ಉಪರಾಷ್ಟ್ರಪತಿ ಚುನಾವಣೆ: ಕ್ರಾಸ್ ವೋಟಿಂಗ್ ಮೇಲೆ ‘ಇಂಡಿಯಾ’ ಕಣ್ಣು!

0
24

ಉಪರಾಷ್ಟ್ರಪತಿ ಚುನಾವಣೆ ಸೆಪ್ಟೆಂಬರ್ 9ರ ಮಂಗಳವಾರ ನಡೆಯಲಿದೆ. ಅಂಕಿ-ಅಂಶಗಳು ಎನ್‌ಡಿಎ ಮೈತ್ರಿಕೂಟದ ಸ್ಪಷ್ಟ ಮೇಲುಗೈ ಇರುವುದನ್ನು ತೋರಿಸುತ್ತವೆ. ಆದರೆ, ಕ್ರಾಸ್ ವೋಟಿಂಗ್ ಮೇಲೆ ‘ಇಂಡಿಯಾ’ ಒಕ್ಕೂಟ ಕಣ್ಣಿಟ್ಟಿದೆ. ಆದ್ಯತೆಯ ಮತಗಳನ್ನು ಹೇಗೆ ಹಾಕುವುದು? ಎಂದು ಬಿಜೆಪಿ ಮತ್ತು ಪ್ರತಿಪಕ್ಷಗಳು ತರಬೇತಿಯನ್ನೂ ನೀಡಿವೆ.

ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಈ ಚುನಾವಣೆಯ ಮತದಾರರು. 7 ಸ್ಥಾನಗಳು ಖಾಲಿ ಇದ್ದು, ಒಟ್ಟು 781 ಮತದಾರರಿದ್ದಾರೆ. ಈ ಪೈಕಿ ಎನ್‌ಡಿಎ ಸದಸ್ಯರು 439, ಇಂಡಿಯಾ ಕೂಟದ 324 ಸದಸ್ಯರು. ಇನ್ನು ಉಳಿದವರು ಯಾವ ಕೂಟಕ್ಕೂ ಸೇರಿಲ್ಲ. ಬಿಜೆಡಿಯ 7, ಬಿಆರ್‌ಎಸ್‌ನ 4, ಅಕಾಲಿದಳ, ಜೆಡ್‌ಪಿಎಂ ಮತ್ತು ವಿಒಟಿಟಿಪಿಯ ತಲಾ ಒಬ್ಬರು ಮತ್ತು ಮೂವರು ಸ್ವತಂತ್ರ ಸದಸ್ಯರು ಯಾರಿಗೆ ತಮ್ಮ ಮತ? ಎಂದು ಸ್ಪಷ್ಟಪಡಿಸಿಲ್ಲ.

ಹೀಗಾಗಿ ಎನ್‌ಡಿಎ ಅಭ್ಯರ್ಥಿ ರಾಧಾಕೃಷ್ಣನ್ ಗೆಲುವು ಬಹುತೇಕ ಖಚಿತ. ಯಾವ ಕೂಟಕ್ಕೂ ಸೇರದವರು ಇಂಡಿಯಾ ಬ್ಲಾಕ್‌ಗೆ ಮತ ಹಾಕಿದರೂ ಅವರು ಗೆಲ್ಲಲು ಸಾಧ್ಯವಿಲ್ಲ. ಹೀಗಾಗಿ, ಕ್ರಾಸ್ ವೋಟಿಂಗ್ ಮೇಲೆ ಇಂಡಿಯಾ ಬ್ಲಾಕ್ ಕಣ್ಣಿಟ್ಟಿದೆ. ರಹಸ್ಯ ಮತದಾನವಿರುವುದರಿಂದ ಪಕ್ಷದ ಸೂಚನೆ ಮೀರಿ ಕ್ರಾಸ್ ವೋಟಿಂಗ್ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಇಂಡಿಯಾ ಬ್ಲಾಕ್‌ನಿಂದ ದೂರ ಉಳಿದ ಆಪ್, ಪ್ರತಿಪಕ್ಷಗಳ ಅಭ್ಯರ್ಥಿ ನ್ಯಾಯಮೂರ್ತಿ ಸುದರ್ಶನ ರೆಡ್ಡಿ ಅವರಿಗೆ ಮತ ಹಾಕುವುದಾಗಿ ಘೋಷಿಸಿದೆ. ವೈಎಸ್‌ಆರ್‌ ಕಾಂಗ್ರೆಸ್ ಕೂಡ ತೆಲುಗು ಮೂಲದ ರೆಡ್ಡಿಯವರಿಗೇ ಬೆಂಬಲ ವ್ಯಕ್ತಪಡಿಸಿದೆ.

