ರಾಜು ಮಳವಳ್ಳಿ
ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪರ್ವ ಆರಂಭವಾಗಲಿದೆ. ಕರ್ನಾಟಕದಲ್ಲಿ ಸರ್ಕಾರಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಸಿಹಿಸುದ್ದಿ. 6:6:5 ಒಳಮೀಸಲಾತಿ ಸೂತ್ರ ಜಾರಿ ಬೆನ್ನಲ್ಲೇ ನೇಮಕಾತಿಗೆ ಸಿದ್ಧತೆ ಚುರುಕುಗೊಂಡಿದೆ, ಮುಂಬಡ್ತಿಗೂ ವೇದಿಕೆ ಸಿದ್ಧವಾಗಿದೆ.
ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸರ್ಕಾರಿ ನೇಮಕಾತಿಯ ಪರ್ವ ಆರಂಭವಾಗಲಿದ್ದು, ಉದ್ಯೋಗಾಕಾಂಕ್ಷಿಗಳಲ್ಲಿ ಆಸೆ ಚಿಗುರೊಡೆದಿದೆ. ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಆಗಿಂದಾಗ್ಗೆ ನಡೆಯಲಿರುವ ನೇಮಕಾತಿಯನ್ವಯ 2024-25ನೇ ಸಾಲಿನಲ್ಲೂ ಅಧಿಸೂಚಿತ ಹುದ್ದೆಗಳ ಭರ್ತಿ ಆರಂಭವಾಗಿತ್ತು.
ಆದರೆ, ಒಳಮೀಸಲಾತಿಯ ಕಾರಣಕ್ಕೆ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಯು 2024ರ ನ.25ರಂದು ಮೀಸಲಾತಿ ಅನ್ವಯವಾಗುವ ಹುದ್ದೆಗಳ ನೇರ ನೇಮಕಾತಿಗೆ ಯಾವುದೇ ಅಧಿಸೂಚನೆ ಹೊರಡಿಸದಂತೆ ಆದೇಶ ಹೊರಡಿಸಿತ್ತು. ಇದರಿಂದಾಗಿ ಕಳೆದ 9 ತಿಂಗಳಿನಿಂದಲೂ ರಾಜ್ಯದಲ್ಲಿ ಮೀಸಲಾತಿಯುಳ್ಳ ಸರ್ಕಾರಿ ಹುದ್ದೆಗಳ ನೇಮಕಾತಿ ಸ್ಥಗಿತಗೊಂಡು ಎಲ್ಲಾ ಪ್ರಕ್ರಿಯೆಗಳು ನೆನೆಗುದಿಗೆ ಬಿದ್ದಿತ್ತು.
ಇದೀಗ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗ ಒಳಮೀಸಲಾತಿಗೆ ಸಂಬಂಧಿಸಿದಂತೆ ಸಲ್ಲಿಸಿದ ವರದಿಯನ್ನು ಅಂಗೀಕರಿಸಿರುವ ಸರ್ಕಾರ 6:6:5ರ ಸೂತ್ರದಂತೆ ಒಳಮೀಸಲಾತಿಯನ್ನು ಹಂಚಿಕೆ ಮಾಡಿ ಅಧಿಸೂಚನೆ ಹೊರಡಿಸಿರುವುದರಿಂದ ನೆನೆಗುದಿಗೆ ಬಿದ್ದಿದ್ದ ಎಲ್ಲಾ ನೇಮಕಾತಿ ಪ್ರಕ್ರಿಯೆಗಳು ಮತ್ತು ಆರಂಭವಾಗಲಿವೆ.
ಶಿಕ್ಷಣ ಇಲಾಖೆಯಲ್ಲಿ ಅತಿ ಹೆಚ್ಚು: ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಯ ಅಧಿಕೃತ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಮಂಜೂರಾದ 7,76,414 ಹುದ್ದೆಗಳಿದ್ದು, ಆ ಪೈಕಿ 4,91,533 ಹುದ್ದೆಗಳು ಮಾತ್ರ ಭರ್ತಿಯಾಗಿವೆ. 43 ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿಯಿವೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಅತಿ ಹೆಚ್ಚು 70,727 ಹುದ್ದೆಗಳು ಖಾಲಿಯಿದ್ದರೆ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 37,069, ಒಳಾಡಳಿತ ಇಲಾಖೆಯಲ್ಲಿ 26,168, ಉನ್ನತ ಶಿಕ್ಷಣ ಇಲಾಖೆಯಲ್ಲಿ 13,227, ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 10,898, ಪಶು ಸಂಗೋಪನೆ ಇಲಾಖೆಯಲ್ಲಿ 10,755 ಹುದ್ದೆಗಳು ಖಾಲಿಯಿವೆ. ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯಲ್ಲಿ ಕೇವಲ ಆರು ಹುದ್ದೆಗಳು ಮಾತ್ರ ಭರ್ತಿಯಾಗಬೇಕಿದೆ.
