ಅನಿಲ್ ಗುಮ್ಮಘಟ್ಟ
ಜಿಎಸ್‌ಟಿ ಸರಳೀಕರಣದಿಂದಾಗಿ ನೋಟ್‌ಬುಕ್‌ಗಳ ಬೆಲೆ ಏರಿಕೆಯಾಗುವ ಸಾಧ್ಯತೆಗಳಿದ್ದು ಇದರಿಂದಾಗಿ ವಿದ್ಯಾರ್ಥಿಗಳು, ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ವಿದ್ಯಾರ್ಥಿಗಳಿಗೆ ಬೇಕಾಗುವ ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ಅನುಸರಿಸಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆಯಾದರೂ ವಾಸ್ತವ ಸಂಗತಿ ಬೇರೆಯೇ ಇದೆ.
ಈಗ ಜಾರಿಗೆ ಬಂದ ನಿಯಮಗಳು ವಿರುದ್ಧವಾದ ಪರಿಣಾಮ ಬೀರುತ್ತಿವೆ ಎಂದು ಕಾಗದ ಮಾರಾಟಗಾರರು ಹೇಳುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ನೋಟ್‌ಬುಕ್ ದರ ಹೆಚ್ಚಾಗುತ್ತಲೇ ಇದೆ. ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ಗಳು ತೀರ ಅಗತ್ಯವಾಗಿರುವುದರಿಂದ ಖರೀದಿ ಮಾಡುವುದು ತೀರ ದುಸ್ತರವಾಗಬಹುದು ಎಂದು ಅರ್ಥೈಸಲಾಗುತ್ತಿದೆ.
ದರ ಯಾಕೆ ಹೆಚ್ಚಿಗೆ?: ನೋಟ್‌ಬುಕ್ ತಯಾರಕರು ಕಚ್ಚಾ ಕಾಗದವನ್ನು 18% ತೆರಿಗೆ ಕೊಟ್ಟು ಖರೀದಿಸಬೇಕು. ಆದರೆ, ಅಂತಿಮ ಉತ್ಪನ್ನವಾದ ನೋಟ್‌ಬುಕ್ ಮೇಲೆ ಯಾವುದೇ ತೆರಿಗೆ (ಶೂನ್ಯ ದರ) ಇಲ್ಲದ ಕಾರಣ, ಅವರು ಖರೀದಿಯಲ್ಲಿ ಪಾವತಿಸಿದ ಈ 18% ತೆರಿ ಗೆಯನ್ನು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ರೂಪದಲ್ಲಿ ಮರುಪಡೆಯಲು ಸಾಧ್ಯವಾಗುವುದಿಲ್ಲ.
ಪರಿಣಾಮವಾಗಿ, ಕಚ್ಚಾ ವಸ್ತುಗಳ ಮೇಲೆ ಪಾವತಿಸಿದ ಈ ಹೆಚ್ಚುವರಿ ತೆರಿಗೆ ಮೊತ್ತವು ನೇರವಾಗಿ ತಯಾರಿಕಾ ವೆಚ್ಚದೊಂದಿಗೆ ಸೇರಿಕೊಳ್ಳುತ್ತದೆ. ಈ ನಷ್ಟವನ್ನು ಸರಿದೂಗಿಸಲು ತಯಾರಕರು ಅಂತಿಮವಾಗಿ ನೋಟ್‌ಬುಕ್‌ಗಳ ಮೂಲ ಬೆಲೆಯನ್ನು ಹೆಚ್ಚಿಸುವುದು ಅನಿವಾರ್ಯುವಾಗಿದ್ದು, ಇದರ ನೇರ ಹೊರೆ ವಿದ್ಯಾರ್ಥಿಗಳು ಮತ್ತು ಪೋಷಕರ ಮೇಲೆ ಬೀಳಲಿದೆ.
