SSLC ಪರೀಕ್ಷೆ ಎನ್ನುವುದು ವಿದ್ಯಾರ್ಥಿಗಳ ಜೀವನದಲ್ಲಿ ಮುಖ್ಯ ಘಟ್ಟ. ಇಂತಹ ಸಮಯದಲ್ಲಿ ಶಿವಮೊಗ್ಗ ಜಿಲ್ಲೆಯ ದ್ಯಾವಿನಕೆರೆಯಲ್ಲಿ ಸಾಲಬಾಧೆಯಿಂದ 45 ವರ್ಷದ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಅವರು ನಿಧನರಾದರು. ತಂದೆಯ ಸಾವಿನ ದುಃಖದ ನಡುವೆಯೂ ಮಂಡಘಟ್ಟದ ಶಾಲೆಯಲ್ಲಿ ಓದುತ್ತಿರುವ ಅವರ ಪುತ್ರ ಪ್ರೀತಮ್ ಆಯನೂರಿನ ಶಾಲೆಗೆ ಬಂದು ಧೈರ್ಯದಿಂದ ಪರೀಕ್ಷೆ ಬರೆದಿರುವ ಭಾವುಕ ಘಟನೆ ನಡೆದಿದೆ.
ಇಂತಹದ್ದೇ ಘಟನೆ ಕೊಪ್ಪಳ ಜಿಲ್ಲೆಯಲ್ಲೂ ನಡೆದಿದೆ. ಹಿರೇಬನ್ನಿಗೋಳ ಗ್ರಾಮದಲ್ಲಿ ತಂದೆ ಮರಣ ಹೊಂದಿ, ಅಂತ್ಯಸಂಸ್ಕಾರ ಮಾಡಲಾಗುತ್ತಿತ್ತು. ಈ ಹೊತ್ತಿನಲ್ಲೇ ದುಃಖದಲ್ಲಿ ಇಬ್ಬರು ವಿದ್ಯಾರ್ಥಿನಿಯರು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಪ್ರಸಂಗ ಕಳೆದ ಶನಿವಾರ ನಡೆದಿದೆ. ತಂದೆ ಬಸಪ್ಪ ಕಳಕಪ್ಪ ಮೂಲಿ ನಿಧನರಾಗಿದ್ದರು. ತಂದೆ ಕಳೆದುಕೊಂಡ ದೀಪಾ ಮೂಲಿ ಮತ್ತು ಸಹೋದರನ ಮಗಳಾದ ಶಿವಲೀಲಾ ಮೂಲಿ ಎಂಬುವರು ದುಃಖದಲ್ಲಿಯೇ ಇಂಗ್ಲಿಷ್ ಪರೀಕ್ಷೆಗೆ ಹಾಜರಾದರು.ಇಬ್ಬರು ಶಿಕ್ಷಕರು ಬೈಕಿನ ಮೇಲೆ ವಿದ್ಯಾರ್ಥಿನಿಯರನ್ನು ಚಳಗೇರಾ ಗಾಮದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದರು. ನಂತರ ಪರೀಕ್ಷಾ ಕೇಂದ್ರದಿಂದ ವಾಹನ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳಿಗೆ ತಂದೆಯ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಿಕೊಡಲಾಯಿತು.
ಇನ್ನು ಈ ಘಟನೆ ಚಿಕ್ಕಮಗಳೂರಿನ ಬೀರೂರು ತಾಲ್ಲೂಕಿನ ಬುಕ್ಕಸಾಗರದಲ್ಲಿ ತಂದೆಯ ಸಾವಿನ ನಡುವೆಯೂ ಪುತ್ರ ಭರತ್ SSLC ಪರೀಕ್ಷೆ ಬರೆದಿದ್ದಾನೆ. ಅನಾರೋಗ್ಯದಿಂದ ತಂದೆ ಶುಕ್ರವಾರ ನಿಧನರಾದರೂ, ಭರತ್ ಶನಿವಾರ ಗಣಿತ ಪರೀಕ್ಷೆ ಬರೆದು ಬಳಿಕ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾನೆ.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯೊಬ್ಬರು ತಂದೆಯ ಸಾವಿನ ನೋವಿನಲ್ಲಿಯೂ ಪರೀಕ್ಷೆ ಬರೆದಿದ್ದಾರೆ. ಶಿವಮೊಗ್ಗ ತಾಲೂಕಿನ ಹಸೂಡಿ ಫಾರಂ ನಿವಾಸಿ ಕೂಲಿ ಕಾರ್ಮಿಕ ತಂಗರಾಜ್ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂದೆ ಸಾವಿನ ದುಃಖದ ನಡುವೆ ಅವರ ಪುತ್ರಿ ಶೆಟ್ಟಿಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಶರಣ್ಯಾ ಎಸ್‌ಎಸ್‌ಎಲ್ಸಿ ಇಂಗ್ಲಿಷ್ ಪರೀಕ್ಷೆ ಬರೆದಿದ್ದಾರೆ.
ಘಟನೆ ಮೈಸೂರು ಜಿಲ್ಲೆಯದ್ದು. ಪತಿ ಸಾವಿನ ದುಃಖದಲ್ಲೂ ಶಿಕ್ಷಕಿಯೊಬ್ಬರು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಪತಿಯ ಸಾವಿನ ನೋವಿನಲ್ಲೂ ಶಿಕ್ಷಕಿಯೊಬ್ಬರು ಪರೀಕ್ಷೆ ಎದುರಿಸಲು ಸಜ್ಜಾಗಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಟ್ಟು ಅವರ ಭವಿಷ್ಯಕ್ಕೆ ಮಾರ್ಗದರ್ಶನವಾದ ಅಪರೂಪದ ಮನಕಲಕುವ ಘಟನೆ ಇದಾಗಿದೆ.






















