ಉಪರಾಷ್ಟ್ರಪತಿ ಚುನಾವಣೆ 2025: ಮೋದಿ ಮತದಾನ

0
78

ಉಪರಾಷ್ಟ್ರಪತಿ ಚುನಾವಣೆ 2025 ಆರಂಭವಾಗಿದೆ. ದೆಹಲಿಯ ಸಂಸತ್ ಭವನದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಚುನಾವಣೆಯಲ್ಲಿ ಮೊದಲ ಮತವನ್ನು ಪ್ರಧಾನಿ ನರೇಂದ್ರ ಮೋದಿ ಚಲಾವಣೆ ಮಾಡಿದರು. ಮಂಗಳವಾರ ಸಂಜೆ ತನಕ ಮತದಾನ ಮಾಡಲು ಅವಕಾಶವಿದೆ. 6 ಗಂಟೆ ಬಳಿಕ ಮತಎಣಿಕೆ ನಡೆಯಲಿದ್ದು, ಭಾರತದ ಹೊಸ ಉಪರಾಷ್ಟ್ರಪತಿ ಯಾರು? ಎಂಬುದು ಇಂದೇ ಘೋಷಣೆಯಾಗಲಿದೆ.

ಮೋದಿ ಮತ ಚಲಾವಣೆ: ಪ್ರಧಾನಿ ನರೇಂದ್ರ ಮೋದಿ ಉಪರಾಷ್ಟ್ರಪತಿ ಚುನಾವಣೆಗೆ ಮೊದಲ ಮತವನ್ನು ಚಲಾವಣೆ ಮಾಡಿದರು. ಈ ಕುರಿತ ಚಿತ್ರವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಉಪರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಮತ್ತು ಇಂಡಿಯಾ ಮೈತ್ರಿಕುಟದ ಅಭ್ಯರ್ಥಿ ಬಿ.ಸುದರ್ಶನ್ ರೆಡ್ಡಿ. ಇಬ್ಬರಲ್ಲಿ ಉಪರಾಷ್ಟ್ರಪತಿ ಯಾರು? ಎಂಬುದು ಸದ್ಯದ ಕುತೂಹಲವಾಗಿದೆ.

ಉಪರಾಷ್ಟ್ರಪತಿ ಚುನಾವಣೆ ಕುರಿತು: ಚುನಾವಣೆಗೆ ಮತದಾನ ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ನಡೆಯಲಿದೆ. ಮತದಾನ ಮುಗಿದ ಬಳಿಕ ಸಂಜೆ 6ಕ್ಕೆ ಮತಎಣಿಕೆ ಪ್ರಾರಂಭವಾಗಲಿದೆ. ರಾತ್ರಿ 7ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಉಪರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಮಿತ್ರಕೂಟದ ಸಿ.ಪಿ. ರಾಧಾಕೃಷ್ಣನ್ ಹಾಗೂ ಇಂಡಿಯಾ ಬ್ಲಾಕ್‌ನ ಸುದರ್ಶನ ರೆಡ್ಡಿ ನಡುವೆ ವಿಜಯಮಾಲೆ ಯಾರದು? ಎಂಬುದು ಸಂಜೆಯೇ ತೀರ್ಮಾನವಾಗಲಿದೆ.

ಸಂಖ್ಯಾ ಬಲದ ಆಧಾರದಲ್ಲಿ ಎನ್‌ಡಿಎಯ ರಾಧಾಕೃಷ್ಣನ್ ಗೆಲುವು ಖಚಿತ. ಆದರೆ ಸುದರ್ಶನ ರೆಡ್ಡಿ ಆತ್ಮ ಸಾಕ್ಷಿಯ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಜಗದೀಪ್ ಧನಕರ್ ಜುಲೈ 21ರಂದು ಅನಿರೀಕ್ಷಿತವಾಗಿ ರಾಜೀನಾಮೆ ನೀಡಿರುವ ಕಾರಣ ಈಗ ಚುನಾವಣೆ ನಡೆಯುತ್ತಿದೆ.

ಮಹಾರಾಷ್ಟ್ರ ರಾಜ್ಯಪಾಲರಾಗಿರುವ ಸಿ.ಪಿ.ರಾಧಾಕೃಷ್ಣನ್ ತಮಿಳುನಾಡಿನವರಾಗಿದ್ದರೆ, ಸುಪ್ರೀಂಕೋರ್ಟಿನ ಮಾಜಿ ನ್ಯಾಯಾಧೀಶರಾಗಿರುವ ಸುದರ್ಶನ ರೆಡ್ಡಿ ತೆಲಂಗಾಣದವರು. ಈ ಚುನಾವಣೆಯಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರು ಮತ ಚಲಾಯಿಸುತ್ತಾರೆ. ಲೋಕಸಭೆಯಲ್ಲಿ 542 ಸದಸ್ಯರಿದ್ದು, ಆ ಪೈಕಿ ಎನ್‌ಡಿಎ 293 ಹಾಗೂ ವಿರೋಧ ಪಕ್ಷಗಳು 234 ಸದಸ್ಯರನ್ನು ಹೊಂದಿವೆ.