ಖಾಲಿ ಇರುವ ಹುದ್ದೆಗಳು: 2,84,881, ಭರ್ತಿಯಾಗಲಿರುವ ಹುದ್ದೆಗಳು 85,000 ಪ್ಲಸ್. ಶಾಲಾ ಶಿಕ್ಷಕರು 15,000, ಸಾರಿಗೆ ಸಿಬ್ಬಂದಿ 4500, ವೈದ್ಯರು 1000, ಶುಶ್ರೂಷಕಿಯರು 1500 ಮತ್ತು ಉಪನ್ಯಾಸಕರು 1000ಕ್ಕೂ ಹೆಚ್ಚು ಹುದ್ದೆಗಳು ಭರ್ತಿಯಾಗಲಿವೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, “ರಾಜ್ಯದಲ್ಲಿ ಶಾಲಾ ಶಿಕ್ಷಕರ ನೇಮಕಕ್ಕೆ ನಾವು ಮುಂದಾಗಿದ್ದೇವೆ. ಒಳಮೀಸಲಾತಿಗಾಗಿ ಕಾಯುತ್ತಿದ್ದೆವು. ಈಗ ನೇಮಕಕ್ಕೆ ವೇಗ ದೊರೆಯಲಿದ್ದು, ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು” ಎಂದು ಹೇಳಿದ್ದಾರೆ.
2016-2020ರ ನಡುವೆ ಮರಣ, ರಾಜೀನಾಮೆ, ನಿವೃತ್ತಿ ಕಾರಣಕ್ಕಾಗಿ ತೆರವಾಗಿದ್ದ ಸರ್ಕಾರಿ ಅನುದಾನಿತ ಕಾಲೇಜುಗಳಲ್ಲಿನ ಸಾವಿರಕ್ಕೂ ಹೆಚ್ಚು ಸಹಾಯಕ ಪ್ರಾಧ್ಯಾಪಕರ ಹುದ್ದೆ ಭರ್ತಿ ಪ್ರಕ್ರಿಯೆ ಮುಗಿಯುವ ಹಂತದಲ್ಲಿದ್ದಾಗ ಒಳಮೀಸಲಾತಿ ವಿಚಾರ ಮುನ್ನೆಲೆಗೆ ಬಂದಿದ್ದರಿಂದ ಎಲ್ಲಾ ಪ್ರಕ್ರಿಯೆಗಳಿಗೆ ತಡೆಬಿದ್ದಿತ್ತು. ಈಗ ಆಕಾಂಕ್ಷಿಗಳಲ್ಲಿ ಹೊಸ ಕನಸು ಚಿಗುರಿದೆ.
85 ಸಾವಿರ ಹುದ್ದೆಗಳ ಭರ್ತಿ: ರಾಜ್ಯದಲ್ಲಿ ಖಾಲಿಯಿರುವ ಎರಡೂಮುಕ್ಕಾಲು ಲಕ್ಷ ಸರ್ಕಾರಿ ಹುದ್ದೆಗಳ ಪೈಕಿ ಸರಿಸುಮಾರು 85 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಸದ್ಯ ವೇದಿಕೆ ಸಜ್ಜಾಗಿದೆ. ಹಲವು ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆ ಈಗಾಗಲೇ ಅನುಮೋದನೆ ನೀಡಿದ್ದರೆ, ಇನ್ನಷ್ಟು ಹುದ್ದೆಗಳ ನೇಮಕಾತಿಗೆ ಅನುಮತಿ ಪಡೆಯುವಿಕೆಯು ವಿವಿಧ ಹಂತಗಳಲ್ಲಿವೆ ಎನ್ನುತ್ತವೆ ಸರ್ಕಾರದ ವಿಶ್ವಸನೀಯ ಮೂಲಗಳು.
ಬಹುಮುಖ್ಯವಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ 15 ಸಾವಿರ ಶಿಕ್ಷಕರ ನೇಮಕ, ವಾಯವ್ಯ ಸಾರಿಗೆ ನಿಗಮದಿಂದ 1000 ಚಾಲಕರ ನೇಮಕ ಸೇರಿದಂತೆ ಸಾರಿಗೆ ಇಲಾಖೆಯ 4500 ಸಿಬ್ಬಂದಿ ನೇಮಕ, ಉನ್ನತ ಶಿಕ್ಷಣ ಇಲಾಖೆಯಡಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 1000 ವೈದ್ಯರು, 1500 ಶುಶೂಷಕಿಯರು ಮತ್ತಿತರರ ನೇಮಕಗಳ ಪ್ರಕ್ರಿಯೆಗೆ ಒಳಮೀಸಲಾತಿಯ ಜಾರಿಯಿಂದ ‘ವೇಗ’ ದೊರೆಯಲಿದ್ದು, ಈ ವಾರದಿಂದಲೇ ಪ್ರಕ್ರಿಯೆಗಳು ತರಿತವಾಗಿ ಆರಂಭವಾಗಲಿದೆ.
ಬಡ್ತಿಗೂ ಅವಕಾಶ. ಸರ್ಕಾರಿ ಹುದ್ದೆಗಳ ನೇಮಕಾತಿಯ ಜತೆಜತೆಗೆ ರಾಜ್ಯದ ಹಲವು ಇಲಾಖೆಗಳಲ್ಲಿ ವರ್ಷಗಳಿಂದಲೂ ನೆನೆಗುದಿಯಲ್ಲಿದ್ದ ಮುಂಬಡ್ತಿಗೂ ಈಗ ಚಾಲನೆ ದೊರೆಯಲಿದೆ. ಅದರಲ್ಲೂ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿ ಮತ್ತು ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡಕ್ಕೆ ಸೇರಿದ ಅಧಿಕಾರಿ, ಸಿಬ್ಬಂದಿಗೆ ಬಡ್ತಿ ದೊರೆಯುವುದು ಖಚಿತವಾಗಿದೆ.