ಬೆಳಗಾವಿ: ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್. ಈ ಮಾದರಿ ರೈಲುಗಳಿಗೆ ಭಾರೀ ಬೇಡಿಕೆ ಇದೆ. ಕರ್ನಾಟಕದ ಎರಡು ಹೊಸ ಮಾರ್ಗದಲ್ಲಿ ವಂದೇ ಭಾರತ್ ರೈಲುಗಳ ಸಂಚಾರ ಶೀಘ್ರವೇ ಆರಂಭವಾಗಲಿದೆ.
ಮಹಾರಾಷ್ಟ್ರದ ಪುಣೆಗೆ 4 ವಂದೇ ಭಾರತ್ ರೈಲುಗಳು ಸಿಕ್ಕಿವೆ ಎಂಬ ಮಾಹಿತಿ ಲಭ್ಯವಾಗಿದೆ. ಈ ರೈಲುಗಳಲ್ಲಿ ಎರಡು ರೈಲು ಕರ್ನಾಟಕವನ್ನು ಸಂಪರ್ಕಿಸಲಿವೆ. ಆದ್ದರಿಂದ ರಾಜ್ಯದಲ್ಲಿ ಎರಡು ಹೊಸ ವಂದೇ ಭಾರತ್ ರೈಲುಗಳ ಸಂಚರಿಸಲಿವೆ.
ರೈಲುಗಳ ಮಾರ್ಗ, ನಿಲ್ದಾಣಗಳು: ಬೆಳಗಾವಿ-ಪುಣೆ ಮತ್ತು ಪುಣೆ-ಸಿಕಂದರಾಬಾದ್ ನಡುವೆ ಎರಡು ವಂದೇ ಭಾರತ್ ರೈಲುಗಳು ಸಂಚಾರವನ್ನು ನಡೆಸಲಿವೆ. ಇದರಲ್ಲಿ ಪುಣೆ-ಸಿಕಂದರಾಬಾದ್ ರೈಲು ಕಲಬುರಗಿ ಮೂಲಕ ಸಂಚಾರವನ್ನು ನಡೆಸಲಿದೆ.
ಹುಬ್ಬಳ್ಳಿ-ಬೆಳಗಾವಿ ಮಾರ್ಗವಾಗಿ ಪುಣೆಗೆ ಈಗಾಗಲೇ ವಂದೇ ಭಾರತ್ ರೈಲು ಸಂಪರ್ಕವಿದೆ. ಅದು ಕರ್ನಾಟಕದಿಂದ ಸಾಗುವ ರೈಲು. ಈಗ ಮಹಾರಾಷ್ಟ್ರದ ಪುಣೆಯಿಂದ ಬೆಳಗಾವಿಗೆ ವಂದೇ ಭಾರತ್ ರೈಲು ಸಂಪರ್ಕ ಕಲ್ಪಿಸಲಿದೆ.
ಮಾಹಿತಿಗಳ ಪ್ರಕಾರ ಪುಣೆ-ಸಿಕಂದರಾಬಾದ್ ವಂದೇ ಭಾರತ್ ರೈಲು ಎರಡು ಪ್ರಮುಖ ಐಟಿ ಕಾರಿಡಾರ್‌ಗಳನ್ನು ಸಂಪರ್ಕಿಸಲಿದೆ. ಈ ರೈಲು ದೌಂಡ್, ಸೊಲ್ಹಾಪುರ, ಕಲಬುರಗಿ ಮೂಲಕ ಸಂಚಾರವನ್ನು ನಡೆಸಲಿದೆ.
ಈಗಾಗಲೇ ಕಲಬುರಗಿ ಜಿಲ್ಲೆಗೆ ವಂದೇ ಭಾರತ್ ರೈಲು ಸಂಪರ್ಕವಿದೆ. ಬೆಂಗಳೂರು ನಗರದ ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಕಲಬುರಗಿಗೆ ವಂದೇ ಭಾರತ್ ರೈಲು ಸಂಚಾರವನ್ನು ನಡೆಸುತ್ತಿದೆ. ಈ ರೈಲು ಸೇವೆಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಸಹ ಸಿಕ್ಕಿದೆ.