ಪ್ರತಿಪಕ್ಷಗಳ ಎಲ್ಲ ಸದಸ್ಯರು ಇಂಡಿಯಾ ಬ್ಲಾಕ್ ಪರವಾಗಿ ಮತ ಹಾಕಿ, ಅವರು 324 ಮತಗಳನ್ನುಗಳಿಸಿ ಸೋತರೂ, ಇದು ಸೋತ ಅಭ್ಯರ್ಥಿ ಗಳಿಸಿದ ಅತಿ ಹೆಚ್ಚು ಮತವಾಗುತ್ತದೆ. ಈ ಹಿಂದೆ 2002ರಲ್ಲಿ ಬೈರೊನ್ ಸಿಂಗ್‌ ಶೆಖಾವತ್‌ ಎದುರು ಕಾಂಗ್ರೆಸ್‌ನ ಸುಶೀಲ್ ಕುಮಾರ್ ಶಿಂಧೆ ಗಳಿಸಿದ್ದ 305 ಮತಗಳೇ ಸೋತ ಅಭ್ಯರ್ಥಿಯ ಇದುವರೆಗಿನ ದಾಖಲೆಯಾಗಿದೆ.

ರೆಡ್ಡಿ ವ್ಯಾಪಕ ಪ್ರಚಾರ; ಕಾಣದ ರಾಧಾಕೃಷ್ಣನ್: ಆಶ್ಚರ್ಯ ಎನ್ನುವಂತೆ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಎಲ್ಲಿಯೂ ಪ್ರಚಾರದಲ್ಲಿ ಕಾಣಿಸುತ್ತಿಲ್ಲ. ಇಂಡಿಯಾ ಬ್ಲಾಕ್ ಅಭ್ಯರ್ಥಿ ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ. “ನಮ್ಮ ಎದುರಾಳಿ ಕಾಣಿಸುತ್ತಲೇ ಇಲ್ಲ” ಎಂದೂ ಅವರು ಕೇಳುತ್ತಿದ್ದಾರೆ. ಗೆಲ್ಲುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ರಾಧಾಕೃಷ್ಣನ್ ಹೆಚ್ಚಿನ ಪ್ರಚಾರ ನಡೆಸುತ್ತಿಲ್ಲವೇನೋ ಎನ್ನಿಸುತ್ತಿದೆ.

ರಾಧಾಕೃಷ್ಣನ್ ಗೊಂಡರ್ ಜಾತಿಗೆ ಸೇರಿದ್ದು, ತಮಿಳುನಾಡಿನಲ್ಲಿ ಇದರ ಲಾಭವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿತ್ತು. ಆದರೆ, ಆ ರೀತಿಯ ಪ್ರಚಾರ ಕಾಣಿಸುತ್ತಿಲ್ಲ. ಈ ಮೌನ ಸ್ವಲ್ಪ ಒಗಟಾಗಿಯೇ ಇದೆ. ಆದರೆ, ಮೂಲಗಳು ಹೇಳುವಂತೆ ಎನ್‌ಡಿಎ ಸಂಸದರನ್ನು ರಾಧಾಕೃಷ್ಣನ್ ವೈಯಕ್ತಿಕವಾಗಿ ಭೇಟಿ ಮಾಡಿ ಮತಯಾಚನೆ ಮಾಡುತ್ತಿದ್ದಾರೆ.

ಸುದರ್ಶನ್ ರೆಡ್ಡಿ ನಿವೃತ್ತ ನ್ಯಾಯಾಧೀಶರಾಗಿದ್ದರೂ, ವಯಸ್ಸಿನಲ್ಲಿ ಹಿರಿಯರಾಗಿದ್ದರೂ, ವಿವಿಧ ರಾಜ್ಯಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ ಮತ್ತು ಹೆಚ್ಚು ಸಕ್ರಿಯವಾಗಿ ಕಾಣಿಸುತ್ತಿದ್ದಾರೆ.

Previous articleತೇಜಸ್ವಿ: ಚೌಕಟ್ಟು ಮೀರಿದ ಚಿತ್ರ
Next articleಮೈಸೂರು: ಬಾನು ಮುಷ್ತಾಕ್ ಕನ್ನಡಾಂಬೆ ಹೇಳಿಕೆ ಬಗ್ಗೆ ನಮ್ಮ ತಕರಾರು

LEAVE A REPLY

Please enter your comment!
Please enter your name here