ಚುನಾವಣೆ ಸಂಖ್ಯಾಬಲ

ಒಟ್ಟು ಸಂಸದ ಸ್ಥಾನಗಳು – 788

ಖಾಲಿ ಇರುವ ಸ್ಥಾನಗಳು – 06

ಒಟ್ಟು ಮತದಾರರು – 782

ಎನ್‌ಡಿಎ ಸದಸ್ಯರು – 439

ಇಂಡಿಯಾ ಸದಸ್ಯರು – 324

ಬಹುಮತದ ಸಂಖ್ಯೆ – 386

ರಾಧಾಕೃಷ್ಣನ್ ಪರಿಚಯ: ಎನ್‌ಡಿಎ ಅಭ್ಯರ್ಥಿ ಚಂದ್ರಾಪುರಂ ಪೊನ್ನುಸ್ವಾಮಿ ರಾಧಾ ಕೃಷ್ಣನ್ ತಮಿಳುನಾಡಿನ ತಿರುಪ್ಪುರ್‌ನವರು. ಆರ್‌ಎಸ್‌ಎಸ್ ಮೂಲ. ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೊಯಮತ್ತೂರಿನ ಸಂಸದರಾಗಿ, ಮಹಾರಾಷ್ಟ್ರ, ಜಾರ್ಖಂಡ್ ಗವರ್ನರ್ ಆಗಿದ್ದರು.

ಸುದರ್ಶನ ರೆಡ್ಡಿ ಪರಿಚಯ: ಇಂಡಿಯಾ ಬ್ಲಾಕ್ ಅಭ್ಯರ್ಥಿ ನ್ಯಾ. ಬುಚಿ ರೆಡ್ಡಿ ಸುದರ್ಶನ್ ರೆಡ್ಡಿ ಆಂಧ್ರಪ್ರದೇಶದ ಅಕುಲ ಮೈಲಾರಂನವರು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನಿವೃತ್ತರಾಗಿದ್ದಾರೆ. ಗೋವಾ ರಾಜ್ಯದ ಮೊದಲ ಲೋಕಾಯುಕ್ತರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ.

2022ರಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿದ್ದ ಜಗದೀಪ್ ಧನಕರ್ 528 ಮತಗಳನ್ನು ಪಡೆದಿದ್ದರು. ಆದರೆ ಈಗ ಎನ್‌ಡಿಎ ಅಭ್ಯರ್ಥಿಗೆ ದೊರೆಯುವ ಮತಗಳ ಸಂಖ್ಯೆ ತುಸು ಕುಸಿಯಬಹುದೆಂದು ಹೇಳಲಾಗುತ್ತಿದೆ. ಬಿಜೆಡಿ, ಬಿಆರ್‌ಎಸ್ ಗೈರಿಗೆ ನಿರ್ಧಾರ ಬಿಜು ಜನತಾದಳ ಹಾಗೂ ಬಿಆರ್‌ಎಸ್ ಪಕ್ಷಗಳು ಯಾರಿಗೂ ಮತ ಚಲಾಯಿಸದಿರಲು ನಿರ್ಧರಿಸಿವೆ. ಇದೇ ವೇಳೆ ಜಗನ್ ರೆಡ್ಡಿಯವರ ವೈಎಸ್‌ಆರ್ ಕಾಂಗ್ರೆಸ್ ಪಾರ್ಟಿಯು ತೆಲುಗು ಮೂಲದ ಇಂಡಿಯಾ ಕೂಟದ ಸುದರ್ಶನ ರೆಡ್ಡಿಗೆ ಮತ ಚಲಾಯಿಸುವುದಾಗಿ ಘೋಷಿಸಿದೆ. ಹೀಗಾಗಿ ಮೂರು ಪಕ್ಷಗಳ ನಿಲುವಿನಿಂದಾಗಿ ಅಭ್ಯರ್ಥಿಗಳ ಮತಸಂಖ್ಯೆ ತುಸು ಏರುಪೇರಾಗುವ ಸಂಭವವಿದೆ.

ಈ ಮಧ್ಯೆ ಬಿಜೆಪಿಯ ಉನ್ನತ ನಾಯಕತ್ವವು ಸಿ.ಪಿ.ರಾಧಾಕೃಷ್ಣನ್ ಅವರ ಗೆಲುವಿನ ಅಂತರ ಹೆಚ್ಚಿಸಲು ವಿರೋಧ ಪಕ್ಷಗಳ ಬೆಂಬಲ ಗಿಟ್ಟಿಸಲು ಸರ್ವ ರೀತಿಯ ಪ್ರಯತ್ನ ನಡೆಸಿದೆ. ಹಾಗೆಯೇ ತನ್ನ ಪಕ್ಷದ ಸದಸ್ಯರಿಗೆ ಈ ಚುನಾವಣೆಯ ಮತದಾನ ಪ್ರಕ್ರಿಯೆ ಹಾಗೂ ರಹಸ್ಯ ಮತದಾನ ಕುರಿತು ಮನವರಿಕೆ ಮಾಡಿಕೊಡಲು ಎರಡು ದಿನಗಳ ಕಾರ್ಯಾಗಾರವನ್ನೂ ನಡೆಸಿತ್ತು.

Previous articleಕರ್ನಾಟಕ: 8 ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ತಲಾ 50 ಹೆಚ್ಚುವರಿ ಸೀಟು ಹಂಚಿಕೆ
Next articleರೈಲುಗಳಲ್ಲಿ ಮಹಿಳೆಯರಿಗೆ ‘ಮೇರಿ ಸಹೇಲಿ’ ವರದಾನ

LEAVE A REPLY

Please enter your comment!
Please enter your name here