ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ‘ಪ್ರತ್ಯೇಕ ಉತ್ತರ ಕರ್ನಾಟಕ’ದ ಕೂಗು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಬಾರಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರೇ ಈ ಬೇಡಿಕೆಯ ಕಿಡಿಯನ್ನು ಹೊತ್ತಿಸಿದ್ದಾರೆ.
ಕಾಗವಾಡ ಶಾಸಕ ರಾಜು ಕಾಗೆ ಅವರು, ಉತ್ತರ ಕರ್ನಾಟಕದ 15 ಜಿಲ್ಲೆಗಳಿಗೆ ಅಭಿವೃದ್ಧಿಯಲ್ಲಿ ಆಗುತ್ತಿರುವ ಅನ್ಯಾಯ ಮತ್ತು ಮಲತಾಯಿ ಧೋರಣೆಯನ್ನು ಖಂಡಿಸಿ, ಪ್ರತ್ಯೇಕ ರಾಜ್ಯ ರಚಿಸುವಂತೆ ರಾಷ್ಟ್ರಪತಿ, ಪ್ರಧಾನಿ ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಈ ಬೆಳವಣಿಗೆಯ ಬೆನ್ನಲ್ಲೇ, ಉತ್ತರ ಕರ್ನಾಟಕ ಹೋರಾಟ ಸಮಿತಿಯು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ತಮ್ಮ ಬೇಡಿಕೆಗಳು ಈಡೇರದಿದ್ದರೆ, ಸುವರ್ಣ ವಿಧಾನಸೌಧದ ಮೇಲೆ ಉತ್ತರ ಕರ್ನಾಟಕದ ಪ್ರತ್ಯೇಕ ಧ್ವಜವನ್ನು ಹಾರಿಸಿಯೇ ಸಿದ್ಧ ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ರವಾನಿಸಿದೆ.
ಹೋರಾಟಕ್ಕೆ ಕಾಗೆ ಬಲ, ಕತ್ತಿ ನೆನಪು: ದಿವಂಗತ ಸಚಿವ ಉಮೇಶ್ ಕತ್ತಿ ಆಪ್ತರಾಗಿದ್ದ ರಾಜು ಕಾಗೆ, ತಮ್ಮ ನಾಯಕನ ನಿಲುವನ್ನೇ ಮುಂದುವರಿಸಿದ್ದಾರೆ. “ಅಭಿವೃದ್ಧಿಯ ವಿಷಯದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ನಿರಂತರವಾಗಿ ತಾರತಮ್ಯ ಮಾಡಲಾಗುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಚಳಿಗಾಲದ ಅಧಿವೇಶನದಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸಿ, ಸರ್ಕಾರದ ಗಮನ ಸೆಳೆಯುತ್ತೇನೆ,” ಎಂದು ಕಾಗೆ ತಿಳಿಸಿದ್ದಾರೆ. ಉಮೇಶ್ ಕತ್ತಿ ನಿಧನದ ನಂತರ ತಣ್ಣಗಾಗಿದ್ದ ಪ್ರತ್ಯೇಕತೆಯ ಕೂಗಿಗೆ, ಈಗ ಕಾಗೆ ಪತ್ರವು ಹೊಸ ಜೀವ ನೀಡಿದೆ.
ಹಿಂದೆ ಕತ್ತಿ ಹೇಳಿದ್ದೇನು?: ಉಮೇಶ್ ಕತ್ತಿ ಈ ಹಿಂದೆ ಅನೇಕ ಬಾರಿ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬಗ್ಗೆ ಸ್ಪೋಟಕ ಹೇಳಿಕೆಗಳನ್ನು ನೀಡಿದ್ದರು. “ರಾಜ್ಯದ ಜನಸಂಖ್ಯೆ ಹೆಚ್ಚಾಗಿದ್ದು, ಆಡಳಿತಾತ್ಮಕ ದೃಷ್ಟಿಯಿಂದ ಸಣ್ಣ ರಾಜ್ಯಗಳ ರಚನೆ ಅನಿವಾರ್ಯ. ಕರ್ನಾಟಕವನ್ನು ಇಬ್ಭಾಗ ಮಾಡಬೇಕು. ಮುಂದೊಂದು ದಿನ ದೇಶದಲ್ಲಿ 50 ರಾಜ್ಯಗಳು ನಿರ್ಮಾಣವಾಗಲಿವೆ,” ಎಂಬುದು ಕತ್ತಿ ಪ್ರಬಲ ವಾದವಾಗಿತ್ತು. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗಲೆಲ್ಲಾ ಮುಂಚೂಣಿಯಲ್ಲಿ ನಿಂತು ಧ್ವನಿ ಎತ್ತುತ್ತಿದ್ದರು.
ಈ ಹಿಂದೆ ಉಮೇಶ್ ಕತ್ತಿ ಅವರಂತಹ ನಾಯಕರು ಪ್ರಸ್ತಾಪಿಸುತ್ತಿದ್ದ ಈ ವಿಚಾರ, ಈಗ ಆಡಳಿತಾರೂಢ ಕಾಂಗ್ರೆಸ್‌ನ ಶಾಸಕರೊಬ್ಬರಿಂದಲೇ ಮುನ್ನೆಲೆಗೆ ಬಂದಿರುವುದು ಸಿದ್ದರಾಮಯ್ಯ ಸರ್ಕಾರಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಈ ವಿಷಯವು ಮತ್ತಷ್ಟು ಕಾವು ಪಡೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
























