ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಗೆ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಎನ್‌ಡಿಎ ಮೈತ್ರಿಕೂಟದಿಂದ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅಭ್ಯರ್ಥಿಯಾಗಿದ್ದಾರೆ. ಸೆಪ್ಟೆಂಬರ್ 9ರಂದು ಚುನಾವಣೆ ನಡೆಯಲಿದೆ.
ಮಂಗಳವಾರ ದೆಹಲಿಯಲ್ಲಿ ಈ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಣೆ ಮಾಡಿದ್ದಾರೆ. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ್ ರೆಡ್ಡಿ ಉಪರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿ.
“ಬಿ.ಸುದರ್ಶನ್ ರೆಡ್ಡಿ ಆಗಸ್ಟ್ 21ರಂದು ನಾಮಪತ್ರವನ್ನು ಸಲ್ಲಿಕೆ ಮಾಡಲಿದ್ದಾರೆ. ಬುಧವಾರ ಮಧ್ಯಾಹ್ನ 1 ಗಂಟೆಗೆ ಮೈತ್ರಿಕೂಟದ ಎಲ್ಲಾ ಸಂಸದರ ಸಭೆ ಸೆಂಟ್ರಲ್ ಹಾಲ್‌ನಲ್ಲಿ ನಡೆಯಲಿದೆ. ಉಪರಾಷ್ಟ್ರಪತಿ ಚುನಾವಣೆಗೆ ಸ್ಪರ್ಧೆ ಒಂದು ಸಿದ್ಧಾಂತದ ಹೋರಾಟವಾಗಿದೆ. ಮೈತ್ರಿಕೂಟದ ಎಲ್ಲಾ ಪಕ್ಷಗಳು ಇದಕ್ಕೆ ಒಪ್ಪಿಗೆ ನೀಡಿವೆ. ಎಲ್ಲರ ಅಭಿಪ್ರಾಯವನ್ನು ಪಡೆದು ಬಿ.ಸುದರ್ಶನ್ ರೆಡ್ಡಿ ಅವರನ್ನು ಆಯ್ಕೆ ಮಾಡಲಾಗಿದೆ” ಎಂದರು.
ಸುದರ್ಶನ್ ರೆಡ್ಡಿ ಪರಿಚಯ: ಟಿಎಂಸಿ, ಆಮ್ ಆದ್ಮಿ ಪಕ್ಷ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳ ಜೊತೆ ಮಾತುಕತೆ ನಡೆಸಿ ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗಿದೆ. ಬಿ. ಸುದರ್ಶನ್ ರೆಡ್ಡಿ 8 ಜುಲೈ, 1946ರಂದು ಜನಿಸಿದರು. ಸುಪ್ರೀಂಕೋರ್ಟ್‌ನ ನಿವೃತ್ತಿ ನಾಯಮೂರ್ತಿಗಳಾದ ಅವರು ಗೋವಾದ ಮೊದಲ ಲೋಕಾಯುಕ್ತರಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.
ಬಿ. ಸುದರ್ಶನ್ ರೆಡ್ಡಿ ತೆಲಂಗಾಣದಲ್ಲಿ ಜನಿಸಿದರು. ಡಿಸೆಂಬರ್ 27, 1971ರಲ್ಲಿ ಅವರು ಹೈದರಾಬಾದ್‌ನಲ್ಲಿ ಆಂಧ್ರ ಪ್ರದೇಶ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ನೋಂದಣಿ ಮಾಡಿಕೊಂಡರು. ಆಂಧ್ರ ಪ್ರದೇಶ ಹೈಕೋರ್ಟ್‌ನಲ್ಲಿ ರಿಟ್ ಮತ್ತು ಸಿವಿಲ್ ವಿಚಾರದಲ್ಲಿ ವಾದಗಳನ್ನು ಮಂಡಿಸಿದರು. 1988-90ರ ಅವಧಿಯಲ್ಲಿ ಹೈಕೋರ್ಟ್‌ನಲ್ಲಿ ಸರ್ಕಾರದ ಪರ ವಕೀಲರಾಗಿ ಸೇವೆ ಸಲ್ಲಿಸಿದರು.
ಮೇ 2, 1995ರಲ್ಲಿ ಬಿ. ಸುದರ್ಶನ್ ರೆಡ್ಡಿ ಆಂಧ್ರ ಪ್ರದೇಶ ಹೈಕೋರ್ಟ್ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು. 2005ರಲ್ಲಿ ಗುಹವಾಟಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು. 2007 ರಿಂದ 2011ರ ತನಕ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ.
ಉಪರಾಷ್ಟ್ರಪತಿಯಾಗಿದ್ದ ಜಗದೀಪ್ ಧನಕರ್ ಆರೋಗ್ಯದ ಕಾರಣವನ್ನು ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ರಾಜೀನಾಮೆ ಅಂಗೀಕಾರದ ಬಳಿಕ ಭಾರತದ ಉಪ ರಾಷ್ಟ್ರಪತಿ ಹುದ್ದೆ ತೆರವಾಗಿದ್ದು, ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಪ್ರಕಟಿಸಿದೆ. ಚುನಾವಣೆಗೆ ನಾಮಪತ್ರವನ್ನು ಸಲ್ಲಿಕೆ ಮಾಡಲು ಆಗಸ್ಟ್ 21 ಕೊನೆಯ ದಿನವಾಗಿದೆ. ಭಾನುವಾರ ಎನ್‌ಡಿಎ ಮೈತ್ರಿಕೂಟ ಚುನಾವಣೆಗೆ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿತ್ತು.
ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವ ಕಾರಣ ಸೆಪ್ಟೆಂಬರ್ 9ರಂದು ಉಪರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಬೇಕಿದೆ. ಅಂದು ಬೆಳಗ್ಗೆ 10 ಗಂಟೆಯಿಂದ ಮತದಾನ ನಡೆಯಲಿದ್ದು, ಸಂಜೆಯೇ ಮತ ಎಣಿಕೆ ನಡೆಸಿ, ಫಲಿತಾಂಶ ಘೋಷಣೆ ಮಾಡಲಾಗುತ್ತದೆ.
ಉಪರಾಷ್ಟ್ರಪತಿ ಚುನಾವಣೆಗೆ ಸಂಸದರು, ರಾಜ್ಯಸಭಾ ಸದಸ್ಯರು ಮತದಾನ ಮಾಡಲಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಮತದಾರರ ಪಟ್ಟಿ ಅಂತಿಮಗೊಳಿಸಿದೆ. ಲೋಕಸಭೆಯಲ್ಲಿ ಬಹುಮತ ಹೊಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲುವುದು ಸುಲಭ ಎಂದು ಅಂಕಿ ಸಂಖ್ಯೆಗಳು ಹೇಳುತ್ತಿವೆ. ಆದರೆ ಇಂಡಿಯಾ ಮೈತ್ರಿಕೂಟ ಅಭ್ಯರ್ಥಿ ಕಣಕ್ಕಿಳಿಸಿರುವ ಕಾರಣ ಚುನಾವಣೆ ನಡೆಯಬೇಕಿದೆ.