ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ)2025-26ನೇ ಸಾಲಿಗೆ ದೇಶಾದ್ಯಂತ ಇರುವ ವೈದ್ಯಕೀಯ ಕಾಲೇಜುಗಳಿಗೆ ಒಟ್ಟು 5,794 ಹೆಚ್ಚುವರಿ ಎಂಬಿಬಿಎಸ್ ಸೀಟುಗಳನ್ನು ಮಂಜೂರು ಮಾಡಿದ್ದು, ಕರ್ನಾಟಕದ 16 ವೈದ್ಯಕೀಯ ಕಾಲೇಜುಗಳಿಗೆ 900 ಹೆಚ್ಚುವರಿ ಸೀಟುಗಳು ಲಭಿಸಿವೆ.
ಈ ವರ್ಷ ಎನ್‌ಎಂಸಿ ದೇಶಾದ್ಯಂತ 808 ವೈದ್ಯಕೀಯ ಕಾಲೇಜುಗಳಿಗೆ ಹೆಚ್ಚುವರಿ ಸೀಟುಗಳನ್ನು ಮಂಜೂರು ಮಾಡಿದೆ. ಇದರಲ್ಲಿ, ರಾಜ್ಯದ 16 ವೈದ್ಯಕೀಯ ಕಾಲೇಜುಗಳಿಗೆ ಬರೋಬ್ಬರಿ 900 ಹೆಚ್ಚುವರಿ ಸೀಟುಗಳು ಲಭ್ಯವಾಗಿವೆ. ಉಳಿದ 4,894 ಸೀಟುಗಳನ್ನು, ಇತರ ರಾಜ್ಯಗಳ 790 ವೈದ್ಯಕೀಯ ಕಾಲೇಜುಗಳಿಗೆ ಮಂಜೂರು ಮಾಡಲಾಗಿದೆ. ಮೈಸೂರಿನಲ್ಲಿ ಹೊಸದಾಗಿ ಆರಂಭವಾಗಿರುವ ಫಾರೂಖ್ ಅಕಾಡೆಮಿ ಆಫ್ ಮೆಡಿಕಲ್ ಎಜುಕೇಶನ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಗೆ 100 ಸೀಟುಗಳು ಮಂಜೂರಾಗಿವೆ.
ಲಂಚ ಪ್ರಕರಣದ ಹಿನ್ನೆಲೆಯಲ್ಲಿ ತಡೆ ಹಿಡಿಯಲಾಗಿದ್ದ ಬೆಳಗಾವಿಯ ಕೆಎಲ್‌ಇ ಸೊಸೈಟಿಯ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿಗೆ (ಜೆಎನ್‌ಎಂಸಿ) 200 ಸೀಟುಗಳನ್ನು ಮಂಜೂರು ಮಾಡಲಾಗಿದೆ. ಈ ಹೆಚ್ಚಳದಿಂದಾಗಿ, ರಾಜ್ಯದ ಒಟ್ಟು 72 ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಿರುವ ಸೀಟುಗಳ ಸಂಖ್ಯೆ 13,595ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ 71 ವೈದ್ಯಕೀಯ ಕಾಲೇಜುಗಳಲ್ಲಿ 12,395 ಸೀಟುಗಳು ಲಭ್ಯವಿದ್ದವು.
ನೀಟ್-2025 ಮೂಲಕ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಯುಜಿ ಕೌನ್ಸೆಲಿಂಗ್ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ. ಮೋಪ-ಅಪ್ ಸುತ್ತಿಗೆ ಸೀಟು ಹಂಚಿಕೆ ಪ್ರಕ್ರಿಯೆ ನಡೆಯಲು ಸಿದ್ಧತೆಗಳು ನಡೆದಿವೆ. ರಾಜ್ಯ ಸರ್ಕಾರವು ಈ ಹಿಂದೆ 13 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ತಲಾ 50 ಸೀಟುಗಳು ಮತ್ತು ಎರಡು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ತಲಾ 100 ಸೀಟುಗಳನ್ನು ಹೆಚ್ಚಿಸುವ ಮೂಲಕ ಒಟ್ಟು 850 ವೈದ್ಯಕೀಯ ಸೀಟುಗಳನ್ನು ಹೆಚ್ಚಿಸಲು ಎನ್‌ಎಂಸಿಗೆ ಪ್ರಸ್ತಾವನೆ ಸಲ್ಲಿಸಿತ್ತು.
ಇದಲ್ಲದೆ, ರಾಮನಗರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರದಲ್ಲಿ ಹೊಸದಾಗಿ ಸ್ಥಾಪಿಸಲು ಉದ್ದೇಶಿಸಿರುವ ಎರಡು ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ 250 ಸೀಟುಗಳನ್ನು ಮಂಜೂರು ಮಾಡುವಂತೆ ಮನವಿ ಮಾಡಲಾಗಿತ್ತು, ಅಲ್ಲದೇ, ಹುಬ್ಬಳ್ಳಿಯ ಜಗದ್ಗರು ಗಂಗಾಧರ ಮಹಾಸ್ವಾಮಿಗಳು ಮೂರುಸಾವಿರಮಠ ವೈದ್ಯಕೀಯ ಕಾಲೇಜು ಮತ್ತು ತುಮಕೂರು ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜುಗಳು ತಲಾ 50 ಸೀಟು ಹೆಚ್ಚಳಕ್ಕೆ ಮನವಿ ಮಾಡಿದ್ದವು.