ಪುಣೆ-ಬೆಳಗಾವಿ ವಂದೇ ಭಾರತ್ ರೈಲು ಸತಾರಾ, ಸಾಂಗ್ಲಿ, ಮೀರಜ್‌ನಲ್ಲಿ ನಿಲುಗಡೆ ಹೊಂದಿರಲಿದೆ. ಎಕ್ಸಿಕ್ಯುಟಿವ್ ಕ್ಲಾಸ್, ಎಸಿ ಚೇರ್‌ಗಳನ್ನು ಒಳಗೊಂಡಿರುವ ರೈಲಿನ ಪ್ರಯಾಣ ದರ 1,500 ರಿಂದ 2000 ರೂ. ತನಕ ಇರಬಹುದು ಎಂದು ಅಂದಾಜಿಸಲಾಗಿದೆ.
ಹುಬ್ಬಳ್ಳಿ-ಬೆಳಗಾವಿ-ಪುಣೆ ಮೂಲಕ ವಂದೇ ಭಾರತ್ ರೈಲು ಸಂಚಾರವನ್ನು ನಡೆಸುತ್ತದೆ. ಆದ್ದರಿಂದ ಕುಂದಾ ನಗರಿ ಬೆಳಗಾವಿಗೆ ವಂದೇ ಭಾರತ್ ರೈಲು ಸೇವೆ ಇದೆ. ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲು ಬೇಕು ಎಂಬ ಬೇಡಿಕೆ ಇನ್ನೂ ಈಡೇರಿಲ್ಲ.
ಕೆಎಸ್‌ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ. ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ಒಂದು ವರ್ಷವೂ ಕಳೆದಿದೆ. ಆದರೆ ರೈಲುಗಳ ಸಂಚಾರವನ್ನು ಆರಂಭಿಸಲು ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಆದ್ದರಿಂದ ರೈಲು ಬೆಂಗಳೂರು-ಧಾರವಾಡ ನಡುವೆ ಸಂಚಾರವನ್ನು ನಡೆಸುತ್ತಿದೆ.
ತುಮಕೂರು ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರವನ್ನು ನಡೆಸಲಿದೆ ಎಂದು ಹೇಳಿದ್ದಾರೆ.
ಕೇಂದ್ರ ರೈಲ್ವೆ ಸಚಿವಾಲಯ ಪುಣೆ-ನಾಗ್ಪುರ ನಡುವೆ ವಂದೇ ಭಾರತ್ ಸ್ಲೀಪರ್ ಮಾದರಿ ರೈಲು ಓಡಿಸುವ ಪ್ರಸ್ತಾವನೆಯನ್ನು ತಯಾರು ಮಾಡಿದೆ. ಈಗ ಘೋಷಣೆಯಾಗಿರುವ ಹೊಸ ರೈಲು ಯಾವಾಗ ಸಂಚಾರವನ್ನು ಆರಂಭಿಸಲಿದೆ? ಎಂಬುದು ಇನ್ನೂ ಸಹ ಖಚಿತವಾಗಿಲ್ಲ.
ಕೆಲವು ದಿನಗಳ ಹಿಂದೆ ಕರ್ನಾಟಕಕ್ಕೆ 10 ಹೊಸ ವಂದೇ ಭಾರತ್ ರೈಲುಗಳು ಬರಲಿವೆ ಎಂಬ ಸುದ್ದಿಗಳು ಬಂದಿತ್ತು. ಯಶವಂತಪುರ-ಶಿವಮೊಗ್ಗ, ಶಿವಮೊಗ್ಗ-ತಿರುಪತಿ ನಡುವೆ ವಂದೇ ಭಾರತ್ ರೈಲುಗಳ ಸಂಚಾರ ಆರಂಭವಾಗಲಿದೆ ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ತಿಳಿಸಿದ್ದಾರೆ.