ಗಾಂಧಿ ನಾಡಿಗೆ ನೊಬೆಲ್ ವಿಜೇತೆಯ ಸಲಾಂ! ಭಾರತದತ್ತ ವೆನೆಜುವೆಲಾ ನಾಯಕಿಯ ಚಿತ್ತ

0
10

ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವವನ್ನು ಮರಳಿ ಸ್ಥಾಪಿಸಲು ಎರಡು ದಶಕಗಳಿಗೂ ಹೆಚ್ಚು ಕಾಲ ಅಹಿಂಸಾತ್ಮಕ ಹೋರಾಟ ನಡೆಸಿದ ಉಕ್ಕಿನ ಮಹಿಳೆ ಮಾರಿಯಾ ಕೊರಿನಾ ಮಚಾಡೊ ಅವರಿಗೆ 2025ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ. ಈ ಗೌರವ ಲಭಿಸಿದ ಬೆನ್ನಲ್ಲೇ, ಅವರು ಭಾರತದ ಪ್ರಜಾಪ್ರಭುತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ತಮ್ಮ ಹೋರಾಟಕ್ಕೆ ಮಹಾತ್ಮ ಗಾಂಧಿಯವರ ತತ್ವಗಳೇ ದೊಡ್ಡ ಸ್ಫೂರ್ತಿ ಎಂದು ಹೇಳಿಕೊಂಡಿದ್ದಾರೆ.

ಅಜ್ಞಾತ ಸ್ಥಳದಿಂದಲೇ ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಮಚಾಡೊ, “ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತ, ಜಗತ್ತಿಗೆ ದಾರಿದೀಪವಾಗಿದೆ. ದಶಕಗಳಿಂದ ಭಾರತವು ತನ್ನ ಮೌಲ್ಯಗಳನ್ನು ಎತ್ತಿಹಿಡಿದು, ಅನೇಕ ದೇಶಗಳಿಗೆ ಮಾದರಿಯಾಗಿದೆ. ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎಂದಿಗೂ ಹಗುರವಾಗಿ ತೆಗೆದುಕೊಳ್ಳಬಾರದು, ಅದನ್ನು ನಿರಂತರವಾಗಿ ಬಲಪಡಿಸುತ್ತಿರಬೇಕು” ಎಂದು ಭಾರತದ ಜವಾಬ್ದಾರಿಯನ್ನು ನೆನಪಿಸಿದರು.

ಗಾಂಧೀಜಿ ತೋರಿದ ಅಹಿಂಸೆಯ ಹಾದಿ ನನ್ನ ದಾರಿ: “ನನ್ನ ಹೋರಾಟದ ಹಾದಿಗೆ ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ತತ್ವವೇ ಮೂಲ ಪ್ರೇರಣೆ. ಶಾಂತಿಯುತವಾಗಿರುವುದು ದೌರ್ಬಲ್ಯದ ಸಂಕೇತವಲ್ಲ, ಅದೊಂದು ಅತಿದೊಡ್ಡ ಶಕ್ತಿ ಎಂಬುದನ್ನು ಗಾಂಧೀಜಿ ಜಗತ್ತಿಗೆ ತೋರಿಸಿಕೊಟ್ಟರು,” ಎಂದು ಮಚಾಡೊ ಭಾವನಾತ್ಮಕವಾಗಿ ನುಡಿದರು. ತಮ್ಮ ಮಗಳು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು, ಭಾರತದ ಸಂಸ್ಕೃತಿ ಮತ್ತು ರಾಜಕೀಯವನ್ನು ತಾನು ಗಮನಿಸುತ್ತಿರುವುದಾಗಿ ತಿಳಿಸಿದರು.

ಚುನಾವಣಾ ಅಕ್ರಮ: ವೆನೆಜುವೆಲಾದಲ್ಲಿ 2024ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ನಿಕೋಲಸ್ ಮಡುರೊ ಸರ್ಕಾರವು ಫಲಿತಾಂಶವನ್ನು ಕದ್ದಿದೆ ಎಂದು ಮಚಾಡೊ ಗಂಭೀರ ಆರೋಪ ಮಾಡಿದರು. “ಚುನಾವಣೆಯಲ್ಲಿ ನಮ್ಮ ಪಕ್ಷ ಶೇ. 70ಕ್ಕೂ ಹೆಚ್ಚು ಮತಗಳನ್ನು ಪಡೆದು ಗೆದ್ದಿತ್ತು. ಇದಕ್ಕೆ ನಮ್ಮ ಬಳಿ ಡಿಜಿಟಲ್ ರೂಪದಲ್ಲಿ ದಾಖಲೆಗಳಿವೆ. ಆದರೆ, ಮಡುರೊ ಅಧಿಕಾರವನ್ನು ಬಿಟ್ಟುಕೊಡಲು ನಿರಾಕರಿಸಿ, ಸಾವಿರಾರು ಅಮಾಯಕರನ್ನು ಜೈಲಿಗಟ್ಟಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ” ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಭಾರತದೊಂದಿಗೆ ಹೊಸ ಸ್ನೇಹದ ನಿರೀಕ್ಷೆ: ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಯಾದ ನಂತರ ಭಾರತದೊಂದಿಗೆ ಬಲಿಷ್ಠ ಸ್ನೇಹ ಸಂಬಂಧ ಹೊಂದುವ ಇಚ್ಛೆಯನ್ನು ವ್ಯಕ್ತಪಡಿಸಿದರು. ನಮ್ಮ ದೇಶದಲ್ಲಿ ಸಮಾಜವಾದಿ ಆಡಳಿತ ಕೊನೆಗೊಂಡ ಬಳಿಕ ಭಾರತೀಯ ಕಂಪನಿಗಳಿಗೆ ಇಂಧನ, ಮೂಲಸೌಕರ್ಯ ಮತ್ತು ದೂರಸಂಪರ್ಕ ಕ್ಷೇತ್ರಗಳಲ್ಲಿ ಹೂಡಿಕೆಗೆ ವಿಫುಲ ಅವಕಾಶಗಳಿವೆ.

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡುವ ಹಾಗೂ ಅವರನ್ನು ಸ್ವತಂತ್ರ ವೆನೆಜುವೆಲಾಕ್ಕೆ ಸ್ವಾಗತಿಸುವ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ, ಎಂದು ಭರವಸೆಯ ಮಾತುಗಳನ್ನಾಡಿದರು. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಂತಹ ಅಂತರಾಷ್ಟ್ರೀಯ ನಾಯಕರ ಬೆಂಬಲ ತಮ್ಮ ಹೋರಾಟಕ್ಕೆ ಶಕ್ತಿ ತುಂಬಿದೆ ಎಂದರು.

Previous articleಅನೈತಿಕ ಸಂಬಂಧದ ಅಪವಾದ – ಮಹಿಳೆ ತಲೆ ಬೋಳಿಸಿ ದೌರ್ಜನ್ಯ
Next articleಖಾಕಿ, ಖಾದಿ ಕಿರುಕುಳಕ್ಕೆ ವೈದ್ಯೆ ಬಲಿ: ಸಾವಿಗೂ ಮುನ್ನ ಬರೆದ 4 ಪುಟಗಳ ಪತ್ರವೇ ಸಾಕ್ಷಿ!

LEAVE A REPLY

Please enter your comment!
Please enter your name here