ಪ್ರಸ್ತುತ, ನೋಟ್‌ಬುಕ್‌ಗಳು ಮತ್ತು ಪುಸ್ತಕಗಳ ಮೇಲಿನ ತೆರಿಗೆ ದರಗಳು ವಿಭಿನ್ನವಾಗಿವೆ. ಹೀಗಾಗಿ, ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರ ಮೇಲೆ ಆರ್ಥಿಕ ಹೊರೆ ಹೆಚ್ಚಲಿದೆ. ಅಲ್ಲದೆ, ಕಾಗದ ಉತ್ಪನ್ನಗಳ ತಯಾರಿಕಾ ಉದ್ಯಮಕ್ಕೆ ಭಾರಿ ಹಿನ್ನಡೆಯಾಗಲಿದೆ. ಈ ವಿಷಯದ ಬಗ್ಗೆ, ಜಿಎಸ್‌ಟಿ ಮಂಡಳಿ ಕೂಡಲೇ ಕ್ರಮ ಕೈಗೊಂಡು ಸ್ಪಷ್ಟನೆ ನೀಡಬೇಕು. ಇಲ್ಲವಾದರೆ, ದೇಶಾದ್ಯಂತ ಕಾಗದ ಉತ್ಪನ್ನಗಳ ತಯಾರಕರು, ವರ್ತಕರು ಮತ್ತು ವ್ಯಾಪಾರಿಗಳಿಗೆ ದೊಡ್ಡ ನಷ್ಟ ಉಂಟಾಗಲಿದೆ.
“ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಮತ್ತು ನೋಟ್ ಬುಕ್ ಗಳನ್ನು ಸರ್ಕಾರವೇ ಉಚಿತವಾಗಿ ನೀಡುತ್ತದೆ. ಇದರಿಂದಾಗಿ ಈ ಸಮಸ್ಯೆ ಅಲ್ಲಿ ಹೆಚ್ಚಾಗಿ ಕಾಣಿಸುವುದಿಲ್ಲ. ಆದರೆ, ಖಾಸಗಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್‌ಗಳ ಬೆಲೆ ಹೆಚ್ಚಿನ ಹೊರೆಯಾಗಿದೆ. ಜಿಎಸ್‌ಟಿ ಇದ್ದರೂ ಇಲ್ಲದಿದ್ದರೂ ಈ ಹೊರೆ ತಪ್ಪಿದ್ದಲ್ಲ. ಈ ವರ್ಷ, ನೋಟ್ ಬುಕ್‌ಗಳ ಬೆಲೆ ಹೆಚ್ಚಾದರೆ ಪೋಷಕರಿಗೆ ಆರ್ಥಿಕ ಸಂಕಷ್ಟ ಮತ್ತಷ್ಟು ಹೆಚ್ಚಾಗಲಿದೆ” ಎಂದು ಶಿಕ್ಷಣ ತಜ್ಞರು ನಿರಂಜನ ಆರಾಧ್ಯ ಹೇಳಿದರು.
ಕಾಗದ ಮತ್ತು ಕಾಗದದ ಉತ್ಪನ್ನಗಳ ಮೇಲಿನ ಹೊಸ ಜಿಎಸ್‌ಟಿ ದರಗಳು ವ್ಯಾಪಾರ ವಲಯದಲ್ಲಿ ಗೊಂದಲವನ್ನು ಉಂಟುಮಾಡಿವೆ. ಜಿಎಸ್‌ಟಿ ಮಂಡಳಿಯವರು ಈ ಶಿಫಾರಸ್ಸನ್ನು ಪುನಃ ಪರಿಶೀಲಿಸಿ, ವಿದ್ಯಾರ್ಥಿ ಹಾಗೂ ಸಮುದಾಯದ ಹಿತದೃಷ್ಟಿಯಿಂದ, ಎಲ್ಲಾ ರೀತಿಯ ಕಾಗದ ಮತ್ತು ಕಾಗದ ಉತ್ಪನ್ನಗಳನ್ನು ಶೇ.5ರ ಒಂದೇ ಜಿಎಸ್‌ಟಿ ದರಕ್ಕೆ ಒಳಪಡಿಸಬೇಕು. ಕಾಗದ ಲೇಖನ ಸಾಮಗ್ರಿಗಳ ಮಾರಾಟಗಾರರ ಸಂಘದ ಅಧ್ಯಕ್ಷ ಪ್ರವೀಣ್ ಲುಂಕಡ್ ಹೇಳಿದರು.