕಾರ ಕುಶಲಕರ್ಮಿಗಳು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಕಾಂಕ್ರೀಟ್‌ ರಸ್ತೆಗಳು, ಚರಂಡಿ, ಬೀದಿ ದೀಪ, ಕುಡಿಯುವ ನೀರು, ಶೌಚಾಲಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಚರ್ಮಶಿಲ್ಪಿ ಭವನದಂತಹ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದರಿಂದ ಸಮುದಾಯದ ಜೀವನ ಮಟ್ಟ ಸುಧಾರಿಸುತ್ತದೆ.

ಯಾರು ಅರ್ಹರು?:

  • ಪರಿಶಿಷ್ಟ ಜಾತಿಯ ಚರ್ಮಕಾರ ಉಪಜಾತಿಗಳಿಗೆ ಸೇರಿದವರಾಗಿರಬೇಕು.
  • ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
  • ಗ್ರಾಮೀಣ ಪ್ರದೇಶಗಳಲ್ಲಿ ವಾರ್ಷಿಕ ಆದಾಯ 32 ಸಾವಿರ ರೂ. ಹಾಗೂ ನಗರ ಪ್ರದೇಶಗಳಲ್ಲಿ 87 ಸಾವಿರದ 600 ರೂ. ಮೀರಿರಬಾರದು.
  • ಸರ್ಕಾರಿ ಉದ್ಯೋಗದಲ್ಲಿರುವವರು ಅಥವಾ ನಿಗಮದ ಇತರ ಯೋಜನೆಗಳ (ತರಬೇತಿ ಹೊರತುಪಡಿಸಿ) ಲಾಭ ಪಡೆದವರು ಅರ್ಹರಲ್ಲ.
  • ತಮ್ಮ ಹೆಸರಿನಲ್ಲಿ ನಿವೇಶನ, ಹಳೆ ಮನೆ ಅಥವಾ ಗುಡಿಸಲು ಹೊಂದಿರಬೇಕು.
  • ಮಹಿಳಾ ಕುಶಲಕರ್ಮಿಗಳಿಗೆ ಶೇ. 33% ಮತ್ತು ವಿಕಲಚೇತನರಿಗೆ ಶೇ. 5% ಮೀಸಲಾತಿ ಇರುತ್ತದೆ.

ಈ ಯೋಜನೆಯು ಕೇವಲ ಹೊಸ ಮನೆ ಕಟ್ಟಲು ಮಾತ್ರವಲ್ಲದೆ, ಈಗಾಗಲೇ ಗುಡಿಸಲು ಅಥವಾ ಹಳೆಯ ಮನೆ ಹೊಂದಿರುವವರಿಗೂ ಅನ್ವಯಿಸುತ್ತದೆ. ಇದರಿಂದ, ಹಳೆಯ ಮತ್ತು ಶಿಥಿಲಗೊಂಡಿರುವ ಮನೆಗಳನ್ನು ನವೀಕರಿಸಲು ಅಥವಾ ಆಧುನಿಕ ಕಾರ್ಯಾಗಾರವನ್ನು ನಿರ್ಮಿಸಲು ಸಾಧ್ಯವಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?:

  • ಅರ್ಜಿ ಸಲ್ಲಿಸುವುದು ಅತ್ಯಂತ ಸುಲಭ.
  • ಸುವಿಧಾ ಪೋರ್ಟಲ್ (suvidha.karnataka.gov.in) ಅಥವಾ ಸೇವಾ ಸಿಂಧು ಪೋರ್ಟಲ್ (sevasindhu.karnataka.gov.in) ಗೆ ಭೇಟಿ ನೀಡಿ.
  • ‘ಇಲಾಖೆ ಮತ್ತು ಸೇವೆಗಳು’ ವಿಭಾಗದಲ್ಲಿ ‘ಸಮಾಜ ಕಲ್ಯಾಣ ಇಲಾಖೆ’ ಆಯ್ಕೆಮಾಡಿ.
  • ‘ಡಾ. ಬಾಬು ಜಗಜೀವನ ರಾಂ ವಸತಿ ಸಹಿತ ಕಾರ್ಯಾಗಾರ ನಿರ್ಮಾಣ ಯೋಜನೆ’ ಮೇಲೆ ಕ್ಲಿಕ್ ಮಾಡಿ.
  • ‘ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ’ ಆಯ್ಕೆಯನ್ನು ಆರಿಸಿ, ನಿಮ್ಮ ಮೊಬೈಲ್ ಸಂಖ್ಯೆ/ಇಮೇಲ್ ಐಡಿ ಮತ್ತು OTP ಮೂಲಕ ಲಾಗಿನ್ ಆಗಿ.
  • ಅಗತ್ಯವಿರುವ ವೈಯಕ್ತಿಕ, ವಿಳಾಸ ಮತ್ತು ಬ್ಯಾಂಕ್ ವಿವರಗಳನ್ನು ತುಂಬಿ.
  • ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಪಡಿತರ ಚೀಟಿ, ಇ-ಶ್ರಮ್ ಕಾರ್ಡ್, ನಿವೇಶನ ಖಾತಾ ಪ್ರಮಾಣಪತ್ರ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದಂತಹ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ಅರ್ಜಿ ಸಲ್ಲಿಸಿದ ನಂತರ, ನಿಮಗೆ ಅರ್ಜಿ ಸಂಖ್ಯೆ ದೊರೆಯುತ್ತದೆ. ಇದನ್ನು ಬಳಸಿಕೊಂಡು ನಿಮ್ಮ ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.

ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ: ಜಿಲ್ಲಾ ಸಮನ್ವಯಾಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ, ಅರ್ಹರ ಪಟ್ಟಿಯನ್ನು ಶಾಸಕರಿಗೆ ಸಲ್ಲಿಸುತ್ತಾರೆ. ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯು (ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ/ಉಪ ನಿರ್ದೇಶಕರ ಅಧ್ಯಕ್ಷತೆಯಲ್ಲಿ) ಅಂತಿಮ ನಿರ್ಧಾರ ಕೈಗೊಂಡು, ವ್ಯವಸ್ಥಾಪಕ ನಿರ್ದೇಶಕರ ಅನುಮೋದನೆಯ ನಂತರ ಫಲಾನುಭವಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

Previous articleನಕಲಿ ಚಿನ್ನದ ಮೋಸ: ಇಬ್ಬರು ಆರೋಪಿಗಳ ಬಂಧನ, ರೂ. 27.77 ಲಕ್ಷ ನಗದು ಜಪ್ತಿ!
Next articleರಾಯಚೂರು: ಕೃಷಿ ಸುಧಾರಣೆಗೆ ಕೇಂದ್ರದ ಪ್ರಾಮಾಣಿಕ ಪ್ರಯತ್ನ

LEAVE A REPLY

Please enter your comment!
Please enter your name here