Government Employee. ಕರ್ನಾಟಕದ ಸರ್ಕಾರಿ ನೌಕರರ ವರ್ಗಾವಣೆ ಕುರಿತು ಅಪ್‌ಡೇಟ್ ಒಂದಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಈ ಕುರಿತು ಸುತ್ತೋಲೆ ಮೂಲಕ ಮಾಹಿತಿ ನೀಡಿದೆ.
ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್. ಗಿರಿಗೌಡ ಈ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಸುತ್ತೋಲೆಯು ಶಾಖಾ ಸಂಘಗಳ ಅಧ್ಯಕ್ಷರುಗಳು ತಮ್ಮ ಶಾಖೆಯ ಪದಾಧಿಕಾರಿಗಳ ವರ್ಗಾವಣೆಗೆ ವಿನಾಯಿತಿ ಕೋರಿ ನೇರವಾಗಿ ಇಲಾಖಾ ಮುಖ್ಯಸ್ಥರಿಗೆ ಪತ್ರ ವ್ಯವಹರಿಸದಿರುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಕೆಲವು ಜಿಲ್ಲೆ, ತಾಲ್ಲೂಕು ಮತ್ತು ಯೋಜನಾ ಶಾಖೆಗಳ ಅಧ್ಯಕ್ಷರುಗಳು ತಮ್ಮ ಶಾಖೆಯ ಪದಾಧಿಕಾರಿಗಳಿಗೆ ವರ್ಗಾವಣೆಯಿಂದ ವಿನಾಯಿತಿ ಕೋರಿ ಸಂಬಂಧಿಸಿದ ಇಲಾಖಾ ಮುಖ್ಯಸ್ಥರಿಗೆ ಹಾಗೂ ಸರ್ಕಾರಕ್ಕೆ ನೇರವಾಗಿ ಶಾಖಾ ಸಂಘಗಳ ಲೆಟರ್‌ಹೆಡ್ ಮುಖಾಂತರ ಪತ್ರ ವ್ಯವಹರಿಸಿರುವುದು ಕಂಡುಬಂದಿರುತ್ತದೆ.
ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಾರ್ವತ್ರಿಕ ವರ್ಗಾವಣೆ/ ವರ್ಗಾವಣೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಿಗೆ ಸರ್ಕಾರದ ಸುತ್ತೋಲೆಯನ್ವಯ ವಿನಾಯಿತಿ ಕಲ್ಪಿಸಲಾಗಿದ್ದು, ಈ ಅವಕಾಶವನ್ನು ಬಳಸಿಕೊಳ್ಳಲು ಶಾಖಾ ಸಂಘಗಳು ರಾಜ್ಯ ಸಂಘದ ಗಮನಕ್ಕೆ ತರದೇ ನೇರವಾಗಿ ಚುನಾಯಿತರಲ್ಲದ ನಿರ್ದೇಶಕರೂ ಸೇರಿದಂತೆ ಪದಾಧಿಕಾರಿಗಳಿಗೆ ವರ್ಗಾವಣೆಯಿಂದ ವಿನಾಯಿತಿ ನೀಡುವಂತೆ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರು ಹಾಗೂ ಸರ್ಕಾರಕ್ಕೆ ಪತ್ರ ವ್ಯವಹಾರ ನಡೆಸಿರುವ ಬಗ್ಗೆ ಕೆಲವು ಇಲಾಖೆಗಳ ಮುಖ್ಯಸ್ಥರು ರಾಜ್ಯಾಧ್ಯಕ್ಷರಿಂದ ಸ್ಪಷ್ಟನೆ ಕೋರಿರುತ್ತಾರೆ.
ಶಾಖಾ ಸಂಘಗಳು ರಾಜ್ಯ ಹಂತದ ಇಲಾಖಾ ಮುಖ್ಯಸ್ಥರಿಗೆ ಮತ್ತು ಸರ್ಕಾರಕ್ಕೆ ನೇರ ಪತ್ರ ವ್ಯವಹರಿಸದಂತೆ ಈಗಾಗಲೇ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯು ನಿರ್ಣಯ ದಾಖಲಿಸಿ ಅನುಮೋದನೆ ಆಗಿರುತ್ತದೆ. ಆದ್ದರಿಂದ ಎಲ್ಲಾ ಜಿಲ್ಲೆ/ ತಾಲ್ಲೂಕು ಮತ್ತು ಯೋಜನಾ ಶಾಖಾ ಸಂಘಗಳ ಅಧ್ಯಕ್ಷರುಗಳು ಸಾಮಾನ್ಯ ವರ್ಗಾವಣೆ/ ವರ್ಗಾವಣೆ ಹಾಗೂ ಇನ್ನಿತರೆ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯ ಹಂತದ ಇಲಾಖಾ ಮುಖ್ಯಸ್ಥರಿಗೆ ಹಾಗೂ ಸರ್ಕಾರಕ್ಕೆ ನೇರವಾಗಿ ಪತ್ರ ವ್ಯವಹರಿಸದಂತೆ ಸೂಚಿಸಿದೆ.
ಮುಂದುವರೆದು, ರಾಜ್ಯ ಮಟ್ಟದ ಕಛೇರಿಗಳಿಗೆ ಸಂಬಂಧಿಸಿದ ವಿಷಯಗಳಿಗೆ ರಾಜ್ಯಾಧ್ಯಕ್ಷರಿಗೆ ಪತ್ರ ವ್ಯವಹರಿಸಲು ತಿಳಿಸಿದೆ, ತಪ್ಪಿದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯ ನಿರ್ಣಯ ಹಾಗೂ ಸಂಘದ ಬೈಲಾ ನಿಯಮದಂತೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಸುತ್ತೋಲೆ ಹೇಳಿದೆ.