ಕರ್ನಾಟಕ ರಾಜ್ಯದಲ್ಲಿ ಶಾಲೆಗಳ ಪ್ರವೇಶದಲ್ಲಿ ಕುಸಿತ ಕಂಡುಬಂದಿದೆ. ಖಾಸಗಿ ಅನುದಾನಿತ, ಖಾಸಗಿ ಶಾಲೆಗಳತ್ತ ಮಕ್ಕಳು ಹೋಗುತ್ತಿದ್ದು, ಸರ್ಕಾರಿ ಶಾಲೆಗಳ ಪ್ರವೇಶಾತಿಯಲ್ಲಿ ಇಳಿಕೆಯಾಗಿದೆ ಎನ್ನುತ್ತದೆ ಅಂಕಿ-ಸಂಖ್ಯೆಗಳು.
ರಾಜ್ಯದಲ್ಲಿ ಪ್ರಾಥಮಿಕ ತರಗತಿಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳ ಸೇರ್ಪಡೆಯಲ್ಲಿ ಕುಸಿತ ಕಂಡುಬಂದಿರುವುದು ದೃಢಪಟ್ಟಿದೆ. ಶಿಕ್ಷಣ ಇಲಾಖೆಯ ಜಿಲ್ಲಾ ಸಂಯೋಜಿತ ಮಾಹಿತಿಯನ್ವಯ ಈ ಅಂಶ ಬೆಳಕಿಗೆ ಬಂದಿರುವುದು ಆಘಾತಕಾರಿಯೆನಿಸಿದೆ.
ಸರ್ಕಾರಿ ಶಾಲೆ, ಖಾಸಗಿ ಅನುದಾನಿತ ಶಾಲೆ ಮತ್ತು ಖಾಸಗಿ ಶಾಲೆ ಈ ಮೂರೂ ಶಾಲೆಗಳಲ್ಲೂ ವಿದ್ಯಾರ್ಥಿಗಳ ಪ್ರವೇಶ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದು ಕಂಡುಬಂದಿದೆ. ಒಂದನೇ ತರಗತಿಯಿಂದ ಹನ್ನೆರಡನೇ ತರಗತಿ (ದ್ವಿತೀಯ ಪಿಯುಸಿ) ವರೆಗಿನ ವಿದ್ಯಾರ್ಥಿಗಳ ಪ್ರವೇಶ 2024-25ರಲ್ಲಿ ಇಡೀ ಕರ್ನಾಟಕದಲ್ಲಿ 1,17,80,251 ರಷ್ಟಿತ್ತು.
ಅದೇ 2023-24ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ 1,19,26,303ರಷ್ಟಿತ್ತು. 2023-24ನೇ ಸಾಲಿಗೆ ಹೋಲಿಸಿದಲ್ಲಿ 2024-25ನೇ ಸಾಲಿನಲ್ಲಿ ಬರೋಬ್ಬರಿ ಶೇ.1.3ರಷ್ಟು ವಿದ್ಯಾರ್ಥಿಗಳ ಪ್ರವೇಶ ಕಡಿಮೆಯಾಗಿದೆ. ಈ ಮಧ್ಯೆ ಸರ್ಕಾರಿ ಅನುದಾನಿತ ಖಾಸಗಿ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಪ್ರವೇಶ ಸರ್ಕಾರಿ ಶಾಲೆಗಳಿಗಿಂತಲೂ ಹೆಚ್ಚಿರುವುದು ಗಮನಾರ್ಹ.
2024-25ನೇ ಸಾಲಿನಲ್ಲಿ ಅನುದಾನಿತ ಖಾಸಗಿ ಶಾಲೆಗಳಲ್ಲಿ 56,63,887 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೆ, ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಪ್ರವೇಶ 47,34,360ರಷ್ಟಿದೆ. ಕೊರೊನಾ ಅಬ್ಬರದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರವೇಶದಲ್ಲಿ ಸರ್ಕಾರಿ ಶಾಲೆಗಳು ಗಣನೀಯ ಏರಿಕೆ ಕಂಡಿದ್ದವು.
ಆದರೆ, ಆನಂತರ ಕೇವಲ ಒಂದೇ ವರ್ಷದಲ್ಲಿ ಅಷ್ಟೂ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ಸೇರ್ಪಡೆಯಾಗಿದ್ದು ಹೊಸ ಬೆಳವಣಿಗೆ.
ಕೊರೊನಾದ ಅಬ್ಬರದ ಸಂದರ್ಭದಲ್ಲಿ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಮಕ್ಕಳು ಆರ್ಥಿಕ ಮತ್ತಿತರ ಸಮಸ್ಯೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದರು. ಹೀಗಾಗಿಯೇ 2021-22ನೇ ಸಾಲಿನಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು 1,20,92,381 ಮಕ್ಕಳು ಶಾಲೆಗಳಿಗೆ ಸೇರ್ಪಡೆಯಾಗಿದ್ದರು. ಅದು 2020-21ನೇ ಸಾಲಿಗೆ ಹೋಲಿಸಿದ್ದಲ್ಲಿ ಅತಿ ಹೆಚ್ಚು ಆಗಿತ್ತು.
ಆ ಸಾಲಿನಲ್ಲಿ 1,18,56,736 ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ಪ್ರವೇಶ ಪಡೆದಿದ್ದರು. ಇನ್ನು 2021-22ನೇ ಸಾಲಿನಲ್ಲಿ 54,45,989 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ಸೇರ್ಪಡೆಯಾಗಿದ್ದರಿಂದ ಖಾಸಗಿ ಅನುದಾನಿತ ಶಾಲೆಗಳಿಗೆ 1.64 ಲಕ್ಷ ವಿದ್ಯಾರ್ಥಿಗಳ ಪ್ರವೇಶ ನಷ್ಟವಾಗಿತ್ತು.
ಈ ಮಧ್ಯೆ ಹಲವು ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಶಿಕ್ಷಣ ಆರಂಭಿಸಲಾಯಿತಾದರೂ ಅದು ಪ್ರವೇಶಾತಿ ಹೆಚ್ಚಳದಲ್ಲಿ ಅಂತಹ ಪರಿಣಾಮ ಬೀರಲಿಲ್ಲ. ಸರ್ಕಾರಿ ಶಾಲೆಗಳಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡದಿರುವುದು ಕೋವಿಡ್ ನಂತರದ ವರ್ಷಗಳಲ್ಲಿ ಮಕ್ಕಳ ಪ್ರವೇಶಾತಿ ಕುಸಿಯಲು ಕಾರಣ ಎನ್ನುವುದು ಶಿಕ್ಷಣ ತಜ್ಞರ ಖಚಿತ ಅಭಿಪ್ರಾಯ.
ಶಿಕ್ಷಣ ಇಲಾಖೆಯ ದತ್ತಾಂಶದ ಪ್ರಕಾರ ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆ ಸಹ ಖಾಸಗಿ ಅನುದಾನಿತ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಕಡಿಮೆಯಾಗಿದೆ. ಈ ಕಡಿಮೆಯ ಪ್ರಮಾಣ ಸರಿಸುಮಾರು ಶೇ.30ರಷ್ಟಿರುವುದು ಗಮನಾರ್ಹ. ಸರ್ಕಾರಿ ಶಾಲೆಗಳಲ್ಲಿ ಬೋಧಕರ ಕೊರತೆ ಮತ್ತು ಮೂಲಭೂತ ಸೌಕರ್ಯದ ಕೊರತೆ ಈ ಗಣನೀಯ ಕುಸಿತಕ್ಕೆ ಪ್ರಮುಖ ಕಾರಣವೆನ್ನಲಾಗಿದೆ.