“ಮೊದಲ ಸುತ್ತಿನಲ್ಲಿ ನನಗೆ ಡೆಂಟಲ್ ಸೀಟು ಸಿಕ್ಕಿತ್ತು, ಆದರೆ, ನಾನು ಎಂಬಿಬಿಎಸ್ ಓದಲು ಬಯಸಿದ್ದೆ. ಎರಡನೇ ಸುತ್ತಿನಲ್ಲಿ ಸೀಟು ಹೆಚ್ಚಳವಾದ ಕಾರಣ ನನಗೆ ಎಂಬಿಬಿಎಸ್ ಸೀಟು ಸಿಕ್ಕಿದೆ. ಇದೀಗ ನಾನು ಇಷ್ಟಪಟ್ಟ ಕೋರ್ಸ್ ಮಾಡಲು ಸಹಾಯವಾಗಿದೆ” ಎಂದು ಬೆಂಗಳೂರಿನ ವಿದ್ಯಾರ್ಥಿನಿ ಹರ್ಷಿತಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 15, 2024ರಂದು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ವೈದ್ಯರ ಕನಸುಗಳನ್ನು ಈಡೇರಿಸಲು ಮತ್ತು ದೇಶದ ಒಟ್ಟಾರೆ ಆರೋಗ್ಯ ಸಾಮರ್ಥ್ಯವನ್ನು ಹೆಚ್ಚಿಸಲು 2029ರ ವೇಳೆಗೆ ದೇಶಾದ್ಯಂತ 75,000 ವೈದ್ಯಕೀಯ ಸೀಟುಗಳನ್ನು ಮಂಜೂರು ಮಾಡುವುದಾಗಿ ಘೋಷಿಸಿದ್ದರು.
ಇತ್ತೀಚೆಗೆ ಕೇಂದ್ರ ಸಂಪುಟದಲ್ಲೂ ಈ ಸಂಬಂಧ ನಿರ್ಧಾರ ಕೈಗೊಳ್ಳಲಾಗಿತ್ತು. ಎನ್‌ಎಂಸಿಯ ಹೊಸ ಅಧ್ಯಕ್ಷರಾದ ಅಭಿಜಾತ್ ಚಂದ್ರಕಾಂತ್ ಸೇಠ ಅವರು ದೇಶಾದ್ಯಂತ ಒಟ್ಟು 8,000 ವೈದ್ಯಕೀಯ ಸೀಟುಗಳನ್ನು ಹೆಚ್ಚಿಸಲಾಗುವುದು ಎಂದು ಘೋಷಿಸಿದ್ದರು. ಅದರಂತೆ, ನೀಟ್ ಕೌನ್ಸೆಲಿಂಗ್‌ನ ಎರಡನೇ ಸುತ್ತಿನ ಹೊತ್ತಿಗೆ ಒಟ್ಟು 5,794 ಹೆಚ್ಚುವರಿ ಸೀಟುಗಳನ್ನು ಮಂಜೂರು ಮಾಡಲಾಗಿದ್ದು, ಇದರಲ್ಲಿ 900 ಸೀಟುಗಳು ಕರ್ನಾಟಕಕ್ಕೆ ಲಭ್ಯವಾಗಿವೆ.
ಮುಂದಿನ ವರ್ಷವೂ ಹೆಚ್ಚಳ ಸಾಧ್ಯತೆ: ರಾಜ್ಯದ ಮನವಿಯನ್ನು ಆರಂಭದಲ್ಲಿ ತಿರಸ್ಕರಿಸಿದ್ದ ಎನ್‌ಎಂಎ, ಇದೀಗ ಎರಡನೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ 900 ಹೆಚ್ಚುವರಿ ಸೀಟುಗಳನ್ನು ಮಂಜೂರು ಮಾಡಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ವೈದ್ಯಕೀಯ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳು, ಕ್ಲಿನಿಕಲ್ ಅಭ್ಯಾಸ ಮತ್ತು ಬೋಧನಾ ವ್ಯವಸ್ಥೆ ನಿಜವಾಗಿಯೂ ಉತ್ತಮವಾಗಿದೆ. ಮುಂದಿನ ವರ್ಷವೂ ರಾಜ್ಯಕ್ಕೆ ಹೆಚ್ಚುವರಿ ಸೀಟುಗಳು ಸಿಗುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಬಿ.ಎಲ್.ಸುಜಾತ ರಾಥೋಡ್ ಅಭಿಪ್ರಾಯಪಟ್ಟರು.
kp00qc
qs9h6o